ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ವಿಚಾರ, ಕೇಂದ್ರ ಸರ್ಕಾರದ ವಿರುದ್ಧ ಹಾಗು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕಕ್ಕೆ ನಿತ್ಯ 1200 ಮೆಟ್ರಿಕ್ ಟನ್(MT) ಆಮ್ಲಜನಕ ಪೂರೈಸಬೇಕು ಎಂಬ ಕೋರ್ಟ್ ಆದೇಶದ ನಂತರವೂ ಕೇಂದ್ರ ರಾಜ್ಯಕ್ಕೆ ಪೂರೈಸಿದ್ದು 120MT ಮಾತ್ರ. ಅತ್ತ, ನಮಗಿಂತ ಕಡಿಮೆ ಪ್ರಕರಣಗಳಿರುವ ಉತ್ತರ ಪ್ರದೇಶಕ್ಕೆ 1680MT ಪೂರೈಸಿರುವ ಕೇಂದ್ರ ಸರ್ಕಾರ ತಾರತಮ್ಯದಲ್ಲಿ ಪಾರಮ್ಯ ಮೆರೆದಿದೆ. ಈ ಒಕ್ಕೂಟದಲ್ಲಿ ಕನ್ನಡಿಗರೇನು ತಬ್ಬಲಿ ಮಕ್ಕಳೇ..? ಎಂದು ಪ್ರಶ್ನಿಸಿದ್ದಾರೆ.
ನ್ಯಾಯಾಲಯ ಹೇಳಿದ್ದ 1200MT ಬದಲಿಗೆ 120MT ಆಮ್ಲಜನಕ ಪೂರೈಸಿದ್ದಕ್ಕೆ ಮುಖ್ಯಮಂತ್ರಿ, ಕೇಂದ್ರದ ಸಚಿವರು, ಬಿಜೆಪಿ ಸಂಸದರು ಮುಗಿಬಿದ್ದು ಕೇಂದ್ರ, ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ. ನಮಗೆ ಸಿಗಬೇಕಾಗಿದ್ದರಲ್ಲಿ ಮುರಿದುಕೊಂಡು ಕೊಟ್ಟಿದ್ದಕ್ಕೆ ಧನ್ಯವಾದ ಏಕೆ? ಬಿಜೆಪಿ ನಾಯಕರು, ಬಿಜೆಪಿ ಬೆಂಬಲಿಗರು ಈ ಗುಲಾಮಗಿರಿ ಬಿಡಬೇಕೆಂದು ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟಿದ್ದಾರೆ.
ಕೇಂದ್ರ ಸರ್ಕಾರ ತಾರತಮ್ಯ ಬಿಟ್ಟು ಕರ್ನಾಟಕದ ಅಗತ್ಯವನ್ನು ಪೂರೈಸಬೇಕು. ತಾನು ಸರ್ವಶಕ್ತ ಆಡಳಿತ ನಡೆಸುತ್ತಿರುವ ದಿಮಾಕನ್ನು ಕೇಂದ್ರ ಬಿಡಬೇಕು. ಒಕ್ಕೂಟ ಸರ್ಕಾರ ನಡೆಸುತ್ತಿರುವ ವಾಸ್ತವ ಅರಿಯಬೇಕು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ತಪ್ಪನ್ನು ಇಲ್ಲಿ ಸಮರ್ಥಿಸಿಕೊಳ್ಳುತ್ತಿರುವವರು ಮೊದಲು ತಾವು ಕನ್ನಡಿಗರು ಎಂಬುದು ಅರಿಯಬೇಕು ಎಂದಿದ್ದಾರೆ.
ಆಮ್ಲಜನಕ ಕರ್ನಾಟಕದ ಈ ಹೊತ್ತಿನ ಅಗತ್ಯ. ಈ ವಿಚಾರದಲ್ಲಿ ಆಗುತ್ತಿರುವ ತಾರತಮ್ಯವನ್ನೇ ಕನ್ನಡಿಗರಾಗಿ ನಾವು ಪ್ರಶ್ನೆ ಮಾಡದೇ ಹೋದರೆ ಇನ್ಯಾವ ವಿಚಾರದಲ್ಲಿ ನಾವು ನ್ಯಾಯ ಪಡೆಯಲು ಸಾಧ್ಯ. ಪರಿಹಾರ, ಅನುದಾನಗಳಲ್ಲಿ ಕರ್ನಾಟಕಕ್ಕೆ ಈಗ ಆಗಿರುವ ಅನ್ಯಾಯ ಸಹಿಸಿದ್ದಾಗಿದೆ. ಜೀವದ ವಿಚಾರದಲ್ಲಿ ನಡೆಯುತ್ತಿರುವ ಈ ತಾರತಮ್ಯ ಸಹಿಸುವುದು ಬೇಡ ಎಂದು ಕನ್ನಡಿಗರಿಗೆ ಸಲಹೆ ಕೊಟ್ಟಿದ್ದಾರೆ.