ಕರೋನಾ ಬಿಕ್ಕಟ್ಟಿನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ವಿಫಲಾಗಿರುವ ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಟ್ವೀಟ್ ಮೂಲಕ ಚಾಟಿ ಬೀಸಿದ್ದಾರೆ.
ಕರೋನಾ ಬಿಕ್ಕಟ್ಟಿನಿಂದ ರಾಜ್ಯದಲ್ಲಿ ಅನೇಕ ಸಮಸ್ಯೆಗಳು ಕಣ್ಣುಮುಂದಿದ್ದರು ಅದರ ಬಗ್ಗೆ ರಾಜ್ಯ ಸರ್ಕಾರ ಸರಿಯಾದ ಗಮನ ಹರಿಸುತ್ತಿಲ್ಲ ಇಂತಹ ಕೈಲಾಗದ ಮುಖ್ಯಮಂತ್ರಿಯನ್ನು ಇಟ್ಟುಕೊಂಡು ಕರೋನಾ ನಿಯಂತ್ರಿಸುವುದು ಹೇಗೆ ಪ್ರಧಾನಿಗಳೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು ಕೆಲ ಗಂಭೀರವಾದ ಪ್ರಶ್ನೆಗಳನ್ನೆತ್ತಿದ್ದಾರೆ, “ಪ್ರಧಾನಿ ನರೇಂದ್ರ ಮೋದಿ ಅವರೇ, ಪರದೆಯಲ್ಲಿ ಮತ್ತೆ-ಮತ್ತೆ ಮುಖತೋರಿಸಿದರೆ ಕರೋನಾ ವೈರಸ್ ಓಡಿಹೋಗುವುದಿಲ್ಲ, ಆಗಾಗ ಮುಖ್ಯಮಂತ್ರಿಗಳಿಗೆ ಪಾಠಮಾಡಲು ನೀವು ಹೆಡ್ಮಾಸ್ಟರ್ ಕೂಡಾ ಅಲ್ಲ. ಮೊದಲು ರಾಜ್ಯಗಳ ಬೇಡಿಕೆಗಳನ್ನು ಈಡೇರಿಸಿ ಕರೋನಾ ವೈರಸ್ ನಿಯಂತ್ರಿಸಿ ಎಂದು ಪ್ರಧಾನಿ ಮತ್ತು ಮುಖ್ಯಮಂತ್ರಿ ಇಬ್ಬರಿಗೂ ಒತ್ತಾಯಿಸಿದ್ದಾರೆ.
ಪ್ರತಿಯೊಂದು ರಾಜ್ಯದಲ್ಲಿ ಕರೋನಾ ಸೋಂಕಿತರು ಆಮ್ಲಜನಕ ಇಲ್ಲದೆ ಸಾಯುತ್ತಿದ್ದಾರೆ. ಆಮ್ಲಜನಕ ಪೂರೈಕೆ ಮಾಡಿ ಎಂದರೆ ಅಕ್ರಮ ದಾಸ್ತಾನು ಮಾಡಿದವರ ಮೇಲೆ ಕ್ರಮಕೈಗೊಳ್ಳಿ ಎಂದು ಕರೆ ನೀಡುತ್ತೀರಿ. ನೀವೇನು ರಾಜ್ಯಗಳ ಅನುಮತಿ ಪಡೆದು ಆಮ್ಲಜನಕ ರಪ್ತು ಮಾಡಿದ್ದೀರಾ ಪ್ರಧಾನಿ ಮಂತ್ರಿಗಳೆ..? ಹೆಚ್ಚಿನ ಆಕ್ಸಿಜನ್ ಅವಶ್ಯಕತೆ ಇರುವ ಸಮಯದಲ್ಲಿ ನೀವು ಬೇರೆ ದೇಶಗಳಿಗೆ ಆಕ್ಸಿಜನ್ ರಫ್ತು ಮಾಡುತ್ತಿದ್ದೀರ ಇದನ್ನು ನೀವು ರಾಜ್ಯಗಳನ್ನು ಕೇಳಿ ಮಾಡಿದ್ರ ಎಂದು ಸಿದ್ದರಾಮಯ್ಯ ಪ್ರಧಾನಿ ಆಫಿಸ್ ಐಡಿ ಟ್ಯಾಗ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಖಾಸಗಿ/ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಮೀಸಲಾದ ಹಾಸಿಗೆಗಳು 7621, ಭರ್ತಿಯಾಗಿರುವುದು 6123, ಲಭ್ಯ ಇರುವುದು 1487. ನಿತ್ಯ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ 15ಸಾವಿರಕ್ಕೂ ಹೆಚ್ಚು.
ಈ ವಾಸ್ತವವನ್ನು ಮುಖ್ಯಮಂತ್ರಿಗಳೆ ನಿಮಗೇನಾದರೂ ತಿಳಿಸಿದ್ದಾರೆಯೇ ಪ್ರಧಾನಿಗಳೆ? ಎಂಬ ಹಾಸಿಗೆಯ ಸಮಸ್ಯೆಯನ್ನು ವಿವರಿಸುತ್ತಾ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಶೇ 65ರಷ್ಟು ಸಾಮಾನ್ಯ ಹಾಸಿಗೆ
ಶೇ 96ರಷ್ಟು ಬಹು ಅವಲಂಬನೆಯ ಹಾಸಿಗೆ, ಶೇ 98ರಷ್ಟು ಐಸಿಯು ಹಾಸಿಗೆ ಮತ್ತು ಶೇ 97ರಷ್ಟು ವೆಂಟಿಲೇಟರ್ ಹಾಸಿಗೆ ಭರ್ತಿಯಾಗಿವೆ. ನಿತ್ಯ 15 ಸಾವಿರಕ್ಕೂ ಹೆಚ್ಚು ಸೋಂಕಿತರು ಆಸ್ಪತ್ರೆ ಎದುರು ಕ್ಯೂ ನಿಲ್ಲುತ್ತಿದ್ದಾರೆ. ಅವರದ್ದೇನು ಗತಿ ಪ್ರಧಾನಿಗಳೆ ? ಎಂದು ಐಸಿಯು ಮತ್ತು ಹಾಸಿಗೆ ಕುರಿತು ಮಾತಾಡಿದ್ದಾರೆ.
‘ಪರಿಸ್ಥಿತಿ ಕೈಮೀರಿಹೋಗಿದೆ’ ಎಂದು ಮುಖ್ಯಮಂತ್ರಿಗಳು ಜನತೆಯ ಮುಂದೆ ಗೋಳಾಡುತ್ತಿರುವುದರಿಂದ ಪ್ರಶ್ನೆ ನಿಮ್ಮನ್ನೇ ಕೇಳಬೇಕಾಗಿದೆ ಪ್ರಧಾನಿಯವರೆ. ಕೈಲಾಗದ ಮುಖ್ಯಮಂತ್ರಿಯವರನ್ನು ಇಟ್ಟುಕೊಂಡು ಕರೋನಾ ನಿಯಂತ್ರಣ ಮಾಡುವುದಾದರೂ ಹೇಗೆ ಪ್ರಧಾನಿಗಳೇ? ಎಂದು ಸಿಎಂ ಯಡಿಯೂರಪ್ಪನವರನ್ನು ಟೀಕಿಸುವ ಮೂಲಕ ಪ್ರಧಾನಿಯವರಿಗೆ ಪ್ರಶ್ನಿಸಿದ್ದಾರೆ.