ಕೊರೊನಾ ಸೋಂಕು BF.7 ರೂಪಾಂತರ ಆಗಿದ್ದು, ಚೀನಾದಲ್ಲಿ ಅಬ್ಬರಿಸುತ್ತಿದೆ. ಸಾವಿನ ಮಾರಣ ಹೋಮ ಆಗ್ತಿದೆ. ಕೆಲವೇ ದಿನಗಳಲ್ಲಿ ಭಾರತಕ್ಕೂ ಸೋಂಕು ವ್ಯಾಪಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಅದರಲ್ಲೂ ಕರ್ನಾಟಕ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಈಗಾಗಲೇ ಬಿಎಂಟಿಸಿ, ಮೆಟ್ರೋ, ಥಿಯೇಟರ್ ಸೇರಿದಂತೆ ಎಸಿ ಬಳಕೆಯಾಗುವ ಕಾರ್ಯಕ್ರಮಗಳಲ್ಲಿ ಕಡ್ಡಾಯ ಮಾಸ್ಕ್ ಬಳಕೆಗೆ ಸೂಚನೆ ಕೊಟ್ಟಿದೆ. ಆದರೆ ಸರ್ಕಾರ ಬೇಕಂತಲೇ ಕೊರೊನಾ ಬಗ್ಗೆ ಭಯ ಸೃಷ್ಟಿ ಮಾಡುತ್ತಿದ್ಯಾ ಎನ್ನುವ ಅನುಮಾನಗಳು ಸಣದಾಗಿ ಕಾಡುವುದಕ್ಕೆ ಶುರು ಆಗಿದೆ. ಸರ್ಕಾರದ ವಿರುದ್ಧ ಅನುಮಾನ ಮೂಡುವುದಕ್ಕೆ ಬಹು ಮುಖ್ಯವಾದ ಕಾರಣ ಅಂದರೆ ಚುನಾವಣೆ.
ವಿರೋಧಿಗಳನ್ನು ಕಟ್ಟಿ ಹಾಕುವುದಕ್ಕೆ ಕೊರೊನಾ ರೂಲ್ಸ್..!
ರಾಜ್ಯ ಹಾಗು ದೇಶದಲ್ಲಿ ಕೊರೊನಾ ಕೊರೊನಾ ಎಂದು ಸರ್ಕಾರ ಹಾಗು ಸ್ಥಳೀಯ ಸಂಸ್ಥೆಗಳು ಬಡಬಡಾಯಿಸುತ್ತಿವೆ. ಆದರೆ ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಯಂತ್ರಣ ಏರಿಕೆ ಮಾಡಿಲ್ಲ. ಯಾವ ದೇಶದಿಂದ ಬೇಕಿದ್ದರೂ ಬರಬಹುದು. ಯಾವ ದೇಶಕ್ಕೆ ಬೇಕಿದ್ದರೂ ದಾರಳವಾಗಿ ಹೋಗಬಹುದು. ಇನ್ನು ವಿದೇಶದಿಂದ ಬಂದ ಎಲ್ಲರನ್ನೂ ಪರೀಕ್ಷೆ ಮಾಡಿ ಕರೆದುಕೊಳ್ತಿದ್ದಾರಾ..? ಅಂದ್ರೆ ಅದೂ ಇಲ್ಲ. ಏರ್ಪೋರ್ಟ್ನಲ್ಲಿ ಬಂದವರಲ್ಲಿ ಶೇಕಡ 2ರಷ್ಟು ಜನರಿಗೆ ಮಾತ್ರ ಕೊರೊನಾ ತಪಾಸಣೆ ಮಾಡಲಾಗ್ತಿದೆ. ಅಂದರೆ 100 ಜನರಲ್ಲಿ ಇಬ್ಬರಿಗೆ ಮಾತ್ರವೇ ತಪಾಸಣೆ ಆಗ್ತಿರೋದು.
3 ಜನರಿಗೆ ಕೊರೊನಾ ಸೋಂಕು.. ಉಳಿದವರ ಕಥೆ..?
ನಿನ್ನೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೂವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ವಿದೇಶದಿಂದ ನಿನ್ನೆ ಒಂದು ದಿನ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದಾರೆ. ಆದರೆ ಅದರಲ್ಲಿ ಶೇಕಡ 2ರಷ್ಟು ಅಂದರೆ ಸುಮಾರು 110 ಜನರಿಗೆ ಮಾತ್ರ ಕೊರೊನಾ ತಪಾಸಣೆ ಮಾಡಲಾಗಿದೆ. ಅದರಲ್ಲಿ ಮೂರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಉಳಿದವರು ಯಾರು..? ಎಲ್ಲಿಗೆ ಹೋಗಿದ್ದಾರೆ. ಕೊರೊನಾ ಮುಂಜಾಗ್ರತೆ ಏನು..? ಕ್ವಾರಂಟೈನ್ ಮಾಡಲಾಗುತ್ತಾ..? ಯಾವುದೇ ಮಾಹಿತಿ ಇಲ್ಲ. ಅಂದರೆ ಸರ್ಕಾರವೇ ಕೊರೊನಾ ಹರಡುವುದಕ್ಕೆ ಸಹಕಾರ ಕೊಟ್ಟಂತೆ ಕಾಣಿಸುತ್ತಿದೆ. ಆದರೆ ಜನರಿಗೆ ಮಾತ್ರ ಮಾಸ್ಕ್ ಹಾಕಿ, ಹೊಸ ವರ್ಷದ ಸಂಭ್ರಮದಿಂದ ದೂರ ಇರಿ ಎನ್ನುವ ಬಿಟ್ಟಿ ಸಲಹೆ ಕೊಡಲಾಗ್ತಿದೆ.

ಮೊದಲ ಅಲೆಯಲ್ಲಿ ಲಾಕ್ಡೌನ್ ಮಾಡಿದ್ದೇ ವ್ಯರ್ಥ..!
ಕೊರೊನಾ ಸೋಂಕು ಮೊದಲಿಗೆ ಬಂದಾಗ ತಿಂಗಳುಗಳ ಕಾಲ ಲಾಕ್ಡೌನ್ ಮಾಡಲಾಗಿತ್ತು. ಆ ಬಳಿಕ ಲಾಕ್ಡೌನ್ ಮಾಡುವುದು ಕೇವಲ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯುವುದಕ್ಕೆ ಮಾತ್ರ. ಒಮ್ಮೆ ಎಲ್ಲರಿಗೂ ಕೊರೊನಾ ಸೋಂಕು ಬಂದು ಹೋಗಲೇ ಬೇಕು. ಸೋಂಕಿನಿಂದ ಜನರನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳಬೇಕು ಅಷ್ಟೇ. ಸೋಂಕು ಬಾರದಂತೆಯೇ ತಡೆಯುವುದಕ್ಕೆ ಸಾಧ್ಯವಿಲ್ಲ ಎಂದಿದ್ದರು ತಜ್ಞರು. ಆದರೆ ಸಮುದಾಯಕ್ಕೆ ಕೊರೊನಾ ಸೋಂಕು ಹಾಗು ಅದರ ರೂಪಾಂತರ ತಳಿಗಳು ಬರಬೇಕು. ರೂಪಾಂತರಿ ತಳಿಗಳ ವಿರುದ್ಧ ರೋಗನಿರೋಧಕ ಶಕ್ತಿ ಮಾನವರನ್ನು ಹೆಚ್ಚಾಗಬೇಕು. ಅದನ್ನು ಬಿಟ್ಟು ರೋಗದಿಂದಲೇ ದೂರ ಇರಿ ಎನ್ನುವುದು ಸರಿಯೇ..?
ಆಸ್ಪತ್ರೆಗಳಲ್ಲಿ ಸಿದ್ಧತೆ, ಮಾಧ್ಯಮಗಳಲ್ಲಿ ಸುದ್ದಿ, ಬಿಲ್ ಬಿಡುಗಡೆ..!
ಕೊರೊನಾ ಸೋಂಕು ಬರ್ತಿದೆ ಎನ್ನುವ ಗುಮ್ಮವನ್ನು ಹೊರಕ್ಕೆ ಬಿಡುವ ಬದಲು ಸರ್ಕಾರ ರೋಗಿಗಳು ಬಂದರೆ ಉತ್ತಮ ಟ್ರೀಟ್ಮೆಂಟ್ ಕೊಡುವುದಕ್ಕೆ ತಯಾರಿ ಮಾಡಿಕೊಂಡರೆ ಎಲ್ಲವೂ ಸರಿಯಾಗುತ್ತದೆ. ಆದರೆ ಗುಮ್ಮ ಬಂತು ಗುಮ್ಮ ಎನ್ನುವ ರೀತಿಯಲ್ಲಿ ಸರ್ಕಾರ ಕೊರೊನಾ ಹಾಗು ಅದರ ಉಪತಳಿಗಳ ಬಗ್ಗೆ ದೊಡ್ಡ ಮಟ್ಟದ ಪ್ರಚಾರ ಕೊಡುವುದು. ಆ ಪ್ರಚಾರಕ್ಕಾಗಿ ಮಾಧ್ಯಮಗಳನ್ನು ಬಳಸಿಕೊಳ್ಳುವುದು. ಅದೇ ಹುಮ್ಮಸ್ಸಿನಲ್ಲಿ ಕೆಲವೊಂದು ಬಾಕಿ ಬಿಲ್ಗಳು ಸೇರಿದಂತೆ ಒಂದಿಷ್ಟು ಕೋಟಿ ಕೋಟಿ ಹಣವನ್ನು ಬಿಡುಗಡೆ ಮಾಡಿಕೊಳ್ಳುವುದು ಉದ್ದೇಶ ಇದ್ದಿರಬಹುದು. ಇನ್ನು ಎದುರಾಳಿಗಳನ್ನು ರಾಜಕೀಯವಾಗಿ ನಿಯಂತ್ರಣ ಹೇರಲು ಕೂಡ ಕೊರೊನಾ ಸೋಂಕು ಬಳಕೆ ಆಗ್ತಿದ್ಯಾ..? ಅನ್ನೋ ಅನುಮಾನದಲ್ಲಿ ಯಾವುದೇ ತಪ್ಪಿಲ್ಲ ಎನಿಸುತ್ತದೆ.
ಕೃಷ್ಣಮಣಿ







