ಗಾಂಧಿ ಜಯಂತಿ ಆಚರಣೆಯ ಸಂಬಂಧ ಶುಕ್ರವಾರ ರಾಜ್ಯ ಸರ್ಕಾರ ತುರ್ತು ಸುತ್ತೋಲೆ ಹೊರಡಿಸಿದ್ದು, ಅಕ್ಟೋಬರ್ 2ರ ಶನಿವಾರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಗಾಂಧೀ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮಗಳಲ್ಲಿ ಕೇವಲ ಶಿಕ್ಷಕರು ಮತ್ತು ಸಿಬ್ಬಂದಿ ಮಾತ್ರ ಭಾಗವಹಿಸಬೇಕು ಎಂದು ಸೂಚಿಸಲಾಗಿದೆ.
ಕೋವಿಡ್-19 ರ ಮಾರ್ಗಸೂಚಿ(ಎಸ್ ಒಪಿ) ಪ್ರಕಾರ ಆಚರಣೆಗಳನ್ನು ನಡೆಸುವಂತೆ ಸೂಚಿಸಲಾಗಿದ್ದು, ಈ ಸಂಬಂಧ ಕಳೆದ ಜೂನ್ ನಲ್ಲಿ ಹೊರಡಿಸಲಾಗಿದ್ದ ಸುತ್ತೋಲೆಯ ಪ್ರಕಾರ ಎಲ್ಲಾ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಕೇವಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮಾತ್ರ ಹಾಜರಿದ್ದು, ಆಚರಣೆ ಮಾಡುವಂತೆ ಆದೇಶದಲ್ಲಿ ಹೇಳಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಈ ಆದೇಶ, ರಾಜ್ಯದ ಎಲ್ಲಾ ಅನುದಾನಿತ, ಅನುದಾನರಹಿತ ಮತ್ತು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅನ್ವಯವಾಗಲಿದ್ದು, ಶಾಲಾ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಗಾಂಧಿ ಮತ್ತು ಶಾಸ್ತ್ರಿ ಜಯಂತಿ ಕಾರ್ಯಕ್ರಮಗಳನ್ನು ನಡೆಸಬೇಕಾಗಿದೆ.
ಆದರೆ, ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಈ ಆದೇಶವನ್ನು ಹೊರಡಿಸಲಾಗಿದೆಯೇ? ಅಥವಾ ಇನ್ನಾವುದಾದರೂ ಕಾರಣವಿದೆಯೇ? ಎಂಬ ಜಿಜ್ಞಾಸೆಗೆ ಈ ದಿಢೀರ್ ಆದೇಶ ಕಾರಣವಾಗಿದೆ. ಏಕೆಂದರೆ, ಕಳೆದ ಒಂದೂವರೆ ತಿಂಗಳುಗಳಿಂದ ಆರನೇ ತರಗತಿ ನಂತರದ ವಿದ್ಯಾರ್ಥಿಗಳು ನಿತ್ಯ ಶಾಲೆಗಳಿಗೆ ಹೋಗಿ ಬರುತ್ತಿದ್ದಾರೆ. ಬಹುತೇಕ ಶಾಲೆಗಳಲ್ಲಿ ಮಕ್ಕಳು ಮಾಸ್ಕ್ ಧರಿಸುವುದನ್ನು ಹೊರತುಪಡಿಸಿ ಉಳಿದ ಯಾವುದೇ ಕೋವಿಡ್ ನಿಯಮಗಳನ್ನು ಪಾಲನೆ ಮಾಡುವುದು ದುಸ್ತರವಾಗಿದೆ. ತರಗತಿಗಳ ಒಳಗೆ ಮಕ್ಕಳು ಕುಳಿತು ಪಾಠಪ್ರವಚನ ಕೇಳುತ್ತಿದ್ದಾರೆ.
ಹಾಗಿರುವಾಗ, ಮಾಸ್ಕ್ ಧರಿಸಿ ಮಕ್ಕಳು ಎಂದಿನಂತೆ ಆಯಾ ತರಗತಿಗಳಲ್ಲೇ ಗಾಂಧಿ ಮತ್ತು ಶಾಸ್ತ್ರಿ ಜಯಂತಿಯನ್ನೂ ಆಚರಿಸಲು ಏನು ಅಡ್ಡಿ ಇತ್ತು? ಯಾವುದೇ ಗುಂಪುಗೂಡಿ ಸಮಾರಂಭ ಮಾಡದೇ ಹೋದರೂ, ಕನಿಷ್ಟ ಗಾಂಧಿ ಮತ್ತು ಶಾಸ್ತ್ರಿಯವರ ಬದುಕು, ಹೋರಾಟ ಮತ್ತು ಆದರ್ಶಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸುವ ಭಾಷಣ, ಪ್ರಬಂಧ, ಚಿತ್ರಕಲೆಯಂತಹ ಚಟುವಟಿಕೆ ನಡೆಸಲು ಯಾವ ನಿಯಮವೂ ಅಡ್ಡಿ ಬರುತ್ತಿರಲಿಲ್ಲ. ಶಿಕ್ಷಕರೇ ಆ ಚಟುವಟಿಕೆಗಳನ್ನು ಎಂದಿನ ಪಾಠ-ಪ್ರವಚನದ ರೀತಿಯಲ್ಲೇ ಮಾಡಲು ಅವಕಾಶವಿತ್ತು. ಆದರೂ, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಮತ್ತು ಶಾಸ್ತ್ರಿ ಅವರ ಜನ್ಮದಿನಾಚರಣೆಯ ಸಂದರ್ಭವನ್ನು ದೇಶದ ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹಾತ್ಮರ ಜೀವನಗಾಥೆಯ ಬಗ್ಗೆ ಎಳೆಯರಲ್ಲಿ ಅರಿವು ಮೂಡಿಸುವ, ದೇಶದ ಬಗ್ಗೆ ಹೆಮ್ಮೆ ಮೂಡಿಸುವ ಅವಕಾಶವಾಗಿ ಬಳಸಿಕೊಳ್ಳುವ ವಿಷಯವನ್ನು ರಾಜ್ಯ ಬಿಜೆಪಿ ಸರ್ಕಾರ, ಕೋವಿಡ್ ನೆಪದಲ್ಲಿ ಚೆಲ್ಲಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ.
ಅದರಲ್ಲೂ ಕೊನೇ ಕ್ಷಣದಲ್ಲಿ ಇಂತಹ ಅವೈಜ್ಞಾನಿಕ ಮತ್ತು ಅತಾರ್ಕಿಕ ಸುತ್ತೋಲೆ ಹೊರಬೀಳುವ ಹಿಂದೆ ಬಿಜೆಪಿಯ ಸಂಘಪರಿವಾರದ ಕೈವಾಡದ ಶಂಕೆ ವ್ಯಕ್ತವಾಗಿದೆ. ಗಾಂಧಿಯನ್ನು ದ್ವೇಷಿಸುವ ಮತ್ತು ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದನ್ನೇ ತಮ್ಮ ರಾಜಕೀಯ ಕಾರ್ಯಸೂಚಿಯ ಭಾಗವಾಗಿಸಿಕೊಂಡಿರುವ ಪಕ್ಷವೊಂದು, ಕೋವಿಡ್ ನಂತಹ ಪರಿಸ್ಥಿತಿಯನ್ನೇ ನೆಪ ಮಾಡಿಕೊಂಡು ದೇಶದ ಭವಿಷ್ಯದ ತಲೆಮಾರಿನ ಪ್ರಜ್ಞೆಯಿಂದ ಮಹಾತ್ಮಾ ಗಾಂಧಿ ಎಂಬ ವ್ಯಕ್ತಿತ್ವವನ್ನೇ ಅಳಿಸಿಹಾಕುವ ಹುನ್ನಾರ ಇಂತಹ ಸುತ್ತೋಲೆಯ ಹಿಂದಿದೆಯೇ ಎಂಬ ಚರ್ಚೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ. ಆ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶ ವಿವಾದದ ಸ್ವರೂಪ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.





