ಜಾಗತಿಕವಾಗಿ ಸಾವಿನ ಏಜೆಂಟ್ ಆಗಿ ಪರಿಣಮಿಸಿರುವ ಕರೋನಾ ವೈರಸ್ ಹರಡುವಿಕೆಯು ಮೈಸೂರು ಜಿಲ್ಲಾಡಳಿತದ ಪಾಲಿಗೆ ಆಡಳಿತಾತ್ಮಕವಾಗಿ ತುಟ್ಟಿಯಾಗಲಿದೆಯಾ ಎಂಬ ಸೂಚನೆ ಕಂಡುಬರುತ್ತಿದೆ. ಕೇವಲ ಒಬ್ಬನಿಗೆ ಅಂಟಿದ್ದ ಸಾಂಕ್ರಾಮಿಕವು ದಿನದಿಂದ ದಿನಕ್ಕೆ ತನ್ನ ಸಂಖ್ಯೆಯನ್ನು ರಾಕೆಟ್ ವೇಗದಲ್ಲಿ ಏರಿಸಿಕೊಳ್ಳುತ್ತಿದೆ. ಅದರ ವೇಗ ಹೀಗೆಯೇ ಮುಂದುವರಿಯಬಹುದು ಎಂಬ ಸೂಚನೆ ಈಗಾಗಲೇ ಗೊತ್ತಾಗಿದೆ. ಹೀಗೇ ಆದರೆ ಸಾವಿನ ಕದ ತಟ್ಟುವವರು ಖಾತೆಗೆ ಜಮೆಯಾಗಬಹುದು. 1500ಕ್ಕೂ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಜುಬಿಲಿಯಂಟ್ ಕಾರ್ಖಾನೆಯ ಒಬ್ಬ ಕಾರ್ಮಿಕನಿಗೆ ಅಂಟಿದ ವೈರಸ್ ಈಗ ತನ್ನ ಕಬಂಧ ಬಾಹುಗಳನ್ನು ಸರಾಗವಾಗಿ ಚಾಚುತ್ತಿದೆ. ಪರಿಣಾಮ ಸೋಂಕಿತ ವ್ಕಕ್ತಿಯ ಸಂಪರ್ಕಕ್ಕೆ ಬಂದ ಕುಟುಂಬದ ಸದಸ್ಯರಿಗೂ, ಒಡನಾಡಿಗಳಿಗೂ ಹಬ್ಬಿದೆ.
ಇದು ಅಲ್ಲಿಗೇ ನಿಲ್ಲುವುದಿಲ್ಲ. ಏಕೆಂದರೆ, ದಿನನಿತ್ಯ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ, ತಾನು ವಾಸವಿರುವ ನಂಜನಗೂಡು ಪಟ್ಟಣದಲ್ಲಿ ವಾಸ ಮಾಡುವ ಪ್ರದೇಶದಲ್ಲಿ ಹಾಗು ತಾನು ಒಡನಾಟ ಇಟ್ಟುಕೊಂಡಿರುವ ಸುತ್ತಮುತ್ತಲಿನ ಊರುಗಳ ನೆಂಟರು, ಗೆಳೆಯರು ಹಾಗು ಓಡಾಡಿದ ಜಾಗಗಳಲ್ಲಿ ಅದು ಹರಡುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಆ ಪ್ರದೇಶದಲ್ಲಿ ಹೆಚ್ಚು ಅರಿವು ಮೂಡಿಸುವ ಅಗತ್ಯ ಇದೆ. ಸೋಂಕಿಗೆ ಒಳಗಾದ ವ್ಯಕ್ತಿಯು ನೀಡಿದ ಮತ್ತು ಅವನ ಸಂಪರ್ಕದಲ್ಲಿದ್ದವರನ್ನು ವಿಚಾರಣೆಗೆ ಒಳಪಡಿಸಿ ಹೋಮ್ ಕ್ವಾರಂಟೈನ್ ಮಾಡುವುದು ಸಾಗಿದೆ. ಆದರೆ, ಅಲ್ಲಿನ ಜನರು ಇದು ಕಂಟಕವಲ್ಲ ಎಂಬಂತೆ ಎಂದಿನಂತೆ ಎಗ್ಗಿಲ್ಲದೆ ಓಡಾಡುತ್ತಿದ್ದಾರೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ನಿಜವಾದರೂ, ಉಡಾಫೆ ಮನೆ ಮಾಡಿದೆ. ಹಾಗಾಗಿ ಜಿಲ್ಲಾಡಳಿತವು ತ್ವರಿತಗತಿಯಲ್ಲಿ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ.

ಸದ್ಯ ಮೈಸೂರು ಜಿಲ್ಲೆಯಲ್ಲಿ 19 ಮಂದಿಗೆ ಸೋಂಕು ದೃಢಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ರೀತಿ ಸೋಂಕು ದೃಢಪಟ್ಟವರಲ್ಲಿ ಒಂದಿಷ್ಟು ಜನ ನಂಜನಗೂಡಿನ ಜ್ಯುಬಿಲಿಯೆಂಟ್ ಕಾರ್ಖಾನೆಯವರು. ಇದರಿಂದಾಗಿ ನಂಜನಗೂಡಿನಲ್ಲಿ ಇನ್ನೂ ಹೆಚ್ಚಿನ ಸೋಂಕಿತರ ಸಂಖ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಅದರಿಂದಾಗಿ ಸಾವಿರಾರು ಮಂದಿಯನ್ನು ನಂಜನಗೂಡಿನಲ್ಲಿ ಕ್ವಾರೆಂಟೈನ್ ಮಾಡಲಾಗಿದೆ. ಅದರಲ್ಲೂ ಜ್ಯುಬಿಲಿಯೆಂಟ್ ಕಂಪೆನಿಯ 1,458 ಮಂದಿ ಕ್ವಾರೆಂಟೈನ್ ನಲ್ಲಿದ್ದು, ನಂಜನಗೂಡಿನಲ್ಲೇ 761 ಮಂದಿ ಕ್ವಾರೆಂಟೈನ್ ನಲ್ಲಿದ್ದಾರೆ. P-52 ನಿಂದ ಆರಂಭವಾದ ಸೋಂಕು ಜ್ಯುಬಿಲಿಯೆಂಟ್ ಕಾರ್ಖಾನೆಯ ಎಲ್ಲಾ ಸಿಬ್ಬಂದಿಗಳನ್ನ ಇಕ್ಕಟ್ಟಿಗೆ ಸಿಲುಕಿಸಿದೆ. P-52 ಈ ಕೋವಿಡ್-19 ಪೀಡಿತನ ಪತ್ನಿ ಹಾಗೂ ಆತನ ನಿಕಟ ಸಂಪರ್ಕದಲ್ಲಿರುವ ಮಂದಿಗೂ ಸೋಂಕು ದೃಢಪಟ್ಟಿದೆ.

ಇನ್ನು ನಂಜನಗೂಡಿನಲ್ಲಿ ಸೋಂಕು ದೃಢಪಡುತ್ತಿದ್ದಂತೆ ಅತ್ತ ಚಾಮರಾಜನಗರ, ಮಂಡ್ಯ ಜಿಲ್ಲಾಡಳಿತ ತನ್ನ ಗಡಿಗಳನ್ನು ಬಂದ್ ಮಾಡಿವೆ. ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದೆ. ಚಾಮರಾಜನಗರದಲ್ಲಂತೂ ತುರ್ತು ಸೇವೆ ಹಾಗೂ ಅವಶ್ಯಕ ಸೇವೆಗಳ ವಾಹನಗಳಿಗೆ ಹೊರತಾಗಿ ಬೇರೆಲ್ಲಾ ವಾಹನಗಳಿಗೆ ಪೆಟ್ರೋಲ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಆದರೆ ಮೈಸೂರು ಜಿಲ್ಲಾಡಳಿತ ಮಾತ್ರ ಮಗುಮ್ಮಾಗಿ ಕುಳಿತಿದೆ.
ಜಾಗೃತಿ ಬಿಡಿ ಕಡೇ ಪಕ್ಷ ನಿರ್ಭೀತಿಯಿಂದ ಅನಗತ್ಯ ಓಡಾಡೋ ಜನರನ್ನು ನಿಯಂತ್ರಿಸೋದಕ್ಕೂ ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ದೇಶದಲ್ಲಿಯೇ ಮೂರನೇ ಹಂತಕ್ಕೆ ತಲುಪುವ ಆತಂಕವನ್ನು ಮೈಸೂರು ಜಿಲ್ಲೆಯ ಪ್ರಜ್ಞಾವಂತ ಜನರು ತೋಡಿಕೊಳ್ಳುತ್ತಿದ್ದಾರೆ.
ಇನ್ನು ಇದೇ ನಂಜನಗೂಡಿನ ಆಸುಪಾಸಿನ ಗ್ರಾಮೀಣ ಪ್ರದೇಶಗಳಾದ ಕಡಕೋಳ, ಬ್ಯಾತಳ್ಳಿ, ಮಂಟಕಳ್ಳಿ, ಬಂಡೀಪಾಳ್ಯ, ದೊಡ್ಡಕಾಮ್ಯ, ಸೊಳ್ಳೆಪುರ, ಕಳಲೆ ಮುಂತಾದ ಪ್ರದೇಶಗಳ ಬಗ್ಗೆಯೂ ಜಿಲ್ಲಾಡಳಿತ ವಿಶೇಷ ನಿಗಾ ಇಡಬೇಕಾದ ಅನಿವಾರ್ಯತೆ ಇದೆ. ಜಿಲ್ಲಾಡಳಿತವು ಗ್ರಾಮ ಪಂಚಾಯತ್ ಮಟ್ಟದಲ್ಲಿ ಇಲ್ಲಿ ಕಾರ್ಯನಿರ್ವಹಿಸಿ ನಿಗಾ ಇಡಬೇಕಾದ ಅವಶ್ಯಕತೆ ಇದೆ. ಆ ಮೂಲಕ ಮೂರನೇ ಹಂತಕ್ಕೆ ಹರಡುವ ಸಾಧ್ಯತೆಯನ್ನು ಮೈಸೂರು ಜಿಲ್ಲಾಡಳಿತ ತಡೆಗಟ್ಟಬೇಕಿದೆ. ಜೊತೆಗೆ ಸೂಕ್ತ ಮಾರ್ಗದರ್ಶನ ಹಾಗೂ ಕಠಿಣ ನಿರ್ಧಾರವನ್ನೂ ಜಿಲ್ಲಾಡಳಿತ ತೆಗೆದುಕೊಳ್ಳುವ ಅವಶ್ಯಕತೆ ತುಂಬಾ ಇದೆ.
ಸದ್ಯ ಇರುವ ಲಾಕ್‌ಡೌನ್ ಎಷ್ಟು ಮಾತ್ರಕ್ಕೂ ಸಾಲುತ್ತಿಲ್ಲ ಅನ್ನೋದು ಕರೋನಾ ವೈರಸ್ ಅವಾಂತರ ಅರಿತ ಮಂದಿಯ ಮಾತು. ಸಂಪೂರ್ಣ ಕರ್ಫ್ಯೂ ಮಾದರಿಯಲ್ಲಿ ಲಾಕ್‌ಡೌನ್ ಜಾರಿ ಬರಬೇಕೆನ್ನುವುದು ಮೈಸೂರು ಮಂದಿಯ ಆಗ್ರಹ ಕೂಡಾ. ಆದ್ದರಿಂದ ಆರಂಭದಲ್ಲಿ ಕರೋನಾ ವೈರಸ್ ದಾಳಿಯಿಂದ ಸಾಕಷ್ಟು ದೂರವಿದ್ದ ಮೈಸೂರು ಜಿಲ್ಲೆ ಇದೀಗ ಬೆಂಗಳೂರು ನಂತರದಲ್ಲಿ ಅತ್ಯಧಿಕ ಸೋಂಕು ಪೀಡಿತ ಪ್ರಕರಣ ಕಾಣುವಂತಾಗಿದೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕಾದ ಸಮಯ ಒದಗಿ ಬಂದಿದೆ. ಇನ್ನೂ ನಿರ್ಲಕ್ಷ್ಯ ವಹಿಸಿದರೆ ಇಡೀ ಸಮುದಾಯಕ್ಕೆ ರೋಗ ಹರಡುವ ಸಾಧ್ಯತೆ ಇದ್ದು, ಈ ಬಗ್ಗೆ ಮೈಸೂರು ಜಿಲ್ಲಾಡಳಿತ ಗಂಭೀರವಾಗದೇ ಹೋದಲ್ಲಿ ಇಡೀ ಸಮುದಾಯಕ್ಕೆ ರೋಗ ಅಂಟಿಸಿಕೊಂಡ ಅಪಖ್ಯಾತಿಗೆ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಒಳಗಾಗಲಿದೆ.