ಕೋವಿಡ್ ರೂಪಾಂತರ ತಳಿ ಜೆಎನ್.1 ಪತ್ತೆಯಾದ ಕೇರಳದಲ್ಲಿ ಡಿಸೆಂಬರ್ 20ರಂದು ಒಟ್ಟು 300 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 3 ಸಾವು ಸಂಭವಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವರದಿ ಬಿಡುಗಡೆ ಮಾಡಿದೆ.
ಕೇರಳದಲ್ಲಿ ಕೋವಿಡ್ ಉಲ್ಬಣ ಆಗುತ್ತಿರುವ ಕುರಿತು ಮಾತನಾಡಿರುವ ಆರೋಗ್ಯ ಸಚಿವೆ ವೀಣಾ ಜಾರ್ಜ್, ಸೋಂಕಿನ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಇದರ ನಿರ್ವಹಣೆಗೆ ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದೆ. ಕೋವಿಡ್ ರೋಗಿಗಳಿಗಾಗಿ ಐಸೋಲೇಷನ್ ವಾರ್ಡ್, ರೂಂ, ಆಕ್ಸಿಜನ್ ಬೆಡ್, ಐಸಿಯು ಬೆಡ್ ಮತ್ತು ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ದೇಶದಲ್ಲಿ ದಾಖಲಾಗುತ್ತಿರುವ ಬಹುತೇಕ ಕೋವಿಡ್ ಪ್ರಕರಣದಲ್ಲಿ ಅತಿ ಹೆಚ್ಚು ಪ್ರಕರಣಗಳು ಕೇರಳ, ಕರ್ನಾಟಕ ಮತ್ತು ಒಡಿಸ್ಸಾದಲ್ಲಿ ದಾಖಲಾಗುತ್ತಿದೆ.

ಕೋವಿಡ್ ಪ್ರಕರಣ ಏರಿಕೆ ಹಿನ್ನೆಲೆ ಬುಧವಾರ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತದ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡೋವಿಯಾ, ಜೆಎನ್.1 ಸೋಂಕು ವೇಗವಾಗಿ ಹರಡುತ್ತದೆ. ಆದರೆ, ಯಾವುದೇ ಗಂಭೀರ ಆರೋಗ್ಯ ಮತ್ತು ಸಾವಿನ ಅಪಾಯವನ್ನು ಹೊಂದಿಲ್ಲ. ಈ ಹಿನ್ನಲೆ ಜನರು ಹಬ್ಬದ ಋತುಮಾನ ಹಿನ್ನಲೆ ಮುನ್ನೆಚ್ಚರಿಕೆವಹಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.