ಬೆಂಗಳೂರು: ಪೊಕ್ಸೊ ಕೇಸ್ ನಲ್ಲಿ ಸಿಲುಕಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ನ್ಯಾಯಾಲಯ ಮತ್ತೊಂದು ಶಾಕ್ ನೀಡಿದೆ. ಡಿಸೆಂಬರ್ 2ರಂದು ಖುದ್ದು ಹಾಜರಾಗುವಂತೆ ಯಡಿಯೂರಪ್ಪಗೆ 1ನೇ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಕಳೆದ ಗುರುವಾರ ತ್ವರಿತ ನ್ಯಾಯಾಲಯದ ಸಮನ್ಸ್ ರದ್ದು ಪಡಿಸುವಂತೆ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿತ್ತು. ಇದರಿಂದ ಪೋಕ್ಸೋ ಪ್ರಕರಣದ ಟ್ರಯಲ್ ಆರಂಭ ಹಿನ್ನಲೆ ಆರೋಪಿಗಳು ಕೋರ್ಟ್ ಗೆ ಹಾಜರಾಗುವಂತೆ ಸಮನ್ಸ್ ಜಾರಿಗೆ ಎಸ್‌ಪಿಪಿ ಅಶೋಕ್ ನಾಯ್ಕ್ ಮನವಿ ಮಾಡಿದ್ದರು.
ಈ ಸಂಬಂಧ ನ್ಯಾಯಾಲಯ ಯಡಿಯೂರಪ್ಪ ಸೇರಿದಂತೆ ಇತರೆ ಆರೋಪಿಗಳಾದ ಅರುಣ ವೈ.ಎಂ., ರುದ್ರೇಶ್ ಮರುಳಸಿದ್ದಯ್ಯ, ಜಿ.ಮರಿಸ್ವಾಮಿಗೂ ಸಮನ್ಸ್ ಜಾರಿ ಮಾಡಿದೆ. ಡಿಸೆಂಬರ್ 2ರಂದು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.
17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವಾದರೂ ಕ್ರಮ ಕೈಗೊಳ್ಳದ ಹಿನ್ನೆಲೆ ಆಕೆಯ ತಾಯಿ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದ ಮಹಿಳೆ 2024 ಮಾರ್ಚ್‌ನಲ್ಲಿ ಬೆಂಗಳೂರಿನ ಸದಾಶಿವ ನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಬಳಿಕ ಈ ಪ್ರಕರಣ ಸಿಐಡಿಗೆ ವರ್ಗಾಯಿಸಲಾಯಿತು. ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ಯಡಿಯೂರಪ್ಪ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.












