• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಕಾರ್ಪೋರೇಟ್‌ ಆರ್ಥಿಕತೆಯೂ ಕನ್ನಡಿಗರ ಉದ್ಯೋಗವೂ

ಪ್ರತಿಧ್ವನಿ by ಪ್ರತಿಧ್ವನಿ
October 6, 2024
in Top Story, ಅಂಕಣ, ಇದೀಗ, ಕರ್ನಾಟಕ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ, ಸರ್ಕಾರಿ ಗೆಜೆಟ್
0
Share on WhatsAppShare on FacebookShare on Telegram

ಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕತೆಯಲ್ಲಿ ಉದ್ಯೋಗ-ಉದ್ಯೋಗಿ ಎರಡೂ ಸರಕುಗಳೇ ಆಗುತ್ತವೆ.

ADVERTISEMENT

ಭಾರತ ಒಪ್ಪಿಕೊಂಡಿರುವ ಹಾಗೂ ಬಹುತೇಕ ಮುಖ್ಯವಾಹಿನಿಯ ಎಲ್ಲ ರಾಜಕೀಯ ಪಕ್ಷಗಳೂ ಮೌನವಾಗಿ ಅನುಕರಿಸುತ್ತಿರುವ ನವ ಉದಾರವಾದಿ ಆರ್ಥಿಕತೆ ಮತ್ತು ಅದರಿಂದ ನಿರ್ದೇಶಿಸಲ್ಪಡುವ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕ ನೀತಿಗಳು ದೇಶದಾದ್ಯಂತ ಉದ್ಯೋಗಾವಕಾಶಗಳನ್ನು ಪಲ್ಲಟಗೊಳಿಸಿರುವುದು ಸುಸ್ಪಷ್ಟ. ವ್ಯಾಸಂಗ ಮುಗಿಸಿ ಉದ್ಯೋಗಕ್ಕಾಗಿ ಅಲೆಯುವ ಒಂದು ವರ್ಗ, ಶಿಕ್ಷಣದ ಸವಲತ್ತುಗಳಿಂದ ವಂಚಿತರಾಗಿಯೇ ದೈಹಿಕ ದುಡಿಮೆಯನ್ನು ಅವಲಂಬಿಸಿ ವಲಸೆ ಹೋಗುವ ಒಂದು ಶ್ರಮಿಕ ವರ್ಗ ಹಾಗೂ ಸಾಂವಿಧಾನಿಕ ಸೌಲಭ್ಯಗಳ ಪೂರಣ ಫಲಾನುಭವಿಗಳಾಗಿ ಉನ್ನತ ಶಿಕ್ಷಣ ಪಡೆದು ʼಉತ್ತಮ ನೌಕರಿʼಗಾಗಿ ಹಾತೊರೆಯುವ ಒಂದು ವರ್ಗ, ಈ ಮೂರೂ ವರ್ಗಗಳಲ್ಲಿ ನಿರುದ್ಯೋಗ ಒಂದು ಸಮಸ್ಯೆಯಾಗಿರುವುದು ಬಂಡವಾಳಶಾಹಿ ಸೃಷ್ಟಿಸುವ ಸಂಕೀರ್ಣತೆಗಳನ್ನು ಎತ್ತಿ ತೋರಿಸುತ್ತದೆ. ಈ ವರ್ಗಗಳನ್ನು ಮೀರಿದ ಗ್ರಾಮೀಣ ದುಡಿಮೆಯನ್ನೇ ಅವಲಂಬಿಸುವ ಕೃಷಿ-ಕೃಷಿಯೇತರ ಕಾರ್ಮಿಕರು ಉದ್ಯೋಗಗಳ ಸುತ್ತ ನಿರ್ಮಾಣವಾಗುವ ಸಂಕಥನಗಳಿಂದ ದೂರವೇ ಉಳಿಯುತ್ತಾರೆ.
ಕರ್ನಾಟಕದಲ್ಲಿ ಅಥವಾ ಯಾವುದೇ ರಾಜ್ಯದಲ್ಲಿ ಪಕ್ಷಾತೀತವಾಗಿ ಕಾಣಬಹುದಾದ ಒಂದು ಆಡಳಿತ ನೀತಿ ನಿರೂಪಣೆಯ ಲಕ್ಷಣ ಎಂದರೆ ನವ ಉದಾರವಾದಿ ಆರ್ಥಿಕ ನೀತಿಗಳು ಮತ್ತು ಅದಕ್ಕೆ ಪೂರಕವಾದ ಕಾಯ್ದೆ ಕಾನೂನುಗಳು. ಕೇಂದ್ರ ಸರ್ಕಾರ ಜಾರಿಗೊಳಿಸಿದ ನೂತನ ಕಾರ್ಮಿಕ ಸಂಹಿತೆಗಳ ಅಡಿಯಲ್ಲೇ ಉದ್ಯೋಗ ನೀತಿಗಳನ್ನು ರೂಪಿಸುವ ರಾಜ್ಯ ಸರ್ಕಾರಗಳು ಈಗ ದಿನಕ್ಕೆ 12 ಗಂಟೆ ದುಡಿಮೆಯನ್ನು ಬಹುತೇಕವಾಗಿ ಒಪ್ಪಿಕೊಂಡಿವೆ. ಸಮಾಜವಾದಿ ಮುಖ್ಯಮಂತ್ರಿಯನ್ನು ಹೊಂದಿರುವ ಕರ್ನಾಟಕ ಇನ್ನೂ ಒಂದುಹೆಜ್ಜೆ ಮುಂದೆ ಹೋಗಿ ಐಟಿ ಕ್ಷೇತ್ರದಲ್ಲಿ ದಿನಕ್ಕೆ 14 ಗಂಟೆಗಳ ದುಡಿಮೆಯನ್ನು ಜಾರಿಗೊಳಿಸಲೆತ್ನಿಸುತ್ತಿದೆ. ಇದು ಬಂಡವಾಳಶಾಹಿ ಆರ್ಥಿಕ ಮಾದರಿಯ ನೇರ ಪರಿಣಾಮವೇ ಆಗಿದ್ದು, ಸ್ಥಳೀಯ/ವಿದೇಶಿ ಬಂಡವಾಳದ ಒಳಹರಿವು ಹಾಗೂ ಮೂಲಸೌಕರ್ಯಗಳಲ್ಲಿ ಅದರ ಹೂಡಿಕೆಯನ್ನೇ ಆಧರಿಸುವ ರಾಜ್ಯಗಳ ಆರ್ಥಿಕತೆ ದುಡಿಯುವ ವರ್ಗಗಳ ಹಿತಾಸಕ್ತಿಗಳನ್ನು ಅನುಷಂಗಿಕವಾಗಿ ಮಾತ್ರವೇ ಪರಿಗಣಿಸುತ್ತವೆ.
ರಾಜ್ಯದ ಆರ್ಥಿಕ ಪ್ರಗತಿ
2022-23ರ ಆರ್ಥಿಕ ಸಮೀಕ್ಷೆಯ ಅನುಸಾರ ಕರ್ನಾಟಕದಲ್ಲಿ 5500 ಮಾಹಿತಿ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಪ್ರೇರಿತ ಸೇವಾ ಉದ್ದಿಮೆಗಳು (IT/ITES) ಕಾರ್ಯನಿರ್ವಹಿಸುತ್ತಿವೆ. ಇವುಗಳ ಪೈಕಿ 750 ಬಹುರಾಷ್ಟ್ರೀಯ ಕಂಪನಿಗಳು ರಾಜ್ಯದಿಂದ 58 ಬಿಲಿಯನ್‌ ಡಾಲರ್‌ ಮೌಲ್ಯದಷ್ಟು ಸರಕುಗಳನ್ನು ರಫ್ತು ಮಾಡುತ್ತಿವೆ. ಈ ಔದ್ಯಮಿಕ ವಲಯದಲ್ಲಿ 12 ಲಕ್ಷ ವೃತ್ತಿಪರರು, ಅಂದರೆ ಸಾಫ್ಟ್‌ವೇರ್/ಹಾರ್ಡ್‌ವೇರ್‌ ಇಂಜಿನಿಯರ್‌ಗಳು, ಡಿಜಿಟಲ್‌ ಕಾರ್ಮಿಕರು ಇತ್ಯಾದಿ, ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೊಂದೆಡೆ ಈ ಔದ್ಯಮಿಕ ಜಗತ್ತಿನಿಂದ 31 ಲಕ್ಷ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಐಟಿ ಕ್ಷೇತ್ರವು ರಾಜ್ಯದ ಜಿಡಿಪಿಗೆ ಶೇಕಡಾ 24ರಷ್ಟು ಪಾಲನ್ನು ಒದಗಿಸುತ್ತಿದೆ. ಕೃಷಿ ಮತ್ತು ಇತರ ಸಹ ಚಟುವಟಿಕೆಗಳಿಂದ ಶೇಕಡಾ 15ರಷ್ಟು, ಕೈಗಾರಿಕೆ/ತಯಾರಿಕಾ ಕ್ಷೇತ್ರದಿಂದ ಶೇಕಡಾ 13.3ರಷ್ಟು ಕೊಡುಗೆ ಹರಿದುಬರುತ್ತಿದೆ. 2019ರ ಅಕ್ಟೋಬರ್‌ನಿಂದ 2022ರ ಡಿಸೆಂಬರ್‌ವರೆಗೆ ಕರ್ನಾಟಕಕ್ಕೆ ಮಹಾರಾಷ್ಟ್ರದ ನಂತರ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹರಿದುಬಂದಿದೆ. ಈ ಅವಧಿಯಲ್ಲಿ ಭಾರತಕ್ಕೆ ಪ್ರವೇಶಿಸಿದ ವಿದೇಶಿ ನೇರ ಬಂಡವಾಳದಲ್ಲಿ ಕರ್ನಾಟಕದ ಪಾಲು ಶೇಕಡಾ 24ರಷ್ಟಿದೆ.
ಕರ್ನಾಟಕದ ಕ್ಷಿಪ್ರಗತಿಯ ಅಭಿವೃದ್ಧಿ ಹಾಗೂ ಮೇಲ್ಮುಖೀ ಚಲನೆಗೆ ಮೂಲ ಕಾರಣ ರಾಜ್ಯವು ಹೊಂದಿರುವ ಸಂಪರ್ಕ ಮಾರ್ಗಗಳು. ಎಲ್ಲ ಪ್ರಮುಖ ಮಾರುಕಟ್ಟೆಗಳೊಡನೆಯೂ ಸಂಪರ್ಕ ಸಾಧಿಸಿರುವ ಕರ್ನಾಟಕದಲ್ಲಿ ಎರಡು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ, 47 ರಾಷ್ಟ್ರೀಯ, 145 ರಾಜ್ಯ ಹೆದ್ದಾರಿಗಳಿವೆ. 3,818 ಕಿಲೋಮೀಟರ್‌ ರೈಲು ಮಾರ್ಗಗಳಿವೆ. ಸಮುದ್ರ ತೀರದ 320 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಹತ್ತು ಸಣ್ಣ ಬಂದರುಗಳು, ಮಂಗಳೂರಿನ ಒಂದು ಬೃಹತ್‌ ಬಂದರು ಕಾರ್ಯನಿರ್ವಹಿಸುತ್ತಿವೆ. 2022-23ರ ಅವಧಿಯಲ್ಲಿ ಕರ್ನಾಟಕದ ಆರ್ಥಿಕತೆಯು ಶೇಕಡಾ 7.9ರಷ್ಟು ಬೆಳವಣಿಗೆಯನ್ನು ಕಂಡಿದೆ. ಇದೇ ಅವಧಿಯಲ್ಲಿ ಭಾರತದ ಜಿಡಿಪಿ ಅಭಿವೃದ್ಧಿ ದರ ಶೇಕಡಾ 7ರಷ್ಟಿತ್ತು. ಕಳೆದ ವರ್ಷದಲ್ಲೂ ರಾಜ್ಯದ ಜಿಡಿಪಿ ಶೇಕಡಾ 11ರಷ್ಟು ವೃದ್ಧಿಯಾಗಿತ್ತು, ದೇಶದ ಜಿಡಿಪಿ ಶೇಕಡಾ 8.7ರಷ್ಟು ವೃದ್ಧಿಯಾಗಿತ್ತು. ಈ ಬೆಳವಣಿಗೆಯ ಫಲವೇ ಕರ್ನಾಟಕದ ತಲಾ ಆದಾಯದ ಪ್ರಮಾಣವೂ ಹೆಚ್ಚಾಗುತ್ತಿರುವುದನ್ನು ಗಮನಿಸಬಹುದು. 2023ರಲ್ಲಿ ಕರ್ನಾಟಕ ತಲಾ ಆದಾಯ 2013ಕ್ಕೆ ಹೋಲಿಸಿದರೆ ಶೇಕಡಾ 294ರಷ್ಟು ವೃದ್ಧಿಯಾಗಿ 3,01,000 ರೂಗಳಷ್ಟಾಗಿತ್ತು. 2013ರಲ್ಲಿ ಇದು 76,578 ರೂಗಳಷ್ಟಿತ್ತು. ರಾಜ್ಯದ ತಲಾ ಆದಾಯವು 2012ರ ನಂತರ ನಿರಂತರವಾಗಿ ಏರುತ್ತಲೇ ಇದ್ದು, ಭಾರತದ ಪ್ರಮುಖ ರಾಜ್ಯಗಳ ಪೈಕಿ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ನಿರುದ್ಯೋಗ ಪ್ರಮಾಣವೂ ರಾಜ್ಯದಲ್ಲಿ ಕೆಳಸ್ತರದಲ್ಲಿದ್ದು ರಾಷ್ಟ್ರೀಯ ಮಟ್ಟದ ನಿರುದ್ಯೋಗ ದರ ಶೇಕಡಾ 7.8ರಷ್ಟಿದ್ದರೆ ಕರ್ನಾಟಕದಲ್ಲಿ 2023ರ ಮಾರ್ಚ್‌ ವೇಳೆಗೆ ಶೇಕಡಾ 2.3ರಷ್ಟಿದೆ.
ಪ್ರಗತಿಯ ಫಲಾನುಭವಿಗಳು ಯಾರು ?
ಈ ಆರ್ಥಿಕ ಪ್ರಗತಿ ಮತ್ತು ಮಾರುಕಟ್ಟೆ ಬೆಳವಣಿಗೆಯ ನಡುವೆಯೇ ರಾಜ್ಯ ಸರ್ಕಾರ ಮಂಡಿಸಿದ ಎರಡು ಮಸೂದೆಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ. ಕರ್ನಾಟಕ ರಾಜ್ಯ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸುವ ಮಸೂದೆ ಹಾಗೂ ಐಟಿ ವಲಯದಲ್ಲಿ ದುಡಿಮೆಯ ಅವಧಿಯನ್ನು ದಿನಕ್ಕೆ 14 ಗಂಟೆಗಳಿಗೆ ನಿಗದಿಪಡಿಸುವ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಕಾಯ್ದೆ 2023 ಎರಡು ಆಯಾಮಗಳ ಪ್ರತಿರೋಧ ಎದುರಿಸಿವೆ. ಐಟಿ ವಲಯದಲ್ಲಿ ದುಡಿಮೆಯ ಅವಧಿಯ ಹೆಚ್ಚಳವನ್ನು ಕಾರ್ಮಿಕ ಸಂಘಟನೆಗಳು ವಿರೋಧಿಸುತ್ತಿದ್ದರೆ, ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಮೀಸಲಾತಿ ನೀತಿಗೆ ಔದ್ಯಮಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮೋಹನ್‌ ದಾಸ್‌ ಪೈ ಅವರಂತಹ ಉದ್ಯಮಿಗಳು ಈ ನೀತಿ ಜಾರಿಯಾದಲ್ಲಿ ಸಾಫ್ಟ್‌ವೇರ್ ಉದ್ದಿಮೆಗಳು ರಾಜ್ಯದಿಂದ ಹೊರಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.‌
ಕಾರ್ಪೋರೇಟ್‌ ಆರ್ಥಿಕತೆಯ ಕೇಂದ್ರ ಬಿಂದು ಆಗಿರುವ ಬೆಂಗಳೂರು ನಗರ ಸಿಲಿಕಾನ್‌ ಸಿಟಿ ಎಂದೇ ಹೆಸರಾಗಿದ್ದು, ಐಟಿ ವಲಯಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿಯೇ ರಸ್ತೆ, ಮೇಲ್‌ ಸೇತುವೆ, ಮೆಟ್ರೋ, ಸುರಂಗ ಮಾರ್ಗಗಳು ಮೊದಲಾದ ಮೂಲ ಸೌಕರ್ಯಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿದೆ. ಈ ಐಟಿ ವಲಯದ ಉತ್ಕರ್ಷದ ಪರಿಣಾಮವಾಗಿಯೇ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಹಾಗೂ ರಿಯಲ್‌ ಎಸ್ಟೇಟ್‌ ಉದ್ದಿಮೆಯೂ ಊರ್ಜಿತವಾಗಿದ್ದು ರಾಜ್ಯದ ಜಿಡಿಪಿ ವೃದ್ಧಿಗೆ ಪ್ರಮಖ ಕೊಡುಗೆಯನ್ನೂ ನೀಡಿದೆ. ಆದರೆ ನವ ಉದಾರವಾದವು ನಿರ್ದೇಶಿಸುವ ಅಭಿವೃದ್ಧಿ ಮಾದರಿಯಲ್ಲಿ ಕೈಗಾರಿಕೆ ಅಥವಾ ತಯಾರಿಕೆ ವಲಯಕ್ಕಿಂತಲೂ ಹೆಚ್ಚಾಗಿ ಮೂಲ ಸೌಕರ್ಯಾಭಿವೃದ್ಧಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ಹಾಗಾಗಿ ರಸ್ತೆ/ಹೆದ್ಚಾರಿ/ಎಕ್ಸ್‌ಪ್ರೆಸ್‌ವೇ/ಮೆಟ್ರೋ ಮೊದಲಾದ ನಿರ್ಮಾಣ ಕ್ಷೇತ್ರಕ್ಕೆ ಹೊರ ರಾಜ್ಯಗಳಿಂದ ಬಂಡವಾಳದ ಜೊತೆಗೇ ವಲಸೆ ಕಾರ್ಮಿಕರ ಮಹಾಪೂರವೂ ಹರಿದುಬರುತ್ತಿದೆ.
ಹಾಗಾಗಿ ಸ್ಥಳೀಯರಿಗೆ ಉದ್ಯೋಗ ನೀಡುವ ಒಂದು ಕಾಯ್ದೆ ಯಾವ ಕ್ಷೇತ್ರದಲ್ಲಿ ಕಾರ್ಯಗತವಾಗಲು ಸಾಧ್ಯ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಐಟಿ-ಬಿಟಿ ವಲಯದ ಔದ್ಯಮಿಕ ಒತ್ತಡಕ್ಕೆ ಮಣಿದು ಈಗಾಗಲೇ ರಾಜ್ಯಸರ್ಕಾರ ತನ್ನ ನಿರ್ಧಾರಕ್ಕೆ ತಡೆಯೊಡ್ಡಿದೆ. ಈ ಕಾಯ್ದೆಯನ್ನು ಜಾರಿಗೊಳಿಸಿದರೂ ಅದು ಸಾಂವಿಧಾನಿಕವಾಗಿ ಊರ್ಜಿತವಾಗುವುದಿಲ್ಲ. ಕಾರ್ಪೋರೇಟ್‌ ಬಂಡವಾಳಿಗರು ಈಗಾಗಲೇ ರಾಜ್ಯ ತೊರೆಯುವ ಬೆದರಿಕೆಯನ್ನೂ ಹಾಕಿದ್ದು ಇದರ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ. ಜಿಡಿಪಿ ಅಭಿವೃದ್ಧಿಯನ್ನೇ ಪ್ರಗತಿಯ ಮಾಪಕವನ್ನಾಗಿ ಪರಿಗಣಿಸುವ ಇತರ ನೆರೆ ರಾಜ್ಯಗಳೂ ಸಹ ಕರ್ನಾಟಕದಿಂದ ಹೊರಹೋಗುವ ಬಂಡವಾಳವನ್ನು ಆಹ್ವಾನಿಸಲು ಸದಾ ಸಜ್ಜಾಗಿರುತ್ತವೆ. ಮೇಲಾಗಿ ರಾಜ್ಯದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುತ್ತಿರುವ ಕ್ಷೇತ್ರ ಎಂದರೆ ಡಿಜಿಟಲ್‌ ಪ್ಲಾಟ್‌ಫಾರ್ಮ್ಸ್‌, ಸಾರಿಗೆ ಸಂಚಾರ ಸಾಧನಗಳು ಹಾಗೂ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸುವ ಆನ್‌ಲೈನ್‌ ಮಾರುಕಟ್ಟೆಗಳು.
ಗೋಚರಿಸದ ಶೋಷಕ ಮಾರುಕಟ್ಟೆ
ಓಲಾ, ಊಬರ್‌, Rapido ಮೊದಲಾದ ಸಾರಿಗೆ ಸಾಧನಗಳು, ಅಮೆಜಾನ್‌, ಫ್ಲಿಪ್‌ಕಾರ್ಟ್‌, ರಿಲೈಯನ್ಸ್‌ ಮೊದಲಾದ ಆನ್‌ಲೈನ್‌ ಮಾರುಕಟ್ಟೆಗಳು ಹಾಗೂ ಅಪಾರ ಸಂಖ್ಯೆಯ ವಲಸೆ ಕಾರ್ಮಿಕರು ಕರ್ನಾಟಕದ ಉದ್ಯೋಗ ಮಾರುಕಟ್ಟೆಯಲ್ಲಿ ಪ್ರಧಾನವಾಗಿ ಕಾಣುತ್ತಾರೆ. ಈ ವಲಯಗಳಲ್ಲಿ ಬಹುತೇಕ ಪಾಲನ್ನು ವಲಸೆ ಕಾರ್ಮಿಕರೇ ಪಡೆದಿರುವುದು ವಾಸ್ತವ. ಆಂಧ್ರ ಪ್ರದೇಶದ ರಾಯಲ್‌ ಸೀಮಾ ಪ್ರದೇಶದ ಚಿತ್ತೂರು, ಅನಂತಪುರ, ಸತ್ಯಸಾಯಿ, ಅನ್ನಮಯ್ಯ, ಕಡಪ ಮತ್ತು ಕರ್ನೂಲು ಜಿಲ್ಲೆಗಳಿಂದಲೇ ರಾಜ್ಯದಲ್ಲಿ 50 ಸಾವಿರ ವಲಸೆ ಕಾರ್ಮಿಕರು ದುಡಿಯುತ್ತಿದ್ದಾರೆ. ದಿನಗೂಲಿ ಕಾರ್ಮಿಕರು ಬಹುತೇಕವಾಗಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಮೇಸ್ತ್ರಿಗಳಾಗಿ, ಪ್ಲಂಬರ್‌ಗಳಾಗಿ, ಎಲೆಕ್ಟ್ರಿಷಿಯನ್ಸ್‌ಗಳಾಗಿ ದುಡಿಯುತ್ತಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ನೌಕರಿ ಗಳಿಸಲು ಸಾಧ್ಯವಾಗದವರು ಕರ್ನಾಟಕಕ್ಕೆ ಲಗ್ಗೆ ಇಡುತ್ತಾರೆ.
ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಖಂಡ್‌ ಮತ್ತು ಒಡಿಷಾ ರಾಜ್ಯಗಳಿಂದ ರಾಯಲ್‌ ಸೀಮಾ ಪ್ರದೇಶದ ಗಡಿಯ ಮುಖಾಂತರ ಕರ್ನಾಟಕದೊಳಗೆ ಬರುತ್ತಾರೆ. ರಾಯಲ್‌ಸೀಮಾ ಜಿಲ್ಲೆಗಳಲ್ಲಿರುವ ನಿರ್ಮಾಣ ಕ್ಷೇತ್ರದ ಗುತ್ತಿಗೆದಾರರು ಕರ್ನಾಟಕದಲ್ಲಿ ಕೈಗೊಳ್ಳುವ ನಿರ್ಮಾಣ ಕಾಮಗಾರಿಗಳಲ್ಲಿ ಈ ಕಾರ್ಮಿಕರನ್ನು ನೇಮಿಸಲಾಗುತ್ತದೆ. ಇವರಲ್ಲಿ ಬಹುಪಾಲು ಜನ ರಾಯಲ್‌ಸೀಮೆಯ ತಿರುಪತಿ, ಮದನಪಲ್ಲೆ, ರಾಯಚೋಟಿ, ಕಡಪ ಮತ್ತು ಕರ್ನೂಲ್‌ ಜಿಲ್ಲೆಗಳಲ್ಲಿ ವಾಸ ಮಾಡುತ್ತಾರೆ ಆದರೆ ಅವರ ದುಡಿಮೆ ಕರ್ನಾಟಕದಲ್ಲಿ ಆಗುತ್ತದೆ. ಒಂದು ವೇಳೆ ಸ್ಥಳೀಯರಿಗೆ ನೌಕರಿ ನೀಡುವ ನೀತಿ ಜಾರಿಯಾದರೆ ಈ ಅಗ್ಗದ ಕೂಲಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಬಾಧಿತರಾಗುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ಈ ಅಗ್ಗದ ಕೂಲಿಯನ್ನೇ ಆಧರಿಸಿ ಬಂಡವಾಳ ಕ್ರೋಢೀಕರಣ ಮಾಡುವ ಗುತ್ತಿಗೆದಾರ ಉದ್ದಿಮೆಗಳು ಸಂಕಷ್ಟಕ್ಕೀಡಾಗುತ್ತವೆ. ರಾಜ್ಯ ಸರ್ಕಾರದ ಕಾಯ್ದೆಗೆ ಈ ಕಾರ್ಪೋರೇಟ್‌ ಗುತ್ತಿಗೆದಾರರಿಂದಲೂ ವಿರೋಧ ವ್ಯಕ್ತವಾಗಿದೆ.
ಉತ್ತರ ಭಾರತದಿಂದ ಬಂದಿರುವ 180 ಕೆಲಸಗಾರರನ್ನು ನಿರ್ವಹಿಸುವ ಜನಾರ್ಧನರೆಡ್ಡಿ ಎಂಬ ಉದ್ಯಮಿಯ ಮಾತುಗಳು ಮಾರುಕಟ್ಟೆಯ ಶೋಷಣೆ ಮತ್ತು ಲಾಭಗಳಿಕೆಯ ಒಂದು ಆಯಾಮವನ್ನು ಸೂಚಿಸುತ್ತವೆ. ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಗುತ್ತಿಗೆ ಪಡೆಯುವ ಈ ಉದ್ಯಮಿ ಹತ್ತು ವರ್ಷಗಳ ಹಿಂದೆ ಕೇವಲ ಐವರು ಕಾರ್ಮಿಕರೊಡನೆ ಆರಂಭಿಸಿದ ಉದ್ದಿಮೆ ಇಂದು 180 ಕಾರ್ಮಿಕರನ್ನು ಹೊಂದಿದೆ. “ ಈ ಕಾರ್ಮಿಕರು ಹೆಚ್ಚಿನ ಕೂಲಿ ಏನೂ ಕೇಳುವುದಿಲ್ಲ, ನಿಖರವಾಗಿ ಕರಾರುವಾಕ್ಕಾಗಿ ಕೆಲಸ ಮಾಡುತ್ತಾರೆ, ತಾತ್ಕಾಲಿಕ್‌ ಷೆಡ್‌ಗಳಲ್ಲಿ ವಾಸಿಸುವ ಇವರು ದಿನಕ್ಕೆ ಆರುಗಂಟೆ ನಿದ್ರೆ ಮಾಡಿದರೆ ಸಾಕು ಎನ್ನುತ್ತಾರೆ, ಕುಡಿತ ಮತ್ತಿತರ ದುಶ್ಚಟಗಳಿಂದ ದೂರ ಇರುತ್ತಾರೆ, ನೂರಾರು ಕಿಲೋಮೀಟರ್‌ ದೂರದಲ್ಲಿರುವ ತಮ್ಮ ಕುಟುಂಬದವರ ಬಗ್ಗೆ ಜವಾಬ್ದಾರಿಯಿಂದ ಇರುತ್ತಾರೆ, ಹಾಗಾಗಿ ಈ ಕಾರ್ಮಿಕರು ನಮ್ಮ ಉದ್ಯಮದ ವಿಸ್ತರಣೆಗೆ ನೆರವಾಗುತ್ತಾರೆ ” ಎಂದು ಈ ಉದ್ಯಮಿ ಹೇಳುತ್ತಾರೆ. (Many jobs across the border –Umashankar – The Hindu – 19-8-2024)
“ಉತ್ತರ ಭಾರತದಿಂಧ ವಲಸೆ ಬರುವ ಕಾರ್ಮಿಕರು 300 ರಿಂದ 500 ರೂಗಳ ದಿನಗೂಲಿಗೆ ಕೆಲಸ ಮಾಡಲು ಮುಂದಾಗುತ್ತಾರೆ, ಮೇಲ್ವಿಚಾರಕರು ಜೋರು ಮಾಡಿದರೂ, ನಿಂದಿಸಿದರೂ ನಗುನಗುತ್ತಾ ಕೆಲಸ ಮಾಡುತ್ತಾರೆ ಇದು ಕರ್ನಾಟಕದ ಸ್ಥಳೀಯ ಕಾರ್ಮಿಕರಿಗೆ ಅಥವಾ ನೆರೆ ರಾಜ್ಯಗಳವರಿಗೆ ಒಂದು ಮಾದರಿಯಾಗಬೇಕು ” ಎನ್ನುತ್ತಾರೆ ಓರ್ವ ಸಾಫ್ಟ್‌ ವೇರ್‌ ಇಂಜಿನಿಯರ್.‌ ಕಲಿತ ವರ್ಗದಿಂದ ಬರುವ ಈ ಮಾತುಗಳು ಕರ್ನಾಟಕದಲ್ಲಿ ಉದ್ಯೋಗದ ಹಾಗೂ ಉದ್ಯೋಗಿಗಳ ಸಂಕಟಗಳನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಹಿಂದಿ ಭಾಷಿಕ ರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರು ನಂಬಿಕೆಗೆ ಅರ್ಹರಲ್ಲ ಎಂಬ ಅಭಿಪ್ರಾಯ ಸಂಪೂರ್ಣವಾಗಿ ಹೊರಟುಹೋಗಿದ್ದು ಎಲ್ಲೆಡೆ ಪ್ರಶಂಸೆಗೊಳಗಾಗುತ್ತಿದ್ದಾರೆ ಎನ್ನುತ್ತಾರೆ ಕೋಲಾರದ ಸ್ಟೀಲ್ ಸರಬರಾಜು ಮಾಡುವ ಉದ್ಯಮಿ. ರಾಜ್ಯ ಸರ್ಕಾರದ ಸ್ಥಳೀಯರಿಗೆ ಉದ್ಯೋಗ ಮೀಸಲಿಡುವ ನೀತಿಯಿಂದ ಈ ಅನೌಪಚಾರಿಕ ವಲಯದ ಅಥವಾ ಗಿಗ್‌ ನೌಕರರ ಮೇಲೆ ಹೆಚ್ಚಿನ ಪರಿಣಾಮವನ್ನೂ ಬೀರುವುದಿಲ್ಲ. ಏಕೆಂದರೆ ಕಾನೂನಾತ್ಮಕವಾಗಿ ಇವರನ್ನು ಉದ್ಯೋಗಿ ಎಂದು ಪರಿಗಣಿಸಲಾಗುವುದಿಲ್ಲ. ಬಂಡವಾಳಶಾಹಿಯು ಶ್ರಮ ಮತ್ತು ಶ್ರಮಿಕ ಎರಡನ್ನೂ ಮಾರುಕಟ್ಟೆ ಸರಕು ಎಂದೇ ಭಾವಿಸುತ್ತದೆ ಎನ್ನಲು ಇದಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ.
ಉದ್ಯೋಗ ಮತ್ತು ಕೈಗಾರಿಕೀಕರಣ
ಈ ಹಿನ್ನೆಲೆಯಲ್ಲಿ ನೋಡಿದಾಗ ಕರ್ನಾಟಕದಲ್ಲಿ ಸ್ಥಳೀಯರಿಗೆ ನೌಕರಿ ಒದಗಿಸುವುದೇ ಆದರೆ ಅದನ್ನು ಕೈಗಾರಿಕೆ/ತಯಾರಿಕಾ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮೂಲಕ ಮಾಡಬೇಕಾಗುತ್ತದೆ. ಕಾರ್ಪೋರೇಟ್‌ ಬಂಡವಾಳಕ್ಕಾಗಿ ಹಾತೊರೆಯುವ ಸರ್ಕಾರಗಳು ಈ ಬಂಡವಾಳ ಹೂಡಿಕೆ ಯಾವ ಪ್ರದೇಶ, ಯಾವ ವಲಯ, ಯಾವ ವಾತಾವರಣದಲ್ಲಿ ಸಾಧ್ಯವಾಗುತ್ತದೆ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ Manufacturing ಅಂದರೆ ಉತ್ಪಾದನಾ ಕ್ಷೇತ್ರದಲ್ಲಿ ಅವಕಾಶಗಳನ್ನು ಹೆಚ್ಚಿಸದ ಹೊರತು, ವಿದ್ಯಾಭ್ಯಾಸ ಮುಗಿಸಿ ಹೊರಬರುವ ಲಕ್ಷಾಂತರ ಯುವ ಸಮೂಹಕ್ಕೆ ಸುಭದ್ರ ಜೀವನ ಒದಗಿಸಲು ಸಾಧ್ಯವಾಗುವುದಿಲ್ಲ. ಕನ್ನಡಿಗರ ವರಮಾನ ಹೆಚ್ಚಿಸಬೇಕು ಎಂದಾದಲ್ಲಿ ಉತ್ಪಾದನೆಯ ಪ್ರಮಾಣ ಹೆಚ್ಚಾಗಬೇಕು. ಗ್ರಾಮೀಣ ಭಾಗದಿಂದ ನಗರಕ್ಕೆ ಹರಿದುಬರುವ ವಲಸೆ ಕಾರ್ಮಿಕರ ಸಂಖ್ಯೆಯನ್ನು ನಿಯಂತ್ರಿಸಲು ಗ್ರಾಮೀಣ ಉದ್ಯೋಗ ಮತ್ತು ಕೈಗಾರಿಕೆಗಳನ್ನು ಉತ್ತೇಜಿಸುವಂತಹ ನೀತಿಗಳನ್ನು ರೂಪಿಸಬೇಕು.

ಕಾರ್ಲ್‌ ಮಾರ್ಕ್ಸ್‌ 150 ವರ್ಷಗಳ ಹಿಂದೆಯೇ ಹೇಳಿರುವಂತೆ ಕೈಗಾರಿಕೀಕರಣ ಪ್ರಕ್ರಿಯೆ ಚುರುಕಾಗದೆ ಹೋದಲ್ಲಿ ಯುವ ಸಮೂಹಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಸಾಧ್ಯವಾಗುವುದಿಲ್ಲ. ಗಿಗ್‌ ಕಾರ್ಮಿಕರು ಮತ್ತು ಅನೌಪಚಾರಿಕ ವಲಯದ ದುಡಿಮೆಗಾರರ ಪ್ರಮಾಣವನ್ನು ಆಧರಿಸಿ ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆ ಇರುವುದಾಗಿ ಹೇಳಿದರೂ, ಈ ಎರಡು ಕ್ಷೇತ್ರಗಳಿಂದ ಹೊರತಾದ ಆರ್ಥಿಕತೆಯಲ್ಲಿ ಕನ್ನಡಿಗರು ಉದ್ಯೋಗವಿಲ್ಲದೆ ಪರದಾಡುತ್ತಿರುವುದನ್ನು ಗಮನಿಸಬೇಕಿದೆ. ಶಾಲಾ ಕಾಲೇಜುಗಳಿಂದ ಹೊರಬರುತ್ತಿರುವ ಲಕ್ಷಾಂತರ ಸಂಖ್ಯೆಯ ಯುವಸಮೂಹ, ವ್ಯಾಸಂಗದೊಂದಿಗೇ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ, ವಿತರಣಾ ವಲಯದಲ್ಲಿ (Delivery sector) ಉದ್ಯೋಗ ಮಾಡುತ್ತಿರುವುದನ್ನು ಗಮನಿಸಿದಾಗ, ನವ ಉದಾರವಾದಿ ಆರ್ಥಿಕತೆ ರಾಜ್ಯದ ಬೃಹತ್‌ ಯುವಕೋಟಿಗೆ ಸುಸ್ಥಿರ ಬದುಕನ್ನು ರೂಪಿಸಲು ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.

ಈ ನಿಟ್ಟಿನಲ್ಲಿ ಆಲೋಚನೆ ಮಾಡುವುದಕ್ಕೂ ಆಸ್ಪದ ನೀಡದಂತೆ ಕಾರ್ಪೋರೇಟ್‌ ಔದ್ಯಮಿಕ ಜಗತ್ತು ಚುನಾಯಿತ ಸರ್ಕಾರವನ್ನು ನಿಯಂತ್ರಿಸುತ್ತದೆ. ಈ ನಿಯಂತ್ರಣದಿಂದ ಹೊರಬಂದು, ರಾಜ್ಯದ ಜನತೆಗೆ ಸುಸ್ಥಿರ ಬದುಕು ಕಲ್ಪಿಸುವ ನಿಟ್ಟಿನಲ್ಲಿ, ಸರ್ವತೋಮುಖ-ಸಮತೋಲನದ ಅಭಿವೃದ್ಧಿ ಸಾಧಿಸುವಂತಹ ಆರ್ಥಿಕ ನೀತಿಗಳು ವರ್ತಮಾನದ ಅಗತ್ಯ. ಈ ದಿಕ್ಕಿನಲ್ಲಿ ಸಮಾಜವಾದಿ ಮುಖ್ಯಮಂತ್ರಿಯ ನೇತೃತ್ವದ ಕರ್ನಾಟಕ ಸರ್ಕಾರ ಯೋಚನೆ ಮಾಡುತ್ತಿರುವುದೇ ? ಈ ಜಟಿಲ ಪ್ರಶ್ನೆಗೆ ಉತ್ತರ ಶೋಧಿಸಬೇಕಿದೆ.
(ಕೃಪೆ : ಸಮಾಜಮುಖಿ ಮಾಸಪತ್ರಿಕೆ ಅಕ್ಟೋಬರ್‌ 2024)

Tags: Corporate Companiesನಾ ದಿವಾಕರಪ್ರತಿಧ್ವನಿ
Previous Post

ಸಂಜೌಲಿಯ ಮಸೀದಿಯ ಮೂರು ಅಕ್ರಮ ಮಹಡಿಗಳನ್ನು ನೆಲಸಮಗೊಳಿಸಲಿರುವ ಮಸೀದಿ ಸಮಿತಿ

Next Post

‘ಸಿಎಂ ಬಂದ್ರೆ ನಂಗೇನು..’ ಅಂತ ಡಿವೈಡರ್‌ ಮೇಲೆ ಕಾರು ಹತ್ತಿಸಿದ ಜನಾರ್ದನ ರೆಡ್ಡಿ!

Related Posts

Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
0

ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆ ಲಭ್ಯವಿದ್ದ ಜಲಮೂಲಗಳನ್ನು ಪತ್ತೆ ಮಾಡಿ ಅವುಗಳನ್ನು ಪುನರಜ್ಜೀವಗೊಳಿಸುವ ಮೂಲಕ ನೀರಿನ ಕೊರತೆಯನ್ನು ನೀಗಲು ಕಾರ್ಯಕ್ರಮ ಹಾಕಿಕೊಳ್ಳಬೇಕಾಗಿದೆಯಲ್ಲದೆ, ಆರ್.ಒ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಲು ವಿಶೇಷ...

Read moreDetails

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

October 13, 2025

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025

Kantara Chapter-1: ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಕಾಂತಾರ ಚಾಪ್ಟರ್ 1’ .

October 13, 2025
Next Post

'ಸಿಎಂ ಬಂದ್ರೆ ನಂಗೇನು..' ಅಂತ ಡಿವೈಡರ್‌ ಮೇಲೆ ಕಾರು ಹತ್ತಿಸಿದ ಜನಾರ್ದನ ರೆಡ್ಡಿ!

Recent News

Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
Top Story

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

by ಪ್ರತಿಧ್ವನಿ
October 13, 2025
Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
Top Story

Kantara Chapter-1: ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಕಾಂತಾರ ಚಾಪ್ಟರ್ 1’ .

by ಪ್ರತಿಧ್ವನಿ
October 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada