‘ಜನರ ಸಂಕಷ್ಟದಲ್ಲಿ ಭಾಗಿಯಾಗಿ, ಅವರ ಧ್ವನಿಯಾಗಲು ಕಾಂಗ್ರೆಸ್ ಸಂಕಲ್ಪ ಮಾಡಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ ಗಾಯತ್ರಿನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಡವರಿಗೆ ಗುರುವಾರ ಆಹಾರ ಕಿಟ್ ವಿತರಣೆ ಮಾಡಿದರು. ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ‘ಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು ಎಂದು ಕಾಂಗ್ರೆಸ್ ರಾಜ್ಯಾದ್ಯಂತ ಇಂತಹ ಅಮೋಘ ಸೇವೆ ಮಾಡುತ್ತಿದೆ. ಬೆಂಗಳೂರಿನ ಹಲವೆಡೆ ನಮ್ಮ ಶಾಸಕರಿಲ್ಲದಿದ್ದರೂ ಬಡವರಿಗೆ ಆಹಾರ ಕಿಟ್ ನೀಡುವ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೇನೆ. ನಮ್ಮ ನಾಯಕರು, ಕಾರ್ಯಕರ್ತರು ಕೋಟ್ಯಂತರ ರೂಪಾಯಿ ಸ್ವಂತ ಹಣ ಖರ್ಚು ಮಾಡಿ ಆಹಾರ ಕಿಟ್ ವಿತರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಅನೇಕ ಕಡೆ 1 ಸಾವಿರ ರೂ. ಆರ್ಥಿಕ ನೆರವು, ಮತ್ತೆ ಕೆಲವು ಕಡೆ ಲಸಿಕೆಗೆ ಹಣ ಕಟ್ಟಿ ನಮ್ಮವರು ನೆರವಾಗುತ್ತಿದ್ದಾರೆ. ನಮಗೆ ರಾಜಕೀಯ ಮುಖ್ಯ ಅಲ್ಲ. ಸರ್ಕಾರದ ಆಹಾರ ಕಿಟ್ ಗಳ ಮೇಲೆ ನಮ್ಮ ಫೋಟೋ ಹಾಕಿಕೊಂಡು ಹಂಚುತ್ತಿಲ್ಲ. ನಮ್ಮ ನಾಯಕರು ಸ್ವಂತ ಹಣದಿಂದ ನೆರವು ನೀಡುತ್ತಿದ್ದು, ಅವರ ಹೃದಯ ಶ್ರೀಮಂತಿಕೆಯನ್ನು ಗಮನಿಸಬೇಕು. ಕಾಂಗ್ರೆಸ್ ಅವರಿಗೆ ಅಭಿನಂದನೆ ಸಲ್ಲಿಸುತ್ತದೆ ಎಂದಿದ್ದಾರೆ.
ನಾವು ಲಸಿಕೆಗೆ ಒತ್ತಾಯ ಮಾಡಿದ ಮೇಲೆ ಸರ್ಕಾರ ಉಚಿತ ಲಸಿಕೆ ಘೋಷಿಸಿದೆ. ಅನೇಕ ಖಾಸಗಿ ಆಸ್ಪತ್ರೆಗಳ ಜತೆಗೆ ಕೈಜೋಡಿಸಿ ಲಸಿಕೆಗೆ ತಲಾ ಸಾವಿರ ರೂಪಾಯಿ ವಸೂಲಿ ಮಾಡಿದ್ದಾರೆ. ಲಸಿಕೆಯನ್ನು ನಮ್ಮವರಿಗೆ ನೀಡುವ ಬದಲು ವಿದೇಶಕ್ಕೆ ಕಳುಹಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಈ ವಿಚಾರವಾಗಿ ನಾವು ಹೋರಾಟ ಮಾಡಿದಾಗ ಕೋರ್ಟ್ ಮಧ್ಯಪ್ರವೇಶಿಸಿತು. ಕೋರೊನಾ ಸಮಯದಲ್ಲಿ ಎಲ್ಲದಕ್ಕೂ ಕ್ಯೂ ನಿಲ್ಲಿಸಲಾಯಿತು. ಬಡವರು ತಮ್ಮ ಚಿನ್ನಾಭರಣ ಅಡವಿಟ್ಟು, ಸಾಲ ಮಾಡಿ, ಆಸ್ಪತ್ರೆಗೆ ಹಣ ಕಟ್ಟಿದ್ದಾರೆ. ಜನ ಆಸ್ಪತ್ರೆಗೆ ಕಟ್ಟಿರುವ ಹಣವನ್ನು ಸರ್ಕಾರ ಹಿಂದಿರುಗಿಸಬೇಕು. ನೋಂದವರಿಗೆ ಪರಿಹಾರ ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ. ಆದರೆ ಯಾರಿಗಾದರೂ ಆದಾಯ, ವೇತನ ಹೆಚ್ಚಾಗಿದೆಯಾ? ಯಾರಿಗೂ ಇಲ್ಲ. ಇದಕ್ಕೆಲ್ಲ ನೀವು ಸರಿಯಾಗಿ ಪಾಠ ಕಲಿಸಬೇಕು. ನಾವು ನಿಮ್ಮ ಜತೆ ಇದ್ದೇವೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇವೆ ಎಂದಿದ್ದಾರೆ.
ಬಿಜೆಪಿ ಅವರು ಯಡಿಯೂರಪ್ಪ ಅವರನ್ನಾದರೂ ಉಳಿಸಿಕೊಳ್ಳಲಿ, ವಿಶ್ವನಾಥ್ ಅವರನ್ನಾದರೂ ಸಿಎಂ ಮಾಡಲಿ, ಇಲ್ಲಈಶ್ವರಪ್ಪ ಅವರನ್ನಾದರೂ ಮಾಡಿಕೊಳ್ಳಲಿ. ನಮಗೂ ಅದಕ್ಕೂ ಸಂಬಂಧ ಇಲ್ಲ. ಈ ಸರ್ಕಾರದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಕೊರೊನಾ ಸಮಯದಲ್ಲಿ ಜನರ ಜೀವ ಉಳಿಸಿ, ಸತ್ತವರಿಗೆ ಪರಿಹಾರ ನೀಡಲಿ. ಡೆತ್ ಆಡಿಟ್ ಆಗಬೇಕು. ಸತ್ತವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರೈತರು, ಚಾಲಕರು, ವ್ಯಾಪಾರಿಗಳು ಯಾರಿಗೂ ಪರಿಹಾರ ತಲುಪಿಲ್ಲ. ಬಟ್ಟೆ ಹೊಲಿಯುವರು, ಹೊಗೆಯುವವು, ನೇಕಾರು, ಕುಂಬಾರರು, ಸವಿತಾ ಸಮಾಜದವರು ಯಾರಿಗೂ ಪರಿಹಾರ ಸಿಕ್ಕಿಲ್ಲ. ದುಪ್ಪಟ್ಟು ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಸಾಂಪ್ರದಾಯಿಕ ವೃತ್ತಿ ಉಳಿಸಿಕೊಂಡು ಸ್ವಾಭಿಮಾನ ಕಾಪಾಡಿಕೊಂಡು ಬಂದವರಿಗೆ ನೆರವು ನೀಡಿ. ನಿಮಗೆ ನೆರವು ನೀಡಲು ಆಗದಿದ್ದರೆ ನಮಗೆ ಅವಕಾಶ ನೀಡಿ. ಒಂದು ರೂಪಾಯಿ ಪೋಲಾಗದಂತೆ ನೀಡುತ್ತೇವೆ ಎಂದಿದ್ದಾರೆ.
ಕೊರೊನಾ ಸಮಯದಲ್ಲಿ ರಾಜ್ಯ ಸರ್ಕಾರದ ಕಾರ್ಯವನ್ನು ಅರುಣ್ ಸಿಂಗ್ ಅವರು ಹೊಗಳಿರುವುದು ಸಂತೋಷ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 37, ರಾಯಚೂರಿನಲ್ಲಿ 6 ಜನರನ್ನು ಕೊಲೆ ಮಾಡಿದ್ದಾರೆ. ಇದು ಅತ್ಯುತ್ತಮ ಕಾರ್ಯನಾ? ಚಾಮರಾಜನಗರದಲ್ಲಿ 37 ಜನ ಸತ್ತಾಗ ಹೈಕೋರ್ಟ್ ಮಧ್ಯ ಪ್ರವೇಶಿಸಬೇಕಾಯಿತು. ಇದು ಒಂದು ಸರ್ಕಾರನಾ? ಅರುಣ್ ಸಿಂಗ್ ಅವರು ಉತ್ತರಿಸಬೇಕು ಎಂದು ಪ್ರಶ್ನಿಸಿದ್ದಾರೆ.