ರಾಜ್ಯಾದ್ಯಂತ ಕರೋನಾ ಮಹಾಮಾರಿ ತಾಂಡವವಾಡುತ್ತಿದ್ದರೆ, ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಅವ್ಯವಹಾರದ ಗಾಳಿ ಬೀಸುತ್ತಿದೆ. ಕೋವಿಡ್-19 ವಿರುದ್ದದ ಹೋರಾಟದಲ್ಲಿ ಅಗತ್ಯವಿರುವಂತಹ ವೈದ್ಯಕೀಯ ಉಪಕರಣಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಬೆಲೆ ನೀಡಿ ಖರೀದಿಸಿರುವ ಕುರಿತಾದ ದಾಖಲೆಗಳು ಪ್ರತಿಧ್ವನಿಗೆ ಲಭ್ಯವಾಗಿವೆ.
ರಾಜ್ಯದಲ್ಲಿ ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ಹೌಸಿಂಗ್ ಸೊಸೈಟಿ (KSDLWS)ಯನ್ನು ಕೋವಿಡ್-19ಗೆ ಸಂಬಂಧಪಟ್ಟ ಔಷಧ, ರಾಸಾಯನಿಕ ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಸಲಕರಣೆಗಳನ್ನು ಖರೀದಿಸಲು ನೋಡಲ್ ಸಂಸ್ಥೆಯಾಗಿ ನಿರ್ಮಿಸಲಾಗಿದೆ. ಇದರಂತೆ ಪಿಪಿಇ ಕಿಟ್ಗಳು, ಎನ್-95 ಮಾಸ್ಕ್ಗಳು, ವೆಂಟಿಲೇಟರ್ಗಳು, BiPAP ಹಾಗೂ ಇತರ ಅತೀ ಅವಶ್ಯಕ ಔಷಧಿಗಳನ್ನು ಸಂಗ್ರಹಿಸಿ ಯಾವುದೇ ರೀತಿಯ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತಿದೆ KSDLWS.
KSDLWSನಂತೆಯೇ, ವೈದ್ಯಕೀಯ ಶಿಕ್ಷಣ ಇಲಾಖೆಯಿಂದಲೂ ಅಗತ್ಯ ಉಪಕರಣಗಳನ್ನು ಖರೀದಿಸುವ ಪ್ರಕ್ರಿಯೆ ನಡೆದಿತ್ತು. ಆದರೆ, ವೈದ್ಯಕೀಯ ಶಿಕ್ಷಣ ಇಲಾಖೆ ಖರೀದಿಸಿದ ಉಪಕರಣಗಳಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಪಾವತಿಸಿದೆ. KSDLWS ಪಾವತಿಸಿದ ಮೊತ್ತವನ್ನು ತಾಳೆ ಹಾಖಿ ನೋಡಿದಾಗ ವೈದ್ಯಕೀಯ ಶಿಕ್ಷಣ ಇಲಾಖೆ ಖರೀದಿಸಿದ ಉಪಕರಣಗಳಿಗೆ ಎರಡರಿಂದ ಮೂರು ಪಟ್ಟು ಹೆಚ್ಚು ಮೊತ್ತವನ್ನು ಪಾವತಿಸಿ ರಾಜ್ಯದ ಬೊಕ್ಕಸಕ್ಕೆ ನಷ್ಟವುಂಟು ಮಾಡಿರುವುದು ತಿಳಿದು ಬಂದಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯು ಅನಗತ್ಯವಾಗಿ ಖರ್ಚುಮಾಡಿ ಖರೀದಿಸಿದ ಉಪಕರಣಗಳ ಮಾಹಿತಿ ಇಲ್ಲಿದೆ.

ಹೀಗೆ ಇನ್ನು ಹಲವು ಉಪಕರಣಗಳ ಖರೀದಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಅನಗತ್ಯವಾಗಿ ಖರ್ಚು ಮಾಡಿರುವುದನ್ನು ದಾಖಲೆಗಳು ತೋರಿಸುತ್ತಿವೆ. ಖಂಡಿತವಾಗಿ ಈ ಅವ್ಯವಹಾರದಲ್ಲಿ ಉನ್ನತಮಟ್ಟದ ಕೈವಾಡ ಇರುವುದು ಖಚಿತವಾಗುತ್ತಿದೆ. ರಾಜ್ಯ ಸರ್ಕಾರ ಪ್ರಸ್ತುತ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಾಗ ಇಂತಹ ಅನಗತ್ಯ ಖರ್ಚುಗಳನ್ನು ಮಾಡುವ ಅಗತ್ಯವಿತ್ತೇ? ಎಂಬ ಪ್ರಶ್ನೆ ಮೊದಲಾಗಿ ಮುನ್ನೆಲೆಗೆ ಬರುತ್ತದೆ. ಅಷ್ಟಕ್ಕೂ, KSDLWSಅನ್ನು ಎಲ್ಲಾ ರೀತಿಯ ಉಪಕರಣಗಳನ್ನು ಖರೀದಿಸಲು ನೋಡಲ್ ಸಂಸ್ಥೆಯಾಗಿ ಆಯ್ಕೆ ಮಾಡಿದ ನಂತರ ವೈದ್ಯಕೀಯ ಶಿಕ್ಷಣ ಇಲಾಖೆಯು KSDLWS ಮೂಲಕವೇ ತನ್ನ ಖರೀದಿ ಪ್ರಕ್ರಿಯೆಯನ್ನು ನಡೆಸಬಹುದಿತ್ತಲ್ಲವೇ?
ಮಾಸ್ಕ್ ಖರೀದಿಗೆ ತಡೆ:
ತ್ರಯಿವರ್ತ ಎನ್ನುವ ಹೈದರಾಬಾದ್ ಮೂಲದ ಕಂಪೆನಿಗೆ ದುಬಾರಿ ಬೆಲೆಗೆ ಮಾಸ್ಕ್ ಖರೀದಿ ಮಾಡಲು ಏಪ್ರಿಲ್ 21ರಂದು ಸಪ್ಲೈ ಆರ್ಡರ್ ನೀಡಲಾಯಿತು. KSDLWS 147 ರೂ.ಗಳಿಗೆ ಖರೀದಿಸಿದ ಎನ್ 95 ಮಾಸ್ಕ್ಗಳಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯು 280.95 ರೂ.ಗಳನ್ನು ನೀಡಲು ಒಪ್ಪಿಕೊಂಡಿತ್ತು.
ಆದರೆ, ತಾನು ಹೆಚ್ಚಿನ ದರ ವಿಧಿಸುತ್ತಿದ್ದೇನೆಂದು ತಡವಾಗಿ ಅರಿವಾದ ನಂತರ ಮೇ 8ರಂದು ತಾನು ನೀಡಿದ ಸಪ್ಲೈ ಆರ್ಡರ್ಅನ್ನು ರದ್ದುಗೊಳಿಸಿದೆ. ವಿತರಣೆಯಾದ ಮಾಸ್ಕ್ಗಳ ಗುಣಮಟ್ಟವೇನೋ ಚೆನ್ನಾಗಿದೆ ಆದರೆ, ಬೆಲೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಈ ಆದೇಶ ನೀಡಲಾಗಿದೆ.

ಇದೊಂದು ಉದಾಹರಣೆ ಬಿಟ್ಟರೆ ಬೇರಾವುದೇ ಉಪಕರಣಗಳ ಖರೀದಿಯನ್ನು ಇಲಾಖೆ ರದ್ದುಗೊಳಿಸಿಲ್ಲ. ವೈದ್ಯಕೀಯ ಶಿಕ್ಷಣ ಇಲಾಖೆಯು ಇಷ್ಟೊಂದು ದುಬಾರಿ ಬೆಲೆಗೆ ಉಪಕರಣಗಳನ್ನು ಖರೀದಿ ಮಾಡಿರುವ ಹಿಂದೆ ಕಂಪೆನಿಗಳ ಕಡೆಯಿಂದ ನಡೆದ ಲಾಬಿ ಇದೆಯೇ? ಅಥವಾ ಯಾರಾದರು ಮದ್ಯವರ್ತಿಗಳು ಇದರಲ್ಲಿ ಶಾಮೀಲಾಗಿದ್ದಾರೆಯೇ? ಎಂಬ ಅನುಮಾನಗಳು ದಟ್ಟವಾಗುತ್ತಿವೆ.

ಗುಣಮಟ್ಟದ ಉಪಕರಣಗಳು: ಸಚಿವ ಸುಧಾಕರ್
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರಾದ ಡಾ. ಕೆ ಸುಧಾಕರ್ ಅವರು, ಪ್ರಸ್ತುತ ರಾಜ್ಯವು ತುಂಬಾ ಗಂಭೀರವಾದ ಸಮಸ್ಯೆಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಉಪಕರಣಗಳನ್ನೇ ಖರೀದಿ ಮಾಡಿದ್ದೇವೆ. ಕೋವಿಡ್-19 ವಿರುದ್ದದ ಹೋರಾಟದಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಕೂಡಾ ಅಗತ್ಯ ಎಂದು ಇಲಾಖೆಯ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಒಂದು ವೇಳೆ ಗುಣಮಟ್ಟದ ಕಾರಣಕ್ಕೆ ಹೆಚ್ಚಿನ ಹಣವನ್ನು ನೀಡಿ ಉಪಕರಣಗಳನ್ನು ಖರೀದಿ ಮಾಡಿದ್ದರೆ, ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುವಂತಹ KSDLWS ಖರೀದಿ ಮಾಡಿದ ಉಪಕರಣಗಳ ಗುಣಮಟ್ಟ ಕಳಪೆಯಿದೆಯೇ? ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ.