ಭಾರತದಲ್ಲಿನ ಅತಿ ಶ್ರೀಮಂತರ ಮತ್ತು ಬಡವರ ನಡುವಿನ ಆರ್ಥಿಕ ಅಸಮಾನತೆಯನ್ನು ಕರೋನಾ ಮತ್ತಷ್ಟು ಉಲ್ಬಣಗೊಳಿಸಿದೆ. ಕೌಶಲ್ಯರಹಿತ ಕೆಲಸಗಾರರು ದೀರ್ಘ ಅವಧಿಗೆ ಕೆಲಸ ಕಳೆದುಕೊಂಡದ್ದು ಈ ಅಸಮಾನತೆ ಹೆಚ್ಚಲು ಪ್ರಮುಖ ಕಾರಣ ಎಂದು ಸ್ವಿಟ್ಜರ್ಲೆಂಡ್ನ ದಾವೋಸ್ ನಲ್ಲಿ ನಡೆದ ವಲ್ಡ್ ಇಕನಾಮಿಕ್ ಫಾರಂನಲ್ಲಿ ‘ಆಕ್ಸ್ಫಮ್’ ಹೇಳಿದೆ.
‘ಅಸಮಾನತೆಯ ವೈರಸ್’ ಎನ್ನುವ ಹೆಸರಿನ ವರದಿಯು 2020ರ ಎಪ್ರಿಲ್ ತಿಂಗಳೊಂದರಲ್ಲೇ ಪ್ರತಿ ಗಂಟೆಗೆ 1.7 ಲಕ್ಷ ಜನ ಕೆಲಸ ಕಳೆದುಕೊಂಡಿದ್ದಾರೆ, 84% ಜನರಿಗೆ ಆದಾಯ ನಷ್ಟವಾಗಿದೆ ಮತ್ತು ಇದೇ ಸಮಯದಲ್ಲಿ ಭಾರತದ ಬಿಲೇನಿಯರ್ಸ್ನ ಆದಾಯ 35% ಹೆಚ್ಚಾಗಿದೆ ಎಂದು ತಿಳಿಸುತ್ತದೆ. ಭಾರತದ ಹತ್ತು ಅತಿ ಶ್ರೀಮಂತರ ಆದಾಯದಲ್ಲಿ ಆಗಿರುವ ಏರಿಕೆಯನ್ನು 138 ಮಿಲಿಯನ್ ಬಡವರಿಗೆ ತಲಾ 94,045 ರೂಪಾಯಿಗಳಿಗೆ ಹಂಚಬಹುದು ಎಂದೂ ವರದಿ ಹೇಳಿದೆ.
ದೇಶದೊಳಗೆ ಬೆಳೆಯುತ್ತಿರುವ ಆರ್ಥಿಕ ಅಸಮಾನತೆಯು ಭಾರತದೊಳಗಿನ ಎರಡು ವೈರುಧ್ಯಗಳಿಗೆ ಉತ್ತಮ ಉದಾಹರಣೆಯಾಗಿದೆ.
ಅಂಬಾನಿ ಕರೋನಾ ಕಾಲದಲ್ಲಿ ಒಂದು ಗಂಟೆಯಲ್ಲಿ ಗಳಿಸಿದ ಆದಾಯವನ್ನು ಕೌಶಲ್ಯರಹಿತ ಕೆಲಸಗಾರನೊಬ್ಬ ಗಳಿಸಲು 10,000 ವರ್ಷಗಳು ಬೇಕಾಗಬಹುದು ಮತ್ತು ಅಂಬಾನಿಯ ಒಂದು ಸೆಕೆಂಡ್ ನ ಆದಾಯ ಗಳಿಸಲು ಮೂರು ವರ್ಷಗಳೇ ಬೇಕಾಗಬಹುದು ಎಂದೂ ವರದಿ ಹೇಳುತ್ತದೆ.
ಆಗಸ್ಟ್ ನಲ್ಲಿ ಅಂಬಾನಿ ಪ್ರಪಂಚದ ನಾಲ್ಕನೇ ಅತಿ ದೊಡ್ಡ ಶ್ರೀಮಂತ ಎಂದು ಘೋಷಿಸಲ್ಪಟ್ಟಿದ್ದರು. ಅದರ ಮುಂಚಿನ ಹಾಗೂ ನಂತರದ ತಿಂಗಳುಗಳಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಕೆಲಸ, ಆಶ್ರಯ, ಹಣ, ಆಹಾರ ಕಳೆದುಕೊಂಡಿದ್ದರು. ಗಂಡಸು, ಹೆಂಗಸು, ಮಕ್ಕಳೆನ್ನದೆ ನೂರಾರು ಕಾರ್ಮಿಕರು ಕಿ.ಮೀ ಗಟ್ಟಲೆ ರಸ್ತೆಗಳಲ್ಲಿ ನಡೆಯುತ್ತಿರುವುದೇ ದಿನ ಪತ್ರಿಕೆಗಳ ಪ್ರಮುಖ ಸುದ್ದಿಯಾಯಿತು. ಇಷ್ಟಾದರೂ ಸರ್ಕಾರ ಪಾರ್ಲಿಮೆಂಟಿನಲ್ಲಿ ‘ಜೀವ ಕಳೆದುಕೊಂಡ ಕಾರ್ಮಿಕರ ಮಾಹಿತಿ ಸರ್ಕಾರದ ಬಳಿ ಇಲ್ಲ’ ಎಂದು ಹೇಳಿಕೆ ನೀಡಿತ್ತು.
“ದುಃಖದ ಸಂಗತಿಯೆಂದರೆ ಸರ್ಕಾರ ರಸ್ತೆಯಲ್ಲಿ ಜೀವ ಕಳೆದುಕೊಂಡವರ ಬಗ್ಗೆ ಚಿಂತಿಸುವುದಿಲ್ಲ. ಜಗತ್ತು ಅವರ ಸಾವನ್ನು ನೋಡುತ್ತಿತ್ತು” ಎಂದು ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ಇಲ್ಲಿ ಸ್ಮರಿಸಬಹುದು.
30% ಜನ ಒಂದು ರೂಮಿನ ಮನೆಗಳಲ್ಲಿ ಮತ್ತು 32% ಜನ ಎರಡು ರೂಮಿನ ಮನೆಗಳಲ್ಲಿ ವಾಸಿಸುವಾಗ ಕೋವಿಡ್ ಶಿಷ್ಟಾಚಾರಗಳಾದ ಕೈ ತೊಳೆಯುವಿಕೆ, ದೈಹಿಕ ಅಂತರ ಕಾಪಾಡಿಕೊಳ್ಳುವುದು ಕೂಡ ಕೆಲವರಿಗೆ ಲಕ್ಸುರಿಯಾಗಿತ್ತು.
ಕನಿಷ್ಠ ವೇತನವನ್ನು ಪರಿಷ್ಕರಿಸಿ ನಿರ್ದಿಷ್ಟ ಅವಧಿಯಲ್ಲಿ ಅದನ್ನು ಪರಿಶೀಲಿಸಿದರೆ ಬಡವ ಮತ್ತು ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡಬಹುದು ಎಂದು ‘ಆಕ್ಸ್ಫಮ್’ ಸರಕಾರಕ್ಕೆ ಸಲಹೆ ನೀಡುತ್ತದೆ. “ತನ್ನ ಪ್ರಜೆಗಳ ಒಳಿತಿಗಾಗಿ ನಿರ್ದಿಷ್ಟ ಮತ್ತು ದಿಟ್ಟ ನಿರ್ಧಾರ ಕೈಗೊಳ್ಳುವುದಕ್ಕೆ ಇದು ಸಕಾಲ” ಎಂದು ಅದು ಹೇಳಿದೆ.