ಮೈಸೂರು: ಜಿಲ್ಲೆ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಹೊರವರ್ತುಲದಲ್ಲಿ ಪೆರಿಫರಲ್ ರಿಂಗ್ ರೋಡ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರಾದ ಬಿ.ಎಸ್. ಸುರೇಶ್ ತಿಳಿಸಿದರು.
ಇಂದು ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಮೈಸೂರು ನಗರಾಭಿವದ್ಧಿ ಪ್ರಾಧಿಕಾರದಿಂದ ನಗರದ ಹೊರ ವರ್ತುಲ ರಸ್ತೆ ನಿರ್ಮಿಸುವ ಹಾಗೂ ಮೈಸೂರು – ಬೆಂಗಳೂರು ರಸ್ತೆಯ ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ಫ್ಲೈ ಓವರ್ ನಿರ್ಮಿಸುವ ಕುರಿತಾದ ವಿಸ್ತೃತ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸುರೇಶ್ ಮಾತನಾಡಿದರು.
ಬೆಂಗಳೂರು ಮೈಸೂರು ಹೈವೆಯ ಮಣಿಪಾಲ್ ಆಸ್ಪತ್ರೆಯ ಜಂಕ್ಷನ್ ಬಳಿ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಅವರಿಂದ ಪ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದ್ದು, ನಿರ್ಮಾಣ ಕಾಮಗಾರಿ ವೈಜ್ಞಾನಿಕವಾಗಿ ನಿರ್ಮಾಣವಾಗಬೇಕು. ಮೈಸೂರು ನಗರವು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪೆರಿಫರಲ್ ರಿಂಗ್ ರೋಡ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಪೆರಿಫರಲ್ ರಿಂಗ್ ರೋಡ್ಗೆ ಭೂಮಿ ನೀಡಿದವರಿಗೆ ಆ ಜಾಗದ ಬೆಲೆಯ ಹಣ ಅಥವಾ ಬೇರೆ ಭೂಮಿ ನೀಡಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.