ಕೋವಿಡ್ ಮೂರನೇ ಅಲೆ ಮತ್ತು ಡೆಲ್ಟಾ ಪ್ಲಸ್ ವೈರಸ್ ಕುರಿತ ತಜ್ಞರ ಎಚ್ಚರಿಕೆಯ ಹೊರತಾಗಿಯೂ ತರಾತುರಿಯಲ್ಲಿ ಲಾಕ್ ಡೌನ್ ತೆರವು ಮಾಡಿದ ಸರ್ಕಾರದ ಕ್ರಮ ಜನರನ್ನು ಎಂಥ ಹುಂಬತನಕ್ಕೆ ಮತ್ತು ಎಷ್ಟು ಮೂರ್ಖತನಕ್ಕೆ ನೂಕಿದೆ ಎಂಬುದನ್ನು ನೋಡಬೇಕಾದರೆ ನೀವು ಶುಕ್ರವಾರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಸಿಗಂದೂರಿಗೆ ಭೇಟಿ ನೀಡಬೇಕಿತ್ತು.
ಅಮಾವಾಸ್ಯೆ ಹಿನ್ನೆಲೆಯಲ್ಲಿ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದ ರಾಜ್ಯದ ಮೂಲೆಮೂಲೆಯ ಸಾವಿರಾರು ಮಂದಿ ಭಕ್ತರು, ಶರಾವತಿ ಹಿನ್ನೀರು ದ್ವೀಪ ಪ್ರದೇಶದಲ್ಲಿ ಬೃಹತ್ ಜನಜಾತ್ರೆಯನ್ನೇ ಸೃಷ್ಟಿಸಿದ್ದರು. ಸಿಗಂದೂರಿಗೆ ತೆರಳಲು ಲಾಂಚ್ ಮೂಲಕ ಶರಾವತಿ ಹಿನ್ನೀರು ದಾಟಬೇಕಾದ್ದರಿಂದ ಹಾಗೆ ದಿಢೀರನೇ ಬಂದ ಸಾವಿರಾರು ಮಂದಿ ಎರಡು ಬಸ್ ನಿಲ್ಲುವಷ್ಟು ಕಿರಿದಾದ ಲಾಂಚುಗಳಲ್ಲಿ ಕಿಕ್ಕಿರಿದು ತುಂಬಿದ್ದ ದೃಶ್ಯ ಲಾಂಚ್ ನ ಪ್ರತಿ ಟ್ರಿಪ್ ನಲ್ಲೂ ಸಾಮಾನ್ಯವಾಗಿತ್ತು.
ಅದರಲ್ಲೂ ಬಹುತೇಕ ಮಂದಿ ಯಾವುದೇ ರೀತಿಯ ಕೋವಿಡ್ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ. ದೈಹಿಕ ಅಂತರವಂತೂ ಲಾಂಚ್ ಒಳಹೊರಗೆ ಊಹಿಸುವಂತೆಯೇ ಇಲ್ಲ. ಕನಿಷ್ಟ ಮಾಸ್ಕ್ ಧರಿಸುವ ನಿಟ್ಟಿನಲ್ಲೂ ಅಲ್ಲಿ ನಿಯಮ ಪಾಲನೆ ಕಂಡುಬರಲಿಲ್ಲ. ಕನಿಷ್ಟ ಲಾಂಚ್ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಮಾಸ್ಕ್ ಧರಿಸುವುದನ್ನು ಪಾಲಿಸುವಂತೆ ಜನರಿಗೆ ಹೇಳಬಹುದಿತ್ತು. ಆ ಕಾರ್ಯವನ್ನು ಕೂಡ ಸರ್ಕಾರದ ಕಡೆಯಿಂದ ಮಾಡಲಾಗಿಲ್ಲ. ಹಾಗಾಗಿ, ಬೆಂಗಳೂರು, ಮೈಸೂರು, ಹಾಸನ, ತುಮಕೂರು ಮೂಲೆಯಿಂದ ಬೆಳಗಾವಿ ತುದಿಯವರೆಗೆ ಪ್ರವಾದೋಪಾದಿಯಲ್ಲ ಬಂದಿದ್ದ ಸಿಗಂದೂರು ಭಕ್ತ ಗಣಕ್ಕೆ, ದೇವಾಲಯದ ಆಡಳಿತ ಮಂಡಳಿ ಕೂಡ ಕನಿಷ್ಟ ಕೋವಿಡ್ ನಿಯಮಾವಳಿ ಪಾಲನೆಯ ಬಗ್ಗೆ ಎಚ್ಚರಿಕೆ ನೀಡುವ ಗೋಜಿಗೇ ಹೋಗಲಿಲ್ಲ ಎಂಬುದು ಪ್ರತ್ಯಕ್ಷದರ್ಶಿಗಳ ಅಭಿಪ್ರಾಯ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಮುಚ್ಚಲಾಗಿತ್ತು. ಇದೀಗ ಸರ್ಕಾರ ತರಾತುರಿಯಲ್ಲಿ ದೇವಾಲಯಗಳ ದರ್ಶನಕ್ಕೂ ಲಾಕ್ ಡೌನ್ ಮುಕ್ತಗೊಳಿಸಿದ ಬಳಿಕ ಕಳೆದ ಒಂದು ವಾರದಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಸರ್ಕಾರದ ಅಂತಹ ದುಡುಕಿನ ಕ್ರಮ ಎಷ್ಟು ಅಪಾಯಕಾರಿ ಮತ್ತು ಜನ ಸರ್ಕಾರದ ಅಂತಹ ಹೊಣೆಗೇಡಿತವನ್ನು ಕೋವಿಡ್ ವಿಷಯದಲ್ಲಿ ಎಷ್ಟು ಸಲೀಸಾಗಿ ಪರಿಗಣಿಸುತ್ತಾರೆ ಎಂಬುದಕ್ಕೆ ಸಿಗಂದೂರಿಗೆ ಬಂದ ಭಕ್ತರ ದಂಡು ಮತ್ತು ಕೋವಿಡ್ ನಿಯಮ ಪಾಲನೆಯಲ್ಲಿ ಅವರ ಉಡಾಫೆಯ ನಡವಳಿಕೆ ನಿದರ್ಶನವಾಗಿತ್ತು.
ಜೊತೆಗೆ, ರಾಜ್ಯದ ಪ್ರಮುಖ ಯಾತ್ರಾ ಸ್ಥಳವಾದ ಇಲ್ಲಿ ಪ್ರತಿ ಅಮಾವಾಸ್ಯೆ- ಹುಣ್ಣಿಮೆಯ ಪೂಜೆಗೆ ಕನಿಷ್ಟ 10-15 ಸಾವಿರ ಭಕ್ತರು ಧಾವಿಸುತ್ತಾರೆ. ಅದರಲ್ಲೂ ಮೂರ್ನಾಲ್ಕು ತಿಂಗಳ ಬಳಿಕ ದೇವರ ದರ್ಶನ ಅವಕಾಶ ಸಿಕ್ಕಿರುವುದರಿಂದ ಸಹಜವಾಗೇ ಆ ಸಂಖ್ಯೆ ಇನ್ನಷ್ಟು ಹೆಚ್ಚಿರುತ್ತದೆ ಎಂಬ ಅರಿವಿದ್ದರೂ ಶಿವಮೊಗ್ಗ ಜಿಲ್ಲಾಡಳಿತವಾಗಲೀ, ಸ್ಥಳೀಯ ಸಾಗರ ಉಪ ವಿಭಾಗೀಯ ಆಡಳಿತವಾಗಲೀ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಯಾಕೆ ಕೈಗೊಳ್ಳಲಿಲ್ಲ ಎಂಬುದು ಈ ಜನಜಾತ್ರೆಯಿಂದ ಕರೋನಾ ಹರಡುವ ಆತಂಕಕ್ಕೊಳಗಾಗಿರುವ ಸ್ಥಳೀಯರ ಪ್ರಶ್ನೆ. ಅದರಲ್ಲೂ ಸೂಕ್ತ ಪೊಲೀಸ್ ಸಿಬ್ಬಂದಿಯ ನಿಯೋಜನೆ ಮಾಡಿ, ಲಾಂಚ್ ಸಿಬ್ಬಂದಿಗೆ ಸೂಕ್ತ ತಿಳಿವಳಿಕೆ ಕೊಟ್ಟು ದೈಹಿಕ ಅಂತರ ಕಾಯಲು ಸಾಧ್ಯವಿಲ್ಲದಿದ್ದರೆ ಕನಿಷ್ಟ ಮಾಸ್ಕ್ ಕಡ್ಡಾಯಗೊಳಿಸಿ, ಮಾಸ್ಕ್ ಧರಿಸದೇ ಇರುವವರನ್ನು ಲಾಂಚ್ ಗೆ ಹತ್ತಿಸುವುದಿಲ್ಲ ಎಂದಾದರೂ ಕಟ್ಟುನಿಟ್ಟು ಮಾಡಿದ್ದರೆ, ಈ ಪರಿಯ ಅವ್ಯವಸ್ಥೆಯಾಗುತ್ತಿರಲಿಲ್ಲ. ಆದರೆ, ಸ್ಥಳೀಯ ಪಂಚಾಯ್ತಿ, ದೇವಸ್ಥಾನದ ಆಡಳಿತ ಮಂಡಳಿಯಿಂದ ಹಿಡಿದು ಜಿಲ್ಲಾಡಳಿತದ ವರೆಗೆ ಎಲ್ಲರೂ ಈ ವಿಷಯದಲ್ಲಿ ತುಮರಿ ದ್ವೀಪದ ಜನರ ಹಿತ ಬಲಿಕೊಟ್ಟು ಭಕ್ತರ ಕಾಣಿಕೆ ಹಣದಾಸೆಗೆ ಎಲ್ಲಾ ನಿಯಮ ಗಾಳಿಗೆ ತೂರಿದ್ದಾರೆ ಎಂಬುದು ಅವರ ಗಂಭೀರ ಆರೋಪ.
“ಈಗಾಗಲೇ ಈ ದ್ವೀಪ ಭಾಗದಲ್ಲಿ ಕರೋನಾಕ್ಕೆ ತಾರುಣ್ಯದ ಯುವಕರು ಸೇರಿದಂತೆ ಹಲವರು ಬಲಿಯಾಗಿದ್ದಾರೆ. ಸೂಕ್ತ ಆಸ್ಪತ್ರೆ, ವೈದ್ಯರು, ಆ್ಯಂಬುಲೆನ್ಸ್ ಮತ್ತು ರಸ್ತೆ ಸಂಪರ್ಕ ವ್ಯವಸ್ಥೆ ಇಲ್ಲದ, ದ್ವೀಪದಲ್ಲಿ ಯಾವುದೇ ಸುಸಜ್ಜಿತ ಆಸ್ಪತ್ರೆಗೆ ಹೋಗಬೇಕೆಂದರೂ ಕನಿಷ್ಟ 150 ಕಿ.ಮೀ ಹೋಗಬೇಕಾದ ಸ್ಥಿತಿ ಇದೆ. ಹಾಗಿರುವಾಗ, ಹೀಗೆ ಜಾತ್ರೆ ಮಾಡಿ ದ್ವೀಪದ ಜನರನ್ನು ಸಾವಿನ ದವಡೆಗೆ ನೂಕುವುದು ಎಷ್ಟು ಸರಿ?” ಎನ್ನುತ್ತಾರೆ ತುಮರಿ ಪಂಚಾಯ್ತಿಯ ಮಾಜಿ ಅಧ್ಯಕ್ಷ ಹಾಗೂ ಲೇಖಕ ಜಿ ಟಿ ಸತ್ಯನಾರಾಯಣ.
ಹಾಗೆ ನೋಡಿದರೆ, ತುಮರಿ ಮಲೆನಾಡಿನ ನಟ್ಟನಡುವಿನ ದ್ವೀಪ ಪ್ರದೇಶ. ಅಲ್ಲಿನ ಸಿಗಂದೂರು ದೇವಾಲಯಕ್ಕೆ ಹೋಗುವ ರಾಜ್ಯದ ಮೂಲೆಮೂಲೆಯ ಭಕ್ತರು ಸಹಜವಾಗೇ ಸಾಗರ, ಶಿವಮೊಗ್ಗ ಮುಂತಾದ ಮಲೆನಾಡಿನ ನಗರ-ಪಟ್ಟಣಗಳ ಮೂಲಕವೇ ಸಾಗಬೇಕು. ಹಾಗಾಗಿ, ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಯ್ದುಕೊಳ್ಳದೆ ಜಾತ್ರೆಯಂತೆ ನೆರೆಯುವ ಜನಗಳಿಂದಾಗಿ ಕೇವಲ ತುಮರಿ ದ್ವೀಪ ಮಾತ್ರವಲ್ಲದೆ, ಇಡೀ ಮಲೆನಾಡಿಗೇ ಕರೋನಾ ಮತ್ತೊಮ್ಮೆ ಅಪ್ಪಳಿಸುವ ಅಪಾಯ ಎದುರಾಗಿದೆ. ಅದರಲ್ಲೂ ಸಿಗಂದೂರು ದೇವಾಲಯಕ್ಕೆ ಪ್ರತಿ ಮಂಗಳವಾರ, ಶುಕ್ರವಾರವೂ ಜನ ಬಹುತೇಕ ಇಷ್ಟೇ ಪ್ರಮಾಣದಲ್ಲಿ ಲಗ್ಗೆ ಇಡುವುದರಿಂದಾಗಿ, ಕರೋನಾ ಮೂರನೇ ಅಲೆ ಮಲೆನಾಡಿನ ಈ ಭಾಗದಿಂದಲೇ ಆರಂಭವಾದರೂ ಅಚ್ಚರಿಯಿಲ್ಲ. ಹಾಗಾಗಿ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಜನರ ಗುಂಪಿನ ಮೇಲೆ ಮಿತಿ ಹೇರಿ, ಕೋವಿಡ್ ನಿಯಮ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಹೋದರೆ, ಮಲೆನಾಡು ಮತ್ತೊಮ್ಮೆ ಸಾವಿನ ಮನೆಯಾಗಲಿದೆ ಎಂಬ ಆತಂಕ ಅವರದು.
ಲಾಂಚ್ ಮೂಲಕ ತುಮರಿ ಭಾಗಕ್ಕೆ ಪ್ರವೇಶಿಸುವ ಭಕ್ತರು, ಕೇವಲ ದೇವಾಲಯ ಮಾತ್ರವಲ್ಲದೆ, ತುಮರಿ ಭಾಗದ ಹೋಟೆಲ್, ಹೋಂಸ್ಟೇಗಳಲ್ಲಿ ತಂಗುತ್ತಾರೆ, ಅಂಗಡಿ-ಮುಂಗಟ್ಟುಗಳಲ್ಲಿ ಕೂಡ ಅಲೆಯುತ್ತಾರೆ. ಹಾಗಾಗಿ, ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಯದೆ ಇರುವ ಈ ಜನಗಳ ನಡತೆ ಇಡೀ ಮಲೆನಾಡಿಗೇ ಕಂಟಕವಾಗಲಿದೆ ಎಂಬ ಮಾತು ಶುಕ್ರವಾರದ ಜನಜಂಗುಳಿಯ ಹಿನ್ನೆಲೆಯಲ್ಲಿ ವ್ಯಾಪಕವಾಗಿ ಕೇಳಿಬಂದಿದೆ.