ಚಾಮರಾಜನಗರ (chamarajnagara) : ಎಲ್ಲೆಡೆ ನಮ್ಮ ಹೆಮ್ಮೆಯ ಸಂವಿಧಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಇದೀಗ ನಂದಿನಿ ಉತ್ಪನ್ನಗಳ ಮೂಲಕವೂ ಜಾಗೃತಿ ಮೂಡಿಸಲಾಗುತ್ತಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾದ್ಯಂತ ಸಂವಿಧಾನ ಜಾಗೃತಿ ಜಾಥಾವನ್ನು ಯಶಸ್ವಿಯಾಗಿ ನಡೆಯುತ್ತಿದ್ದು, ಇದೀಗ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಚಾಮುಲ್) ದಿಂದಲೂ ಜಾಗೃತಿ ಮೂಡಿಸಲಾಗುತ್ತಿದೆ.
ಚಾಮುಲ್ ತಯಾರಿಸುವ ನಂದಿನಿ ಉತ್ಪನ್ನಗಳ ಮೇಲೆ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ ಬನ್ನಿ ಸಂವಿಧಾನ ಸಂಭ್ರಮಿಸೋಣ’ ಎನ್ನುವ ಘೋಷವಾಕ್ಯವನ್ನು ಮುದ್ರಿಸಲಾಗಿದ್ದು, ಪ್ರತಿನಿತ್ಯ 5 ಲಕ್ಷ ಗ್ರಾಹಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ನೆರೆಯ ಕೇರಳ ಹಾಗೂ ತಮಿಳುನಾಡು ಸೇರಿದಂತೆ ಮಂಡ್ಯ, ಮೈಸೂರು ಜಿಲ್ಲೆಗಳ ಭಾಗದ ಜನರಲ್ಲೂ ಕೂಡ ಪ್ರತಿನಿತ್ಯ ಅರಿವು ಮೂಡಿಸಲಾಗುತ್ತದೆ. ಸಂವಿಧಾನ ಜಾಗೃತಿ ಕಾರ್ಯಕ್ರಮ ಪೂರ್ಣಗೊಳ್ಳುವ ತನಕ ಈ ಚಟುವಟಿಕೆ ನಿರಂತರವಾಗಿ ನಡೆಯುತ್ತದೆ. ಜಿಲ್ಲೆಯ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಅಲ್ಲದೆ ನೆರೆಯ ರಾಜ್ಯದ ನಂದಿನಿ ಬ್ರಾಂಡ್‍ನ ಅಭಿಮಾನಿಗಳು ಖುದ್ದು ಕರೆ ಮಾಡುವ ಮೂಲಕ ಶ್ಲಾಘಿಸುತ್ತಿದ್ದಾರೆ. ಫೆ.12 ರಿಂದ ಇನ್ನು ಒಂದು ತಿಂಗಳ ವರೆವಿಗೂ ಸದರಿ ಚಟುವಟಿಕೆ ಮುಂದುವರಿಯುತ್ತದೆ. ಈವರೆವಿಗೆ 50 ಲಕ್ಷ ಹಾಲಿನ ಪ್ಯಾಕೇಟ್‍ಗಳ ಮೇಲೆ ಮುದ್ರಿಸಲಾಗಿದೆ.
ಸಂವಿಧಾನ ಅಂಗೀಕಾರಗೊಂಡ 75ನೇ ವರ್ಷದ ಆಚರಣೆ ಅಂಗವಾಗಿ ಫೆ.24 ಮತ್ತು 25 ಎಂದು ಬೆಂಗಳೂರಿನಲ್ಲಿ ನಡೆಯಲಿರುವ ಭಾರತ ಸಂವಿಧಾನ ಹಾಗೂ ರಾಷ್ಟ್ರೀಯ ಐಕ್ಯತಾ ಸಮಾವೇಶ ಸಂಭ್ರಮದ ಪ್ರಯುಕ್ತ ರಾಜ್ಯ ಸರ್ಕಾರದ ವತಿಯಿಂದ ಸಂವಿಧಾನ ಜಾಗೃತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ತಿಳಿಸಿದ್ದಾರೆ.
#karnataka #chamrajnagara #constitution #nandini #Awareness