ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಸರ್ಕಾರ ಅಕ್ರಮ ಡಿನೋಟಿಫೈ ಅಸ್ತ್ರ ಬಿಟ್ಟಿರುವ ಬೆನ್ನಲ್ಲೇ ರಾಜ್ಯಪಾಲರು ಕೆಂಪಣ್ಣ ಆಯೋಗದ ವರದಿ ಬಗ್ಗೆ ಮಾಹಿತಿ ಕೇಳಿದ್ದಾರೆ. ವರದಿ ನೀಡುವಂತೆ ರಾಜ್ಯಪಾಲರ ನಿರ್ದೇಶನ ಮಾಡಿದ್ದು, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಡಿಸಿಎಂ ಡಿಕೆ ಶಿವಕುಮಾರ್‌ಗೆ ದಾಖಲೆಗಳ ಸಮೇತ ಸವರಿ ಸಲ್ಲಿಕೆ ಮಾಡಿದ್ದಾರೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ರಾಜೇಶ್ ಸೂಳಿಕೇರಿ ಅನಧಿಕೃತ ಟಿಪ್ಪಣಿ ಹೊರಡಿಸಿದ್ದಾರೆ. ಸೆಪ್ಟಂಬರ್ 11 ರಂದು ಡಿ.ಕೆ ಶಿವಕುಮಾರ್‌ಗೆ ಆಯೋಗದ ವರದಿ ಹಾಗು ದಾಖಲೆಗಳು ಸಲ್ಲಿಕೆ ಆಗಿದೆ.
ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಂಡಿದ್ದ 541 ಎಕರೆ ಜಮೀನಿನಲ್ಲಿ 2014ರಲ್ಲಿ ಸಿಎಂ ಸಿದ್ದರಾಮಯ್ಯ ಅಕ್ರಮವಾಗಿ ಡಿನೋಟಿಫೈ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಡಿನೋಟಿಫೈ ಬಳುವಳಿಯಾಗಿ ಹ್ಯೂಬ್ಲೋಟ್ ವಾಚ್ ಗಿಫ್ಟ್ ಪಡೆದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ನ್ಯಾಯಮೂರ್ತಿ ಕೆಂಪಣ್ಣ ನೇತೃತ್ವದ ಆಯೋಗ 1,861 ಪುಟಗಳ ವರದಿ ಸಲ್ಲಿಕೆ ಮಾಡಿತ್ತು. ಆದರೆ ಆಯೋಗದ ವರದಿಯನ್ನ ವಿಧಾನಸಭೆಯಲ್ಲಿ ಮಂಡನೆ ಮಾಡದ ಸಿಎಂ ಸಿದ್ದರಾಮಯ್ಯ, ಮೌನಕ್ಕೆ ಶರಣಾಗಿದ್ದರು.
ಮುಡಾ ಕೇಸ್‌ಗೆ ತಿರುಗೇಟು ಕೊಟ್ಟ ಸರ್ಕಾರ, ಗಂಗೇನಹಳ್ಳಿ ಡಿನೋಟಿಫೈ ಅಸ್ತ್ರ ಪ್ರಯೋಗಿಸಿತ್ತು. ಇದೀಗ ರಾಜ್ಯಪಾಲರು ಕೆಂಪಣ್ಣ ವರದಿ ನೀಡುವಂತೆ ಪತ್ರ ಬರೆದಿದ್ದಾರೆ. ಅರ್ಕಾವತಿ ರೀಡು ಬಗ್ಗೆ ರಾಜ್ಯಪಾಲರು ವರದಿ ಕೇಳಿದ ವಿಚಾರದ ಬಗ್ಗೆ ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಮಾತನಾಡಿ, ಇದು ಒಳ್ಳೆಯದೇ ಅಲ್ಲವಾ.? ಎಂದಿದ್ದಾರೆ. ಕಾಂಗ್ರೆಸ್ ಅವರಿಗೆ ಯಾವುದೂ ಸರಿಯಲ್ಲ. ಯಾರೂ ಕೇಳದೆ ಕೆಂಪಣ್ಣ ಆಯೋಗ ಮಾಡಿದ್ರು. ಸಿದ್ದರಾಮಯ್ಯ ಬಹಳ ಪ್ರಾಮಾಣಿಕರು. ಯಾಕಿಷ್ಟು ಆತಂಕ ಎಂದು ವ್ಯಂಗ್ಯವಾಡಿದ್ದಾರೆ. ಸಾಮಾನ್ಯ ವ್ಯಕ್ತಿಗಳ ಸಾಕ್ಷಿ ಕೇಳ್ತಾರೆ. ನೀವು ಬಹಳ ಪ್ರಾಮಾಣಿಕ ವ್ಯಕ್ತಿ. ತನಿಖೆಗೆ ಕೊಡಿ ಅಂತ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
ಯಡಿಯೂರಪ್ಪ, ಕುಮಾರಸ್ವಾಮಿ ವಿರುದ್ಧದ ಡಿ ನೋಟಿಫಿಕೇಶನ್ ಪ್ರಕರಣದ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಲೋಕಾಯುಕ್ತರು ತನಿಖೆ ಕೈಗೆತ್ತಿಕೊಂಡಿರುವುದು ಒಳ್ಳೆಯದು. ಈ ಪ್ರಕರಣದಲ್ಲಿ ಸ್ಪಷ್ಟವಾದ ಮಾಹಿತಿ ಇದೆ. ಕುಮಾರಸ್ವಾಮಿ ಅವರು ಬಹಳ ಜೋರಾಗಿ ಮಾತನಾಡುತ್ತಾರೆ. ಈಗ ಸತ್ಯಾಸತ್ಯತೆ ಅವರ ಮುಂದೆಯೇ ಇದೆ. ಯಾರ ಹೆಸರಿಗೆ ಡಿನೋಟಿಫಿಕೇಶನ್ ಮಾಡಿದ್ದರು. ಯಾರಿಗೆ ಈಗ ಜಾಗ ಹೋಗಿದೆ..? ಜಾಗದ ಜಿಪಿಎ ಯಾರ ಬಳಿ ಇತ್ತು. ಇದನ್ನ ಯಾರು ಪ್ರಾರಂಭ ಮಾಡಿದ್ರು..? ಅಂತಿಮವಾಗಿ ಇದನ್ನ ಯಾರು ಮಾಡಿಸಿಕೊಟ್ಟರು. ಎಲ್ಲಾ ಸತ್ಯಾಸತ್ಯತೆ ಬಗ್ಗೆ ಕುಮಾರಸ್ವಾಮಿ ಹೇಳಬೇಕು ಎಂದು ಒತ್ತಾಯಿಸಿದ್ದಾರೆ.