ಬಸವೇಶ್ವರರ ಕಾಲದಲ್ಲಿ ಧರ್ಮವೇ ಎಲ್ಲದರ ಕೇಂದ್ರ ಬಿಂದುವಾಗಿತ್ತು. ವ್ಯಕ್ತಿಯ ಚಟುವಟಿಕೆಗಳ ಒಟ್ಟು ಮೊತ್ತವೇ ಆಗಲೀ, ರಾಜನ ಕಾರ್ಯವೈಖರಿಯೇ ಆಗಲೀ, ಯಾವುದೇ ಕ್ರಿಯೆಯಾಗಲಿ ಎಲ್ಲದರಲ್ಲೂ ಧರ್ಮವೇ ಕೇಂದ್ರವೆ ಆಗಿತ್ತು. ಸಹಸ್ರಾರು ವರ್ಷಗಳಿಂದ ಶೋಷಣೆಗಳಗಾಗಿದ್ದ ದೀನ ದಲಿತರ ಆಳದಲ್ಲಿ ಹುದುಗಿದ್ದ ನೋವಿನ ಮಡುವಿನ ಮತ್ತು ಸ್ತಬ್ದತೆಯ ಪ್ರಚಂಡ ಪ್ರತಿಫಲದಂತೆಯೇ ಅಂದಿನ ಸಮಾಜ ಸ್ಥಿತಿಯೂ ಇತ್ತು. ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಅನಾಚಾರಗಳ ಒಟ್ಟು ಮತ್ತಾದ ಫಲ ಅದಾಗಿತ್ತು. ಆದುದರಿಂದಲೇ ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ, ಸಮಾಜದ ಉನ್ನತಿಗೆ ಧರ್ಮವೇ ಅಡಿಗಲ್ಲೆಂಬುದು ಬಸವೇಶ್ವರರು ಕಂಡುಕೊಂಡ ಸತ್ಯ. ಧಾರ್ಮಿಕ ವಲಯದಲ್ಲಿ ಹಾಸುಹೊಕ್ಕಾಗಿದ್ದ ಶೋಷಣೆ ತೊಡೆದು ಹಾಕಿದಲ್ಲಿ ಇತರೆ ವಲಯಗಳಲ್ಲಿನ ಸುಧಾರಣೆ ತಾನೇ ತಾನಾಗಿ ಆಗುತ್ತದೆಂದು ಅರಿತುಕೊಂಡರು. ಸಾಹಿತ್ಯ, ಸಾಮಾಜಿಕ, ಆರ್ಥಿಕ, ರಾಜಕೀಯ ಹೊಲಸುಗಳನ್ನು ಹಸನುಗೊಳಿಸಿ ಉತ್ತಿಬಿತ್ತುವಲ್ಲಿ ಅವರಿಗೆ ಧರ್ಮವೇ ಸರಿಯಾದ ಮಾರ್ಗವೆನಿಸಿತು. ಸಮಾಜದ ಹೀನಾವಸ್ಥೆಗೆ ಪುರೋಹಿತ ವರ್ಗವು ಧರ್ಮದ ಹೆಸರಿನಲ್ಲಿ ನಡೆಸುತ್ತಿರುವ ಅನಾಚಾರಗಳೇ ಕಾರಣವೆಂಬುದು ಬಸವಣ್ಣನವರಿಗೆ ಮನದಟ್ಟಾಗಿತ್ತು. ಶೋಷಣೆ, ಅಸಮಾನತೆ ತುಂಬಿಕೊಂಡಿದ್ದ ಧರ್ಮದಿಂದ ಸಮಾಜದ ಉನ್ನತಿ ಸಾಧ್ಯವಿಲ್ಲ. ಆದ್ದರಿಂದ ಆಧ್ಯಾತ್ಮಕ ಧರ್ಮ, ಕಾರ್ಯಕ ದಾಸೋಹ ಸಂಗಮದ ಭಕ್ತಿಪಥವನ್ನು ನಿರ್ಮಿಸಲು ನಿರ್ಧರಿಸುತ್ತಾರೆ. ಧಾರ್ಮಿಕ ವಲಯಬಿಟ್ಟು ಪ್ರತ್ಯೇಕವಾಗಿ ಕಾರ್ಯೋನ್ಮುಖವಾಗುವುದರಿಂದ ಸಿದ್ಧಿ ಲಭಿಸುವುದು ಅಸಾಧ್ಯ ಎಂಬುದನ್ನು ಬಸವಣ್ಣನವರು ಅರಿತುಕೊಂಡರು. ಆದುದರಿಂದಲೇ ಅವರ ದಾಸೋಹ ತತ್ವ ಕೇವಲ ಹಣಕಾಸು ವ್ಯವಹಾರ ಅಥವಾ ಗಳಿಕೆ-ಉಳಿಕೆಗಳ ಸಮೀಕರಣಗಳಲ್ಲಿ ಸೀಮಿತವಾಗದೆ, ವ್ಯಕ್ತಿಯ ಸರ್ವಗುಣಗಳ ಮೇಲೆ ಹತೋಟಿ ಸಾಧಿಸುವ ಮೂಲಕ ಸಮಾಜದ ಸರ್ವಾಂಗೀಣ ಬೆಳವಣಿಗೆ ನಿರ್ಧರಿಸುವ ಒಂದು ಮುಖ್ಯ ತತ್ವವಾಗಿದೆ.
ಸಾಂಕ್ರಾಮಿಕ ಮಾರಕ ಮೌಡ್ಯಗಳ ವಿರುದ್ಧ ತಮಗೊದಗಿದ್ದ ಯಾವುದೇ ಗಂಡಾಂತರಕ್ಕೂ ಅಂಜದೇ ಬಸವಣ್ಣನವರು ಸಿಡಿದೆದ್ದರು. ಮಾತ್ರವಲ್ಲದೆ ಶರಣರೆಂಬ ಹೋರಾಟಗಾರರ ಪಂಥವನ್ನು ಸಂಘಟಿಸಿದರು. ಕನ್ನಡ ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲಿ ೧೨ನೇ ಶತಮಾನಕ್ಕೆ ವಿಶಿಷ್ಟವಾದ ಮತ್ತು ಪ್ರಮುಖವಾದ ಸ್ಥಾನವಿದೆ. ಶರಣ-ಶರಣೆಯರ ಸಮಾಜ ಧಾರ್ಮಿಕ ಆಂದೋಲನದ ಅಂಗವಾಗಿ ಸೃಷ್ಠಿಯಾದ ವಚನ ಸಾಹಿತ್ಯ ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವಂತಹ ಜನಪರ ಕಾಳಜಿಯ ಆಶಯವನ್ನು ಹೊಂದಿದೆ. ವೈದಿಕ ಧರ್ಮದಲ್ಲಿ ಜನಿಸಿದ ಬಸವಣ್ಣನವರಿಗೆ ಆ ಧರ್ಮದ ಜನವಿರೋಧಿ ರೀತಿ-ನೀತಿಗಳು ಬಹುಬೇಗ ಅಥವಾಯಿತು. ಅವರಲ್ಲಿ ಮಾನವ ಪ್ರೀತಿ ಜಾಗೃತಗೊಂಡ ಫಲವಾಗಿ ಜನಹಿತ ಕಡೆಗಣಿಸಿದ ವೈದಿಕ ಧರ್ಮವನ್ನು ತೊರೆದು ಸಾರ್ವಜನಿಕ ಸಮುದಾಯದ ಏಳ್ಗೆಯನ್ನು ಸಾಧಿಸುವಂತ ವಿಶ್ವಮಾನವ ತತ್ವಗಳ ಸಾರವಾದ ವೀರಶೈವ ಧರ್ಮವನ್ನು ಸ್ಥಾಪಿಸಲು ಮುಂದಾದರು.
ಪರಂಪರೆಯಿಂದ ಬಂದ ಜಮೀನ್ದಾರಿ ಪದ್ಧತಿಯು ಉಳುಮೆ ಮಾಡದೆ ಗಳಿಕೆಯ ಫಲವನ್ನು ಅನುಭೋಗಿಸುವ ಮೇಲ್ವರ್ಗದವರ ಸುಖ ಜೀವನಕ್ಕೆ ಅವಕಾಶ ಮಾಡಿಕೊಟ್ಟಿದ್ದಿತು. ದಲಿತರ ಶ್ರಮದ ಫಲವನ್ನು ಅವರು ಅನುಭೋಗಿಸುತ್ತಿದ್ದರು. ಒಡೆಯ – ಸೇವಕ ವ್ಯವಸ್ಥೆಯಲ್ಲಿ ಒಡೆದು ಆಳುವ ಮನೋಭಾವವನ್ನು ಗ್ರಹಿಸಿದ ಬಸವಣ್ಣ ಅದು ಹೋಗದ ಹೊರತು ದಲಿತರ ಉದ್ದಾರ ಸಾಧ್ಯವಿಲ್ಲವೆಂಬುದನ್ನು ಕಂಡುಕೊಂಡರು. ಆದದುರಿಂದಲೇ ಬಸವಣ್ಣನವರು ಸಾಮಾಜಿಕ ನೆಲೆಯಲ್ಲಿನ ಆರ್ಥಿಕ ಅಸಮಾನತೆಗೆ ಪರಿಹಾರ ಚಿಂತಿಸಿದರು. ಈ ಸಂದರ್ಭದಲ್ಲಿ ಅವರಿಗೆ ಹೊಳೆದದ್ದು ಕಾಯಕ ಪರಿಕಲ್ಪನೆ. ಬೇರೊಬ್ಬರ ತೊತ್ತಾಗಿ ಬದುಕನ್ನು ಸವೆಸುವುದರ ಬದಲು ನಿರ್ದಿಷ್ಟವಾದ ವೃತ್ತಿಯೊಂದನ್ನುಆಧರಿಸಿ ಸ್ವತಂತ್ರವಾಗಿ ತನ್ನ ಶ್ರಮದ ಪ್ರತಿಫಲವನ್ನು ತಾನು ಹಾಗೂ ತನ್ನ ಕುಟುಂಬ ವರ್ಗದವರು ಹಂಚಿಕೊಳ್ಳುವ, ಆತ್ಮವಿಶ್ವಾಸದಿಂದ ತಲೆಯೆತ್ತಿ ನಿಲ್ಲುವ ಸತ್ಯಶುದ್ಧ ಜೀವನ ನಡೆಸುವ ಕಾಯಕ ಸಿದ್ಧಾಂತ ಬಸವಣ್ಣನ ಮನಸ್ಸಿನಲ್ಲಿ ರೂಪುಗೊಂಡಿತು. ತನ್ನ ಕಾಲದಲ್ಲೇ ಸಾಮಾಜಿಕ ನೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಪ್ರಚಾರದಲ್ಲಿದ್ದ ಪವರರು, ಗುಣಪತ್ಯರು, ನೀಲಪಟರು–ಇವರೇ ಮೊದಲಾದವರ ಬಗೆಗೂ ವಿಚಾರ ಮಾಡಿರು. ಪ್ರಾಚೀನ ಶೈವದ ಪರಿಷ್ಕೃತ ರೂಪವಾದ ವೀರಶೈವ ಪರಿಕಲ್ಪನೆ ಅವರಿಗೆ ಹೊಳೆದದ್ದು, ಭಾರತೀಯ ಧರ್ಮಗಳ ಬಗೆಗೆ ತೀವ್ರವಾದ ಜಿಜ್ಞಾಸೆ ನಡೆಸಿದಾಗಲೇ.
ಜಮೀನ್ದಾರಿ ಪದ್ಧತಿ ಆರ್ಥಿಕ ಅಸಮಾನತೆಯ ಸಾಮಾಜಿಕ ನೀತಿ ಪರ್ಯಾಯ ಆಲೋಚನೆಯಾಗಿ ಬಸವಣ್ಣನವರಿಗೆ ಕಂಡಿತು. ದೇವಾಲಯ ಸಂಸ್ಕೃತಿ ಸಾಮಾಜಿಕ ವ್ಯವಸ್ಥೆ ಒಂದು ಭಾಗವಾಗಿರುವುದರಿಂದ ಇದಕ್ಕೆ ಪರ್ಯಾಯವಾಗಿ ದೇಹವೇ ದೇವಾಲಯ ಎಂಬ ಪರಿಕಲ್ಪನೆಯನ್ನು ಸಾಮಾಜಿಕ ನೆಲೆಯಲ್ಲಿ ಆಳವಾಗಿ ಬೇರುಬಿಟ್ಟಿರುವ ವರ್ಣವ್ಯವಸ್ಥೆಗೆ ಪರ್ಯಾಯವಾಗಿ ಭಕ್ತ-ಭವಿ ಪರಿಕಲ್ಪನೆಯನ್ನೂ ಬಸವಣ್ಣ ಯೋಚಿಸಿದರು. ಚಾತುರ್ವರ್ಣ ವ್ಯವಸ್ಥೆಯನ್ನು ಮೀರಿ ಹೊಸ ಸಮಾಜವನ್ನು ಕಟ್ಟುವ ಸವಾಲು ಬಂದುದರಿಂದ ಮಾನವ ಧರ್ಮದ ಪರಿಕಲ್ಪನೆ ಬಸವಣ್ಣನಿವಗೆ ಉಜ್ವಲವಾಗಿ ಕಂಡಿತು. ವರ್ಣ, ಜಾತಿ, ವರ್ಗ, ಉತ್ತಮ – ಅಧಮ ಎಂಬ ಕಲ್ಪನೆಗಳಿಂದ ಮುಕ್ತವಾದ ಹೊಸ ಸಮಾಜ ನಿರ್ಮಾಣದ ಬಗೆಗೆ ಬಸವಣ್ಣ ಯೋಚಿಸಿದರು. ವರ್ಣವ್ಯವಸ್ಥೆಗೆ ತಿರುಗು ಬಾಣವಾಗಿ ಭವಿ-ಭಕ್ತ ಪರಿಕಲ್ಪನೆ, ಸ್ಥಾವರಾಧನೆಗೆ ವಿರುದ್ಧವಾಗಿ ಇಷ್ಟಲಿಂಗದ ಪರಿಕಲ್ಪನೆ, ವರ್ಗವ್ಯವಸ್ಥೆಗೆ ಪ್ರತಿಯಾಗಿ ಕಾಯಕ ಸಿದ್ಧಾಂತ, ದಾಸೋಹ ಸಿದ್ಧಾಂತ-ಹೀಗೆ ಎಲ್ಲವೂ ವ್ಯವಸ್ಥಿತವಾಗಿ ಬಸವಣ್ಣನವರ ಮನಸ್ಸಿನಲ್ಲಿ ನಿಯೋಜಿತವಾದವು. ಆಧ್ಯಾತ್ಮದ ಉನ್ನತೀಕರಣ ಅಥವಾ ಅಂತರಂಗದ ವಿಕಾಸಕ್ಕೂ ಅವರದೇ ಆದ ಕೆಲವು ಪರಿಹಾರಗಳಿದ್ದವು. ವ್ಯಕ್ತಿಗಳು ಭೌತಿಕ ಪ್ರಪಂಚದಲ್ಲಿಯೇ ಮುಳುಗಿ ಹೋದರೆ ಅದರಿಂದ ಪ್ರಯೋಜನವಿಲ್ಲ. ಭೌತಿಕ ಭೋಗಭಾಗ್ಯಗಳನ್ನು ಅನುಭವಿಸುತ್ತಲೇ ಅವುಗಳ ಭ್ರಮಾತ್ಮಕ ಲೋಕದಿಂದ ಬಿಡುಗಡೆಗೊಳ್ಳುವ ಯಾತ್ರೆಯ ಪರ್ಯಾಲೋಚನೆ ಇರಬೇಕೆಂದು ಹೇಳಿದ್ದಾರೆ.

ಕೂಡಲ ಸಂಗಮದಿಂದ ಬಸವಣ್ಣನವರು ಕಲ್ಯಾಣ ಚಾಲುಕ್ಯ ಸಾಮ್ರಾಜ್ಯದ ಸಾಮಂತನಾಗಿದ್ದ ಮಂಗಳವಾಡಕ್ಕೆ ಹೋಗಿ ಅಲ್ಲಿ ಮಂತ್ರಿ ಪದವಿಯನ್ನು ಸ್ವೀಕರಿಸಿದರು. ನಂತರ ಬಸವಣ್ಣನವರ ಧಾರ್ಮಿಕ ಜಾಗೃತಿ ಹಾಗೂ ಸಾಮಾಜಿಕ ಸಮಾನತೆಯ ಕಾರ್ಯಗಳಾಗಲೇ ಪ್ರಾರಂಭವಾಗಿದ್ದವು. ಅಂಬಿಗರ ಚೌಡಯ್ಯ ಹಿಂದುಳಿದವರನ್ನು ಒಂದುಗೂಡಿಸಿ ಅವರನ್ನು ಬಸವಣ್ಣ ದಲಿತೋದ್ದಾರ ಕಾರ್ಯಕ್ಕೆ ಅಣಿ ಮಾಡಲಾರಂಭಿಸಿದರು. ಬಸವಣ್ಣನವರ ಪ್ರಕಾರ ಇಷ್ಟಲಿಂಗವು ಕೇವಲ ಆಧ್ಯಾತ್ಮ ಸಾಧನೆಯ ಮಾಧ್ಯಮವಾಗಿರಲಿಲ್ಲ. ಅದು ಸಮಾನತೆ ಸಾಧಿಸುವ ಕುರುಹೂ ಆಗಿತ್ತು. ಇಷ್ಟಲಿಂಗ ಧರಿಸಿದವರೆಲ್ಲರೂ ಸಮಾನರೆಂಬುದು ಅವರ ತತ್ವವಾಗಿತ್ತು. ಮಾನವರೆಲ್ಲರೂ ದೈವೀ ಮೂಲದಿಂದ ಬಂದವರು. ಪ್ರತಿಯೊಬ್ಬರಲ್ಲಿಯೂ ದೈವಿಶಕ್ತಿ ಅಡಕವಾಗಿದೆ. ಸಾಧನೆಯಿಂದ ಅದನ್ನು ಜಾಗೃತಗೊಳಿಸಿಕೊಂಡರೆ ಎಲ್ಲರೂ ದೈವ ಸ್ವರೂಪರಾಗಿ ಪರಿಣಮಿಸುತ್ತಾರೆ. ದೈವತ್ವವೇ ಎಲ್ಲರಲ್ಲಿ ಸಮಾನತೆಯನ್ನುಂಟು ಮಾಡುತ್ತದೆ ಎಂದು ತಿಳಿಸಿದರು. ಅಂಬಿಗರ ಚೌಡಯ್ಯನವರು ಬಸವತತ್ವಗಳನ್ನು ಪ್ರಚಾರ ಮಾಡುತ್ತ ಮುಂದುವರೆದರು. ಇದರಿಂದಾಗಿ ಅನೇಕ ಕೆಳವರ್ಗದ ಜನರು ಇಷ್ಟಲಿಂಗವನ್ನು ಧರಿಸಿ, ಧಾರ್ಮಿಕವಾಗಿ ಪರಿವರ್ತಿತರಾಗಿ, ತಮ್ಮಲ್ಲಿದ್ದ ದುಶ್ಚಟಗಳನ್ನು ಬಿಡತೊಡಗಿದರು. ಜೊತೆಗೆ ಬಸವಣ್ಣನವರು ವೃತ್ತಿ ದೈವೀಕರಣ ಕುರಿತ ಮಹತ್ವವನ್ನು ಪ್ರಚುರ ಪಡಿಸಿದರು. ಎಲ್ಲಾ ವೃತಿಗಳು ಪವಿತ್ರ ಹಾಗೆ ವೃತ್ತಿಯಿಂದ ಸಂಪಾದಿಸಿದ ಧನವು ಸಮಾಜಕ್ಕೆ ಸೇರಿದುದು. ಕಾಯಕದಲ್ಲಿ ತೊಡಗಿ ಸಂಪಾದಿಸಿದ ಸಂಪತ್ತನ್ನು ದಾಸೋಹದಲ್ಲಿ ತೊಡಗಿಸಬೇಕು. ದಾಸೋಹವು ಅನ್ನದಾಸೋಹ, ಜ್ಞಾನ ದಾಸೋಹ ಅಥವಾ ಧನದಾಸೋಹ ಈ ಯಾವುದೇ ಬಗೆಯಾಗಿರಬಹುದು. ದಾಸೋಹದ ಉಪಯೋಗಕ್ಕೆ ವಿನಿಯೋಗವಾಗುವ ಧನ ಸತ್ಯಶುದ್ಧ ಕಾಯಕದಿಂದ ಬಂದಿರಬೇಕು ಎಂಬ ತತ್ವವನ್ನು ಪ್ರಚಾರ ಮಾಡುತ್ತಾರೆ. ಸಮಾಜದಲ್ಲಿ ಪ್ರತಿಯೊಬ್ಬರೂ ಕಾಯಕ ಮಾಡಲೇಬೇಕೆಂದು, ಹಾಗೆ ಮಾಡುವುದರಿಂದ ಸಮಾಜದ, ದೇಶದ ಆರ್ಥಿಕ ಸ್ಥಿತಿಯ ವೃದ್ಧಿಗೆ ನೆರವಾಗುತ್ತದೆಂದು ತಿಳಿಸುತ್ತಾರೆ. ಗಳಿಸಿದ ಹಣ ಜಂಗಮ ದಾಸೋಹಕ್ಕೆ ಸಲ್ಲಬೇಕಾದ ಕಾರಣ ಅದನ್ನು ಕೂಡಿಡುವ ಪ್ರಶ್ನೆಯೇ ಬರುವುದಿಲ್ಲ. ಹೀಗಾಗಿ ಕಾಯಕ ದಾಸೋಹ ತತ್ವಗಳಲ್ಲಿ ಗಳಿಕೆ ಮತ್ತು ವಿತರಣೆ ಹಾಸು ಹೊಕ್ಕಾಗಿ ಹೊಂದಿಕೊಂಡು ಒಂದೇ ನಾಣ್ಯದ ಎರಡು ಮುಖಗಳಾಗಿ ಪರಿಣಮಿಸುತ್ತವೆ.
ಇದು ಆಧ್ಯಾತ್ಮಿಕ ತಳಹದಿಯ ಮೇಲೆ ರೂಪುಗೊಂಡ ಸಮಾಜವಾದವೆಂದೇ ಹೇಳಬೇಕು. ಹಾಗೆಯೇ ಕಾಯಕ ದಾಸೋಹದ ತತ್ವದ ಇನ್ನೊಂದು ಮಹ್ವಪೂರ್ಣ ಅಂಶವೆಂದರೆ ಅವುಗಳಲ್ಲಿ ಮೇಲುಕೀಳುಗಳಿಲ್ಲ. ಎಲ್ಲಾ ಬಗೆಯ ಕಾಯಕವೂ ಸಮಾನವೆಂದು ಸಾರಿದ ಬಸವಣ್ಣನವರ ನೀತಿಯಿಂದಾಗಿ ಅನೇಕರು ಲಿಂಗದೀಕ್ಷೆ ತೆಗೆದುಕೊಂಡರು. ಬೇರೆ ಬೇರೆ ಕಾರ್ಯದಲ್ಲಿ ನಿರತರಾಗಿದ್ದ ಶರಣರಿಗೆ ಇವರು ಏರ್ಪಡಿಸುತ್ತಿದ್ದ ದಾಸೋಹ ಬೆಳೆಯುತ್ತ . ಇದರ ಭಾರವನ್ನು ಸ್ವತಃ ಬಸವಣ್ಣನವರು ಹೊರಲು ಶಕ್ತರಿದ್ದರೂ ಶರಣರು ಹಾಗೆ ಮಾಡಲು ಬಿಡಲಿಲ್ಲ. ತಮ್ಮ ಕಾಯಕದಿಂದ ಬಂದ ಹಣವನ್ನೂ ಈ ಕಾರ್ಯಕ್ಕಾಗಿ ಸೇರಿಸುತ್ತಿದ್ದರು. ಇದು ಹಿರಿದಾಗುತ್ತ ನಡೆಯಿತು. ಹೀಗೆ ಬಸವಣ್ಣನವರು ಸಮಾಜೋಧಾರ್ಮಿಕ ಸುಧಾರಣೆಯನ್ನು ಮುಂದುವರೆಸುತ್ತಾ ಜನಾನುರಾಗಿಯಾಗುತ್ತಿರುವುದನ್ನು ತಮ್ಮ ಸಹೋದ್ಯೋಗಿಗಳು, ಬ್ರಾಹ್ಮಣರು ಸಹಿಸಲಾಗದೆ ರಾಜ್ಯಭಂಡಾರದ ಹಣ ದುರುಪಯೋಗವಾಗುತ್ತಿದೆ ಎಂದು ಬಿಜ್ಜಳನಿಗೆ ದೂರುಕೊಟ್ಟರು. ತನಿಖೆಯಿಂದ ಇದು ಸುಳ್ಳೆಂದು ರುಜುವಾಯಿತು. ಬಸವಣ್ಣನವರು ತಮ್ಮ ಪ್ರಚಾರ ಕಾರ್ಯವನ್ನು ವಿಸ್ತರಿಸಿ, ಮತ್ತಷ್ಟು ವೈವಿಧ್ಯಮಯಗೊಳಿಸಿ ನೂತನ ಕಾರ್ಯಕ್ರಮಗಳನ್ನು ಜಾರಿಗೆ ತರಲು ಆರಂಭಿಸಿದರು. ಅದರಂತೆ ಅಸ್ಪೃಶ್ಯ ಜನಾಂಗದ ಶಿವನಾಗಿಮಯ್ಯನ ಮನೆಯಲ್ಲಿ ಭೋಜನ (ಪ್ರಸಾದ) ಸ್ವೀಕರಿಸಿದರು. ಇದರಿಂದ ಸಂಪ್ರದಾಯಸ್ತ ಬ್ರಾಹ್ಮಣರು ಕ್ಷÄದ್ರಗೊಂಡು ಕೆರಳಿ ಬಿಜ್ಜಳ ರಾಜನಿಗೆ ದೂರಿತ್ತರು. ವಿಚಾರಣೆ ಸಂದರ್ಭದಲ್ಲಿ ಬಸವಣ್ಣನವರು ಬಲವಾಗಿ ವಾದಿಸಿ, ಅಸ್ಪೃಶ್ಯನ ಮನೆಯಲ್ಲಿ ಊಟ ಮಾಡಿದ ಕ್ರಮವನ್ನು ಸಮರ್ಥಿಸಿಕೊಂಡರು. ಅಷ್ಟೇ ಅಲ್ಲದೆ, ದೇವರ ದೃಷ್ಠಿಯಲ್ಲಿ ಎಲ್ಲರೂ ಒಂದೇ ಎಂದು ವಾದಿಸಿದರು. ಈ ನಿಟ್ಟಿನಲ್ಲಿ ಅವರು ತಮ್ಮ ವಚನದ ಮೂಲಕ ಅಸ್ಪೃಶ್ಯತೆಯನ್ನು ಕಟುವಾಗಿ ವಿರೋಧಿಸಿದರು.
ಕೊಲುವವನೆ ಮಾದಿಗ, ಹೊಲಸು ತಿಂಬವನೆ ಹೊಲೆಯ
ಕುಲವೇನೋ ಆವಂದಿರ ಕುಲವೇನೋ
ಸಕಲ ಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲಸಂಗಮ ಶರಣರೆ ಕುಲಜರು
ಇಡೀ ವಿಶ್ವಕ್ಕೆ ಅನ್ವಯಿಸುವ ಈ ಉದಾತ್ತ ಸಂದೇಶವನ್ನು ಬಸವಣ್ಣನವರು ೧೨ನೇ ಶತಮಾನದಲ್ಲಿ ಸಾರಿದ್ದಾರೆ. ಅಷ್ಟೇ ಅಲ್ಲದೆ ತಾವು ಸ್ವತಃ ಈ ತತ್ವವನ್ನು ಆಚರಣೆಗೆ ತಂದು ಭಾರತಕ್ಕೆ ಕಳಂಕ ಪ್ರಾಯವಾಗಿದ್ದ ಅಸ್ಪೃಶ್ಯತೆಯನ್ನು ನಿವಾರಿಸಲು ಶ್ರಮಿಸಿದ್ದಾರೆ.
ಶಿವನಾಗಿಮಯ್ಯನ ಪ್ರಸಂಗದ ನಂತರ ಬಸವಣ್ಣನವರ ಮಹಾಮನೆಯ ದಾಸೋಹದಲ್ಲಿ ಕೇರಿಯ ಶರಣರು ಪಾಲ್ಗೊಳ್ಳಲು ಪ್ರಾರಂಭಿಸಿದರು. ನಿತ್ಯ ದಾಸೋಹದಲ್ಲಿ ಪಾಲ್ಗೊಳ್ಳುವವರ ಎಣಿಕೆ ವೃದ್ಧಿಗೊಂಡು, ದಾಸೋಹಕ್ಕಿಂತ ಮೊದಲು ಶಿವಾನುಭವದ ಗೋಷ್ಠಿ ನಡೆದು ಅಲ್ಲಿ ಜ್ಞಾನ ದಾಸೋಹವು ನಡೆಯಿತು. ಆರಂಭದಲ್ಲಿ ಒಂದು ಚಿಕ್ಕ ಗುಂಪಿನಿಂದ ಪ್ರಾರಂಭವಾದ ಈ ಗೋಷ್ಠಿ ಈಗ ಒಂದು ಸುವ್ಯವಸ್ಥಿತವಾದ ಸಂಸ್ಥೆಯ ರೂಪ ತಾಳುವತ್ತ ಸಾಗಿತು. ಇಲ್ಲಿ ಶಿವಾನುಭವ ಮಂಟಪ ಇಲ್ಲವೆ ಅನುಭವ ಮಂಟಪವೆಂಬ ಹೆಸರಿನಲ್ಲಿ ಚಟುವಟಿಕೆಗಳು ಮುಂದುವರೆಯಲಾರಂಭಿಸಿದವು.
ಅನುಭವ ಮಂಟಪವೊಂದು ಆಧ್ಯಾತ್ಮಿಕ ವಿಶ್ವವಿದ್ಯಾಲಯವಾಗಿತ್ತು. ಅದು ಮುಕ್ತ ವಿಶ್ವವಿದ್ಯಾಲಯವಾಗಿ ಜಗತ್ತಿನಲ್ಲಿಯೇ ಮೊಟ್ಟಮೊದಲ ಸ್ಥಾಪನೆಗೊಂಡ ಧಾರ್ಮಿಕ ಸಂಸತ್ ಆಗಿತ್ತು. ಇಲ್ಲಿ ಜಾತಿ–ಮತ ಭೇಧವಿಲ್ಲದೆ, ಕಾಯಕದಲ್ಲಿ ಮೇಲು-ಕೀಳುಗಳಿಲ್ಲದೆ ಎಲ್ಲರೂ ಭಾಗವಹಿಸಿ ತಮ್ಮ ವ್ಯಕ್ತಿತ್ವದ ಸಾರ್ಥಕತೆಯನ್ನು ಪಡೆಯಬಹುದಾಗಿತ್ತು. ಲೌಕಿಕ, ಪಾರಮಾರ್ತಿಕ ಹಾಗೂ ಜೀವನಕ್ಕೆ ಸಂಬಂಧ ಎಲ್ಲಾ ವಿಷಯಗಳ ಬಗ್ಗೆ ಚರ್ಚೆಗಳು ಅನುಭವ ಮಂಟಪದಲ್ಲಿ ನಡೆಯುತ್ತಿದ್ದವು. ವಿವಿಧ ಕಾಯಕಗಳನ್ನು ಕೈಗೊಳ್ಳುತ್ತಿದ್ದ ಜನರು ಶರಣರಾಗಿದ್ದು, ಇದರಲ್ಲಿ ಪಾಲ್ಗೊಳ್ಳುತ್ತಿದ್ದರು. ಅಕ್ಕಮಹಾದೇವಿ, ಪ್ರಭುದೇವರು ಮತ್ತು ಚನ್ನಬಸವಣ್ಣನವರು ಇಂಥ ಕಾಯಕ ಮಾಡದಿದ್ದರೂ ತಾವು ಸಾಧಿಸಿದ ಜ್ಞಾನ ವೈರಾಗ್ಯದ ಔನ್ಯತ್ಯದಿಂದ ಜನರ ಬಾಳನ್ನು ತಿದ್ದುವುದೇ ಅವರ ಕಾಯಕವಾಗಿತ್ತು. ಅನುಭವ ಮಂಟಪದ ಚರ್ಚೆಗಳೆಲ್ಲವೂ ಕಾಯಕ ದಾಸೋಹ ತತ್ವವನ್ನು ಕೇಂದ್ರಬಿಂದುವಾಗಿಟ್ಟುಕೊಂಡೇ ನಡೆಯುತ್ತಿದ್ದವು. ಈ ತತ್ವವೇ ಶರಣ ಧರ್ಮದ ತಿರುಳಾಗಿತ್ತು. ಕಾಯಕ ಆತ್ಮಗೌರವವನ್ನು ತಣದುಕೊಟ್ಟರೆ, ದಾಸೋಹ ಪರಿಪೂರ್ಣತೆಯನ್ನು ತಂದುಕೊಡುತ್ತದೆ ಎಂಬುದು ನಂಬಿಕೆಯಾಗಿತ್ತು.

ಇಲ್ಲದ ಸ್ವರ್ಗ-ನರಕಗಳನ್ನು ಸೃಷ್ಟಿಸಿ ಮೂಢನಂಬಿಕೆಗಳನ್ನು ಹೆಚ್ಚಿಸಿ ಪುರೋಹಿತರು ಜನರನ್ನು ಶೋಷಣೆ ಮಾಡುತ್ತಿದ್ದರು. ಬಸವಣ್ಣನವರು ಜನರಲ್ಲಿ ವೈಚಾರಿಕತೆಯನ್ನು ಹೆಚ್ಚಿಸಿ ಮೂಢನಂಬಿಕೆಗಳನ್ನು ಉಚ್ಛಾಟಿಸಿದರು. ಈ ದಿಶೆಯಲ್ಲಿ ಅನುಭವ ಮಂಟಪದ ಶರಣರಲ್ಲಿ ನಡೆದ ವಿಚಾರಗೋಷ್ಠಿಗಳ ಫಲವಾಗಿ ವಚನಗಳ ರಚನೆಯಾಯಿತು. ಇದಕ್ಕೆ ಬಸವಣ್ಣನವರೇ ಮೊದಲಿಗರಾದರು, ಇತರರು ಅವರನ್ನು ಅನುಸರಿಸಿದರು. ದೇವಲೋಕ ಮರ್ತ್ಯಲೋಕಗಳಿಗೆ ಯಾವ ಸೀಮಾರೇಖೆಯೂ ಇಲ್ಲ. ಅವರು ಜೀವನವನ್ನು ಇಡಿಯಾಗಿ ಕಂಡರು. ಸ್ವರ್ಗ ನರಕಗಳ ಬರೆ ಎಲ್ಲಿಯೂ ಇರದೆ ನಮ್ಮ ನಡವಳಿಕೆಗಳಲ್ಲಿಯೇ ಇರುವವೆಂದು ಹೇಳಿದರು.
ದೇವಲೋಕ, ಮರ್ತ್ಸ್ಯಲೋಕವೆಂಬುದು ಬೇರಿಲ್ಲ ಕಾಣಿರೊ
ಸತ್ಯವ ನುಡುವುದೇ ದೇವಲೋಕ
ಮಿಥ್ಯವ ನುಡಿವುದೇ ಮರ್ತ್ಯಲೋಕ
ಆಚಾರವೇ ಸ್ವರ್ಗ, ಅನಾಚಾರವೇ ನರಕ
ಕೂಡಲಸಂಗಮದೇವಾ, ನೀನೇ ಪ್ರಮಾಣು
ಆಧ್ಯಾತ್ಮ ಮತ್ತು ಲೌಕಿಕಗಳು ಒಂದಕ್ಕೊಂದು ಪೂರಕವಾಗಿವೆ. ಅವು ಒಂದೇ ನಾಣ್ಯದ ಎರಡು ಮುಖಗಳು. ಒಂದರಲ್ಲಿ ಪ್ರಗತಿಯನ್ನು ಸಾಧಿಸಿ ಇನ್ನೊಂದರಲ್ಲಿ ಕಡೆಗಣಿಸಿದರೆ ಜೀವನ ಅಪೂರ್ಣವಾಗುತ್ತದೆ. ಅಲ್ಲಿಯೂ ಸಲ್ಲಬೇಕು ಮತ್ತು ಇಲ್ಲಿಯೂ ಸಲ್ಲಿಸಬೇಕು. ಹಾಗಾದರೆ ಮಾತ್ರ ಜೀವನ ಪರಿಪೂರ್ಣ ಎಂದು ಬಸವಣ್ಣನವರು ಸಾರಿದರು. ಹಾಗೆ ಅನುಭವ ಮಂಟಪದಲ್ಲಿ ಚರ್ಚಿಸಲ್ಪಟ್ಟ ಗಂಡಿನಂತೆ ಹೆಣ್ಣಿಗೂ ಸಮಾನತೆ ಇದೆ ಎಂಬುದನ್ನು ದೇವರದಾಸಿಮಯ್ಯನವರ ವಚನದಿಂದ ನಿರೂಪಣೆಗೊಂಡಿದೆ.
ಬಸವಣ್ಣನವರು ಈ ರೀತಿಯಲ್ಲಿ ಧಾರ್ಮಿಕ ತಳಹದಿಯ ಮೇಲೆ ಸಾಮಾಜಿಕ, ಆರ್ಥಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕ್ರಾಂತಿಗೈದ ಸಮಗ್ರ ಕ್ರಾಂತಿಯ ಹರಿಕಾರರು. ಇವರು ಬೋಧಿಸಿದ ಮೌಲ್ಯಗಳು ಪ್ರಚಾರವಾಗಿ ಆಚರಣೆಗೆ ಬಂದವು. ಇವುಗಳನ್ನು ಅನುಭವ ಮಂಟಪದಲ್ಲಿ ಕೂಲಂಕುಷವಾಗಿ ಚರ್ಚಿಸಿ ಇವುಗಳಿಗೆ ಒಂದು ಸಂವಿಧಾನ ಅಥವಾ ಸಿದ್ಧಾಂತ ರೂಪವನ್ನು ಕೊಡಲಾಯಿತು. ಎಲ್ಲದಕ್ಕೂ ಧರ್ಮವೇ ಕೇಂದ್ರವಾಗಿದ್ದು, ಮೌಢ್ಯ, ಗೊಡ್ಡು ಆಚರಣೆಗಳೇ ವ್ಯಾಪಕವಾಗಿದ್ದ ಕಾಲಘಟ್ಟದಲ್ಲಿ ಬಸವಣ್ಣ ಹಚ್ಚಿದ ಕ್ರಾಂತಿಯು ವೈಚಾರಿಕ ಚಿಂತನೆಯ ಕಿಡಿಯಾಗಿ ಸಮಾಜದ ಬದಲಾವಣೆ ಆರಂಭವಾಯಿತು. ಇದಕ್ಕೆ ಅವರು ಅನುಸರಿಸಿದ ಮಾರ್ಗ, ರಚಿಸಿದ ವಚನಗಳು, ನಡೆಸಿದ ಸಾಮಾಜಿಕ – ಧಾರ್ಮಿಕ ಕಾರ್ಮಿಕ ಕ್ರಮಗಳೇ ಕಾರಣ.
ಸಮಕಾಲೀನ ಸಮಾಜ ಮತ್ತು ಬಸವಣ್ಣ:
ಬಸವಣ್ಣನವರು ಶ್ರೇಷ್ಠ ಸಾಮಾಜಿಕ ಸುಧಾರಕರೆಂದೇ ಗುರುತಿಸಲ್ಪಡುವುದರಿಂದ ಪ್ರಚಲಿತ ಭಾರತದ ಸಾಮಾಜಿಕ ಸುಧಾರಣೆಗೆ ಅವರ ಮಾರ್ಗಗಳನ್ನು ಅವಲೋಕಿಸುವುದು ಅಗತ್ಯ. ಸೀಮಿತ ರಾಜ್ಯ/ಪ್ರಾಂತ್ಯಗಳ ಸಮುದಾಯದ ಕಲ್ಪನೆಯಡಿಯಲ್ಲಿ ಬಸವಣ್ಣನವರು ಧಾರ್ಮಿಕ ಕ್ರಾಂತಿಯ ಮೂಲಕ ೧೨ನೇ ಶತಮಾನದಲ್ಲಿ ಸುಧಾರಣಾ ಕೈಂಕರ್ಯವನ್ನು ನೆರವೇರಿಸಿದ್ದಾರೆ. ಆ ಕಾಲಘಟ್ಟದ ಧಾರ್ಮಿಕ ಚೌಕಟ್ಟು ಸೀಮಿತವಾಗಿದ್ದುದರಿಂದ ವೈದಿಕ ಸಂಪ್ರದಾಯದ ವಾರಸುದಾರರಾದ ಮೇಲ್ವರ್ಗದವರು ಒಂದಡೆಯಾದರೆ, ಅವರ ಆಜ್ಞಾನುಸಾರ ನಡೆಯುತ್ತ ಸದಾ ಅವರ ಸುಖ-ಭೋಗಗಳಿಗೆ ತಮ್ಮ ಜೀವನವನ್ನೇ ತ್ಯಾಗ ಮಾಡುತ್ತಿದ್ದ ಇತರೆ ಕೆಳವರ್ಗದ ಜನರು ಮತ್ತೊಂದು ಕಡೆ ಮೇಲಿನವರು ಹೇರಿದ್ದ ಕಟ್ಟುಪಾಡುಗಳು, ಆಚರಣೆಗಳು ಮೇಲು-ಕೀಳೆಂಬ ತಾರತಮ್ಯ ಮುಂತಾದವುಗಳ ವಿರುದ್ಧ ಪ್ರತಿಭಟಿಸುವುದಿರಲಿ, ಪ್ರಶ್ನೆ ಮಾಡಲೂ ಸಹ ಕೆಳವರ್ಗದ ಜನರು ಹೆದರಿ ಕಂಗಾಲಾಗಿದ್ದರು. ಇಂತಹ ಸಂದರ್ಭದಲ್ಲಿ ವೈದಿಕ ವರ್ಗದಲ್ಲಿ ಹುಟ್ಟಿ ಬೆಳೆದು, ಸಕಲ ಸುಖ-ಭೋಗಗಳನ್ನು ಹೊಂದಿದ್ದರೂ ಸಹ ತಳಸಮುದಾಯದ ಜನರಿಗೆ ಈ ತಾರತಮ್ಯ, ಅನ್ಯಾಯ, ವಂಚನೆ ಎಂಬಿತ್ಯಾದಿ ಕ್ರಾಂತಿಕಾರಿ ಪ್ರಶ್ನೆಗಳನ್ನು ಮೈಗಂಟಿಸಿಕೊಂಡು ಸುಧಾರಣೆ ತರಲು ಮುಂದಾದ ಬಸವಣ್ಣನವರು ನಿಜಕ್ಕೂ ಕ್ರಾಂತಿಪುರುಷರೇ ಸರಿ. ಬಸವಣ್ಣನವರ ವಿಚಾರಗಳು ಮತ್ತು ಕೈಗೊಂಡ ಕ್ರಮಗಳು ಸಹ ಇಂದಿಗೂ ಕ್ರಾಂತಿಕಾರಿ ಎನಿಸುತ್ತಿವೆ. ಅವರ ಸಮಾಜ ಕಲ್ಪನೆ, ಸಮಾನತೆ, ತಾರತಮ್ಯ ಹಿತವಾದದ್ದು. ದೈವದ ದೃಷ್ಟಿಯಲ್ಲಿ ಎಲ್ಲರೂ ಸಮಾನರು, ಎಲ್ಲರಿಗೂ ದೈವಾನುಗ್ರಹದ ಹಕ್ಕಿದೆ ಎಂದು ಭಾವಿಸಿದ ಅವರು ವಚನಗಳನ್ನು ರಚಿಸಿದರು. ಇತರರೂ ರಚಿಸುವಂತೆ ಪ್ರೇರೇಪಿಸಿದರು. ಶೀವಾನುಭವ ಮಂಟಪವೆನ್ನುವ ವೇದಿಕೆ ಸ್ಥಾಪಿಸಿ, ಎಲ್ಲಾ ವರ್ಗದ ಜನರೂ ಸಮನಾಗಿ ಕಲೆತು ಚಿಂತಿಸುವ, ಪ್ರಚುರಪಡಿಸುವ ವಿಚಾರಗೋಷ್ಠಿಗಳನ್ನು ಏರ್ಪಡಿಸುತ್ತಿದ್ದರು. ಕಾಯಕವೇ ಕೈಲಾಸವೆಂಬ ತತ್ವವನ್ನು ಅನುಷ್ಠಾನಕ್ಕೆ ತಂದು ಜಗತ್ತಿಗೆ ತೋರಿಸಿಕೊಟ್ಟರು. ಅಸ್ಪೃಶ್ಯತೆಯ ನಿವಾರಣೆಗೋಸ್ಕರ ಕೆಳವರ್ಗ ಮೇಲ್ವರ್ಗ ಮತ್ತು ಕಲ್ಯಾಣ ಏರ್ಪಡಿಸಿ ಕ್ರಾಂತಿಕಾರಿಕ ಕ್ರಮವನ್ನು ಜಾರಿಗೆ ತಂದರು.
ಬಸವಣ್ಣನವರ ಮೇಲಿನ ಎಲ್ಲಾ ತತ್ವ-ವಿಚಾರಗಳು ತುಂಬಾ ಸರಳವೂ, ಅನುಷ್ಠಾನಯೋಗವೂ ಮತ್ತು ಸಾರ್ವಕಾಲಿಕ ಸತ್ಯ ಸಂಗತಿಗಳೇ ಆಗಿವೆ.ಆದರೆ ಭಾರತದ ಸಾಮಾಜಕ ಸಂದರ್ಭದಲ್ಲಿ ಬಸವ ತತ್ವ ಹೇಳುವುದು ಸುಲಭ, ಆಚರಣೆ ತ್ರಾಸ ಎನ್ನುವಂತಾಗಿದೆ. ಭಾರತೀಯರಿಗೆ ದೇವರು, ಧರ್ಮದಲ್ಲಿ ಅಪಾರ ಶ್ರದ್ಧೆ, ನಂಬಿಕೆ ಮತ್ತು ವಿಶ್ವಾಸ. ಇದನ್ನು ತಪ್ಪೆಂದು ಭಾವಿಸಲಾಗದು,. ಆದರೆ ದೇವರನ್ನು ಒಲಿಸಿಕೊಳ್ಳಲು ವಿವಿಧ ಕರ್ಮಾಚರಣೆಗಳನ್ನು ಮಾಡುವ ಅಗತ್ಯವಿಲ್ಲ ಎಂಬುದು ಮುಖ್ಯವಾದ ಸಂಗತಿ. ಬಸವಣ್ಣನವರ ಪ್ರಕಾರ ಅಗತ್ಯವಾಗಿ ಬೇಕಾದುದು ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿ, ಬಹಿರಂಗ ಶುದ್ಧಿಗೆ ಅವರು ಹೇಳಿದ್ದು ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಎನ್ನುವ ಸಪ್ತ ಶೀಲಗಳು ಪ್ರಸ್ತುತ ಭಾರತೀಯ ಸಮಾಜದಲ್ಲಿ ಇವುಗಳ ಆಚರಣೆಯನ್ನು ಎಲ್ಲರೂ ಪ್ರಾಮಾಣಿಕವಾಗಿ ಕೈಗೊಂಡರೆ ಸ್ವಸ್ತ ಸಮಾಜ ಖಂಡಿತ ರಚನೆಯಾಗುತ್ತದೆ. ಆದರೆ ಶರಣರು ಯಾವುದನ್ನು ಬೇಡವೆಂದು ಹೇಳಿದ್ದರೋ ಅದನ್ನೇ ಬಲವಾಗಿ ಅಪ್ಪಿಕೊಳ್ಳುವಾಗ ಶುದ್ಧಿಗೆ ಬದಲಾಗಿ ಲಿಂಗ ಪ್ರತಿಷ್ಠಾಪನೆ ಮಾಡುವ, ಗುಡಿಗಳಿಗೆ ಹೋಗುವ, ತೀರ್ಥಕ್ಷೇತ್ರಗಳನ್ನು ಸುತ್ತುವ, ಹೋಮ, ಹವನ, ರುದ್ರಾಭಿಷೇಕ, ಮಹಾಮಸ್ತಕಾಭಿಷೇಕ ಮಾಡುವ ಜನವರ್ಗ ಹೆಚ್ಚಾಗುತ್ತಿದೆ. ಉಳ್ಳವರು ಶಿವಾಲಯವ ಮಾಡುವರು, ನಾನೇನ ಮಾಡಲಿ, ಬಡವನಯ್ಯ ಎನ್ನುವ ಬಸವಣ್ಣನವರು ದೇವಾಲಯ ಕಟ್ಟುವ/ಕಟ್ಟಿಸುವ ಶ್ರೀಮಂತ ಜನರನ್ನು ಟೀಕಿಸಿದ್ದಾರೆ. ಅವರು ಸ್ಥಾವರಕ್ಕಳಿವುಂಟು, ಜಂಗಮಕ್ಕುಳಿವಿಲ್ಲ ಎದು ಹೇಳಿದ್ದಾರೆ. ಇಲ್ಲಿ ಜಂಗಮ ಎಂದರೆ ಚಲನೆಯುಳ್ಳದ್ದು, ಜೀವ ಪರವಾದುದು ಅರಿವುಳ್ಳದ್ದು, ಒಂದರ್ಥದಲ್ಲ ಜನತೆಯೇ ಜಂಗಮ, ಜನರ ನೋವು ನಲಿವುಗಳಿಗೆ ಸ್ಪಂಧಿಸಿದರೆ ಅದು ಶಿವ ಪೂಜೆಗಿಂತ ಶ್ರೇಷ್ಠ ಎಂದು ತಿಳಿಸಿದ್ದಾರೆ. ವ್ಯತಿರಿಕ್ತವೆಂಬಂತೆ ಇಂದಿನ ಬಸವಾದಿ ಅನುಯಾಯಿಗಳು ಹೆಚ್ಚಾಗಿ ಲಿಂಗಪ್ರತಿಷ್ಟಾಪನೆಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಬಸವಣ್ಣನವರ ತತ್ವ ವಿಚಾರಗಳಿಂದ ಪ್ರಭಾವಿತಾಗಿದ್ದರೂ ಇಂದಿಗೂ ಹೆಚ್ಚು ಜನರು ಪರಂಪರಾನುಗತವಾಗಿ ಬಂದಿರುವ ವೈದಿಕ ಆಚರಣೆಗಳಿಂದ ಹೊರಬರಲು ಹೆಣಗಾಡುತ್ತಿದ್ದಾರೆ. ಹೀಗಾಗಿ ನಿಜವಾದ ಸಮಾಜ ಸುಧಾರಣೆ ಬಸವಣ್ಣನವರ ಮಾರ್ಗದಂತೆ ನಡೆಯಬೇಕಾದರೆ ಭಾರತವು ಅವರ ತತ್ವಾಚರಣೆಯನ್ನು ಕೈಗೊಳ್ಳಬೇಕು. ಏಕೆಂದರೆ ಬಸವಣ್ಣನವರ ವಿಚಾರಗಳು ಕ್ರಾಂತಿಕಾರಿ, ಮಾರ್ಗಗಳು ಕಠಿಣವಾದ ಯೋಗ್ಯ ಮತ್ತು ಕಾರ್ಯಕ್ರಮಗಳು ಹಿತವಿಲ್ಲದಿದ್ದರೂ ಸಾರ್ಥಕವಾದುವು. ಪ್ರಸಕ್ತ ಭಾರತೀಯ ಸಾಮಾಜಿಕ ಪರಿಸರದಲ್ಲಿರುವ ಅನೇಕ ತರ್ಕಹೀನ ಆಚರಣೆಗಳು ಮತ್ತು ಅನಿಷ್ಟಗಳು ನಿವಾರಣೆಯಾಗಬೇಕಾದರೆ ಬಸವಣ್ಣನವರ ಮಾರ್ಗಗಳು ಶ್ರೇಷ್ಠವೆಂದೇ ಪರಿಗಣಿಸಬಹುದು.
ಸಮಕಾಲೀನ ರಾಜಕೀಯ ಮತ್ತು ಬಸವಣ್ಣ:
ಯಾವುದೇ ದೇಶ-ರಾಷ್ಟçಗಳ ಸ್ಪಷ್ಟ ಕಲ್ಪನೆಗಳಿಲ್ಲದ ಬಸವಣ್ಣನವರ ಕಾಲಘಟ್ಟದ ರಾಜಕೀಯ ಪರಿಸ್ಥಿತಿಯನ್ನು ಸಮಕಾಲೀನ ಭಾರತದ ರಾಜಕಾರಣದೊಂದಿಗೆ ಹೋಲಿಸುವುದು ನಿರರ್ಥಕವೇ ಸರಿ. ಏಕೆಂದರೆ ಬಸವಣ್ಣನವರ ಕಾಲಘಟ್ಟದ ಸಂದರ್ಭದಲ್ಲಿ ರಾಜಕಾರಣವು ಸಮಾಜದ ಸಮಷ್ಟಿ ಪ್ರಜ್ಞೆಯ ಒಂದು ಭಾಗವಾಗಿತ್ತು. ಧರ್ಮವೇ ಪ್ರಧಾನವಾಗಿದ್ದು, ವೈದಿಕ ಆಚರಣೆಗಳು ಕಾನೂನಾಗಿದ್ದವು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳೆಂಬ ಸ್ಪಷ್ಟ ವರ್ಗೀಕೃತ ರಾಜ್ಯಾಡಳಿತ ವ್ಯವಸ್ಥೆಯು ಇರಲಿಲ್ಲವೆಂಬುದೇ ಪ್ರಮುಖ ವಿಚಾರ. ಅಲ್ಲದೆ ವೈದಿಕ ಧರ್ಮಾಚರಣೆಯ ಪರಿಧಿಯಲ್ಲಿ ಮೇಲ್ವರ್ಗದ ಜನರನ್ನು ಹೊರತುಪಡಿಸಿ ಉಳಿದ ತಳ ಸಮುದಾಯದ ಜನವರ್ಗಕ್ಕೆ ಮಹತ್ವವೇ ಇರಲಿಲ್ಲ. ಏಕೆಂದರೆ ಮೇಲ್ವರ್ಗದ ಜನರ ಸೇವೆಯಲ್ಲಿ ತೊಡಗಿ ಅದರಿಂದ ಬರುವ ಅಲ್ಪಗಳಿಕೆಯಿಂದಲೇ ತಳ ಸಮುದಾಯದ ಜನರು ಬದುಕು ಸವೆಸಬೇಕಾಗಿತ್ತು.ಅಲ್ಲದೆ ಶಿಕ್ಷಣ ಮುಂತಾದ ಸಕಲ ಸೌಲಭ್ಯಗಳು ಮೇಲ್ವರ್ಗದವರ ಪಾಲಾಗಿದ್ದು, ತಾವು ಅಧ್ಯಾವುದಕ್ಕೂ ಯೋಗ್ಯರಲ್ಲ ಎನ್ನುವ ಕೀಳರಿಮೆ ಆ ಜನರಲ್ಲಿತ್ತು. ವೈದಿಕ ಸಂಪ್ರದಾಯದ ಆಚರಣೆಗಳು ಅಂತಹ ಮೌಢ್ಯ ಮತ್ತು ಭಯದ ವಿಷ ಭೀಜಗಳನ್ನು ಬಿತ್ತಿ ಅಂಧಕಾರದಲ್ಲಿ ಜನರು ಬದುಕುವಂತೆ ಸಂಪ್ರದಾಯಗಳನ್ನು ಹೇರಿದ್ದರು. ಇಂತಹ ಕಾಲ ಘಟ್ಟದಲ್ಲಿದ್ದ ರೂಢಿ-ಸಂಫ್ರದಾಯಗಳ ಆಚರಣೆ, ಶೋಷಣೆ, ಅಸಮಾನತೆ, ತಾರತಮ್ಯಗಳು ಮೇಲ್ವರ್ಗದಲ್ಲಿ ಹುಟ್ಟಿ ಎಲ್ಲಾ ಸಕಲ ಸೌಕರ್ಯಗಳಿಗೂ ಭಾಜನರಾಗಿದ್ದ ಬಸವಣ್ಣನವರ ಮನಸ್ಸಿನಲ್ಲಿ ಉದ್ಭವವಾದ ಸುಧಾರಣಾ ಕ್ರಮಗಳೇ ಅವರ ರಾಜಕೀಯ ಮೆಟ್ಟಿಲಾಯಿತು. ಪರಿಣಾಮ ಕಾರ್ಯವಾಗಿ ವೈದಿಕಾಚರಣೆಯಿಂದ ಕೀಳು ವರ್ಗದವರ ಶೋಷಣೆ, ಅನ್ಯಾಯ, ಅಂಧಾನುಕರಣೆಯ ಕ್ರಮಗಳನ್ನು ವಿರೋಧಿಸುತ್ತ ಅವಕ್ಕೆ ಅದೇ ಧರ್ಮದ ಚೌಕಟ್ಟಿನಡಿಯಲ್ಲೇ ಪರಿಹಾರ ಕಂಡುಹಿಡಿಯುವ ಸಾಧನವಾಗಿ ಬಸವಣ್ಣನವರ ರಾಜಕಾರಣ ಹುಟ್ಟುಪಡೆಯಿತು. ಈ ಹಿನ್ನೆಲೆಯಲ್ಲಿ ಬಸವಣ್ಣ ಕೈಗೊಳ್ಳಬೇಕಾದೀತು. ಸಮಗ್ರ ಸಮಾಜೋ ಧಾರ್ಮಿಕ ಸುಧಾರಣೆಯೇ ರಾಜಕೀಯವಾಗಿ ರೂಪುಗೊಂಡಿದ್ದರಿಂದ ರಾಜಕೀಯವನ್ನು ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಿಂದ ಹೊರತುಪಡಿಸಿ ನೋಡುವುದು ಅಸಾಧ್ಯ. ಮೊದ ಮೊದಲಿಗೆ ತನ್ನ ಕುಟುಂಬದ ಒಳಗಡೆ ನಡೆಯುತ್ತಿದ್ದ ಮೌಢ್ಯಾಚರಣೆಗಳನ್ನು ಪ್ರತಿಭಟಿಸುತ್ತ, ಪ್ರಶ್ನಿಸುತ್ತ ನಂತರದಲ್ಲಿ ಹೊರಗೆ ಅಂದರೆ ಶಾಲೆಯಲ್ಲಿ, ಆಟದ ಮೈದಾಣದಲ್ಲಿ, ಕೀಳು ಜನರ ಕೇರಿಯಲ್ಲಿ ಆಚರಣೆಯಲ್ಲಿದ್ದ ನಂಬಿಕೆ, ಸಂಫ್ರದಾಯಗಳನ್ನು ಪ್ರಶ್ನಿಸುವ, ಧಿಕ್ಕರಿಸುವ ಮನೋಸ್ಥೆöÊರ್ಯವನ್ನು ರೂಢಿಸಿಕೊಂಡರು. ಮುಂದೆ ಬಿಜ್ಜಳನ ಆಸ್ಥಾನದಲ್ಲಿ (ರಾಜ್ಯಾಡಳಿತದಲ್ಲಿ) ಸೇರಿಕೊಂಡಾಗ ಸುಧಾರಣಾ ಕ್ರಮಗಳನ್ನು ಒಂದೊಂದಾಗಿ ಅನುಷ್ಠಾನಗೊಳಿಸಲು ಮುಂದಾದರು. ಬಸವಣ್ಣನವರ ರಾಜಕೀಯ ಪಾದಾರ್ಪಣೆಯನ್ನು ಇಲ್ಲಿ ಗುರುತಿಸಬಹುದು. ಮುಂದೆ ಕೋಶಾಧಿಕಾರಿಯಾಗಿ ಕೈಗೊಂಡ ಕ್ರಮಗಳು, ಜಾರಿಗೆ ತಂದ ಸುಧಾರಣೆಗಳು ಹಾಗೂ ಶಿವಾನುಭವ ಮಂಟಪದ ಸಾಧನೆ, ಶರಣರಿಂದ ವಚನಗಳ ರಚನೆ, ಅದರಲ್ಲಿ ಹಿಂದುಳಿದವರಿಗೆ, ಮಹಿಳೆಯವರಿಗೆ ಪ್ರಾಧಾನ್ಯತೆ, ಅನ್ನದಾಸೋಹ, ಅಕ್ಷರದಾಸೋಹ, ಅಸ್ಪೃಶ್ಯತಾ ನಿವಾರಣೆಯ ಭಾಗವಾಗಿ ಸಹಪಂಕ್ತಿ ಭೋಜನ, ಕೆಳವರ್ಗದವರ ಮನೆಯಲ್ಲಿ ಭೋಜನ, ಅಂತರಜಾತಿಯ ವಿವಾಹ ಇವೆಲ್ಲದರಲ್ಲೂ ಬಸವಣ್ಣ ಒಬ್ಬ ಶ್ರೇಷ್ಠ ರಾಜನೀತಿ ತಜ್ಞರಾಗಿಯೇ ನಡೆದುಕೊಂಡು ಮಾದರಿಯಾಗಿದ್ದಾರೆ. ಅವರ ಕಲ್ಪನೆಯ ಕಾಯಕ ಮತ್ತು ದಾಸೋಹ ತತ್ವಗಳು, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳನ್ನು ಪ್ರತಿನಿಧಿಸುವ ಅನುಭವ ಮಂಟಪ, ಸಹ ಪಂಕ್ತಿ ಭೋಜನ ಮುಂತಾದ ಎಲ್ಲಾ ಕಾರ್ಯಕ್ರಮಗಳು ದೃಢವಾದ ಮತ್ತು ಶ್ರೇಷ್ಠವಾದ ರಾಜಕೀಯ ಕಾರ್ಯಗಳೇ ಆಗಿವೆ. ಇವು ಭಾರತಕ್ಕಷ್ಟೇ ಸೀಮಿತವಾಗಿರದೆ ವಿಶ್ವಕ್ಕೆ ಮಾದರಿಯಾದ ತತ್ವಾದರ್ಶಗಳೇ ಆಗಿವೆ. ಸಮಕಾಲೀನ ಭಾರತದ ರಾಜಕೀಯದಲ್ಲಿಅಳವಡಿಸಿಕೊಳ್ಳಬಹುದಾದ ನೀತಿ ಶಾಸನಗಳಾದ ಅನ್ನದಾಸೋಹ, ಜ್ಞಾನದಾಸೋಹ ಮತ್ತು ಧನದಾಸೋಹ ಕಾರ್ಯಕ್ರಮಗಳು ಎಂದಿಗೂ ಅನುಕರಣೀಯವಾಗಿವೆ. ಹಾಗೆಯೆ ಕೆಳವರ್ಗದ ಜನರಲ್ಲಿ ವಿಶ್ವಾಸ-ಧೈರ್ಯ ಮುಂತಾದ ಕಾರ್ಯಗಳು ಸಹ ಪಂಕ್ತಿಭೋಜನ, ಅನುಭವ ಮಂಟಪ, ಅಂತರಜಾತಿ ವಿವಾಹಳಂತ ಕ್ರಾಂತಿಕಾರಿ ಸುಧಾರಣೆಗಳು ಇಂದಿಗೂ ಭಾರತದ ರಾಜಕಾರಣದಲ್ಲಿ ಸ್ಪಷ್ಟವಾಗಿ ಗೋಚರಿಸದೇ ಇರುವುದು ಈ ಆಧುನಿಕ ಭಾರತೀಯ ರಾಜಕೀಯ ಜಡತ್ವವನ್ನು ಸಾಬೀತು ಪಡಿಸುತ್ತದೆ. ಪ್ರತಿಯಾಗಿ ಇಂದು ಜಾತಿ ಜಾತಿಗಳನ್ನು ಧರ್ಮಗಳನ್ನು, ಎತ್ತಿಕಟ್ಟುವ, ಅಂಧಾನುಕರಣೆಯ ಮೂಲಕ ಪ್ರಚೋದನೆಗೆ ಮಾಡುವ ಉತ್ತೇಜಿಸಿ, ಉದ್ರೇಕಗೊಳಿಸಿ ಕೀಳು ಮಟ್ಟದ ರಾಜಕೀಯ ಮಾಡುವ ಪಕ್ಷಗಳಿವೆ. ರಾಜಕಾರಣಿಗಳಿದ್ದಾರೆ. ಇದು ಬಸವಣ್ಣನಂತ ಮಹಾನ್ ಮಾನವತಾವಾಧಿ ವಿಶ್ವಗುರು ಜನಿಸಿದ ನಾಡಿನ ಪ್ರಸ್ತುತ ಸನ್ನಿವೇಶ. ನಿಜವಾದ ಭಾರತ ಪ್ರೇಮಿಯಾದ ರಾಜಕಾರಣಿಗಳು ಮತ್ತು ಪಕ್ಷಗಳು ಇಂದಿಗೂ ಸಹ ಬಸವಣ್ಣನವರ ಶ್ರೇಷ್ಠ ರಾಜಕಾರಣದ ಕೆಲವು ಅಂಶಗಳನ್ನಾದರೂ ಅಳವಡಿಸಿಕೊಂಡರೆ ಭಾರತವು ವಿಶ್ವದಲ್ಲೇ ಶ್ರೇಷ್ಠ ಮತ್ತು ಉತ್ತಮ ಪ್ರಜಾಪ್ರಭುತ್ವ ರಾಷ್ಟçವಾಗಿ ಹೊರಹೊಮ್ಮಲು ವಿಫುಲ ಅವಕಾಶಗಳಿವೆ. ಹೇಗೆಂದರೆ ಬಸವಣ್ಣನವರ ರಾಜಕೀಯದಲ್ಲಿ ಸ್ವಾರ್ಥವಿಲ್ಲ, ಭ್ರಷ್ಠಾಚಾರ ಮುಕ್ತ ವಾತಾವರಣ ಸ್ವಜನ ಪಕ್ಷಪಾತವಿಲ್ಲದ, ಆಡಂಬರವಿಲ್ಲದ ಸರಳ ಮತ್ತು ಸುಲಭ ಆದರೆ ಶ್ರೇಷ್ಠ ಮಾನವತಾವಾದದ ರಾಜಕೀಯ ರೂಪುರೇಷೆಯು ಅಡಕವಾಗಿರುವುದು.

ಸಮಕಾಲೀನ ಆರ್ಥಿಕತೆ ಮತ್ತು ಬಸವಣ್ಣ:
ಬಸವಣ್ಣನವರ ಆರ್ಥಿಕ ಚಿಂತನೆ ಸರಳವೂ ಹೌದು, ಸಂಕೀರ್ಣವೂ ಹೌದು. ಸರಳ ಹೇಗೆಂದರೆ ಮಾನವ ಜೀವನದ ಬಹುಮುಖ ವ್ಯವಸ್ಥೆಯೊಂದಿಗೆ ಮಿಳಿತವಾಗಿರುವ ಆರ್ಥಿಕ ವಿಚಾರಗಳನ್ನು ಬಸವಣ್ಣ ಪ್ರತಿಪಾದಿಸಿದ ಕಾಯಕ ಮತ್ತು ದಾಸೋಹ ಮಾರ್ಗಗಳ ಜೊತೆಯಲ್ಲಿಯೇ ಅರ್ಥಮಾಡಿಕೊಳ್ಳಬಹುದು. ಅಂದರೆ ಕಾಯಕದ ಮಹತ್ವ ದುಡಿಮೆಯನ್ನು ದಾಸೋಹದ ಮಹತ್ವ ವಿತರಣಾ ವ್ಯವಸ್ಥೆಯನ್ನು ಒತ್ತಿ ಹೇಳುವುದರಿಂದ ಇವರ ಆರ್ಥಿಕ ವಿಚಾರಗಳು ಸರಳ. ಹಾಗೆಯೇ ಇವರ ಆರ್ಥಿಕ ವಿಚಾರ ಸಂಕೀರ್ಣ ಹೇಗೆಂದರೆ ಧಾರ್ಮಿಕ, ರಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳೊಡನೆ ಆರ್ಥಿಕ ವ್ಯತ್ಯಾಸಗಳು ಅವಿನಾಭಾವ ಸಂಬಂಧವನ್ನು ಹೊಂದಿವೆ. ಮನುಷ್ಯ ಕೈಗೊಳ್ಳುವ ಯಾವುದೇ ಚಟುವಟಿಕೆಯು ಮೂಲಭೂತವಾಗಿ ಧಾರ್ಮಿ, ನೈತಿಕ ಹಾಗೂ ಸಾಮಾಜಿಕ ನೆಲೆಗಳನ್ನು ಹೊಂದಿದ್ದು, ಅದಕ್ಕೆ ಪ್ರತ್ಯೇಕ ಅಸ್ಥೀತ್ವವೇ ಇಲ್ಲ, ದೈವ ಮತ್ತು ಧರ್ಮದ ಚೌಕಟ್ಟಿನಲ್ಲೇ ದುಡಿಮೆ ನಡೆಯಬೇಕು. ಜೊತೆಗೆ ಸಮಾಜದಲ್ಲಿ ಯಾವುದೇ ಕಾರಣಕ್ಕೂ ಅನಾವಶ್ಯಕ ಪೈಪೋಟಿಗಳ ವಾತಾವರಣ ನಿರ್ಮಾಣಕ್ಕೆ ಎಡೆಮಾಡಿಕೊಡದೆ ಪ್ರತಿಯೊಬ್ಬರೂ ತಮ್ಮ ಬದುಕಿಗಾಗಿ ದುಡಿಯಬೇಕು, ದುಡಿದು ಸಂಪಾದಿಸಿದ್ದನ್ನು ಸಮಾಜದೊಂದಿಗೆ ಹಂಚಿಕೊಳ್ಳಬೇಕು. ಹಾಗೆ ಹಂಚಿಕೊಳ್ಳುವ ಅಥವಾ ದಾಸೋಹಕ್ಕೆ ನೀಡಬಹುದಾದ ಸಂಪಾದನೆಯು ನೈತಿಕ ಮಾರ್ಗದಿಂದ ಗಳಿಸಿದುದೇ ಆಗಿರಬೇಕು. ಉಳಿದಂತೆ ಅನಾವಶ್ಯಕ ಸಂಪದನೆ ಅಥವಾ ಗಳಿಕೆಗೆ ಆಸ್ಪದ ಇಲ್ಲವೇ ಇಲ್ಲ. ಇದರಿಂದಾಗಿ ಉಳಿತಾಯ ಹೂಡಿಕೆಗಳೆಂಬ ಆಧುನಿಕ ಅರ್ಥವ್ಯವಸ್ಥೆಯ ರಚನೆಯಂತೂ ಇಲ್ಲವೇ ಇಲ್ಲ. ಇವಿಷ್ಟು ಬಸವಣ್ಣನವರ ಪ್ರಮುಖ ಆರ್ಥಿಕ ವಿಚಾರಗಳು.
ಆಧುನಿಕ ಉದ್ಯಮ ಜಗತ್ತಿನ ಪರಿಸರದಲ್ಲಿ ಬಸವಣ್ಣನವರ ಆರ್ಥಿಕ ರೂಪವನ್ನು ನೋಡುವುದು ಮರೀಚಿಕೆಯೇ ಹೌದು. ಏಕೆಂದರೆ ಪ್ರಚಲಿತ ಆರ್ಥಿಕ ಮತ್ತು ಔದ್ಯೋಗಿಕ ಕ್ಷೇತ್ರಗಳು ಸಾಕಷ್ಟು ಸಂಕೀರ್ಣವಾಗಿವೆ. ಸಾಕಷ್ಟು ಪೈಪೋಟಿಯೊಡನೆ ಸರಕು ಸೇವೆಗಳನ್ನು ಅತ್ಯಾಧುನಿಕವಾದ ಮಾರ್ಗದಲ್ಲಿ ಉತ್ಪಾದಿಸಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರಾಟ ಮಾಡಿ ಲಾಭಗಳಿಸಿಕೊಳ್ಳುವುದೇ ಉತ್ಪಾದಕರ ಧ್ಯೇಯವಾಗಿದೆ. ಹಾಗೆಯೇ ಈ ಸರಕು ಸೇವೆಗಳನ್ನು ಕೊಂಡುಕೊಳ್ಳುವ ಗ್ರಾಹಕರು ಕೂಡ ಬಗೆ ಬಗೆಯ ವಿನ್ಯಾಸದ, ಆಕರ್ಷಕ ನವೀನ ಮಾದರಿಯ ಸರಕುಗಳಿಗೆ ಹಾತೊರೆಯುತ್ತಿದ್ದು, ಆದಷ್ಟು ಕಡಿಮೆ ಬೆಲೆಯಲ್ಲಿ ಸಾಕಷ್ಟು ಅಧಿಕ ಪ್ರಮಾಣವನ್ನು ಕೊಂಡುಕೊಳ್ಳುವುದು ರೂಢಿಯಾಗಿದೆ. ಪ್ರಸ್ತುತ ಉಪಯೋಗಕ್ಕಲ್ಲದೆ, ಮುಂದಿನ ದಿನಗಳಿಗಾಗಿ ಶೇಖರಿಸಿಡುವ ಪ್ರವೃತ್ತಿಯು ಆಧುನಿಕ ಅರ್ಥವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಇಲ್ಲಿ ಉತ್ಪಾದಕರೆ ಬೇರೆ, ಅನುಭೋಗಿಸುವ ಗ್ರಾಹಕರೇ ಬೇರೆಯಾಗಿದ್ದು ಇವರಿಬ್ಬರ ಹಿತಾಸಕ್ತಿಗಳು ಪರಸ್ಪರ ವಿರುದ್ಧವಾದ ದಿಕ್ಕಿನಲ್ಲಿದ್ದು ಸ್ವಾರ್ಥಮಯವಾಗಿವೆ. ಮಾನವ ಜೀವನದ ಚಟುವಟಿಕೆಗಳ ಈ ಭಾಗವು ಉಳಿದ ಚಟುವಟಿಕೆಗಳ ಭಾಗದೊಂದಿಗೆ ಅಷ್ಟಾಗಿ ಸಂಬಂಧಿಸಿಲ್ಲ. ಹಾಗಾಗಿ ಬಡವ ಶ್ರೀಮಂತ ಎನ್ನುವ ಭೇದ-ಭಾವವಿಲ್ಲದ ರೀತಿಯಲ್ಲಿ ಇಂದು ಆರ್ಥಿಕ ಚಟುವಟಿಕೆಗಳಲ್ಲಿ ಜನರು ತೊಡಗಿಸಿಕೊಂಡಿದ್ದಾರೆ. ಇದಲ್ಲದೆ, ಆರ್ಥಿಕ ಬದುಕಿನಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳ ಹಂಗು ಅಡಗಿಲ್ಲ. ನೈತಿಕತೆ ಮತ್ತು ಧಾರ್ಮಿಕತೆಗಳ ಪ್ರಭಾವವೇ ಇಲ್ಲ. ಸಮಕಾಲೀನ ಭಾರತದ ಆರ್ಥಿಕತೆಯ ಸಂದರ್ಭದಲ್ಲಿ ಮೇಲೆ ಹೇಳಿದ ಹಾಗೆ ಧಾರ್ಮಿಕ, ನೈತಿಕ ಮತ್ತು ಸಾಮಾಜಿಕ ಕಾಳಜಿಗಳು ಗೋಚರಿಸುವುದಿಲ್ಲ. ಜಾಗತಿಕ ಮಟ್ಟದ ಬದಲಾಗುತ್ತಿರುವ ಆರ್ಥಿಕ ನೀತಿ ನಿರೂಪಣೆಗಳು ಮಾನವನ ಸರ್ವತೋಮುಖ ಕಲ್ಯಾಣದ ಕಡೆ ಮುಖ ಮಾಡಿವೆ. ಜೊತೆಗೆ ರಾಷ್ಟçಗಳು ಅನುಸರಿಸುತ್ತಿರುವ ಆರ್ಥಿಕ ನೀತಿಗಳು ಪ್ರಕೃತಿ ಸಂಪನ್ಮೂಲಗಳ ಸದ್ಭಳಕೆ, ಜಾಣ ನಿರ್ವಹಣೆ, ಪರಿಸರ ಆರೋಗ್ಯ ರಕ್ಷಣೆ ಮುಂತಾದವುಗಳ ಕಡೆ ನಿಗಾವಹಿಸಬೇಕೆಂದು ಒತ್ತಿ ಹೇಳುತ್ತಿವೆ. ಜಾಗತಿಕ ತಾಪಮಾನವೆಂಬ ಪೆಡಂಭೂತವು ಜಗತ್ತಿನ ಎಲ್ಲಾ ರಾಷ್ಟçಗಳ ಅಸ್ಥಿತ್ವಕ್ಕೆ ಸವಾಲು ಎಸೆಯುತ್ತಿದೆ. ಇದಕ್ಕೆ ಎಚ್ಚೆತ್ತುಕೊಂಡು ಆರ್ಥಿಕ ನೀತಿಯಲ್ಲಿ ನಿರ್ಬಂಧಗಳನ್ನು ಅಳವಡಿಸಿಕೊಳ್ಳದಿದ್ದರೆ ಜಗತ್ತಿನ ಅರ್ಥವ್ಯವಸ್ಥೆಯೇ ಗಂಡಾಂತರ ಎದುರಿಸಬೇಕಾಗುತ್ತದೆ.
ಮೇಲಿನ ಪರಿಸ್ಥಿತಿ ಒಂದೆಡೆಯಾದರೆ ಭಾರತದಂತ ಅಭಿವೃದ್ಧಿಶೀಲ ರಾಷ್ಟçವು ಅನೇಕ ಬಗೆಯ ದ್ವಂದ್ವ ನೀತಿಗಳಲ್ಲಿ ಕೊಸರಾಡುತ್ತಿದೆ. ಅತ್ಯಾಧುನಿಕ ನಾಗರೀಕತೆಯ ಮಾರುಕಟ್ಟೆಯಾಧಾರಿತ ಅಭಿವೃದ್ಧಿ ಹೊಂದಿದ ಆರ್ಥಿಕತೆ ಒಂದೆಡೆಯಾದರೆ ಕೃಷಿ ಪ್ರಧಾನವಾದ ಹಿಂದುಳಿದಿರುವ ಗ್ರಾಮೀಣ ಭಾಗದ ಆರ್ಥಿಕತೆ ಮತ್ತೊಂದೆಡೆ ಭಾರತದಂತ ಸಂಫ್ರದಾಯ ಪ್ರಧಾನ ಆರ್ಥಿಕತೆಯಲ್ಲಿ ಕೃಷಿ ಮತ್ತು ಸಣ್ಣ ಔದ್ಯಮಿಕ ಕ್ಷೇತ್ರಗಳನ್ನು ಒಳಗೊಂಡ ಗ್ರಾಮೀಣ ಅರ್ಥವ್ಯವಸ್ಥೆಯು ಇಂದು ಅನೇಖ ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಕೃತಿಯ ಅಸಹಕಾರ ಅಂದರೆ ಜಾಗತಿಕ ತಾಪಮಾನ, ಮಳೆಯ ಅನಿಶ್ಚಿತತೆ ಮತ್ತು ಅನಿಯಮಿತ ಲಭ್ಯತೆ, ಕೊರತೆ ಸಂಪನ್ಮೂಲಗಳ ಅಸಮಪರ್ಕ ಮತ್ತು ಅವೈಜ್ಞಾನಿಕ ನಿರ್ವಹಣೆ ಮುಂತಾದವುಗಳಿಗಾಗಿ ಇದು. ಗ್ರಾಮೀಣ ಆರ್ಥಿಕತೆ ಅನೇಕ ಸವಾಲುಗಳ ನಡುವೆ ಕಾರ್ಯನಿರ್ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಸವಣ್ಣನವರ ಆರ್ಥಿಕ ಚಿಂತನೆ ಸೀಮಿತ ಮಿತಿಯಲ್ಲಿ ಕೆಲವು ಪರಿಹಾರಗಳನ್ನು ಸೂಚಿಸುತ್ತದೆ. ಬಹುಮುಖ್ಯವಾಗಿ ಯೋಗ್ಯ ದೃಢಕಾಯ ಹೊಂದಿರುವ ಮಾನವರೆಲ್ಲರೂ ಒಂದೊದು ಕಾಯಕವನ್ನು ಮಾಡಲೇಬೇಕು. ಯಾವ ಕೆಲಸವನ್ನೂ ಮಾಡದೆ ಬದುಕನ್ನು ನಿರ್ವಹಿಸಬೇಕೆನ್ನುವ ಮನೋಭಾವ ದೂರವಾಗಬೇಕು. ಇಲ್ಲಿ ಬಸವಣ್ಣನವರ ಸೀಮಿತ ಆರ್ಥಿಕ ಚಟುವಟಿಕೆಗಳ ಚೌಕಟ್ಟಿನ ಹಿನ್ನೆಲೆಯಲ್ಲಿ ದೈಹಿಕ ಅಥವಾ ಶರೀರ ಶ್ರಮದ ಕೆಲಸಗಳು ಸಾಕಷ್ಟು ಲಭ್ಯವಿರುವುದರಿಂದ ನಿರುದ್ಯೋಗವೆನ್ನುವುದು ಸಮಸ್ಯೆಯಾಗಲಾರದು ಎನ್ನುವುದು ಕೆಲವರ ಅಭಿಪ್ರಾಯ. ಹಾಗೆಯೇ ಸೀಮಿತ ಉಪಭೋಗ ಮತ್ತು ಸರಳ ಜೀವನ ಶೈಲಿಗಳು ಗ್ರಾಮೀಣ ಭಾರತದಲ್ಲಿರುವ ಭ್ರಷ್ಟಾಚಾರ, ಲಂಚಗುಳಿತನ, ವಾಮಮಾರ್ಗದ ಸಂಪಾದನೆಯ ಚಟುವಟಿಕೆಗಳು ದೂರವಾಗಲು ನೆರವಾಗುತ್ತವೆ. ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯಿಂದಾಗಿ ಆಥಿಕ ಚಟುವಟಿಕೆಗಳ ವಿಕೇಂದ್ರೀಕರಣವೂ ಸ್ವಲ್ಪ ಮಟ್ಟಿಗೆ ಸಾಧ್ಯವಾಗುತ್ತದೆ. ದಿನಂಪ್ರತಿ ಕಾಯಕದಲ್ಲಿ ತೊಡಗಿ ಜೀವನ ನಡೆಸುವುದರಿಂದ ಆರ್ಥಿಕ ಪರಿಸರ ಮತ್ತು ಜನರ ಜೀವನ ಕ್ರಮವು ನಿರಂತರ ಚಟುವಟಿಕೆಯ ಚಲನಶೀಲತೆಯನ್ನು ರೂಢಿಗತಗೊಳಿಸಬಲ್ಲದು. ಅಲ್ಲದೆ ಗ್ರಾಮೀಣ ಭಾಗದಿಂದ ಹೆಚ್ಚಿನ ಪ್ರಮಾಣದ ಜನರು ನಗರ ಪ್ರದೇಶಗಳಿಗೆ ವಲಸೆ ಬರುವುದನ್ನು ನಿಯಂತ್ರಿಸಬಹುದು.
ಇಂದಿನ ಆಧುನಿಕತೆಯ ನಾಗರೀಕ ಸೇವಾ ಕೇಂದ್ರಗಳು, ಉದ್ಯಮಗಳು, ವಿಜ್ಞಾನ – ತಂತ್ರಜ್ಞಾನಾಧಾರಿತ ಚಟುವಟಿಕೆಗಳು ಹೆಚ್ಚಾಗಿ ನಗರ ಭಾರತದಲ್ಲಿ ಕೇಂದ್ರೀಕರಣಗೊಂಡಿವೆ. ಹಾಗಾಗಿ ಗ್ರಾಮೀಣ ಭಾರತಕ್ಕಿಂತ ನಗರ ಭಾರತದ ಆರ್ಥಿಕತೆ ಬಹಳ ಸಂಕೀರ್ಣವಾದ, ಗೊಂದಲವಾದ ಮತ್ತು ವಿಷಮಯುಕ್ತ ವ್ಯವಸ್ಥೆಯಾಗಿದೆ. ಇದರ ಸುಧಾರಣೆಗಾಗಿ ಬಸವಣ್ಣನವರ ಸೀಮಿತ ಆರ್ಥಿಕ ರೂಪವನ್ನು ಊಹಿಸುವುದು ಅಸಾಧ್ಯ. ಆದರೆ ದೈನಂದಿನ ಆಗುಹೋಗುಗಳ ಸಂದರ್ಭದಲ್ಲಿ ನೈತಿಕತೆಯನ್ನು ಮೈಗೂಡಿಸಿಕೊಳ್ಳುವ ಅಗತ್ಯವನ್ನು ನೋಡಬಹುದು. ದುಡಿಯುವ ಕಾರ್ಮಿಕ ವರ್ಗದ ಜನರ ಶ್ರಮಗೌರವವನ್ನು ಎತ್ತಿ ಹಿಡಿಯುವ ಮತ್ತು ಅವರಲ್ಲಿ ಆತ್ಮಸ್ಥೆöÊರ್ಯ ತುಂಬುವ ಕೆಲಸವನ್ನು ಸಾಧ್ಯವಾಗಿಸಬಹುದು. ಜೊತೆಗೆ ಉದ್ಯಮ ಕ್ಷೇತ್ರಗಳು ಗಳಿಸುವ ಲಾಭದಲ್ಲಿ ಕಾರ್ಮಿಕರಿಗೆ ಪಾಲನ್ನು ನೀಡುವ ಮತ್ತು ಅವರ ಕಲ್ಯಾನ ಕಾರ್ಯಕ್ರಮಗಳಿಗೆ ನೆರವಾಗುವ ಕೆಲಸ ಕಾರ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೆರವೇರಿಸುವುದು ಅಗತ್ಯ. ಜಾಗತಿಕ ಉದ್ಯಮ ಕ್ಷೇತ್ರದ ಹಿನ್ನೆಲೆಯಲ್ಲಿ ತಾವು ಗಳಿಸುವ ಲಾಭದ ಪ್ರಮಾಣದಲ್ಲಿ ಒಂದು ಭಾಗವನ್ನು ಸಮಾಜದ ಉಪಯೋಗಕ್ಕಾಗಿ ನೀಡುವ ಪರಿಪಾಠವು ಇತ್ತೀಚೆಗೆ ಮಹತ್ವ ಪಡೆದುಕೊಳ್ಳುತ್ತಿದೆ. ಉದ್ಯಮ ಜಗತ್ತಿನ ಸಾಮಾಜಿಕ ಹೊಣೆಗಾರಿಕೆ (ಅoಡಿಠಿoಡಿಚಿಣe Soಛಿiಚಿಟ ಖesoಠಿಟಿsibiಟiಣಥಿ) ಎನ್ನುವ ಈ ಕಾರ್ಯಕ್ರಮವು ಬಸವಣ್ಣನವರ ಅಧಿಕ ಗಳಿಕೆಯ ವಿತರಣಾ ಕಾರ್ಯಕ್ರಮವಾದ ದಾಸೋಹದ ಆಶಯವನ್ನು ಹೊಂದಿದೆ ಎನ್ನಬಹುದು. ಇದಕ್ಕಾಗಿ ಈ ಸಾಮಾಜಿಕ ಹೊಣೆಗಾರಿಕೆಯನ್ನು ಹೆಚ್ಚೆಚ್ಚು ಪರಿಣಾಮಕಾರಿಯಾಗಿ ನೆರವೇರಿಸುವ ಅಗತ್ಯವಿದೆ.
ಉಳಿದಂತೆ ಕೆಲವು ಸರ್ಕಾರೇತರ ಸಂಘ ಸಂಸ್ಥೆಗಳು, ಧಾರ್ಮಿಕ ದತ್ತಿ ಸಂಸ್ಥೆಗಳು, ಮಠಮಾನ್ಯಗಳು ಸಾಮಾಜಿಕ ಸೇವೆಯ ಕೈಂಕರ್ಯದಲ್ಲಿ ತೊಡಗಿಸಿಕೊಂಡಿವೆ. ಇದಕ್ಕೆ ಅಗತ್ಯವಾದ ಸಂಪತ್ತನ್ನು ತಾವೇ ಗಳಿಸಿಕೊಳ್ಳುತ್ತ ಇತರೆ ಮೂಲಗಳಿಂದಲೂ ಸಂಗ್ರಹಿಸುತ್ತಿವೆ. ಆದರೆ ಕೆಲವು ಸಂಸ್ಥೆಗಳು ಅನೈತಿಕ ಮತ್ತು ವಾಮ ಮಾರ್ಗಗಳನ್ನು ಅನುಸರಿಸಿ ಸಂಫತ್ತನ್ನು ಸಂಗ್ರಹಿಸಿ, ಸಮಾಜ ಸೇವೆ ನಿರ್ವಹಣೆಯಲ್ಲಿ ತೊಡಗಿವೆ. ಇದಕ್ಕೆ ಪ್ರಚಾರ ಮತ್ತು ಪ್ರತಿಷ್ಠೆಗಳಷ್ಠೆ ಮುಖ್ಯವಾಗಿರುವುದರಿಂದ ನೈತಿಕತೆಗೆ ಬೆಲೆ ಇಲ್ಲ.
ಈ ಹಿನ್ನೆಲೆಯಲ್ಲಿ ಬಸವಣ್ಣ ಪ್ರತಿಪಾದಿಸಿದ ಆರ್ಥಿಕ ರೂಪಕದ ಸಂಪೂರ್ಣ ಅಳವಡಿಕೆ ಅಸಾಧ್ಯವೆನಿಸದೆ ಇರದು. ಆದಾಗ್ಯೂ ಸೀಮಿತ ವ್ಯಾಪ್ತಿಯಡಿಯಲ್ಲಿ ಕೆಲವು ಪ್ರಮುಖ ವಿಚಾರಗಳನ್ನು ಸಮಕಾಲೀನ ಅರ್ಥವ್ಯವಸ್ಥೆಯ ಚೌಕಟ್ಟಿನಲ್ಲಿ ತರುವುದು ಅಸಾಧ್ಯವೇನಲ್ಲ. ಏಕೆಂದರೆ ಆರ್ಥಿಕ ಚಟುವಟಿಕೆಗಳು ನೈತಿಕತೆಯನ್ನು ಅಳವಡಿಸಿಕೊಳ್ಳಬೇಕೆಂಬ ಸಂಗತಿಯನ್ನು ಇತ್ತೀಚಿನ ಮಾನವಾಭಿವೃದ್ಧಿಯ ಚಿಂತಕರಾದ ಪ್ರೊ.ಅಮಾರ್ಥಸೇನ್ ಅವರೇ ಒತ್ತಿ ಹೇಳಿದ್ದಾರೆ. ಸಮಾನ ಸಮಾಜದ ನಿರ್ಮಾಣಕ್ಕೆ ಅಗತ್ಯವಾಗಿ ತಾರತಮ್ಯತೆಯನ್ನೂ, ಆದಾಯ-ಸಂಪತ್ತಿನ ಅಸಮಾನತೆಗಳನ್ನೂ ಕಡಿಮೆಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಅನೇಕ ರಚನಾತ್ಮಕ ಕಾರ್ಯಕ್ರಮಗಳಣ್ನು ಭಾರತದ ಆರ್ಥಿಕತೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಪ್ರಧಾನವಾಗಿ ಬಡತನ ನಿವಾರಣೆ, ಉದ್ಯೋಗ ಸೃಷ್ಟಿ, ಅಶಕ್ತರ ಪೋಷಣೆ, ಅಂಗವಿಕಲರ ರಕ್ಷಣೆ, ಮುಂತಾದ ಕಾರ್ಯಯೋಜನೆಗಳು ವಿತರಣಾ ನ್ಯಾಯದ ಧ್ಯೇಯವನ್ನೇ ಹೊಂದಿವೆ ಅದೂ ಅಲ್ಲದೆ. ೧೧ನೇ ಮತ್ತು ೧೨ನೇ ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ಒಳಗೊಳ್ಳುವ ಬೆಳವಣಿಗೆ ಎಂಬ ಅಭಿವದ್ಧಿ ಮಂತ್ರವನ್ನು (ಕಾರ್ಯತಂತ್ರವನ್ನು) ವಿಶೇಷವಾಗಿ ಅಲವಡಿಸಿಕೊಳ್ಳಲಾಗಿದೆ. ಇದರ ಪ್ರಮುಖ ಉದ್ದೇಶ ಕಡೆಗಣಿಸಲ್ಪಟ್ಟ, ವಂಚಿತರಾದ ವರ್ಗದವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವುದು, ಅವರಿಗೆ ಅಭಿವೃದ್ಧಿಯ ಫಲಗಳು ಲಭಿಸುವಂತೆ ಮಾಡುವುದೇ ಆಗಿದೆ. ಈ ಎಲ್ಲಾ ಕಾರ್ಯಕ್ರಮಗಳೂ ಸಹು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತುಳಿತಕ್ಕೆ ಒಳಗಾದ ಜನರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸಕಾರ್ಯಗಳನ್ನು ನಡೆಸುವುದೇ ಆಗಿದೆ. ಈ ನೀತಿಗಳಲ್ಲಿ ಬಸವಣ್ಣನವರ ದಾಸೋಹ ಕಲ್ಪನೆಯ ಎಳೆಗಳನ್ನು ನೋಡಬಹುದಾಗಿದೆ. ಅಂದರೆ ಬಸವಣ್ಣನವರೂ ಸಹ ಸಮಾಜದ ಕೆಳವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡೇ ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದುದು. ಇದೇ ಹಾದಿಯಲ್ಲಿ ಮುಂದುವರೆದು ಇನ್ನೂ ಹತ್ತು ಹಲವಾರು ಕರ್ಯಕ್ರಮಗಳನ್ನು ರೂಪಿಸಿ, ಪರಿಣಾಮಕಾರಿಯಾಗಿ ಜಾರಿಗೆ ತರುವ, ತನ್ಮೂಲಕ ಬಸವಣ್ಣನವರ ಆರ್ಥಿಕ ಚಿಂತನೆಯ ವಿಚಾರಗಳನ್ನು ಅನುಷ್ಠಾನಗೊಳಿಸುವ ಕಾಳಜಿಯನ್ನು ಸಮಕಾಲೀನ ಭಾರತದಲ್ಲಿ ನಿರೀಕ್ಷಿಸಬಹುದು.
ಬಸವಣ್ಣನವರು ನಿಜವಾದ ಸಮಾಜ ಪರಿವರ್ತನೆಯ ಹರಿಕಾರ, ಜಗತ್ತಿನ ಮೊದಲ ಸಮಾಜವಾದಿ, ಸ್ತಿçà ಸಮುದಾಯಕ್ಕೆ ಘನತೆ ತಂದುಕೊಟ್ಟ ಕ್ರಾಂತಿಕಾರಿ. ಇವರ ಸಮಾಜ ಸುಧಾರಣಾ ಕಾರ್ಯಗಳನ್ನು ಪ್ರಮಾಣಿಕವಾಗಿ ಅನುಷ್ಠಾನಗೊಳಿಸಬಲ್ಲ ನಾಯಕರು ಇಂದು ಖಂಡಿತಾ ಬೇಕಾಗಿದ್ದಾರೆ. ಸರ್ವಸಮಾನ ಸಮಾಜದ ನಿರ್ಮಾತೃವಾಗಿದ್ದ ಬಸವಣ್ಣನವರಿಗೆ ಬಸವಣ್ಣನವರೇ ಸಾಟಿ.