ರಾಜ್ಯ ಬಿಜೆಪಿಯಲ್ಲಿ ಏನೇನು ಘಟನೆಗಳು ನಡೆಯುತ್ತಿವೆ ಎನ್ನೋದು ರಾಜ್ಯ ಬಿಜೆಪಿ ಕಾರ್ಯಕರ್ತರಿಗೆ ಗೊಂದಲ ಉಂಟಾಗ್ತಿದೆ. ಲಿಂಗಾಯತ ಸಮುದಾಯದ ನಾಯಕ ಬಿ.ಎಸ್ ಯಡಿಯೂರಪ್ಪ ಅವರನ್ನು ಹೈಕಮಾಂಡ್ ನಾಯಕರು ಕಡಗಣನೆ ಮಾಡ್ತಿದ್ದಾರೆ ಅನ್ನೋ ಮಾತುಗಳ ನಡುವೆ ಬಿ.ವೈ ವಿಜಯೇಂದ್ರ ಅವರ ರಾಜಕೀಯವನ್ನು ಸೋಲಿನಿಂದಲೇ ಆರಂಭ ಮಾಡುವಂತೆ ಹೈಕಮಾಂಡ್ ನಾಯಕರು ಯೋಜನೆ ರೂಪಿಸಿದ್ದಾರೆ ಎನ್ನಲಾಗ್ತಿದೆ. ಇದರ ನಡುವೆ ಬಿ.ಎಸ್ ಯಡಿಯೂರಪ್ಪ ಹೋರಾಟದ ಮೂಲಕ ಬಿಜೆಪಿ ಭದ್ರಕೋಟೆ ಮಾಡಿಕೊಂಡಿದ್ದ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರವನ್ನು ಯಡಿಯೂರಪ್ಪ ಕುಟುಂಬದ ಹಿಡಿತದಿಂದ ಕಿತ್ತುಕೊಳ್ಳುವ ಪ್ರಯತ್ನವೂ ನಡೆದಿದೆ ಅನ್ನೋ ಮಾಹಿತಿ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಬಿಜೆಪಿ ನಾಯಕರ ನಿರ್ಲಕ್ಷ್ಯದ ಬಗ್ಗೆ ಸ್ವತಃ ಬಿ.ಎಸ್ ಯಡಿಯೂರಪ್ಪ ಅವರೇ ಕಠೋರ ಮಾತುಗಳನ್ನು ಖಂಡಿಸಿದ್ದಾರೆ.
ನನ್ನನ್ನು ಮುಗಿಸಲು ಸಾಧ್ಯವಿಲ್ಲ ಎಂದು ಗುಡುಗಿದ ಹುಲಿ..!
ಬಿ.ಎಸ್ ಯಡಿಯೂರಪ್ಪ ಅವರನ್ನು ತೆರೆ ಮರೆಗೆ ಸರಿಸೋ ಪ್ರಯತ್ನ ನಡೆದಿದೆ ಎನ್ನುವ ವಿಚಾರವಾಗಿ ಮಾತನಾಡಿದ್ದ ಯಡಿಯೂರಪ್ಪ, ನನಗೆ ಆಹ್ವಾನ ಬಂದಿರಲಿಲ್ಲ ಅನ್ನೋದು ಸತ್ಯ. ಕೊನೆಯಲ್ಲಿ ಕರೆದಿದ್ದಾರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಕಾರ್ಯಕ್ರಮ ಆಗಿರೋ ಕಾರ್ಯಣಕ್ಕೆ ನನ್ನ ಎಲ್ಲಾ ಕಾರ್ಯಕ್ರಮ ರದ್ದು ಮಾಡಿ ಕೊಪ್ಪಳಕ್ಕೆ ಹೋಗ್ತಿದ್ದೇನೆ. ನಾನು ಹೋಗಲೇ ಬೇಕಾದ ಅನಿವಾರ್ಯತೆ ಇದೆ ಅಂತಾನೂ ಹೇಳಿದ್ದಾರೆ. ಜೊತೆಗೆ ಯಾರು ಯಾರನ್ನೂ ಮುಗಿಸಲು ಸಾಧ್ಯವಿಲ್ಲ, ಪಕ್ಷ ಕಟ್ಟಿದ್ದೇನೆ, ಅಧಿಕಾರಕ್ಕೂ ತಂದಿದ್ದೇನೆ ಎಂದು ಗುಡುಗಿದ್ದಾರೆ ಯಡಿಯೂರಪ್ಪ. ಆದರೆ ಬಿಜೆಪಿ ನಾಯಕರು ಮಾತ್ರ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಇದೆಲ್ಲವೂ ಕಳೆದ ವಾರ ಆರ್ಎಸ್ಎಸ್ ನಾಯಕರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ನಡೆದ ಬೆಳವಣಿಗೆ ಎನ್ನುವುದು ರಾಜಕೀಯ ಪಕ್ಷಗಳಲ್ಲಿ ಕೇಳಿಬರುತ್ತಿರೋ ಮಾತುಗಳು. ಇನ್ನು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರಗಾರಿಕೆಯಂತೆ, ಲಿಂಗಾಯತ ನಾಯಕನನ್ನು ಲಿಂಗಾಯತ ನಾಯಕನನ್ನೇ ಬಳಸಿ ಮುಗಿಸಲಾಗ್ತಿದೆ ಎಂದಿದೆ ಕಾಂಗ್ರೆಸ್.

ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡಿದ್ರೆ ಸೋಲು ಖಚಿತ..!
ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೇ ಯಡಿಯೂರಪ್ಪ ಆಯ್ಕೆಯಾಗಿದ್ದ ಶಿಕಾರಿಪುರ ಕ್ಷೇತ್ರದಿಂದ ಬಿ.ವೈ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಎಂದಿದ್ದರು. ಆಗಲೇ ಅಪಸ್ವರ ಎತ್ತಿದ್ದ ಬಿಜೆಪಿ ಹೈಕಮಾಂಡ್, ಈ ಬಗ್ಗೆ ಏನನ್ನೂ ಮಾತನಾಡದಂತೆ ಕಟ್ಟೆಚ್ಚರ ನೀಡಿತ್ತು. ಇದೀಗ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಅಂತಿಮ ಆಗ್ತಿದ್ದ ಹಾಗೆ ವರುಣಾ ಕ್ಷೇತ್ರದಿಂದಲೇ ವಿಜಯೇಂದ್ರ ಅವರನ್ನು ಅಖಾಡಕ್ಕೆ ಇಳಿಸಲು ಬಿಜೆಪಿ ಸಿದ್ಧತೆ ಮಾಡುತ್ತಿದೆ. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಬಿ.ವೈ ವಿಜಯೇಂದ್ರ ಸೋಲಿಸಿ ಗೆದ್ದು ಬಿಟ್ಟರೆ ಘಟಾನುಘಟಿ ನಾಯಕನನ್ನು ಸೋಲಿಸಲು ಮಾಡಿದ ತಂತ್ರಗಾರಿಕೆ ಎನ್ನುವುದು. ಒಂದು ವೇಳೆ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸೋಲುಂಡರೆ ಜನ ರಾಜಕೀಯವಾಗಿ ಮೆಚ್ಚಲಿಲ್ಲ, ತಿರಸ್ಕೃತ ನಾಯಕ ಎನ್ನುವ ಮೂಲಕ ಮೂಲೆಗುಂಪು ಮಾಡುವ ಎಲ್ಲಾ ಲೆಕ್ಕಾಚಾರಗಳು ನಡೆದಿವೆ. ಇದಕ್ಕೆ ಕಾರಣ ವಿಜಯೇಂದ್ರ ಗೆದ್ದರೆ ಮತ್ತೆ ಬಿಜೆಪಿ ಮೇಲೆ ಹಿಡಿತ ಸಾಧಿಸ್ತಾರೆ ಅನ್ನೋದು. ಇದರ ಜೊತೆಗೆ ಶಿಕಾರಿಪುರ ಕ್ಷೇತ್ರವನ್ನು ಕಿತ್ತುಕೊಳ್ಳಲು ಯೋಜನೆ ಸಿದ್ಧವಾಗಿದೆ.
ಬಿ.ಎಲ್ ಸಂತೋಷ್ ಶಿಕಾರಿಪುರ ಅಖಾಡಕ್ಕೆ ಬರ್ತಾರಾ..?
ರಾಜ್ಯ ಬಿಜೆಪಿಯನ್ನು ತೆರೆ ಹಿಂದೆ ನಿಂತು ತೊಗಲು ಗೊಂಬೆಯ ರೀತಿ ಆಡಿಸುತ್ತಿರುವುದು ಬಿ.ಎಲ್ ಸಂತೋಷ್ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೆ ತೆರೆ ಮುಂದೆ ಬರುವುದಕ್ಕೆ ಬಿ.ಎಲ್ ಸಂತೋಷ್ ಅವರಿಗೆ ಅವಕಾಶ ಸಿಕ್ಕಿಲ್ಲ. ಈ ಹಿಂದೆಯೇ ಮುಖ್ಯಮಂತ್ರಿ ಆಗುವ ಅವಕಾಶ ಬಂದಿದ್ದರೂ ಮುಖ್ಯಮಂತ್ರಿ ಆಗಿಲ್ಲ. ರಾಜಕೀಯದಲ್ಲೇ ಇಲ್ಲದ ನಾಯಕನನ್ನು ಏಕಾಏಕಿ ಮುಖ್ಯಮಂತ್ರಿ ಮಾಡಿದರೆ ಮುಂದಿನ ದಿನಗಳಲ್ಲಿ ಮುಖಭಂಗ ಎನ್ನುವ ಕಾರಣಕ್ಕೆ ಪಟ್ಟ ಕೈ ತಪ್ಪಿದೆ. ಆದರೆ ಇದೀಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕ್ಷೇತ್ರದಿಂದಲೇ ಕಣಕ್ಕಿಳಿಸಿ ಆಯ್ಕೆ ಮಾಡಲು ತಯಾರಿ ಆಗ್ತಿದೆ. ಮುಂದಿನ ಚುನಾವಣೆಯನ್ನು ಬಿ.ಎಸ್ ಯಡಿಯೂರಪ್ಪ ಅವರೇ ಮುಂದೆ ನಿಂತು ಗೆಲ್ಲಿಸಿಕೊಂಡು ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿ.ಎಲ್ ಸಂತೋಷ್ ಅವರೇ ಇರಲಿದ್ದಾರೆ ಎನ್ನುವುದು ಇತ್ತೀಚಿನ ಬೆಳವಣಿಗೆ ನೋಡಿದಾಗ ತಿಳಿದುಬರುತ್ತಿರೋ ಅಂಶ.
ಕೃಷ್ಣಮಣಿ