ಮುಸಲ್ಮಾನರ ವೋಟುಗಳು ನಮ್ಮ ಎಂದು ಕಾಂಗ್ರೆಸ್ ನಾಯಕರು ಭಾವಿಸಿದ್ದರು, ಆದರೆ ಇದೀಗ ನಾವು ಮುಸ್ಲಿಂ ವೋಟ್‌ಗಳಿಗೆ ಕೈ ಹಾಕುತ್ತೇವೆ ಎಂಬ ಭಯ ಕಾಂಗ್ರೆಸ್ಸಿಗರನ್ನ ಕಾಡುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಮುಸ್ಲಿಮರ ವೋಟುಗಳು ತಮ್ಮ ವೋಟ್ ಬ್ಯಾಂಕ್ ಎಂಬ ಭಾವನೆಯಲ್ಲಿದ್ದರು. ಆದರೆ ಇದೀಗ ಮುಸಲ್ಮಾನರ ಓಟಿನ ಬುಟ್ಟಿಗೆ ನಾವು ಕೈಹಾಕುತ್ತೇವೆ ಅನ್ನೋ ಭಯ ಅವರಿಗೆ ಶುರುವಾಗಿದೆ. ಅದಕ್ಕೆ ಮುಸ್ಲಿಂ ಮತಗಳ ವಿಭಜನೆಯಾಗದಂತೆ ಸಭೆ ನಡೆಸಿದ್ದಾರೆ. ಆದರೆ ಮುಸಲ್ಮಾನರ ವೋಟುಗಳು ಬೇಡವೆಂದರೂ, ಕಾಂಗ್ರೆಸ್‌ಗೆ ಹೋಗೋದು. ಈ ಮುಂಚೆ ಮುಸ್ಲಿಮರ ವೋಟು ನೂರಕ್ಕೆ ನೂರು ನಮ್ಮದೇ ಎಂಬ ಭಾವನೆಯಲ್ಲಿ ಕಾಂಗ್ರೆಸ್ ನಾಯಕರಿದ್ದರು. ಆದರೆ ಈಗ ಕುಮಾರಸ್ವಾಮಿ ಅನೇಕ ಭಾಗದಲ್ಲಿ ಪಂಚರತ್ನ ಯಾತ್ರೆ ಮಾಡುತ್ತಿದ್ದು, ಅನೇಕ ಮುಸ್ಲಿಮರು ಆ ಸಭೆಗೆ ಹೋಗುತ್ತಿದ್ದಾರೆ ಎಂದರು.
ಆದರೆ ಅವರುಗಳು ಮುಸ್ಲಿಮರ ವೋಟುಗಳನ್ನ ಹೇಗಾದರೂ ಹಂಚಿಕೊಳ್ಳಲಿ. ಹಿಂದುತ್ವದ ವಿಚಾರದಲ್ಲಿ ಬಿಜೆಪಿ ದೇಶದಲ್ಲಿ ಹೋರಾಟ ಮಾಡುತ್ತಿದೆ. ಕೇಂದ್ರದಲ್ಲಿ ಮೋದಿ ಸರ್ಕಾರವಿದ್ದು, ಗುಜರಾತ್‌ನಲ್ಲೂ ನಿರೀಕ್ಷೆಗೂ ಮೀರಿ ಬೆಂಬಲ ಕೊಟ್ಟಿದ್ದಾರೆ. ನಮ್ಮ ರಾಜ್ಯದಲ್ಲೂ ಕೂಡ ಹಿಂದುತ್ವದ ಆಧಾರದ ಮೇಲೆ ಚುನಾವಣೆ ಮಾಡಲಿದ್ದು, ಹಿಂದುತ್ವದ ವ್ಯವಸ್ಥೆಯಲ್ಲಿ ಎಲ್ಲರೂ ಕೊಡುತ್ತಾರೆ. ಆ ಮೂಲಕ 150ಕ್ಕೂ ಹೆಚ್ಚು ಸ್ಥಾನ ಗೆದ್ದು, ಬಿಜೆಪಿ ಅಧಿಕಾರಕ್ಕೆ ಬರುತ್ತೇ ಎಂದ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಬಸ್ ಯಾತ್ರೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜಕಾರಣದಲ್ಲಿ ಇದೆಲ್ಲಾ ಇದ್ದಿದ್ದೇ. ಸಿದ್ದರಾಮಯ್ಯ ಒಂದು ಬಸ್‌ನಲ್ಲಿ, ಡಿ.ಕೆ.ಶಿವಕುಮಾರ್ ಒಂದು ಬಸ್‌ನಲ್ಲಿ ಹೊಗುವುದಾಗಿ ತಿಳಿಸಿದ್ದರು. ಇದು ರಾಜಕಾರಣ, ಸ್ವಾಭಾವಿಕವಾಗಿ ಭಿನ್ನಾಭಿಪ್ರಾಯ ಇರಲಿದ್ದು, ಅದರಲ್ಲಿ ವಿಶೇಷತೆ ಏನು ಇಲ್ಲ. ಎಲ್ಲಾ ಪಾರ್ಟಿಯಲ್ಲೂ ಇರುತ್ತೇ, ಬಿಜೆಪಿಯಲ್ಲೂ ಇದೆ. ಆದರೆ ಅವರು ಮೇಲಿನವರ ಮಾತನ್ನ ಕೇಳುತ್ತೇವೆ ಎಂದು ತೀರ್ಮಾನ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಮಲ್ಲಿಕಾರ್ಜುನ್ ಖರ್ಗೆಯವರು ಒಂದೇ ಬಸ್‌ನಲ್ಲಿ ಹೋಗಬೇಕು ಎಂದು ಹೇಳಿದ್ದಾರೆ. ಅದನ್ನು ಒಪ್ಪಿಕೊಂಡು ಬಂದಿದ್ದಾರೆ. ಮೇಲಿನವರು ಎಲ್ಲಾ ರಾಜಕೀಯ ಪಕ್ಷಕ್ಕೂ ಕಡಿವಾಣ ಹಾಕಿದಾಗ ಒಂದು ಶಿಸ್ತು ಬರುತ್ತೆ. ಆ ಶಿಸ್ತಿನ ರೂಪದ ಪ್ರಯತ್ನ ಕಾಂಗ್ರೆಸ್‌ನಲ್ಲಿ ನಡೆದಿರೋದು ನಿಜಕ್ಕೂ ಸಂತೋಷ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಈಶ್ವರಪ್ಪ, ಸಿದ್ದರಾಮಯ್ಯ ಅವರಿಗೆ ಬೇರೆ ಬೇರೆ ಮಾಡೋದು ರಕ್ತಗತವಾಗಿ ಬಂದಿದೆ. ಬಹಳ ಹಿಂದಿನಿಂದಲೂ ಆ ವ್ಯವಸ್ಥೆ ಮಾಡುತ್ತಿದ್ದಾರೆ. ದೇವೆಗೌಡರ ಜೊತೆ ಇದ್ದಾಗಲೂ ಬೇರೆ ಅಹಿಂದಾ ಸಮಾವೇಶ ಮಾಡಬೇಡಿ ಎಂದಿದ್ದರು, ಆದರೆ ಸಮಾವೇಶ ಮಾಡಿದ್ದಕ್ಕೆ ಪಕ್ಷದಿಂದ ಅವರನ್ನ ತೆಗೆದು ಹಾಕಿದರು. ರಾಜ್ಯದಲ್ಲಿ ಸಿಎಂ ಆಗಿದ್ದ ವ್ಯಕ್ತಿ ನೀವು, ನಿಮ್ಮನ್ನು ನಿಮ್ಮ ಕಾರ್ಯಕರ್ತರು ಒಳ್ಳೆಯ ನಾಯಕರ ಎಂದು ಕೊಂಡಿದ್ದಾರೆ. ಹೀಗಾಗಿ ನಿಮ್ಮ ಕೇಂದ್ರದ ನಾಯಕರು ಹೇಳಿದ್ದನ್ನು ಪರಿಪಾಲನೆ ಮಾಡಿ. ಆಗ ಕಾಂಗ್ರೆಸ್ ಕಾರ್ಯಕರ್ತರು ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ. ಇದನ್ನು ಬಿಟ್ಟು ನೀವು ದೆಹಲಿಯಲ್ಲಿ ಒಪ್ಪಿಕೊಂಡು ಬಂದು, ಇಲ್ಲಿ ಪ್ರತ್ಯೇಕ ಸಭೆ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ನಾನು ಸಚಿವ ಸಂಪುಟಕ್ಕೆ ಸೇರುವುದು ಬಿಡುವುದು ನನ್ನ ನಿರ್ಧಾರವಲ್ಲ. ಕೇಂದ್ರದ ನಾಯಕರು ತೀರ್ಮಾನ ಮಾಡಿದರೆ ಮಂತ್ರಿ ಆಗುತ್ತೇನೆ, ಇಲ್ಲವಾದಲ್ಲಿ ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.