ಹಲವು ತಿಂಗಳುಗಳ ಬಳಿಕ ಇಡೀ ರಾಜ್ಯ ಯಥಾಸ್ಥಿತಿಗೆ ಮರಳುತ್ತಿದೆ. ಇಂದಿನಿಂದ ದೇವಸ್ಥಾನ, ಚಿತ್ರಮಂದಿರ, ಪಬ್, ಕ್ಲಬ್ ಎಲ್ಲದಕ್ಕೂ ಅನುಮತಿ ದೊರೆಯುತ್ತಿದೆ. ಕರೋನಾ ಗಣನೀಯವಾಗಿ ತಗ್ಗಿರುವ ಹಿನ್ನೆಲೆಯಲ್ಲಿ ಕಳೆದ 25ರಂದು ರಾಜ್ಯ ಸರ್ಕಾರ ಅಕ್ಟೋಬರ್ 1ರಂದು ಎಲ್ಲದಕ್ಕೂ 100% ರಷ್ಟು ಅನುಮತಿ ಕೊಟ್ಟು ಆದೇಶ ಹೊರಡಿಸಿತ್ತು. ಈ ನಿಟ್ಟಿನಲ್ಲಿ ಇಂದಿನಿಂದ ಎಲ್ಲವೂ ಸಂಪೂರ್ಣವಾಗಿ ಅನ್ ಲಾಕ್ ಆಗುತ್ತಿದೆ.

ಕರೋನಾ ಎರಡನೇ ಅಲೆ ವೇಳೆ ಎಲ್ಲದರ ಮೇಲೂ ನಿರ್ಬಂಧ ಹೇರಿದ್ದ ಸರ್ಕಾರ.!!ಚಿತ್ರರಂಗಕ್ಕೆ ಹಿಡಿದಿದ್ದ ಗ್ರಹಣ ಇಂದಿಗೆ ಮುಕ್ತಾಯವಾಗುತ್ತಿದೆ. ಕರೊನಾ 2ನೇ ಅಲೆಯ ಬಳಿಕ, ಭರ್ತಿ 5 ತಿಂಗಳಾದ್ಮೇಲೆ 100% ಆಸನ ಭರ್ತಿಗೆ ಅವಕಾಶ ಸಿಕ್ಕಿದೆ. ಹೀಗಾಗಿ ಗಾಂಧಿನಗರದಲ್ಲಿ ಮತ್ತೆ ಹಬ್ಬದ ಸಡಗರ ಸಂಭ್ರಮ ಮನೆಮಾಡಿದೆ. ಹೌದು, ಬರೋಬ್ಬರಿ 5 ತಿಂಗಳ ವನವಾಸ ಮುಗಿಸಿ, ಚಿತ್ರರಂಗ ಮತ್ತೆ ಪುಟಿದೇಳಲು ಸಜ್ಜಾಗಿದೆ. ಒಂದೂವರೆ ವರ್ಷದಿಂದ ಕರೊನಾ ಕಾಟಕ್ಕೆ ನಲುಗಿಹೋಗಿದ್ದ ಸ್ಯಾಂಡಲ್‌ವುಡ್‌ನಲ್ಲಿ, ಮತ್ತೆ ಭರವಸೆಯ ಬೆಳಕು ಮೂಡಿದೆ.. ಇಂದಿನಿಂದ 100 % ಆಸನ ಭರ್ತಿಗೆ ಸರಕಾರ ಅನುಮತಿ ಕೊಟ್ಟಿರುವುದರಿಂದ, ಗಾಂಧಿನಗರದಲ್ಲಿ ಸಡಗರ ಮನೆಮಾಡಿದೆ. ಏಪ್ರಿಲ್ 1ರಂದು ತೆರೆಕಂಡಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾಗೆ, ಮೂರೇ ದಿನದಲ್ಲಿ ಶಾಕ್ ಕೊಟ್ಟಿತ್ತು ಸರ್ಕಾರ. ಅದಾಗಿ 5 ತಿಂಗಳ ಬಳಿಕ ಇಂದಿನಿಂದ ಮತ್ತೆ ಬೆಳ್ಳಿಪರದೆಗೆ ಹೊಸ ರಂಗು ಬರಲಿದೆ.
ಮೊದಲ ಚಿತ್ರವಾಗಿ ತೆರೆಗೆ ಬರ್ತಿದೆ ‘ಕಾಗೆ ಮೊಟ್ಟೆʼ & ʻಮೋಹನದಾಸʼ.!!
50% ನಿರ್ಬಂಧದ ನಡುವೆಯೇ ಕೆಲ ಚಿತ್ರಗಳು ರಿಲೀಸ್ ಆದರೂ, ಅಷ್ಟೇನೂ ಉತ್ತಮ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಈಗ 100% ಆಸನ ಭರ್ತಿಗೆ ಅವಕಾಶ ಸಿಕ್ಕಿರುವುದರಿಂದ, ಮೊದಲ ಚಿತ್ರವಾಗಿ ‘ಕಾಗೆ ಮೊಟ್ಟೆʼ ಹಾಗೂ ʻಮೋಹನದಾಸʼ ಎಂಬ ಎರಡು ಚಿತ್ರಗಳು ಬಿಡುಗಡೆ ಆಗ್ತಿದೆ. ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ಅಭಿನಯದ, ‘ಕಾಗೆ ಮೊಟ್ಟೆ’ ಸಿನಿಮಾ ಥಿಯೇಟರ್ ಅಂಗಳಕ್ಕೆ ಕಾಲಿಡ್ತಿದೆ. ಈ ಮೂಲಕ ಸಿನಿಪ್ರಿಯರಿಗೆ ಬ್ಯಾಕ್ ಟು ಬ್ಯಾಕ್ ಹಬ್ಬವೋ ಹಬ್ಬ. ಮುಂದಿನ ವಾರದಿಂದ ಚಿತ್ರಮಂದಿರಗಳು ಮತ್ತಷ್ಟು ಕಳೆಗಟ್ಟುವ ನಿರೀಕ್ಷೆ ಇವೆ. ನಿನ್ನ ಸನಿಹಕೆ, ಸಲಗ, ಕೋಟಿಗೊಬ್ಬ-3, ಭಜರಂಗಿ-2 ಚಿತ್ರಗಳು, ಒಂದಾದ ಮೇಲೊಂದರಂತೆ ತೆರೆಮೇಲೆ ಅಪ್ಪಳಿಸಲಿವೆ.
ಇಂದಿನಿಂದ ದೇವಸ್ಥಾನ, ಚಿತ್ರಮಂದಿರ, ಪಬ್, ಕ್ಲಬ್ ಎಲ್ಲಾ ಓಪನ್.!!
ಚಿತ್ರ ಮಂದಿರದ ಜೊತೆಗೆ ಧಾರ್ಮಿಕ ಕ್ಷೇತ್ರದ ಕಾರ್ಯ ಚಟುವಟಿಕೆಗಳಿಗೂ ಸರ್ಕಾರ ಸಂಪೂರ್ಣ ಅನುಮತಿ ಕೊಟ್ಟಿದೆ. ಕರೋನಾ ಎರಡನೇ ವೇಳೆ ಬಂದ್ ಆಗಿದ್ದ ದೇವಸ್ಥಾನ ಮತ್ತು ಇತರೆ ಧಾರ್ಮಿಕ ದೇವಾಲಯಗಳು, ಅದಾದ ಬಳಿಕ ಹಂತ ಹಂತವಾಗಿ ಕಾರ್ಯಚರಿಸಲು ಅನುಮತಿ ಕೊಡಲಾಗಿತ್ತು. ಆದರೆ ಶೆ. 100 ಕ್ಕೆ ನೂರರಷ್ಟು ಅನುಮತಿ ಕೊಟ್ಟಿರಲಿಲ್ಲ. ಇದೀಗ ಇಂದಿನಿಂದ ದೇವಸ್ಥಾನಗಳ ಮೇಲಿನ ನಿರ್ಬಂಧ ಕೂಡ ತೆರವಾಗುತ್ತಿದೆ. ಇದರ ಜೊತೆಗೆ ಕ್ಲಬ್, ಪಬ್ ಕೂಡ ಇಂದಿನಿಂದ ಫುಲ್ ಬಿಂದಾಸ್ ಆಗಿ ಓಪನ್ ಆಗುತ್ತಿದೆ. ಅದ್ಯಾವಗ ಕೊರೋನಾ ಮೊದಲ ಅಲೆ ಅಪ್ಪಳಿಸಿತೋ ಆಗಲೇ ಪಬ್, ಕ್ಲಬ್ ಗಳ ವ್ಯವಹಾರಕ್ಕೆ ಕಡಿವಾಣ ಬಿದ್ದಿತ್ತು. ಅದಾದ ಬಳಿಕ ಸರ್ಕಾರ ಹಾಗೂ ಬಿಬಿಎಂಪಿ ಮೇಲೆ ಹಲವು ಬಾರಿ ಒತ್ತಡ ಬಿದ್ದಿದ್ದರೂ ಓಪನ್ ಮಾಡಲು ಅನುಮತಿ ಕೊಟ್ಟಿರಲಿಲ್ಲ.

ಸಿಲಿಕಾನ್ ಸಿಟಿ ಬೆಂಗಳೂರು ಇಂದಿನಿಂದ ಫುಲ್ ಓಪನ್..!!
ಸರ್ಕಾರದ ಆದೇಶ ಹೊರತಾಗಿಯೂ ಏನಾದರು ಬದಲಾವಣೆ ಬೇಕಿದ್ದರೆ ಅದನ್ನು ಮಾಡುವ ಅಧಿಕಾರ ಸರ್ಕಾರ ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾಡಳಿತಗಳಿಗೆ ಕೊಟ್ಟಿತ್ತು. ಆದರೆ ಸರ್ಕಾರದ ಆದೇಶದಂತೆ ಬಿಬಿಎಂಪಿ ಇಂದು ಕಂಪ್ಲೀಟ್ ಬೆಂಗಳೂರು ಓಪನ್ ಗೆ ಅನುಮತಿ ಕೊಟ್ಟಿದೆ. ಪಾಲಿಕೆ ಈ ಹಿಂದೆಯೇ ಎಲ್ಲದ್ದಕ್ಕೂ ಅನುಮತಿ ಕೊಡಬಹುದು ಎಂದು ಸರ್ಕಾರಕ್ಕೆ ಹೇಳಿತ್ತು. ತಾಂತ್ರಿಕ ಸಲಹಾ ಸಮಿತಿ ಸಲಹೆ ಪಡೆದು ಸರ್ಕಾರಕ್ಕೆ ವರದಿ ಕೊಟ್ಟಿತ್ತು. ಹೀಗಾಗಿ ಮಹಾನಗರ ಬೆಂಗಳೂರು ಕೊರೋನಾ ಕಭಂದಬಾಹುವಿನಿಂದ ಹೊರ ಬರುತ್ತಿದೆ. ಆದರೆ ಮಾಸ್ಕ್, ಸಾಮಾಜಿಕ ಅಂತರ, ಇತರೆ ಕೊರೋನಾ ರುಲ್ಸ್ ಪಾಲನೆ ಕಡ್ಡಾಯವಾಗಿರಲಿದೆ. ಇದರ ಜೊತೆಗೆ ಬಿಬಿಎಂಪಿ ನಗರದ ಮೇಲೆ ಹದ್ದಿನ ಕಣ್ಣಿಡಲಿದೆ.
ನಿರ್ಬಂಧ ಸಡಿಲಿಕೆಯಾದರೂ ಬಿಬಿಎಂಪಿಯಿಂದ ನಗರಕ್ಕೆ ಕಣ್ಗಾವಲು.!!
• ಆರಂಭದಲ್ಲಿ ಥಿಯೇಟರ್ ಗೊಬ್ಬರು ಪೊಲೀಸ್ ಸಿಬ್ಬಂದಿ ನಿಯೋಜನೆ
• ದಿನ ಕಳೆಯುತ್ತಿದ್ದಂತೆ ಪರಿಶೀಲಿಸಲು ಸಪ್ರೈಸ್ ವಿಸಿಟ್ ಸಹ ಮಾಡಬಹುದು
• ಬಿಬಿಎಂಪಿ ವ್ಯಾಪ್ತಿಯ ವಲಯಗಳ ಕೋವಿಡ್ ರೂಲ್ ಫಾಲೊ ಮಾಡುವ ಮಾರ್ಷಲ್ ಟೀಂ ನಿಗಾ ಇಡಬೇಕು
• ಥಿಯೇಟರ್ ಗೆ ಮಾರ್ಷಲ್ ಭೇಟಿ ಕೊಟ್ಟು ಕೋವಿಡ್ ನಿಯಮಗಳ ಪಾಲನೆ ಆಗಿದ್ದೇಯಾ ಇಲ್ವ ಅಂತ ಗಮನ ಹರಿಸಲಿದ್ದಾರೆ
• ಮಾರ್ನಿಂಗ್ ಶೋ, ಸೆಕೆಂಡ್ ಶೋ ಎಲ್ಲ ಟೈಮ್ ನಲ್ಲೂ ಚೆಕ್ಕಿಂಗ್ ನಡೆಯಲಿದೆ
• ಟಿಕೆಟ್ ಖರೀದಿ ರೂಲ್ ಬ್ರೇಕ್ ಮಾಡಿದವ್ರು ದುಪ್ಪಟ್ಟು ದಂಡ ಕಟ್ಟಬೇಕು

			
                                
                                
                                
