ಬೆಂಗಳೂರು : ಅನೇಕ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ಈ ದೇಶ ಹಾಗೂ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಸಾಕಷ್ಟು ಕೊಡುಗೆ ನೀಡಿವೆ. ಅನೇಕ ನಾಯಕರನ್ನು ಹುಟ್ಟುಹಾಕಿವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಜ್ಯೋತಿ ನಿವಾಸ್ ಶಿಕ್ಷಣ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ‘ಕಾಲೇಜು ದಿವಸ’ ದಲ್ಲಿ ಭಾಗವಹಿಸಿ ಮಾತನಾಡಿ, 60 ವರ್ಷಗಳ ಕಾಲ ಅತ್ಯುತ್ತಮ ಸೇವೆಯನ್ನು ಜ್ಯೋತಿ ನಿವಾಸ ಸಂಸ್ಥೆ ಮಾಡಿದೆ. ಈ ಕಾಲೇಜಿನ ಅನೇಕ ವಿದ್ಯಾರ್ಥಿಗಳನ್ನು ನಾನು ಬೇರೆ, ಬೇರೆ ದೇಶಗಳಲ್ಲಿ ಭೇಟಿ ಮಾಡಿದ್ದೇನೆ. ಗ್ಲೋಬಲ್ ಮಟ್ಟದಲ್ಲಿ ಅನೇಕ ಪ್ರತಿಭಾವಂತರನ್ನು ಈ ಸಂಸ್ಥೆ ಕೊಡುಗೆಯಾಗಿ ಕೊಟ್ಟಿದೆ ಎಂದು ಶ್ಲಾಘಿಸಿದ್ದಾರೆ.

ಪ್ರತಿಭೆಯ ಜೊತೆಗೆ ಸಂವಹನ ಮುಖ್ಯವಾದುದು. ನಾನು ರಾಜಕಾರಣಿ ಇರಬಹುದು ಆದರೆ ನಾನು ಶಿಕ್ಷಣ ಪ್ರೇಮಿ. ಅಂತಿಮವಾಗಿ ನಮ್ಮನ್ನೆಲ್ಲಾ ಕಾಪಾಡುವುದೇ ಶಿಕ್ಷಣ. ನೀವು ಉದಾಹರಣೆ ಕೊಡುವುದು ತುಂಬಾ ಸುಲಭ. ಅದೇ ಎಲ್ಲರಿಗೂ ಉದಾಹರಣೆಯಾಗಿ ಬೆಳೆಯುವುದು ಕಠಿಣ ಕೆಲಸವಾಗಿದೆ ಎಂದು ತಿಳಿಸಿದ್ದಾರೆ.
ನಾನು ಕನಕಪುರದ ಸಣ್ಣ ಹಳ್ಳಿಯಿಂದ ಬಂದವನು. ಮೊದಲು ಸೆಂಟ್ ಥಾಮಸ್ ಶಾಲೆಯಲ್ಲಿ ಕಲಿತೆ. ನಂತರ ಎನ್ ಪಿಎಸ್ ಸೇರಿದೆ ಅಲ್ಲಿಂದ ನನ್ನ ಕಿತ್ತು ಹಾಕಿದರು. ಪದವಿ ಓದುವಾಗ ಎಲೆಕ್ಷನ್ ಗೆ ನಿಂತ ಕಾರಣಕ್ಕೆ ಪೂರ್ಣಗೊಳಿಸಲು ಆಗಲಿಲ್ಲ. ಕಡಿಮೆ ವಯಸ್ಸಿಗೆ ಶಾಸಕನಾದೇ. ಸದನದಲ್ಲಿ ಘಟಾನುಘಟಿ ನಾಯಕರ ಮಾತನ್ನು ಕೇಳಿ ನಾನು ಓದಬೇಕು ಎಂದು 46 ನೇ ವಯಸ್ಸಿನಲ್ಲಿ ಪದವಿ ಓದಿದೆ ಎಂದು ತಮ್ಮ ಶೈಕ್ಷಣಿಕ ದಿನಗಳನ್ನು ಮೆಲುಕು ಹಾಕಿದ್ದಾರೆ.

ಹೊಸ ಮಹಿಳಾ ನಾಯಕಿಯರು ಬೆಳೆಯಬೇಕು. ಶೇ 33 ರಷ್ಟು ಮೀಸಲಾತಿ ರಾಜಕೀಯ ಕ್ಷೇತ್ರದಲ್ಲಿದೆ. ಸ್ಥಳೀಯ ಸಂಸ್ಥೆಗಳಲ್ಲಿ 50 ರಷ್ಟು ಮೀಸಲಾತಿ ನೀಡಲಾಗಿದೆ. ಭವಿಷ್ಯದಲ್ಲಿ ಈ ಕಾಲೇಜಿನಿಂದ ನಾಯಕಿಯರು ಹೊರಬರಬೇಕು ಎಂದು ಡಿಕೆ ಶಿವಕುಮಾರ್ ಆಶಿಸಿದ್ದಾರೆ.
ಇದನ್ನೂ ಓದಿ : ಶಮನವಾಯ್ತು ದಾವಣಗೆರೆ “ಕೈ” ಕಲಹ : ಸಕ್ಸಸ್ ಆಯ್ತು ಸಿದ್ದು, ಡಿಕೆ ಪ್ಲ್ಯಾನ್..!
ಮೂಲವನ್ನು ಮರೆತರೆ ಫಲ ದೊರೆಯುವುದಿಲ್ಲ. ಬೇರು ಗಟ್ಟಿಯಾಗಿರಬೇಕು ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ನಾನು ಡಿಸಿಎಂ ಇರಬಹುದು ಆದರೆ ನನ್ನ ಗುರುಗಳು ಎದುರಾದಾಗ ಅವರಿಗೆ ನಮಸ್ಕರಿಸುತ್ತೇನೆ. “ನಾವೆಲ್ಲರೂ ಒಬ್ಬರಿಗೊಬ್ಬರು ಆಧಾರವಾಗಿದ್ದು ಬೆಳೆಯಬೇಕು. ಪ್ರತಿಭೆಯನ್ನು ಬಚ್ಚಿಟ್ಟುಕೊಳ್ಳಬಾರದು. ಜ್ಞಾನವನ್ನು ಹಂಚಬೇಕು. ಹಂಚಿದಾಗ ಮಾತ್ರ ಪ್ರಗತಿ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲರೂ ಜ್ಞಾನ ಹಂಚಿಕೊಂಡು ಬಾಳಬೇಕು..
ನಾವೆಲ್ಲರೂ ಜ್ಞಾನ, ಸಂಪತ್ತನ್ನು ಹಂಚಿಕೊಂಡು ಬಾಳಬೇಕು. ಪ್ರತಿಯೊಬ್ಬ ಶಿಕ್ಷಕನೂ ವಿದ್ಯಾರ್ಥಿಯೇ ಏಕೆಂದರೆ ಶಿಕ್ಷಕ ಜ್ಞಾನವನ್ನ ತುಂಬಿಕೊಳ್ಳದೇ ಹೋದರೆ ಜ್ಞಾನವನ್ನು ಹಂಚಲು ಸಾಧ್ಯವಿಲ್ಲ. ಈಗ ಎಐ ಯುಗ ದಿನದಿಂದ ದಿನಕ್ಕೆ ಎಲ್ಲವೂ ಬದಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನನ್ನ ಮಾಧ್ಯಮ ಸಲಹೆಗಾರರು ಭಾಷಣ ನೀಡಲು ಬಂದಾಗ ನನ್ನ ಮಗಳು ಚಾಟ್ ಜಿಪಿಟಿ ಮೂಲಕ ಯಾವ ಮಾಹಿತಿ ಬೇಕಾದರೂ ನೀನು ಪಡೆಯಬಹುದು ಎಂದು ತೋರಿಸಿಕೊಟ್ಟಳು. ಇಂದಿನ ಜನಾಂಗ ತಾಂತ್ರಿಕವಾಗಿ ಬಹಳ ಮುಂದಿದ್ದಾರೆ. ನನಗೆ ಅಷ್ಟಾಗಿ ಕಂಪ್ಯೂಟರ್ ಬಳಕೆ ಅಷ್ಟಾಗಿ ತಿಳಿದಿಲ್ಲ. ಮೊಬೈಲ್ ಬಳಕೆಯೂ ಕಡಿಮೆ ಎಂದು ವೈಯಕ್ತಿಕ ಬದುಕಿನ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಇದು ವಿದ್ಯಾರ್ಥಿಗಳ ಕಾಲ ಅವರು ತಮಗೆ ಬೇಕಾದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯುತ್ತಾರೆ. ಗುರುಗಳಿಗಿಂತ ಮುಂಚಿತವಾಗಿಯೇ ತಿಳಿದುಕೊಂಡಿರುತ್ತಾರೆ. ಇತ್ತೀಚೆಗೆ ದಾವೋಸ್ ನಲ್ಲಿ ನಡೆದ ಸಮ್ಮೇಳನಕ್ಕೆ ತೆರಳಿದ್ದೆ. ಅಲ್ಲಿ ಅನೇಕ ದೇಶಗಳ ಪ್ರತಿನಿಧಿಗಳ ಜೊತೆ ಮಾತನಾಡುವಾಗ ಎಲ್ಲರಿಗೂ ಬೆಂಗಳೂರು ಬಗ್ಗೆ ಜ್ಞಾನವಿದೆ. ಬೆಂಗಳೂರು ಅತ್ಯುತ್ತಮ ಹವಾಗುಣ, ಸಂಸ್ಕೃತಿ, ಪ್ರತಿಭಾವಂತರನ್ನು ಹೊಂದಿರುವ ನಗರ ಎಂದು ಮೆಚ್ಚುಗೆ ವ್ಯಕ್ತವಾಯಿತು ಎಂದು ಸ್ಮರಿಸಿದ್ದಾರೆ.
ಬೆಂಗಳೂರಿನ ಮೂಲಕ ಭಾರತವನ್ನು ನೋಡಲಾಗುತ್ತದೆ ಎಂದು ಅಟಲ್ ಬಿಹಾರಿ ವಾಜಪೇಯಿ ಅವರು ಈ ಹಿಂದೆ ಹೇಳಿದ್ದರು. ಏಕೆಂದರೆ ಅಷ್ಟೊಂದು ಜ್ಞಾನವಂತರು, ಪ್ರತಿಭಾವಂತರು ಇಲ್ಲಿದ್ದಾರೆ. ಪ್ರತಿವರ್ಷ ಕರ್ನಾಟಕದಿಂದ ಅಂದಾಜು 1.6 ಲಕ್ಷ ಎಂಜಿನಿಯರ್ ಮುಗಿಸಿದವರು ಹೊರ ಬರುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
270 ಕ್ಕೂ ಹೆಚ್ಚು ಎಂಜಿನಿಯರಿಂಗ್, 1160 ಐಟಿಐ ಕಾಲೇಜುಗಳಿವೆ. 72 ಮೆಡಿಕಲ್ ಕಾಲೇಜುಗಳಿದ್ದು 13 ಸಾವಿರಕ್ಕೂ ಮಿಗಿಲಾಗಿ ವೈದ್ಯರನ್ನು ಕರ್ನಾಟಕ ತಯಾರು ಮಾಡುತ್ತಿದೆ. 26 ಲಕ್ಷ ಐಟಿ ಉದ್ಯೋಗಿಗಳಿದ್ದಾರೆ. 2 ಲಕ್ಷ ವಿದೇಶಿಗರು ಕೆಲಸ ಮಾಡುತ್ತಿದ್ದಾರೆ. ಇದೆಲ್ಲಾ ಸಾಧ್ಯವಾಗಿದ್ದು ಜ್ಯೋತಿ ನಿವಾಸ, ಸೆಂಟ್ ಜೋಸೆಫ್, ಮೌಂಟ್ ಕಾರ್ಮೆಲ್ ನಂತಹ ಸಂಸ್ಥೆಗಳಿಂದ ಎಂದು ಡಿಸಿಎಂ ಬಣ್ಣಿಸಿದ್ದಾರೆ.
ನನಗೆ ಹುಟ್ಟು ಹಬ್ಬ ಎಂದರೆ ಸ್ವಲ್ಪ ಹಿಂಜರಿಕೆ..
ನಾನು ತಂದೆಯಾಗಿ ಮಕ್ಕಳ ಹುಟ್ಟುಹಬ್ಬವನ್ನ ಮನೆಯಲ್ಲಿ ಆಚರಿಸುತ್ತೇನೆ. ಆದರೆ ನನಗೆ ನನ್ನ ಹುಟ್ಟುಹಬ್ಬ ಎಂದರೆ ಸ್ವಲ್ಪ ಹಿಂಜರಿಕೆ. ಇಪ್ಪತ್ತೈದು ವರ್ಷಗಳ ಹಿಂದೆ ಒಂದು ಸಮ್ಮೇಳನದಲ್ಲಿ ಭಾಗವಹಿಸುವ ಸಲುವಾಗಿ ಪ್ಯಾರಿಸ್ ಗೆ ತೆರಳಿದ್ದೆ. ಆ ದಿನ ನನ್ನ ಹುಟ್ಟುಹಬ್ಬ ಎಂದು ಹೇಗೋ ಅಲ್ಲಿದ್ದವರಿಗೆ ತಿಳಿದು ಹೋಯಿತು. ಆಗ ನನ್ನನ್ನು ವೇದಿಕೆ ಮೇಲೆ ಕರೆದರು. ನಾನು ಹಳ್ಳಿಗಾಡಿನಿಂದ ಬಂದ ವ್ಯಕ್ತಿ. ಹುಟ್ಟುಹಬ್ಬ ಆಚರಿಸುವ ಸಂಸ್ಕೃತಿ ನಮ್ಮ ಕಡೆ ಇರಲಿಲ್ಲ. ಆದರೂ ಕೇಕ್ ತಂದು ಅದರ ಮೇಲೆ ಮೇಣದಬತ್ತಿಯಿಟ್ಟು ಹಚ್ಚಿದ ನಂತರ ಅದನ್ನು ನಂದಿಸುವಂತೆ ಹೇಳಿದ್ದರು ಎಂದು ಹಳೆಯ ನೆನಪಗಳನ್ನು ಹೊರಗೆಡವಿದ್ದಾರೆ.
ಆಗ ಆ ಕೊಠಡಿಯ ಒಂದು ಭಾಗದಲ್ಲಿದ್ದ ವ್ಯಕ್ತಿಯೋರ್ವ ಓಡಿಬಂದು ಹಚ್ಚಿದ ಮೇಣದ ಬತ್ತಿಯನ್ನು ಅವರು ಆರಿಸುವುದಿಲ್ಲ. ಏಕೆಂದರೆ ಅವರು ಬಂದಿರುವುದು ಭಾರತದಿಂದ. ಅವರದ್ದು ದೀಪ ಬೆಳಗಿಸುವ ಸಂಸ್ಕೃತಿಯೇ ಹೊರತು ದೀಪ ಆರಿಸುವ ಸಂಸ್ಕೃತಿಯಲ್ಲ ಎಂದು ಹೇಳಿದ್ದರು ಅಂತ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಜ್ಯೋತಿ ನಿವಾಸ್ ಕಾಲೇಜು ಬೆಂಗಳೂರಿನ ಹೆಮ್ಮೆ. ಕಳೆದ 60 ವರ್ಷಗಳಿಂದ ಅನೇಕ ಪ್ರತಿಭಾವಂತರು, ನಾಯಕರನ್ನು ಹುಟ್ಟು ಹಾಕಿದೆ. ಅತ್ಯಂತ ಶಿಸ್ತಿನ ಶಿಕ್ಷಣ ಸಂಸ್ಥೆ ಇದಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.






