ಕಿಟ್ಟಿ ಪಾರ್ಟಿಯಲ್ಲಿ ಪರಿಚಯವಾದ ಸ್ನೇಹಿತೆಯರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದ ಮಹಿಳೆ ಸಿಕ್ಕಿಬಿದ್ದಿದ್ದಾಳೆ.

ಸಿಎಂ ಸಿದ್ದರಾಮಯ್ಯ(CM Siddaramaiah), ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಹೆಸರು ಹೇಳಿಕೊಂಡು ಗಾಳ ಹಾಕುತ್ತಿದ್ದ ಸವಿತಾ (Savitha) ಎನ್ನುವ ಮಹಿಳೆಯನ್ನು ಬೆಂಗಳೂರಿನ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಪಾರ್ಟಿಯ ನೆಪದಲ್ಲಿ ಶ್ರೀಮಂತ ಮಹಿಳೆಯರನ್ನೇ ಟಾರ್ಗೇಟ್ ಮಾಡುತ್ತಿದ್ದ ಸವಿತಾ, ಈವರೆಗೆ 20ಕ್ಕೂ ಹೆಚ್ಚು ಮಹಿಳೆಯರಿಗೆ ಬರೋಬ್ಬರಿ 30 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಿದ್ದಾಳೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆ.

ಕಿಟ್ಟಿ ಪಾರ್ಟಿ ಹೆಸರಲ್ಲಿ ಶ್ರೀಮಂತ ಮಹಿಳೆಯರನ್ನ ಪರಿಚಯ ಮಾಡಿಕೊಂಡಿದ್ದ ಸವಿತಾ ತನಗೆ ಹಲವು ರಾಜಕಾರಣಿಗಳು ಗೊತ್ತೆಂದು ಹೇಳಿಕೊಳ್ಳುತ್ತಿದ್ದಳು. ಸಿಎಂ(CM), ಡಿಸಿಎಂ(DCM), ಎಂಬಿ ಪಾಟೀಲ್ (MB Patil) ಹೆಸರೇಳಿ ಅವರನ್ನು ಹೂಡಿಕೆ ನೆಪದಲ್ಲಿ ಹಣ ಪಡೆದು ವಂಚಿಸುತ್ತಿದ್ದಳು.

ಅಮೇರಿಕಾದಿಂದ (USA) ಕಮ್ಮಿ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ಒಬ್ಬರಿಂದ ತಲಾ 50 ಲಕ್ಷದಿಂದ ಎರಡೂವರೆ ಕೋಟಿ ಹಣ ಪಡೆದು ವಾಪಸ್ ಹಣ ನೀಡದೇ ವಂಚಿಸಿದ್ದಾಳೆ. ಈ ಸಂಬಂಧ ಈ ಹಿಂದೆ ಗೋವಿಂದರಾಜನಗರ ಠಾಣೆಯಲ್ಲಿ (Govindaraja nagar Police Station) ದಾಖಲಾಗಿದ್ದ ಪ್ರಕರಣದಲ್ಲಿ ಬಂಧನವಾಗಿ ಬಳಿಕ ಜಾಮೀನಿನ ಮೇಲೆ ಆಚೆ ಬಂದಿದ್ದಳು. ಬಳಿಕ ಸವಿತಾ ಮತ್ತದೇ ತನ್ನ ಹಳೇ ಚಾಳಿಯನ್ನೇ ಮುಂದುವರೆಸಿದ್ದು, ಇದೀಗ ಬಸವೇಶ್ವರ ನಗರ ಪೊಲೀಸರ ಅತಿಥಿಯಾಗಿದ್ದಾಳೆ.