ದೇಶದಲ್ಲಿ ಎರಡನೇ ಕರೋನಾ ಅಲೆ ಹೆಚ್ಚಾಗಿದ್ದು, ಸೋಂಕು ಮತ್ತು ಸಾವಿನ ಪ್ರಮಾಣ ಎರಡರಲ್ಲಿಯೂ ಏರಿಕೆಯಾಗಿದೆ. ಈ ಹಿನ್ನಲೆ, ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಸರ್ಕಾರ 6 ದಿನ ಲಾಕ್ಡೌನ್ ಘೋಷಣೆ ಮಾಡಿದೆ.
ಇಂದು ರಾತ್ರಿ 10 ರಿಂದ ಮುಂದಿನ ಸೋಮುವಾರ ಬೆಳಗ್ಗೆ 5 ರವರೆಗೆ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಇಂದಿನಿಂದ ಒಟ್ಟು ಆರುದಿನಗಳ ಕಾಲ ಲಾಕ್ಡೌನ್ ಅಸ್ಥಿತ್ವದಲ್ಲಿರುತ್ತದೆ ಎಂದು ದೆಹಲಿ ಸರ್ಕಾರ ತಿಳಿಸಿದೆ. ಕೋವಿಡ್ ಬಿಕ್ಕಟ್ಟನ್ನು ನಿಯಂತ್ರಿಸುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ವೈದ್ಯಕೀಯ, ಆಹಾರ ಸೇವೆ ಸೇರಿದಂತೆ ಅಗತ್ಯ ಸೇವೆಗಳಿಗೆ ನಿರ್ಬಂಧವಿಲ್ಲ ಎಂದು ಸರ್ಕಾರ ತಿಳಿಸಿದೆ.
ಕೋವಿಡ್ ಪರಿಸ್ಥಿತಿ ಕೈಮೀರುತ್ತಿದ್ದು, ನಾವು ಈಗ ಲಾಕ್ಡೌನ್ ಮಾಡದಿದ್ದರೆ ಮುಂದೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಸರ್ಕಾರ ಪರಿಸ್ಥಿತಿಯನ್ನು ಗಂಬೀರವಾಗಿ ತೆಗೆದುಕೊಂಡಿದೆ. ಜೊತೆಗೆ ಜನಸಾಮಾನ್ಯರ ಮೇಲೆ ಕಾಳಜಿವಹಿಸುತ್ತಿದೆ. ಈ ಸಂಬಂಧ ನಾವು ಕಠಿಣ ನಿರ್ಧಾರ ತೆಗೆದುಕೊಂಡಿದ್ದೇವೆಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಖಾಸಗಿ ಕಚೇರಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡುವಂತೆ ಸೂಚಿಸಲಾಗಿದೆ. ಸರ್ಕಾರಿ ಕಚೇರಿಗಳು ಮತ್ತು ಅಗತ್ಯ ಸೇವೆಗಳು ಮಾತ್ರ ತೆರೆದಿರುತ್ತವೆ. ಮದುವೆ ಸೇರಿದಂತೆ ಇತರೆ ಶುಭ ಸಮಾರಂಭಗಳಿಗೆ ಕೇವಲ 50 ಜನರನ್ನು ಸೇರಿಸಬೇಕು. ಶವಸಂಸ್ಕಾರಕ್ಕೆ 20 ಜನರು ಸೇರುವ ಅನುಕೂಲವನ್ನು ಸರ್ಕಾರ ಮುಂದುವರಿಸಿದ್ದು, ಅದಕ್ಕಾಗಿ ಪ್ರತ್ಯೇಕವಾಗಿ ಪಾಸ್ ಗಳನ್ನು ನೀಡಲಾಗುತ್ತದೆ ಎಂದು ದೆಹಲಿ ಸರ್ಕಾರ ತಿಳಿಸಿದೆ.
ದೆಹಲಿಯಲ್ಲಿ ಆರೋಗ್ಯ ವ್ಯವಸ್ಥೆ ತೀವ್ರ ಹದಗೆಟ್ಟಿದ್ದು, ಆರೋಗ್ಯ ವ್ಯವಸ್ಥೆಯ ಕುಸಿತವನ್ನು ತಡೆಯಲು ಈ ಕಠಿಣಕ್ರಮ ತೆಗೆದುಕೊಳ್ಳಲಾಗಿದೆ. 6 ದಿನಗಳ ಲಾಕ್ಡೌನ್ ಅವಧಿಯಲ್ಲಿ ದೆಹಲಿಯಲ್ಲಿ ಕೋವಿಡ್ ಹಾಸಿಗೆಗಳನ್ನು ಹೆಚ್ಚಿಸಲಾಗುತ್ತದೆ. ಕರೋನಾ ಮಾರ್ಗ ಸೂಚಿಸಿಯನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಕರೋನಾ ನಿಯಂತ್ರಣಕ್ಕೆ ಸಹಕರಿಸಬೇಕೆಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.