ಕೋವಿಡ್ ಲಸಿಕೆ ಕುರಿತಂತೆ ಪ್ರತಿ ಬಾರಿಯೂ ತನ್ನ ನಿಲುವು ಬದಲಾಯಿಸುತ್ತಿರುವ ಸರ್ಕಾರ, ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆಯುವ ದಿನಗಳ ಅಂತರವನ್ನು ಕೂಡಾ ಮೇ 13ರಂದು ವಿಸ್ತರಿಸಿತ್ತು. ಕೋವಿಶೀಲ್ಡ್ ಮೊದಲನೇ ಡೋಸ್ ಪಡೆದ 12-16 ವಾರಗಳ ನಂತರ ಎರಡನೇ ಡೋಸ್ ಲಸಿಕೆ ಪಡೆಯಬೇಕು ಎಂದು ಸರ್ಕಾರ ಹೇಳಿತ್ತು. ತಜ್ಞರ ತಂಡದಿಂದ ಮಾಹಿತಿಯನ್ನು ಪಡೆದು ಪರಾಮರ್ಶಿಸಿದ ಬಳಿಕವೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿತ್ತು. ಆದರೆ, ಈಗ ಬಹಿರಂಗವಾಗಿರುವ ಮಾಹಿತಿಯ ಪ್ರಕಾರ ಸರ್ಕಾರವು ತಜ್ಞರ ಅಭಿಪ್ರಾಯವನ್ನು ಕೇಳಲೇ ಇಲ್ಲ.
ಈ ಕುರಿತಾಗಿ ವರದಿ ಮಾಡಿರುವ ರಾಯಿಟರ್ಸ್, ತನ್ನ ವರದಿಯಲ್ಲಿ ರೋಗನಿರೋಧಕತೆಯ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ [National Technical Advisory Group on Immunisation (NTAGI)]ಯ ಸದಸ್ಯರನ್ನು ಉಲ್ಲೇಖಿಸಿದೆ. NTAGIಯು ಇಂತಹ ಯಾವುದೇ ಸಲಹೆಯನ್ನು ಸರ್ಕಾರಕ್ಕೆ ನೀಡಲಿಲ್ಲ ಎಂದು ತಂಡದ ಸದಸ್ಯರು ಸ್ಪಷ್ಟಪಡಿಸಿದ್ದಾರೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯ ಮಾಜಿ ನಿರ್ದೇಶಕರಾದ ಎಂ ಡಿ ಗುಪ್ತ ಅವರ ಪ್ರಕಾರ, NTAGIಯು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯನ್ನು ಪುರಸ್ಕರಿಸಿತ್ತು. 8-12 ವಾರಗಳ ಒಳಗಾಗಿ ಎರಡನೇ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ನೀಡುವಂತೆ ಸೂಚಿಸಿತ್ತು. NTAGI ಬಳಿ ೧೨ ವಾರಗಳ ಅವಧಿಯನ್ನು ವಿಸ್ತಿರಿಸುವ ಕುರಿತು ಯಾವುದೇ ರೀತಿಯ ದತ್ತಾಂಶಗಳು ಲಭ್ಯವಿಲ್ಲ, ಎಂದು ಹೇಳಿದ್ದಾರೆ.
“8-12 ವಾರದ ಅವಧಿಯನ್ನು ನಾವು ಶಿಫಾರಸ್ಸು ಮಾಡಿದ್ದೆವು. 12-16ರ ವರೆಗಿನ ಅವಧಿಯನ್ನು ಖುದ್ದು ಸರ್ಕಾರವೇ ನಿರ್ಧರಿಸಿತ್ತು. ಇದು ಸರಿಯೂ ಆಗಿರಬಹುದು, ಅಥವಾ ತಪ್ಪೂ ಆಗಿರಬಹುದು. ಇದರ ಕುರಿತು ನಮ್ಮಲ್ಲಿ ಯಾವುದೇ ದಾಖಲೆ ಲಭ್ಯವಿಲ್ಲ,” ಎಂದು ಗುಪ್ತೆ ಮಾಹಿತಿ ನೀಡಿದ್ದಾರೆ.
ಮೇ 13ರಂದು ಪ್ರಕಟಣೆ ನೀಡಿದ್ದ ಕೇಂದ್ರ ಆರೋಗ್ಯ ಇಲಾಖೆಯು, NTAGIಯ ಶಿಫಾರಸ್ಸಿನ ಮೇರೆಗೆ ನಾವು ಈ ಸಲಹೆಯನ್ನು ಒಪ್ಪಿಕೊಂಡಿದ್ದೇವೆ, ಎಂದು ಹೇಳಿತ್ತು. ಈ ಹೇಳಿಕೆಗೆ ವೈರುಧ್ಯವೆಂಬಂತೆ ಈಗ NTAGIಯ ಸದಸ್ಯರು ಹೇಳಿಕೆ ನೀಡಿದ್ದಾರೆ.
ಇನ್ನು ಲಸಿಕೆಗಳ ಕೊರತೆಯನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲದ ಸರ್ಕಾರವು, ವೈಜ್ಞಾನಿಕ ಕಾರಣಗಳಿಂದಾಗಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಲಸಿಕೆಯ ಕೊರತೆ ದೇಶದಲ್ಲಿ ಇಲ್ಲ ಎಂದು ಹೇಳಿತ್ತು.
ಕೋವಿಡ್ ವರ್ಕಿಂಗ್ ಗ್ರೂಪ್ ನ ಸದಸ್ಯರಾದ ಜೆ ಪಿ ಮುಳಿಯಿಲ್ ಹೇಳಿರುವ ಪ್ರಕಾರ, ಲಸಿಕೆಗಳ ನಡುವಿನ ಅವಧಿಯನ್ನು ವಿಸ್ತರಿಸುವ ಕುರಿತು NTAGIಯಲ್ಲಿ ಚರ್ಚೆ ನಡೆದಿತ್ತು. ಆದರೆ, 12-16 ವಾರಗಳ ಅವಧಿಯನ್ನು ಯಾರೂ ನಿರ್ಧರಿಸಿ ಇರಲಿಲ್ಲ. ಯಾವುದೇ ನಿರ್ದಿಷ್ಟ ಸಮಯಾವಧಿಯನ್ನು NTAGI ನೀಡಿಯೇ ಇರಲಿಲ್ಲ, ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೊಸ ಮಾದರಿಯ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು, ಇದಕ್ಕೆ ಶೀಘ್ರವಾಗಿ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗಿತ್ತು ಎಂದು ಹಲವು ತಜ್ಞರು ಆರೋಪಿಸಿದ್ದರು. ಸರ್ಕಾರ ತಾನುತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಕುರಿತು ಸ್ಪಷ್ಟನೆ ನಿಡಬೇಕೆಂದು ಆಗ್ರಹಿಸಿ ಹಿರಿಯ ವೈರಾಲಜಿಸ್ಟ್ ಆಗಿರುವ ಶಾಹಿದ್ ಜಮೀಲ್ ಅವರು ಕೋವಿಡ್ ಸಲಹಾ ಸಮಿತಿಯ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
“ಅತೀ ವೇಗವಾಗಿ ಹರಡುವ ಕೊರೋನಾ ವೈರಸ್ ನ ಮಾದರಿಯ ಕುರಿತು ಮಾಹಿತಿ ಲಭ್ಯವಾದ ನಂತರ, ದೇಶದ ಜನರಿಗೆ ಶೀಘ್ರದಲ್ಲಿ ಲಸಿಕೆ ನೀಡುವ ಕುರಿತು ಆಲೋಚನೆ ನಡೆಸಬೇಕು, ಎಂದು ಅವರು ಹೇಳಿದ್ದರು.
ಸರ್ಕಾರವು ವಿಜ್ಞಾನಿಗಳು, ತಜ್ಞರ ಆರೋಪಗಳನ್ನು ತಳ್ಳಿ ಹಾಕುತ್ತಾ ಬಂದಿದೆಯಾದರೂ, ಎರಡನೇ ಅಲೆಯಿಂದ ದೇಶಕ್ಕಾದ ನಷ್ಟ ಕಣ್ಣಿಗೆ ಕಟ್ಟಿದಂತಿದೆ. ತನ್ನ ವೈಫಲ್ಯವನ್ನು ಮರೆಮಾಚಲು ವಿರೋಧ ಪಕ್ಷಗಳತ್ತ ಬೆಟ್ಟು ಮಾಡಿ ತೋರಿಸುವ ಸರ್ಕಾರ, ಇನ್ನಾದರೂ ವೈಜ್ಞಾನಿಕವಾದ ನೆಲೆಗಟ್ಟಿನಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಸಂಪೂರ್ಣ ದೇಶದಲ್ಲಿ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಿ, ಆದಷ್ಟು ಶೀಘ್ರದಲ್ಲಿ ಎಲ್ಲರಿಗೂ ಉಚಿತ ಲಸಿಕೆ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.