ನ್ಯಾ. ಕೆಂಪಣ್ಣ ಆಯೋಗದ ವರದಿ ಪ್ರಸ್ತಾಪಿಸಿ, ಕಾಂಗ್ರೆಸ್ ಭ್ರಷ್ಟಾಚಾರ ಪ್ರಸ್ತಾಪಿಸಿದ ಬೊಮ್ಮಾಯಿ
ಬೆಂಗಳೂರು: ಭ್ರಷ್ಟಾಚಾರದ ವಿಷಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪದಲ್ಲಿ ತೊಡಗಿದ್ದ ಕಾಂಗ್ರೆಸ್ ಪಕ್ಷವನ್ನು ಮುಖ್ಯಮಂತ್ರಿ ಬಸವರಾಜ್.ಎಸ್. ಬೊಮ್ಮಾಯಿರವರು ವಿಧಾನಸಭೆಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿ ಮಾತನಾಡಿದರು.
ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಿ ಎಸಿಬಿ ಮೂಲಕ 59 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾದ ವಿಷಯವನ್ನು ಹಾಗೂ ಅರ್ಕಾವತಿ ಬಡಾವಣೆ ಹೆಸರಿನಲ್ಲಿ ಡಿ ನೋಟಿಫಿಕೇಷನ್ ಕುರಿತು ನ್ಯಾ.ಕೆಂಪಣ್ಣ ಆಯೋಗದ ವರದಿಯನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು “ನೀವು ಭ್ರಷ್ಟರಾಗಿದ್ದಲ್ಲದೇ ವ್ಯವಸ್ಥೆಯನ್ನೂ ಭ್ರಷ್ಟಗೊಳಿಸಿದ್ದೀರಿ” ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಾವು ಅಧಿಕಾರಕ್ಕೆ ಬಂದ ನಂತರ ಲೋಕಾಯುಕ್ತವನ್ನು ಪುನರ್ ಸ್ಥಾಪಿಸಿದ್ದು, ಎಲ್ಲಾ ಅಧಿಕಾರವನ್ನು ನೀಡಿದ್ದೇವೆ. ಕಾಂಗ್ರೆಸ್ ಆಡಳಿತ ಅವಧಿಯ ಎಲ್ಲಾ ಭ್ರಷ್ಟಾಚಾರದ ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಿ ತಪ್ಪಿತಸ್ಥರನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂದು ಬೊಮ್ಮಾಯಿ ಘೋಷಿಸಿದರು.
ಹೈಕೋರ್ಟ್ ನ್ಯಾಯಾಧೀಶರೇ ಲೋಕಾಯುಕ್ತವನ್ನು ಪುನಃ ಆರಂಭಿಸಿ ಎಸಿಬಿ ಯನ್ನು ಮುಚ್ಚುವಂತೆ ಆದೇಶ ನೀಡಿದ್ದಾರೆ. ತನಿಖೆ ಬಾಕಿಯಿರುವ ಪ್ರಕರಣಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದಲೇ ಎಸಿಬಿ ರಚನೆಯಾಗಿದೆ. ಇದರ ಹಿಂದೆ ಉನ್ನತ ಹುದ್ದೆಯಲ್ಲಿರುವ ರಾಜಕಾರಣಿಗಳು ಮತ್ತು ಅಧಿಕಾರಿಶಾಹಿಯನ್ನು ರಕ್ಷಿಸುವ ಉದ್ದೇಶವಿದೆ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿರುವುದನ್ನು ಮುಖ್ಯಮಂತ್ರಿಗಳು ಕಾಂಗ್ರೆಸ್ ಕಟುಶಬ್ದಗಳಲ್ಲಿ ಖಂಡಿಸಿದರು.
ಕಾಂಗ್ರೆಸ್ನ ಕೆ.ಜೆ.ಜಾರ್ಜ್, ನ್ಯಾಯಾಧೀಶರ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕಾಗಿತ್ತು ಎಂದು ಸಲಹೆ ನೀಡಲು ಮುಂದಾದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು ಎಲ್ಲಾ ಭ್ರಷ್ಟಾಚಾರದ ಪ್ರಕರಣಗಳನ್ನು ಕಾಂಗ್ರೆಸ್ ಅವಧಿಯಲ್ಲಿ ಮುಚ್ಚಿಹಾಕಿದ್ದಾಗಿ ಜಾರ್ಜ್ ಅವರೇ ಒಪ್ಪಿಕೊಂಡಿದ್ದಾರೆ ಎಂದು ಟೀಕಿಸಿದರು.
ಅರ್ಕಾವತಿ ಬಡಾವಣೆಯಲ್ಲಿ ಒಂದಿಂಚೂ ಜಮೀನನ್ನು ಡಿ-ನೋಟಿಫೈ ಮಾಡಿಲ್ಲ ಎಂದು ಈ ಮೊದಲು ಚರ್ಚೆಯಲ್ಲಿ ಪಾಲ್ಗೊಂಡಿದ್ದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಹೇಳಿಕೆಗೆ ಎದಿರೇಟು ನೀಡಿದ ಬೊಮ್ಮಾಯಿಯವರು ನ್ಯಾ.ಕೆಂಪಣ್ಣ ಆಯೋಗದ ವರದಿಯ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಪೇಚಿಗೆ ಸಿಲುಕಿಸಿದರು. ನ್ಯಾ.ಕೆಂಪಣ್ಣರವರು ನೀಡಿದ ವರದಿಯಲ್ಲಿ ರಾಜ್ಯಕ್ಕೆ ಉಂಟಾದ ಹಾನಿಯ ಅಂಶವನ್ನು ಕಾಂಗ್ರೆಸ್ ಸರ್ಕಾರ ಹೊರತುಪಡಿಸಿ ಉಳಿದಂತೆ ರೀ-ಡೂ ಹೆಸರಿನಲ್ಲಿ 852ಎಕರೆ ಜಮೀನನ್ನು ಡಿ-ನೋಟಿಫೈ ಮಾಡಿತ್ತು. ಇದು ಕೆಲವು ಹಿತಾಸಕ್ತಿಗಳಿಗೆ ಅನುಕೂಲ ಮಾಡಿಕೊಡುವ ಮಾಯಾಜಾಲ, ಅರ್ಕಾವತಿ ಬಡಾವಣೆ ರಚನೆಯೇ ಒಂದು ದೊಡ್ಡ ಹಗರಣ ಎನ್ನುವ ಅಂಶವನ್ನು ನ್ಯಾ.ಕೆಂಪಣ್ಣ ಅವರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆಂದು ಮುಖ್ಯಮಂತ್ರಿಯವರು ಬಹಿರಂಗ ಪಡಿಸಿದರು. ಈ ವರದಿ ಅಂದಿನ ಸಚಿವ ಸಂಪುಟ ಸಭೆಯ ಮುಂದೆ ಬಂದಿದ್ದರೂ ಅದನ್ನು ಮುಚ್ಚಿಟ್ಟಿದ್ದು ಏಕೆ ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಭ್ರಷ್ಟಾಚಾರದಿಂದ ಜನ ಸಾಮಾನ್ಯರಿಗೆ ಉಂಟಾಗುತ್ತಿದ್ದ ತೊಂದರೆಯನ್ನು ನಿವಾರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಜನ ಸಾಮಾನ್ಯರಿಗೆ ಸರ್ಕಾರಿ ಸೇವೆಗಳನ್ನು ನೇರವಾಗಿ ತಲುಪಿಸಲಾಗುತ್ತಿದೆ. ಗ್ರಾಮ ಒನ್ ಮೂಲಕ ಈವರೆಗೆ 1.5ಕೋಟಿ ಜನರಿಗೆ ಸರ್ಕಾರದ ಸೇವೆಗಳನ್ನು ಒದಗಿಸಲಾಗಿದ್ದು, ಈ ವರ್ಷ ಇದನ್ನು 3.5 ಕೋಟಿ ಜನರಿಗೆ ವಿಸ್ತರಿಸುವ ಗುರಿ ಹೊಂದಿರುವುದಾಗಿ ಮುಖ್ಯಮಂತ್ರಿಯವರು ಪ್ರಕಟಿಸಿದರು.