ಕೇಂದ್ರ ಸರಕಾರ ಲಸಿಕಾ ನೀತಿಯ ವಿರುದ್ಧ ಒಂದೆಡೆ ಕೇರಳ ಸರಕಾರ ರಾಜ್ಯದ ಹೈಕೋರ್ಟ್ ನಲ್ಲಿ ಆಕ್ಷೇಪ ಎತ್ತಿದೆ. ಇನ್ನೊಂದೆಡೆ ಸುಪ್ರೀಂ ಕೋರ್ಟ್ ಕೂಡ, ಹಾಲಿ ಇರುವ ಲಸಿಕಾ ನೀತಿಯನ್ನು ಪರಾಮರ್ಶಿಸುವಂತೆ ಕೇಂದ್ರದ ವಿರುದ್ಧ ಚಾಟಿ ಬೀಸಿದೆ.
ಕೇಂದ್ರ ಸರಕಾರದ ಲಸಿಕಾ ನೀತಿಯು ಕಾಳ ಸಂತೆಯನ್ನು ಉತ್ತೇಜಿಸುತ್ತಿದೆ ಎಂದು ಕೇರಳ ಸರಕಾರವು ಅಲ್ಲಿನ ಹೈಕೋರ್ಟ್ ನಲ್ಲಿ ಹೇಳಿರುವುದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಕೇರಳದ ಸಂಸದ ಶಶಿ ತರೂರ್ ಕೂಡ ಕೊರೋನಾ ವಿರುದ್ಧದ ಹೋರಾಟದಲ್ಲಿ ದೇಶದ ಲಸಿಕಾ ನೀತಿಯನ್ನು ಅಸಮರ್ಪಕ ಎಂದು ಟೀಕಿಸಿದ್ದಾರೆ. ಮತ್ತೊಂದೆಡೆ ಲಸಿಕಾ ನೀತಿಯಲ್ಲಿರುವ ಲೋಪದೋಷಗಳನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, ಲಸಿಕಾ ನೀತಿಯನ್ನು ಪರಾಮರ್ಶಿಸುವಂತೆ ಸೂಚನೆ ನೀಡಿದೆ.
ಕಾಳಸಂತೆಯನ್ನು ಬೆಂಬಲಿಸುವ ಲಸಿಕಾ ನೀತಿ ಎಂದ ಕೇರಳ :
ಲಸಿಕೆಗಳಿಗೆ ವಿಭಿನ್ನ ದರಗಳನ್ನು ನಿಗದಿಪಡಿಸಿರುವುದರಿಂದ ಅದು ಕಾಳಸಂತೆಕೋರರಿಗೆ ಹಾಸಿಗೆ ಕೊಟ್ಟಂತಾಗಿದೆ ಎಂದು ಕೇರಳ ಸರಕಾರವು, ಅಲ್ಲಿನ ಹೈಕೋರ್ಟ್ ನಲ್ಲಿ ದೂರಿದೆ. ಕೇಂದ್ರದ ಲಸಿಕಾ ನೀತಿ ಸರಿ ಇಲ್ಲ. ಇದು ಕಾಳಸಂತೆಗೆ ಅವಕಾಶ ಕಲ್ಪಿಸುತ್ತಿದೆ. ಕೂಡಲೇ ಲಸಿಕೆಗಳ ದರಗಳನ್ನು ಅದರ ಉತ್ಪಾದನಾ ವೆಚ್ಚವನ್ನು ಆಧರಿಸಿ ನಿಗದಿಪಡಿಸಬೇಕು ಎಂದು ಕೇರಳ ಸರಕಾರದ ಪರ ವಕೀಲರು, ಹೈಕೋರ್ಟ್ ನಲ್ಲಿ ಆಗ್ರಹಪಡಿಸಿದ್ದಾರೆ.
ಹೈಕೋರ್ಟ್ ನಲ್ಲಿ ಬುಧವಾರ ನಡೆದ ವಿಚಾರಣೆ ವೇಳೆ, ನ್ಯಾಯಮೂರ್ತಿ ಎ.ಮುಹಮ್ಮದ್ ಮುಷ್ತಾಕ್ ಹಾಗೂ ನ್ಯಾಯಮೂರ್ತಿ ಕೌಸರ್ ಎಡಪ್ಪಗಥ್ ಅವರು ಕೇರಳ ರಾಜ್ಯದಲ್ಲಿ ಲಸಿಕೆಗಳ ಕೊರತೆಗೆ ಸಂಬಂಧಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಸರಕಾರದ ಪರ ವಾದವನ್ನು ಆಲಿಸಿದರು.
ಸರಕಾರದ ಪರ ಅಟಾರ್ನಿಯವವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಲಸಿಕೆ ಖರೀದಿಗೆ ವಿಭಿನ್ನ ದರಗಳನ್ನು ನಿಗದಿಪಡಿಸಿರುವುದನ್ನು ಪ್ರಶ್ನಿಸಿದರು. ಖಾಸಗಿ ಲಸಿಕಾ ತಯಾರಕರು ಲಸಿಕೆಗಳಿಗೆ ಬೇಕಾಬಿಟ್ಟಿ ದರಗಳನ್ನು ನಿಗದಿಪಡಿಸುತ್ತಿದ್ದು, ಸಾಂಕ್ರಾಮಿಕ ಕಾಯಿಲೆಯ ಸಂದರ್ಭದಲ್ಲಿ ಈ ಕಂಪನಿಗಳನ್ನು ಆಟ ಆಡಲು ಬಿಡಬಾರದು ಎಂದು ಆಗ್ರಹಿಸಿದರು.
ಖಾಸಗಿ ಆಸ್ಪತ್ರೆಗಳು ಖರೀದಿಸಿರುವ ದರದಲ್ಲೇ ಲಸಿಕೆಗಳನ್ನು ರಾಜ್ಯ ಸರಕಾರ ಕೂಡ ಖರೀದಿಸಲಾಗದು. ಖಾಸಗಿ ಆಸ್ಪತ್ರೆಗಳಿಗೆ ಲಸಿಕೆಗಳ ಏಕಸ್ವಾಮ್ಯತೆಯನ್ನು ಕೇಂದ್ರ ಸರಕಾರ ನೀಡಬಾರದು ಎಂದು ಕೇರಳ ಸರಕಾರವು ಹೈಕೋರ್ಟಿಗೆ ಮನವಿ ಮಾಡಿದೆ.
ಲಸಿಕಾ ನೀತಿ ಸ್ವೇಚ್ಚಾಚಾರ ಹಾಗೂ ಅತಾರ್ಕಿಕವಾದದ್ದು ಎಂದ ಸುಪ್ರೀಂ:
18ರಿಂದ 44 ವರ್ಷದವರೆಗಿನ ವಯೋಮಾನದವರಿಗೆ ರಾಜ್ಯಗಳು ಹಾಗೂ ಖಾಸಗಿ ಆಸ್ಪತ್ರೆಗಳು ಕೋವಿಡ್ ಲಸಿಕೆಗೆ ದರ ವಿಧಿಸುವುದು ಸ್ವೇಚ್ಚಾಚಾರ ಹಾಗೂ ಅತಾರ್ಕಿಕವಾದ ನಿರ್ಧಾರದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಸುಪ್ರೀಂ ಕೋರ್ಟ್, ಕೇಂದ್ರ ಸರಕಾರದ ಲಸಿಕಾ ನೀತಿ ವಿರುದ್ಧ ಚಾಟಿ ಬೀಸಿದೆ.
ಅಲ್ಲದೆ, ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ಆಡಳಿತದ ನೀತಿಗಳು ಉಲ್ಲಂಘಿಸಿದರೆ, ಅದನ್ನು ನೋಡಿಕೊಂಡು ಸುಮ್ಮನಿರುವ ಕೆಲಸವನ್ನು ನ್ಯಾಯಾಲಯ ಮಾಡಲಾಗದು ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಲ್.ಎನ್.ರಾವ್ ಹಾಗೂ ಎಸ್.ರವೀಂದ್ರ ಭಟ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಆರೋಗ್ಯ ಕಾರ್ಯಕರ್ತರು ಹಾಗೂ 45 ವರ್ಷ ಮೀರಿದವರಿಗೆ ಸರಕಾರವೇ ಉಚಿತವಾಗಿ ಕೋವಿಡ್ ಲಸಿಕೆ ಹಾಕುತ್ತಿದೆ. ಆದರೆ 18-44 ವರ್ಷದವರಿಗೆ ಮಾತ್ರ ದರ ವಿಧಿಸಲಾಗಿದೆ. ಇದೇಕೆ ಹೀಗೆ? ಎಂದು ತಾರತಮ್ಯ ನೀತಿಯ ವಿರುದ್ಧ ಕೇಂದ್ರಕ್ಕೆ ಸುಪ್ರೀಂ ಚಾಟಿ ಬೀಸಿದೆ.
ಲಸಿಕಾ ನೀತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು, ಕಡತಗಳು, ಟಿಪ್ಪಣಿಗಳು, ಕೋವ್ಯಾಕ್ಸಿನ್, ಕೋವಿಶೀಲ್ಡ್, ಸ್ಫುಟ್ನಿಕ್-ವಿ ಲಸಿಕೆ ಖರೀದಿ ಇತ್ಯಾದಿಗಳ ವಿವರ ಸಲ್ಲಿಸಲು ಕೇಂದ್ರಕ್ಕೆ ಸೂಚಿಸಿದೆ. ಅಲ್ಲದೆ ಈವರೆಗಿನ ಲಸಿಕಾ ಅಭಿಯಾನದಲ್ಲಿ ಲಸಿಕೆ ಪಡೆಯಲು ಎಷ್ಟು ಮಂದಿ ಅರ್ಹರಿದ್ದರು? ಅವರಲ್ಲಿ ಎಷ್ಟು ಮಂದಿಗೆ ಒಂದು ಇಲ್ಲವೇ ಎರಡು ಡೋಸ್ ಲಸಿಕೆ ಹಾಕಲಾಗಿದೆ? ಅದರಲ್ಲಿ ಗ್ರಾಮೀಣ ಹಾಗೂ ನಗರದ ಜನರ ಸಂಖ್ಯೆ ಎಷ್ಟು? ಲಸಿಕೆ ಹಾಕಿಕೊಳ್ಳಲು ಬಾಕಿ ಇರುವ ಜನರೆಷ್ಟು? ಅವರಿಗೆ ಯಾವಾಗ, ಹೇಗೆ ಲಸಿಕೆ ಹಾಕುತ್ತೀರಿ ಎಂಬ ವಿವರಗಳನ್ನು ನೀಡಲು ಕೇಂದ್ರಕ್ಕೆ ಆದೇಶ ನೀಡಿದೆ. ಜತೆಗೆ 2021-22 ರ ಕೇಂದ್ರ ಬಜೆಟ್ ನಲ್ಲಿ ಲಸಿಕೆ ಖರೀದಿಗಾಗಿ ಮೀಸಲಿರಿಸಿದ್ದ 35 ಸಾವಿರ ಕೋಟಿ ರೂ. ಹಣದಲ್ಲಿ ಎಷ್ಟು ಖರ್ಚಾಗಿದೆ? ಅದರಲ್ಲಿ ಉಳಿದ ಹಣದಲ್ಲಿ 18-44 ವರ್ಷದವರಿಗೆ ಲಸಿಕೆಗಳನ್ನು ಉಚಿತವಾಗಿ ನೀಡಲು ಸಾಧ್ಯವಾಗುವುದಿಲ್ಲವೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಕಾರ್ಯಾಂಗದ ವಿವೇಕ ಹಾಗೂ ವಿವೇಚನಾಧಿಕಾರದ ಮೇಲೆ ನಂಬಿಕೆ ಇರಿಸಬೇಕಿದೆ ಎಂಬ ಕೇಂದ್ರದ ವಾದವನ್ನು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರೂ ಸುಪ್ರೀಂ ಪೀಠವು ಅದನ್ನು ಒಪ್ಪಲಿಲ್ಲ. ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಸಲ್ಲಿಸಿದ್ದರಿಂದ ಕಡಿಮೆ ದರಕ್ಕೆ ತಮಗೆ ಲಸಿಕೆ ಸಿಕ್ಕಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಹಾಗಿದ್ದರೆ ಎಲ್ಲ ಲಸಿಕೆಗಳನ್ನೂ ಕೇಂದ್ರವೇ ಖರೀದಿಸಬಹುದಿತ್ತಲ್ಲವೆ? ಲಸಿಕೆ ಖರೀದಿಯಲ್ಲಿ ಕೇಂದ್ರದ ಏಕಸ್ವಾಮ್ಯ ಸ್ಥಿತಿಯಿಂದ ಕಡಿಮೆ ಬೆಲೆಯಲ್ಲಿ ಲಸಿಕೆ ಖರೀದಿಸಲು ಸಾಧ್ಯವಾಗಿದ್ದರೆ, ಈ ಲಸಿಕಾ ನೀತಿಯ ಹಿಂದಿರವ ತರ್ಕವನ್ನೂ ಪರಿಶೀಲಿಸಬೇಕಾಗುತ್ತದೆ. ಇಂಥ ವ್ಯವಹಾರದಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯಗಳು ಇನ್ನಷ್ಟು ತೊಂದರೆಗೆ ಒಳಗಾಗುತ್ತದೆ ಎಂದು ಸುಪ್ರೀಂ ಕೋರ್ಟ್, ರಾಜ್ಯಗಳ ನೆರವಿಗೆ ಧಾವಿಸಿದೆ.
ಎಲ್ಲರಿಗೂ ಉಚಿತ ಲಸಿಕೆ ಹಾಕಿಸಬೇಕು ಎಂದು ಶಶಿ ತರೂರ್:
ಸ್ವತಃ ಕೋವಿಡ್ ಸೋಂಕಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಕೂಡ, ಕೇಂದ್ರದ ಲಸಿಕಾ ನೀತಿ ಅಸಮರ್ಪಕ ಎಂದು ಕಿಡಿಕಾರಿದ್ದಾರೆ.
45 ವರ್ಷ ಮೀರಿದವರಿಗೆ ಉಚಿತ ಲಸಿಕೆ. 18-44 ವರ್ಷದವರೆಗಿನವರಿಗೆ ಲಸಿಕೆಗೆ ದರ ನಿಗದಿ ಸರಿಯಲ್ಲ. ಇಂಥ ಅಸಮರ್ಪಕ ಲಸಿಕಾ ನೀತಿಯನ್ನು ಕೈಬಿಟ್ಟು ಕೇಂದ್ರ ಸರಕಾರ ದೇಶದ ಎಲ್ಲ ನಾಗರಿಕರಿಗೂ ಉಚಿತವಾಗಿ ಲಸಿಕೆ ಹಾಕಿಸಬೇಕು ಎಂದು ಶಶಿ ತರೂರ್ ಒತ್ತಾಯಿಸಿದ್ದಾರೆ.
ಕೇಂದ್ರ ಸರಕಾರ ದೇಶದ ಜನರಿಗೆ ಈಗಾಗಲೇ ನೀಡಿರುವ ಭರವಸೆಯಿಂದ ಹಿಂದೆ ಸರಿಯಬಾರದು. ಈ ಹಿಂದೆ ನೀಡಿರುವ ಭರವಸೆಯಂತೆ 2021ರ ಡಿಸೆಂಬರ್ ಮುಕ್ತಾಯವಾದಾಗ ದೇಶದ ಎಲ್ಲ ಮಂದಿಗೂ ಲಸಿಕೆ ನೀಡಬೇಕು ಮತ್ತು ಅದನ್ನು ಉಚಿತವಾಗಿ ವಿತರಿಸಬೇಕು. ನಾನೂ ಕೂಡ ಈ ಸಂಬಂಧ ನಡೆಯುತ್ತಿರುವ ‘ಸೇವ್ ಇಂಡಿಯಾ’ ಆಂದೋಲನದಲ್ಲಿ ಭಾಗಿಯಾಗುವೆ ಎಂದು ತಾವು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಚೇತರಿಸಿಕೊಳ್ಳುತ್ತಿರುವ ಶಶಿತರೂರ್, ತಾವಿರುವ ಆಸ್ಪತ್ರೆಯ ಬೆಡ್ ನಿಂದಲೇ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
ಈಗಿನ ಪರಿಸ್ಥಿತಿಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಪಡೆಯಲು ರಾಜ್ಯ ಸರಕಾರಗಳು ಹಾಗೂ ಖಾಸಗಿ ಆಸ್ಪತ್ರೆಗಳು ಪೈಪೋಟಿ ನಡೆಸುವಂತಾಗಿದೆ. ಖಾಸಗಿ ವಲಯಗಳೇ ದೇಶದ ಲಸಿಕೆ ಉತ್ಪಾದನೆಯಲ್ಲಿ ಹೆಚ್ಚಿನ ಪಾಲು ಪಡೆದು ದುಬಾರಿ ಬೆಲೆಗೆ ಮಾರಾಟ ಮಾಡುವ ಸ್ಥಿತಿ ಉಂಟಾಗಿದೆ. ಇದಕ್ಕೆ ಕೇಂದ್ರ ಸರಕಾರದ ಲಸಿಕಾ ನೀತಿಯೇ ಕಾರಣ ಎಂದು ಕಿಡಿಕಾರಿದ್ದಾರೆ.
ದೇಶದಲ್ಲಿ ಕೋವಿಡ್ 19 ಎರಡನೇ ಅಲೆಯು ಇಳಿಮುಖವಾಗುತ್ತಿದ್ದರೂ, ಮೂರನೇ ಆಲೆಯು ಮತ್ತೆ ದಾಳಿ ಇಡುವ ಎಚ್ಚರಿಕೆಯನ್ನು ವಿಜ್ಞಾನಿಗಳು ಈಗಾಗಲೇ ನೀಡಿದ್ದಾರೆ. ಅಲ್ಲದೆ ಮೂರನೇ ಅಲೆಯು ಇನ್ನಷ್ಟು ಭೀಕರವಾಗಿರಲಿದ್ದು, ಮಕ್ಕಳು ಹಾಗೂ ಸಣ್ಣ ವಯಸ್ಸಿನ ಯುವ ಜನತೆಗೆ ಹಾನಿ ಉಂಟು ಮಾಡುವ ಅಪಾಯವನ್ನೂ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ನಾಗರಿಕರಿಗೂ ವಯಸ್ಸಿನ ಭೇದವಿಲ್ಲದೆ ಉಚಿತ ಲಸಿಕೆ ವಿತರಿಸುವ ಹೊಣೆ ಕೇಂದ್ರ ಸರಕಾರದ ಮೇಲಿದೆ. ಅದರಿಂದ ನುಣುಚಿಕೊಳ್ಳುವ ಯತ್ನ ಮಾಡದಂತೆ ದೇಶದ ನ್ಯಾಯಾಲಯಗಳು ಕೇಂದ್ರ ಸರಕಾರವನ್ನು ಎಚ್ಚರಿಸುತ್ತಿವೆ. ಈಗ ಚೆಂಡು ಕೇಂದ್ರ ಸರಕಾರದ ಅಂಗಳದಲ್ಲಿದೆ.