ಇಂದು ರಾಯಲ್ ಚಾಲೆಂಜರ್ಸ್ ತಂಡವು ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯ ಆರ್ ಸಿಬಿ ಪಾಲಿಗೆ ನಿರ್ಣಾಯಕವಾಗಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಆರ್ ಸಿಬಿ ತಂಡ ಇಲ್ಲಿಯವರೆಗೂ ಆಡಿರುವ 10 ಪಂದ್ಯಗಳ ಪೈಕಿ 7ರಲ್ಲಿ ಸೋಲು ಕಂಡಿದೆ. ಹೀಗಾಗಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇಆಫ್ ರೇಸ್ ನಲ್ಲಿ ಉಳಿಯಬೇಕಾದರೆ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.
ಗುಜರಾತ್ ಟೈಟಾನ್ಸ್ ವಿರುದ್ಧ ಗೆಲುವು ಸಾಧಿಸಿದರೆ ಅಂಕ ಪಟ್ಟಿಯಲ್ಲಿ ಕೂಡ ಮೇಲಕ್ಕೆ ಏರಬಹುದು. ಒಂದು ವೇಳೆ ಇಂದು ಗೆಲುವು ಸಾಧಿಸಿದರೆ ಪಾಯಿಂಟ್ ಪಟ್ಟಿಯಲ್ಲಿ ಆರ್ ಸಿಬಿ ತಂಡವು 7ನೇ ಅಥವಾ 8ನೇ ಸ್ಥಾನಕ್ಕೆ ಏರಿಕೆ ಕಾಣಲಿದೆ. ಇನ್ನೊಂದೆಡೆ ಗುಜರಾತ್ ತಂಡಕ್ಕೂ ಇದು ನಿರ್ಣಾಯಕ ಪಂದ್ಯವಾಗಿದೆ. ಶುಭ್ಮನ್ ಗಿಲ್ ಪಡೆ 10 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 4 ಪಂದ್ಯಗಳಲ್ಲಿ ಮಾತ್ರ. ಅಂಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಪ್ಲೇ ಆಫ್ ಆಸೆಯನ್ನು ಜೀವಂತವರಿಸಿಕೊಳ್ಳಲು ಆರ್ ಸಿಬಿ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಹೀಗಾಗಿ ಈ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.