ದೇಶದಲ್ಲಿ ಮೊದಲ ಕೋವಿಡ್ -19 ಪ್ರಕರಣ ಬೆಳಕಿಗೆ ಬಂದ ಬರೋಬ್ಬರಿ ಒಂದು ವರ್ಷದ ಬಳಿಕ ಇದೀಗ ಶನಿವಾರ ಬೃಹತ್ ಲಸಿಕಾ ಆಂದೋಲನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಆ ಮೂಲಕ ಕರೋನಾ ಮಹಾಮಾರಿಯ ವಿರುದ್ಧದ ಜಗತ್ತಿನ ಅತಿದೊಡ್ಡ ಲಸಿಕಾ ಸಮರ ಭಾರತದಲ್ಲಿ ಆರಂಭಗೊಂಡಿದೆ. ದೇಶದ ಅಪಾರ ಸಾವುನೋವು, ಆರ್ಥಿಕ ಸಂಕಷ್ಟ, ಬಿಕ್ಕಟ್ಟುಗಳನ್ನು ಸೃಷ್ಟಿಸಿ ಹಿಂದೆಂದೂ ಕಂಡು ಕೇಳರಿಯದ ಮಹಾ ಬಿಕ್ಕಟ್ಟಿನಿಂದ ದೇಶವನ್ನು ಹೊರತರುವ ಮಹಾ ಅಭಿಯಾನ ಇದು ಎಂದೇ ಬಣ್ಣಿಸಲಾಗುತ್ತಿದೆ.
ಲಸಿಕಾ ಅಭಿಯಾನದ ಆರಂಭದ ಹಂತದಲ್ಲಿ ಆದ್ಯತೆಯ ಗುಂಪಾದ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಕರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಿಬ್ಬಂದಿ-ಸಹಾಯಕರಿಗೆ ಲಸಿಕೆ ನೀಡಲಾಗುವುದು. ಒಟ್ಟಾರೆ ದೇಶದಲ್ಲಿ ಇರುವ ಅಂತಹ ಸುಮಾರು ಮೂರು ಕೋಟಿ ಮಂದಿಗೆ ಲಸಿಕೆ ನೀಡಲು ಎಲ್ಲಾ ತಯಾರಿಯೊಂದಿಗೆ ಅಭಿಯಾನ ಆರಂಭವಾಗಿದೆ. ಈ ಮೊದಲ ಹಂತದಲ್ಲಿ ದೇಶೀಯವಾಗಿ ಉತ್ಪಾದನೆಯಾಗಿರುವ ಆಕ್ಸ್ಫರ್ಡ್ ಯೂನಿವರ್ಸಿಟಿ ಮತ್ತು ಆಸ್ಟ್ರಾಜೆನೆಕಾ ಸಹಯೋಗದಲ್ಲಿ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಉತ್ಪಾದನೆಯ ಕೋವಾಕ್ಸಿನ್ ಲಸಿಕೆಯನ್ನು ಬಳಸಲಾಗುವುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಲಸಿಕಾ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡುವ ಶನಿವಾರ ಒಂದೇ ದಿನ ದೇಶಾದ್ಯಂತ ಬರೋಬ್ಬರಿ ಮೂರು ಲಕ್ಷ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಅದಕ್ಕಾಗಿ ದೇಶದ ಉದ್ದಗಲಕ್ಕೆ ಸುಮಾರು ಮೂರು ಸಾವಿರ ಲಸಿಕಾ ಕೇಂದ್ರಗಳನ್ನು ನಿರ್ಮಿಸಲಾಗಿದೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಮೋದಿಯವರು ಅಭಿಯಾನಕ್ಕೆ ಚಾಲನೆ ನೀಡುತ್ತಿದ್ದಂತೆ ಈ ಎಲ್ಲಾ ಕೇಂದ್ರಗಳಲ್ಲೂ ಏಕಕಾಲಕ್ಕೆ ಲಸಿಕೆ ನೀಡಿಕೆ ಆರಂಭವಾಗಲಿದೆ. ಕರೋನಾ ಸಂಕಷ್ಟಕ್ಕೆ ಶಾಶ್ವತ ಅಂತ್ಯ ಹಾಡಲು ಇದು ಆರಂಭ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಹೇಳಿದ್ದಾರೆ.
ಮೊದಲ ಹಂತದಲ್ಲಿ ಲಸಿಕೆ ಪಡೆಯಲಿರುವ ಸರ್ಕಾರಿ ಮತ್ತು ಖಾಸಗೀ ಆರೋಗ್ಯ ಸಿಬ್ಬಂದಿ ಮತ್ತು ಕರೋನಾ ನಿರ್ವಹಣಾ ಮುಂಚೂಣಿ ಸಿಬ್ಬಂದಿಗಳಿಗೆ ಈಗಾಗಲೇ ಮೊಬೈಲ್ ಮೂಲಕ ಮಾಹಿತಿ ನೀಡಲಾಗಿದೆ. ಆ ಮಾಹಿತಿಯ ಪ್ರಕಾರ ತಮ್ಮ ಸರದಿಯಂತೆ ಆ ಸಿಬ್ಬಂದಿ ಸಮೀಪದ ಲಸಿಕಾ ಕೇಂದ್ರದಲ್ಲಿ ಭೇಟಿ ನೀಡಿ ಲಸಿಕೆ ಪಡೆದುಕೊಳ್ಳಲಿದ್ದಾರೆ. ಮೊದಲ ಹಂತದಲ್ಲಿ ಲಸಿಕೆ ಪಡೆಯಲು ಗುರುತಿಸಿರುವ ಒಟ್ಟು ಮೂರು ಕೋಟಿ ಜನರ ಪೈಕಿ, ಒಂದು ಕೋಟಿ ಮಂದಿ ಆರೋಗ್ಯ ವಲಯದ ಮುಂಚೂಣಿ ಸಿಬ್ಬಂದಿಯಾಗಿದ್ದು, ಉಳಿದ ಎರಡು ಕೋಟಿ ಮಂದಿ ಕರೋನಾ ವಿರುದ್ಧದ ಹೋರಾಟದಲ್ಲಿರುವ ವಿವಿಧ ಇಲಾಖೆಗಳ ಸಿಬ್ಬಂದಿಗಳಾಗಿದ್ದಾರೆ.
ಮುಂದಿನ ಹಂತದಲ್ಲಿ ಕ್ರಮವಾಗಿ ದೇಶದ 50 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಲಸಿಕೆ ನೀಡಲಾಗುವುದು. ಆ ಬಳಿಕ 50 ವರ್ಷದ ಒಳಗಿನ ವಿವಿಧ ಗಂಭೀರ ಕಾಯಿಲೆಪೀಡಿತರನ್ನು ಗುರುತಿಸಿ ಅವರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಲಾವುದು ಎಂದು ಹೇಳಲಾಗಿದೆ.
ದೇಶದ ಸುಮಾರು 700 ಜಿಲ್ಲೆಗಳಲ್ಲಿ 1.5 ಲಕ್ಷ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ ಈ ಲಸಿಕಾ ಅಭಿಯಾನಕ್ಕೆ ಸಜ್ಜುಗೊಳಿಸಲಾಗಿದೆ. ಆ ಸಿಬ್ಬಂದಿಯನ್ನು ಬಳಸಿಕೊಂಡು ಈಗಾಗಲೇ ಡ್ರೈ ರನ್ ಲಸಿಕಾ ಕಾರ್ಯಕ್ರಮ ಮತ್ತು ಅಣಕು ಲಸಿಕಾ ಪ್ರಯೋಗದ ಮೂಲಕ ಜನರಲ್ಲಿ ಲಸಿಕೆಯ ಕುರಿತು ಇರುವ ಆತಂಕ ಮತ್ತು ಅನುಮಾನಗಳನ್ನು ನಿವಾರಿಸಿ ವಿಶ್ವಾಸ ಹುಟ್ಟಿಸುವ ಪ್ರಯತ್ನವನ್ನೂ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತಗಳು ನಡೆಸಿವೆ.
ಭಾರತ್ ಬಯೋಟೆಕ್ನ ಕೋವಾಕ್ಸಿನ್ ಲಸಿಕೆ ಪೂರ್ಣ ಪ್ರಮಾಣದ ಮಾನವ ಪ್ರಯೋಗ ನಡೆಸಿಲ್ಲ ಮತ್ತು ತನ್ನ ಪ್ರಯೋಗಗಳ ಫಲಿತಾಂಶದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಎಂಬ ಹಿನ್ನೆಲೆಯಲ್ಲಿ ಕೋವಾಕ್ಸಿನ್ ಲಸಿಕೆಯ ಕುರಿತು ಈಗಾಗಲೇ ಸಾಕಷ್ಟು ವಿವಾದ ಭುಗಿಲೆದ್ದಿತ್ತು. ಸರ್ಕಾರ ಲಸಿಕೆಯ ಜನಬಳಕೆಗೆ ಅನುಮೋದನೆ ನೀಡುವಾಗ ನಿಯಮಗಳನ್ನು ಗಾಳಿಗೆ ತೂರಿದೆ. ಕ್ಲಿನಿಕಲ್ ಪ್ರಯೋಗದ ಸಂಪೂರ್ಣ ಮಾಹಿತಿ ಮತ್ತು ದತ್ತಾಂಶ ಅಧ್ಯಯನದ ಮೂಲಕ ಅದರ ಸಾಧಕಬಾಧಕ, ಎಷ್ಟರಮಟ್ಟಿಗೆ ಪರಿಣಾಮಕಾರಿ, ಅಡ್ಡಪರಿಣಾಮಗಳೇನು ಎಂಬುದನ್ನು ಕೂಲಂಕಷವಾಗಿ ಅಧ್ಯಯನ ಮಾಡುವ ಮುನ್ನವೇ ತರಾತುರಿಯಲ್ಲಿ ಅನುಮೋದನೆ ನೀಡಿದೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿದ್ದವು.
ಆದರೆ, ಸರ್ಕಾರ ಅಂತಹ ಆರೋಪಗಳನ್ನು ತಳ್ಳಿಹಾಕುವ ಮೂಲಕ ಇದೀಗ ಜಗತ್ತಿನ ಅತಿದೊಡ್ಡ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ನಡುವೆ, ಯುರೋಪಿನ ನಾರ್ವೆಯಲ್ಲಿ ಫಿಜರ್ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ 23 ಮಂದಿ ಸಾವು ಕಂಡಿದ್ದು, ತೀರಾ ವಯೋವೃದ್ಧರು, ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಮೇಲೆ ಲಸಿಕೆಯ ಅಡ್ಡಪರಿಣಾಮಗಳು ಮಾರಣಾಂತಿಕವಾಗಿವೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಹೇಳಿರುವುದು ಲಸಿಕೆಯ ಕುರಿತು ಆತಂಕಕ್ಕೆ ಕಾರಣವಾಗಿದೆ. ಲಸಿಕೆಯ ಮೊದಲ ಡೋಸ್ ಪಡೆದ ಕೆಲವೇ ದಿನಗಳಲ್ಲಿ ಈ ಸಾವುಗಳು ಸಂಭವಿಸಿವೆ. ಆ ಪೈಕಿ 13 ಮೃತ ದೇಹಗಳ ಶವ ಪರೀಕ್ಷೆಯಲ್ಲಿ ಸಲಿಕೆಯ ಅಡ್ಡಪರಿಣಾಮಗಳೇ ಅವರ ಜೀವ ಬಲಿತೆಗೆದುಕೊಂಡಿರುವುದು ದೃಢಪಟ್ಟಿದೆ ಎಂದೂ ನಾರ್ವೆ ಸಾರ್ವಜನಿಕ ಆರೋಗ್ಯ ಇಲಾಖೆಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇಂತಹ ಹಲವು ಆತಂಕ, ಅನುಮಾನಗಳ ನಡುವೆ ಭಾರತದಲ್ಲಿ ಕರೋನಾ ಲಸಿಕಾ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಮೊದಲ ಲಸಿಕೆಯ ಪರಿಣಾಮಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.