ಕರೋನಾ ಸಂಕಷ್ಟ ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆಯುತ್ತಿದೆ. ವರ್ಷದ ಹಿಂದೆ ಮೊದಲ ಬಾರಿ ಕರೋನಾ ಮಹಾಮಾರಿ ದಾಳಿ ನಡೆಸಿದಾಗ ದೇಶದ ಜನಸಾಮಾನ್ಯರಲ್ಲಿ ಇದ್ದ ಭಯ ಮತ್ತು ಭೀತಿ ಈಗಿಲ್ಲ. ಆದರೆ, ಆ ಸ್ಥಾನದಲ್ಲಿ ಈಗ ಅನುಮಾನ ಮತ್ತು ಗೊಂದಲಗಳಿವೆ.
ಹಾಗಾಗಿ, ಕಳೆದ ಬಾರಿಯ ಕರೋನಾ ಮೊದಲ ಅಲೆಯ ಹೊತ್ತಿನಲ್ಲಿ, ಮಾಸ್ಕ್ ಧರಿಸುವಿಕೆ, ದೈಹಿಕ ಅಂತರ ಮತ್ತು ಸ್ವಚ್ಛತೆ ಮುಂತಾದ ಕೋವಿಡ್ ಮಾರ್ಗಸೂಚಿಯ ಪಾಲನೆಯ ವಿಷಯದಲ್ಲಿ ಜನರ ತೋರುತ್ತಿದ್ದ ಶಿಸ್ತು ಈ ಬಾರಿ ಎರಡನೇ ಅಲೆಯ ಹೊತ್ತಿಗೆ ಬಹುತೇಕ ಅಪರೂಪವಾಗಿದೆ. ಕರೋನಾ ಸೋಂಕಿನ ಬಗ್ಗೆಯೇ ಅನುಮಾನ ಮತ್ತು ಅದರ ಮಾರ್ಗಸೂಚಿಯ ಪಾಲನೆಯ ಬಗ್ಗೆ ಗೊಂದಲ ಮೂಡಲು ಕಾರಣ; ಸ್ವತಃ ದೇಶದ ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಎಂದರೆ ಅಚ್ಚರಿಯಲ್ಲ.
ಏಕೆಂದರೆ; ಕರೋನಾ ಸೋಂಕಿನ ಪ್ರಮಾಣ ದೇಶದಲ್ಲಿ ತುಸು ಇಳಿಮುಖವಾಗುತ್ತಲೇ ಕಳೆದ ವರ್ಷ, ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ದೀಢೀರನೇ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದವು. ಅದರಲ್ಲೂ ಜನರಿಗೊಂದು ನೀತಿ, ಆಳುವವರಿಗೆ ಒಂದು ನೀತಿ, ಜನರ ಮೇಲೆ ದಂಡ(ನಿಯಮ ಉಲ್ಲಂಘನೆ ದಂಡ) ಮತ್ತು ಲಾಠಿ ಪ್ರಹಾರ ನಡೆಸಲು ಒಂದು ಕಾನೂನು, ಸ್ವತಃ ಸಾವಿರಾರು ಮಂದಿಯ ಸಭೆ, ಸಮಾವೇಶ, ರ್ಯಾಲಿ ನಡೆಸುವ ತಮಗೆ ಒಂದು ಕಾನೂನು ಎಂಬ ಆಳುವ ಮಂದಿ ಸಹಜವಾಗೇ ಕರೋನಾ ಸೋಂಕಿನ ಅಸಲೀತನದ ಬಗ್ಗೆಯೇ ಜನರಲ್ಲಿ ಅನುಮಾನಗಳನ್ನು ಬಿತ್ತಿತ್ತು. ಹಾಗಾಗಿ ಒಂದು ಕಡೆ ಮಾರ್ಗಸೂಚಿ ಪಾಲನೆಯಲ್ಲಿ ಸರ್ಕಾರ ‘ಪುರಾಣ ಹೇಳೋಕೆ, ಬದನೆ ಕಾಯಿ ತಿನ್ನೋಕೆ’ ಎಂಬ ವರಸೆ ತೋರಿದರೆ, ಮತ್ತೊಂದು ಕಡೆ ಜನ ಕೂಡ ಕರೋನಾ ಆತಂಕ ಮುಗಿದುಹೋದ ಕಥೆ ಎಂಬಂತೆ ಮತ್ತೆ ಮಾಮೂಲಿ ಜೀವನಕ್ರಮಕ್ಕೆ ಮರಳಿದರು.
ಮೊದಲ ಅಲೆಯ ಹೊತ್ತಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ, ಸಾವು, ಕರೋನಾ ನಿಯಂತ್ರಣದ ದಿಕ್ಕಿನಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಸೌಕರ್ಯಗಳ ವ್ಯವಸ್ಥೆಯಿಂದ ಆರಂಭವಾಗಿ ವಲಸೆ ಕಾರ್ಮಿಕರ ಸಾವು ನೋವು, ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆಗೆ ಆದ ನಷ್ಟ, ಜಿಡಿಪಿ ಕುಸಿತದವರೆಗೆ ಪ್ರತಿ ವಿಷಯದಲ್ಲೂ ಸರ್ಕಾರಗಳು ವಾಸ್ತವಾಂಶಗಳನ್ನು ತಿರುಚಿ, ಮರೆಮಾಚಿ, ‘ಸಬ್ ಚೆಂಗಾಸಿ’ ಇಮೇಜನ್ನೇ ಜನರ ಮುಂದಿಟ್ಟಿದ್ದು ಕೂಡ ಜನ ದೇಶದ ನಾಯಕತ್ವ ಮತ್ತು ಸರ್ಕಾರದ ಮೇಲೆ ನಂಬಿಕೆ ಕಳೆದುಕೊಳ್ಳಲು ಕಾರಣವಾಯಿತು. ಅಷ್ಟೇ ಅಲ್ಲ; ಕರೋನಾ ಸೋಂಕಿನ ನೈಜತೆಯ ಬಗ್ಗೆ ಕೂಡ ಜನ ಸರ್ಕಾರದ ಮಾತುಗಳನ್ನು ನಂಬದ ಸ್ಥಿತಿಗೆ ತಲುಪಿದರು.
ಏಕೆಂದರೆ; ಜನರಿಗೆ ಎಚ್ಚರಿಕೆ ನೀಡುವಾಗ ಸರ್ಕಾರ ನೀಡುತ್ತಿದ್ದ ಕರೋನಾ ಚಿತ್ರಣಕ್ಕೂ, ವಾಸ್ತವವಾಗಿ ಸರ್ಕಾರದ ಚುಕ್ಕಾಣಿ ಹಿಡಿದರು ಸಾರ್ವಜನಿಕವಾಗಿ ನಡೆದುಕೊಳ್ಳುತ್ತಿದ್ದ ರೀತಿಗೂ ಯಾವ ತಾಳಮೇಳವೂ ಇರಲಿಲ್ಲ.
ಮೊದಲ ಅಲೆಯ ವೇಳೆ ಸರ್ಕಾರ ಮತ್ತು ನಾಯಕರು ತೋರಿದ ಈ ಎಡಬಿಡಂಗಿತನಕ್ಕೆ ದೇಶ ಈಗ ಮತ್ತೆ ಬೆಲೆ ತೆರುತ್ತಿದೆ. ಎರಡನೆಯ ಅಲೆ ದೇಶದ ಉದ್ದಗಲಕ್ಕೆ ಅನಿರೀಕ್ಷಿತ ವೇಗದಲ್ಲಿ ವ್ಯಾಪಿಸಿದೆ. ಪ್ರಧಾನಿ ಮೋದಿಯವರ ತವರು ರಾಜ್ಯ ಗುಜರಾತಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಜಾಗವಿಲ್ಲದೆ ಕಾರಿಡಾರುಗಳಲ್ಲೇ ಸಾಲುಗಟ್ಟಿ ಮಲಗಿರುವ ಕರೋನಾ ಸೋಂಕಿತರು ‘ಗುಜರಾತ್ ಮಾದರಿ’ಯ ಅಸಲೀ ಮುಖವನ್ನು ಬಯಲು ಮಾಡಿದ್ದರೆ, ಮಧ್ಯಪ್ರದೇಶದ ಶವಾಗಾರಗಳಲ್ಲಿ ಸಾಲುಗಟ್ಟಿರುವ ರಾಶಿ ರಾಶಿ ಶವಗಳು ಸುಮಾರು ಎರಡು ದಶಕಗಳ ಬಿಜೆಪಿ ಆಡಳಿತದ ವೈಭವವನ್ನು ಬೆತ್ತಲುಮಾಡಿದೆ. ಹಾಗೇ ಮಹಾರಾಷ್ಟ್ರದ ಸೋಂಕಿನ ಸುನಾಮಿ ಆ ರಾಜ್ಯದ ಆಡಳಿತ ವ್ಯವಸ್ಥೆಯ ದೌರ್ಬಲ್ಯಗಳನ್ನು ಜಗತ್ತಿನೆದರು ಸಾರಿ ಹೇಳುತ್ತಿದೆ.
ಕರೋನಾ ನಿರ್ವಹಣೆಯ ವಿಷಯದಲ್ಲಿ ಪ್ರತಿ ಹಂತದಲ್ಲಿಯೂ; ಸೋಂಕು ಪತ್ತೆ, ನಿರ್ಬಂಧ, ನಿರ್ವಹಣೆ, ಜಾಗೃತಿ, ಚಿಕಿತ್ಸೆ, ವೈದ್ಯಕೀಯ ವ್ಯವಸ್ಥೆ ಸಬಲೀಕರಣ, ಲಾಕ್ ಡೌನ್ ಹೇರಿಕೆ ಮತ್ತು ಅದರ ಪರಿಣಾಮಗಳ ನಿರ್ವಹಣೆ, ಲಸಿಕೆ ಪರೀಕ್ಷೆ, ಪರಿಣಾಮ ಮತ್ತು ಸರಬರಾಜು.. ಹೀಗೆ ಪ್ರತಿ ಹಂತದಲ್ಲಿಯೂ, ತಮ್ಮ ವೈಫಲ್ಯ, ಯಡವಟ್ಟು, ಅವಿವೇಕಿತನಗಳು ಸೃಷ್ಟಿಸಿರುವ ಅನಾಹುತ, ಅಪನಂಬಿಕೆ ಮತ್ತು ಅಪಹಾಸ್ಯಕರ ಸನ್ನಿವೇಶಗಳ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸರ್ಕಾರಗಳು ಸುಳ್ಳುಗಳ ಮೇಲೆ ಸುಳ್ಳುಗಳನ್ನು ಪೋಣಿಸುತ್ತಲೇ ಇವೆ ಎಂಬುದು ಹಲವು ಸಂದರ್ಭಗಳಲ್ಲಿ ಬಯಲಾಗಿದೆ. ಇದೀಗ ಎರಡನೇ ಅಲೆಯ ಹೊತ್ತಲ್ಲಿ ಕೂಡ ಸರ್ಕಾರಗಳ ಅಂತಹ ಸುಳ್ಳುಗಳು, ತಪ್ಪು ಅಂಕಿಅಂಶಗಳು, ವಾಸ್ತವಾಂಶಗಳ ತಿರುಚುವಿಕೆ ಮುಂತಾದ ನಡೆಗಳು ಬಯಲಾಗತೊಡಗಿವೆ.
ಅಂತಹ ಹಸೀ ಸುಳ್ಳುಗಳ ಸಾಲಿಗೆ ಮಧ್ಯಪ್ರದೇಶದ ಕರೋನಾ ಸಾವಿನ ಸಂಖ್ಯೆಯ ವಿಷಯದಲ್ಲಿ ಅಲ್ಲಿನ ಬಿಜೆಪಿ ಸರ್ಕಾರ ನೀಡುವ ಅಧಿಕೃತ ಅಂಕಿಅಂಶಗಳಿಗೂ, ಅಲ್ಲಿನ ಶವಾಗಾರ ಮತ್ತು ಸ್ಮಶಾನಗಳಲ್ಲಿ ವಾಸ್ತವವಾಗಿ ನಿತ್ಯ ವರದಿಯಾಗುತ್ತಿರುವ ಪ್ರಕರಣಗಳಿಗೂ ಇರುವ ಅಜಗಜಾಂತರ ವ್ಯತ್ಯಾಸ, ಹೊಸ ಸೇರ್ಪಡೆ. ಈ ಕುರಿತು ‘ದ ವೈರ್’ ಸುದ್ದಿ ಜಾಲತಾಣ ಪ್ರಕಟಿಸಿರುವ ವರದಿಯ ಪ್ರಕಾರ, ಕೋವಿಡ್ ಪ್ರಕರಣಗಳ ಅಂಕಿಅಂಶಗಳ ವಿಷಯದಲ್ಲಿ ಮಾತ್ರವಲ್ಲದೆ, ಕೋವಿಡ್ ಸಾವಿನ ಪ್ರಕರಣಗಳ ವಿಷಯದಲ್ಲಿ ಕೂಡ ಹಲವು ಸರ್ಕಾರಗಳು ವಾಸ್ತವಾಂಶಗಳನ್ನು ಮರೆಮಾಚಿ, ಕಡಿಮೆ ಪ್ರಕರಣಗಳನ್ನು ತೋರಿಸುತ್ತಿವೆ.
ಅದಕ್ಕೆ ಮುಖ್ಯ ಕಾರಣ; ಕೆಲವು ನಿರ್ದಿಷ್ಟ ಪಕ್ಷದ ಸರ್ಕಾರಗಳು ಇರುವ ರಾಜ್ಯಗಳಲ್ಲಿ ಕರೋನಾ ನಿರ್ವಹಣೆ ಪರಿಣಾಮಕಾರಿಯಾಗಿ ಆಗಿದೆ, ಮತ್ತೆ ಕೆಲವು ನಿರ್ದಿಷ್ಟ ಪಕ್ಷಗಳು ಅಧಿಕಾರದಲ್ಲಿರುವ ಕಡೆ ಅವು ವಿಫಲವಾಗಿವೆ ಎಂಬ ಕ್ಷುಲ್ಲಕ ರಾಜಕೀಯ ವರಸೆ. ದೇಶದ ಅಧಿಕಾರದ ಚುಕ್ಕಾಣಿ ಹಿಡಿದವರೇ ಇಂತಹ ಹೇಯ ರಾಜಕೀಯದ ಮೇಲ್ಪಂಕ್ತಿ ಹಾಕಿಕೊಟ್ಟಿರುವುದರಿಂದ ಅವರದೇ ಪಕ್ಷದ ಸರ್ಕಾರಗಳು ವಿವಿಧ ರಾಜ್ಯಗಳಲ್ಲಿ ಅಂತಹ ವರಸೆಗೆ ತಕ್ಕಂತೆ ಹೊಸ ಪ್ರಕರಣಗಳು, ಸಾವು ಮತ್ತು ಲಸಿಕೆಯ ವಿಷಯದಲ್ಲಿ ಕೂಡ ಸುಳ್ಳು ಅಂಕಿಅಂಶಗಳನ್ನು ನೀಡುವ ಮೂಲಕ ತಮ್ಮ ಆಡಳಿತದಲ್ಲಿ ಕರೋನಾವನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ ಎಂಬ ‘ಸಬ್ ಚೆಂಗಾಸಿ’ ಚಿತ್ರಣ ಕೊಡಲು ಯತ್ನಿಸುತ್ತಿವೆ. ವಾಸ್ತವಾಂಶಕ್ಕಿಂತ ಕಡಿಮೆ ಪ್ರಮಾಣವನ್ನು ಬಿಂಬಿಸಲು ಇರುವ ಮತ್ತೊಂದು ಕಾರಣ; ಆರ್ಥಿಕತೆ. ಕರೋನಾ ಪ್ರಕರಣ ಮತ್ತು ಸಾವು ಹೆಚ್ಚಳವಾದಲ್ಲಿ ಅನಿವಾರ್ಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಕಠಿಣಗೊಳಿಸಬೇಕಾಗುತ್ತದೆ. ನೈಟ್ ಕರ್ಫ್ಯೂ, ಜನತಾ ಕರ್ಫ್ಯೂ, ಲಾಕ್ ಡೌನ್ ಅಂತಹ ಕ್ರಮಗಳನ್ನು ಜಾರಿಗೊಳಿಸಿದರೆ ಮತ್ತೆ ಆರ್ಥಿಕ ಚಟುವಟಿಕೆಗಳು ನೆಲಕಚ್ಚುತ್ತವೆ ಎಂಬ ಆತಂಕ ಸರ್ಕಾರಗಳದ್ದು.
ದ ವೈರ್ ಉಲ್ಲೇಖದ ಪ್ರಕಾರ, ಏಪ್ರಿಲ್ 12ರಂದು ಮಧ್ಯಪ್ರದೇಶ ರಾಜ್ಯದಲ್ಲಿ ಒಟ್ಟಾರೆ 37 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ ಎಂದು ಆ ರಾಜ್ಯದ ಅಧಿಕೃತ ಕೋವಿಡ್ ಬುಲೆಟಿನ್ ನಲ್ಲಿ ಹೇಳಲಾಗಿತ್ತು. ಆದರೆ, ವಾಸ್ತವವಾಗಿ ರಾಜಧಾನಿ ಭೋಪಾಲ್ ನ ಬಾದ್ಭಾದ್ ಶವಾಗಾರವೊಂದರಲ್ಲೇ ಆ ದಿನ ಶವಸಂಸ್ಕಾರಕ್ಕಾಗಿ 37 ಕೋವಿಡ್ ಮೃತದೇಹಗಳು ಬಂದಿದ್ದವು! ಹಾಗೇ, ಏಪ್ರಿಲ್ 8ರಂದು ರಾಜ್ಯಾದ್ಯಂತ 27 ಕೋವಿಡ್ ಸಾವು ಸಂಭವಿಸಿರುವುದಾಗಿ ರಾಜ್ಯ ಕೋವಿಡ್ ಬುಲೆಟಿನ್ ಉಲ್ಲೇಖಿಸಿದ್ದರೆ, ಆ ದಿನ ಭೋಪಾಲ್ ಶವಾಗಾರವೊಂದರಲ್ಲೇ 35 ಕೋವಿಡ್ ಸಾವಿನ ಮೃತದೇಹಗಳನ್ನು ದಹನ ಮಾಡಲಾಗಿತ್ತು! ಏಪ್ರಿಲ್ 9ರಂದು ಕೂಡ ಬುಲೆಟಿನ್ ಪ್ರಕಾರ ಇಡೀ ರಾಜ್ಯದಲ್ಲಿ 23 ಕೋವಿಡ್ ಸಾವು ಸಂಭವಿಸಿವೆ ಎನ್ನಲಾಗಿದ್ದರೆ, ಭೋಪಾಲ್ ಶವಾಗಾರವೊಂದರಲ್ಲೇ ಅಂದು ದಹನವಾದ ಕೋವಿಡ್ ಮೃತದೇಹಗಳ ಸಂಖ್ಯೆ 35! ಏಪ್ರಿಲ್ 11ರಂದು ಕೂಡ ಬುಲೆಟಿನ್ ಪ್ರಕಾರ ಇಡೀ ರಾಜ್ಯದಲ್ಲಿ ಕೇವಲ 24 ಕೋವಿಡ್ ಸಾವು ಸಂಭವಿಸಿದ್ದರೆ, ವಾಸ್ತವವಾಗಿ ಅಂದು ಭೋಪಾಲ್ ಒಂದರಲ್ಲೇ 68 ಕೋವಿಡ್ ಮೃತ ದೇಹಗಳ ದಹನ ನಡೆದಿದ್ದರೆ, ಇಂಧೋರ್ ನಲ್ಲಿ ಐದು ಕೋವಿಡ್ ಮೃತ ದೇಹಗಳ ದಹನ ಮಾಡಲಾಗಿತ್ತು. ಅಂದರೆ, ಒಟ್ಟು 73 ಕೋವಿಡ್ ಶವಗಳ ಲೆಕ್ಕ ಭೋಪಾಲ್ ಮತ್ತು ಇಂಧೋರ್ ಎರಡು ನಗರಗಳಲ್ಲಿ ಸಿಕ್ಕಿದ್ದರೂ ರಾಜ್ಯ ಬುಲೆಟಿನ್ ಪ್ರಕಾರ ಸತ್ತವರ ಸಂಖ್ಯೆ ಕೇವಲ 24 ಎಂಬುದು ರಾಜ್ಯ ಸರ್ಕಾರದ ವರಸೆ!
ಹೀಗೆ ಸುಳ್ಳು ಮಾಹಿತಿಗಳ ಮೂಲಕ ಸರ್ಕಾರಗಳು ತಮ್ಮ ಪಕ್ಷ, ಸರ್ಕಾರಗಳ ಇಮೇಜ್ ಉಳಿಸಿಕೊಳ್ಳಲು, ಆರ್ಥಿಕ ಚಟುವಟಿಕೆ ಕಾಯ್ದುಕೊಳ್ಳುವ ಕಳ್ಳಾಟದಲ್ಲಿ ಮುಳುಗಿರುವಾಗಲೇ ಕರೋನಾ ದೇಶದ ಮೂಲೆಮೂಲೆಯಲ್ಲಿ ಮತ್ತೆ ರುದ್ರ ತಾಂಡವ ಶುರುಮಾಡಿದೆ. ಸರ್ಕಾರಗಳ ಹಸೀ ಸುಳ್ಳುಗಳು ಮತ್ತು ಆಳುವ ಮಂದಿಗೆ ಒಂದು, ಪಾಲಿಸುವ ಜನರಿಗೆ ಒಂದು ನೀತಿ ಎಂಬ ವರಸೆಗಳಿಂದಾಗಿ ಅಂತಿಮವಾಗಿ ಸಂತ್ರಸ್ತವಾಗುವುದು ಜನಸಾಮಾನ್ಯರ ಬದುಕು! ಕಳೆದ ವರ್ಷದ ಮೊದಲ ಅಲೆಯ ಹೊತ್ತಿನಿಂದಲೂ ಇಂತಹದ್ದೇ ಹಸೀ ಸುಳ್ಳುಗಳ ಮೂಲಕವೇ ಕರೋನಾ ವಿರುದ್ಧದ ಸಮರ ಗೆಲ್ಲುವ ವರಸೆಗೆ ಈಗಾಗಲೇ ದೇಶ ತೆರಬಾರದ ಬೆಲೆ ತೆತ್ತಿದೆ. ಮತ್ತೆ ಇದೀಗ ಅಂತಹದ್ದೇ ಸುಳ್ಳುಗಳ ಶಸ್ತ್ರಾಭ್ಯಾಸ ಶುರುವಾಗಿದೆ. ಜನ ಕೂಡ ಬೆಲೆ ತೆರಲು ಆರಂಭಿಸಿದ್ದಾರೆ!