ಜೀವನದಿ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯಲ್ಲಿ ನಾಳೆ ಬೆಳಿಗ್ಗೆ 7:40 ಗಂಟೆಗೆ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಜಿಲ್ಲಾಡಳಿತ ಈ ಪವಿತ್ರ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಯನ್ನು ಕೈಗೊಂಡಿದೆ.
ಈಗಾಗಲೇ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಹೂವಿನ ಅಲಂಕಾರ ನಡೆಯುತ್ತಿದೆ. ತಲಕಾವೇರಿಯಲ್ಲಿ ಸ್ವಚ್ಛತಾ ಕಾರ್ಯ ಹಾಗೂ ವಿದ್ಯುತ್ ದೀಪ ಅಲಂಕಾರ, ಧ್ವನಿವರ್ಧಕ ಜೋಡಣೆ, ಪಾರ್ಕಿಂಗ್ ವ್ಯವಸ್ಥೆ, ಸಿದ್ಧತಾ ಕಾರ್ಯ ನಡೆದಿದೆ.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕಾರ್ಯಕ್ಕೆ ಸಿಬ್ಬಂದಿಗಳನ್ನು ಇಂದು ಮಧ್ಯಾಹ್ನದಿಂದಲೇ ನಿಯೋಜಿಸಲಾಗುತ್ತಿದೆಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ದೇವಾಲಯದ ಆವರಣದಲ್ಲಿ ಪ್ರತಿ ವರ್ಷದಂತೆ ಕೊಡಗು ಏಕೀಕರಣ ರಂಗದ ವತಿಯಿಂದ ಒಂದು ತಿಂಗಳಗಳ ಕಾಲ ಉಪಹಾರ ಹಾಗೂ ಭೋಜನ ವ್ಯವಸ್ಥೆಗೆ ಸಕಲ ಸಿದ್ಧತೆಗಳು ನಡೆದಿದೆ. ವ್ಯವಸ್ಥಾಪನ ಸಮಿತಿ ವತಿಯಿಂದ ಭಾಗಮಂಡಲದಲ್ಲಿ ಅನಂತರ್ಪಣ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಎಸ್ ಪೊನ್ನಣ್ಣನವರು ಇಂದು ಭೇಟಿ ನೀಡಿ ಸಿದ್ಧತಾ ಕಾರ್ಯಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ಆಡಳಿತ ಅಧಿಕಾರಿಗಳಾದ ಐಶ್ವರ್ಯ ಹಾಗೂ ದೇವಾಲಯದ ಕಾರ್ಯನಿರ್ವಣಾಧಿಕಾರಿಗಳಾದ ಚಂದ್ರಶೇಖರ್, ಜಾತ್ರೆಗೆ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
ತಲಕಾವೇರಿ ಭಾಗಮಂಡಲದಲ್ಲಿ ಅರ್ಚಕರ ತಂಡ ಧಾರ್ಮಿಕ ವಿಧಿ ವಿಧಾನಗಳನ್ನು ಅನುಷ್ಠಾನ ಗೊಳಿಸಲು ಸಿದ್ಧತೆ ನಡೆದಿದೆ. ಒಟ್ಟಿನಲ್ಲಿ ಈ ಬಾರಿ ಬೆಳಗಿನ ಜಾವ ತೀರ್ಥೋದ್ಭವವಾಗುತ್ತಿದ್ದು ನಾಡಿಗೆ ಒಳಿತಾಗಲಿದೆ ಎಂಬ ಪ್ರತೀತಿ ಇದ್ದು ಭಕ್ತಾದಿಗಳು ಕೂಡ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ.