ಬೆಂಗಳೂರು: ಏ,೦5: ಸಿಎಎ-ಎನ್‌ಆರ್‌ಸಿ ವಿರುದ್ಧದ ಹೋರಾಟಕದ ಸಂದರ್ಭದಲ್ಲಿ ಮಾಧ್ಯಮಗಳನ್ನು ಏಕಾಂಗಿಯಾಗಿ ಎದುರಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಕಾಂಗ್ರೆಸ್ ಯುವ ನಾಯಕಿ ಭವ್ಯಾ ನರಸಿಂಹಮೂರ್ತಿಗೆ ಜೆಡಿಎಸ್ ಪಕ್ಷದಿಂದ ಕರೆಗಳು ಬಂದಿರುವುದಾಗಿ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಸಾಮಾಜಿಕ ಮಾಧ್ಯಮಗ ಹಾಗೂ ಟಿವಿ ಚಾನೆಲ್ ಡಿಬೇಟ್‌ಗಳಲ್ಲಿ ಕಾಂಗ್ರೆಸ್ ಪರವಾಗಿ ಗಟ್ಟಿ ದನಿಯಾಗಿದ್ದ ಭವ್ಯಾ ನರಸಿಂಹಮೂರ್ತಿ ಅವರು ಬೆಂಗಳೂರಿನ ರಾಜಾಜಿನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ತಮ್ಮ ವಾಕ್ಚಾತುರ್ಯದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಭವ್ಯಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಯುವ ನಾಯಕರನ್ನು ಪ್ರೋತ್ಸಾಹಿಸುತ್ತದೆ ಎಂದೇ ಅವರ ಅಭಿಮಾನಿಗಳು ಭಾವಿಸಿಕೊಂಡಿದ್ದರು. ಆದರೆ, ಕೊನೇ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿ ಇತ್ತೀಚೆಗೆ ಪಕ್ಷ ಸೇರಿರುವ ಮಾಜಿ ಎಮ್‌ಎಲ್‌ಸಿ ಪುಟ್ಟಣ್ಣ ಅವರ ಪಾಲಾಗಿದೆ. ಇದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.
ಈ ನಡುವೆ, ಭವ್ಯಾ ನರಸಿಂಹಮೂರ್ತಿಗೆ ಜೆಡಿಎಸ್‌ನಿಂದ ಬುಲಾವ್ ಬಂದಿದೆ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಅದಾಗ್ಯೂ, ಭವ್ಯಾ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲಿದ್ದಾರಾ ಎನ್ನುವುದು ಇದುವರೆಗೂ ಸ್ಪಷ್ಟವಾಗಿಲ್ಲ. ಕಾಂಗ್ರೆಸ್ ಕಾರ್ಯಕರ್ತೆ ಭವ್ಯಾ ನರಸಿಂಹಮೂರ್ತಿ ಅವರಿಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಗಾಳ ಹಾಕಿವೆ. ಭವ್ಯಾ ಅವರು ಬಿಜೆಪಿ ಸೇರಿದರೆ ಟಿಕೆಟ್ ನೀಡುವುದಾಗಿ ಬಿಜೆಪಿ ನಾಯಕರು ಹೇಳಿದ್ದಾರೆ. ಅತ್ತ ಜೆಡಿಎಸ್ ಕೂಡ ಭವ್ಯಾ ನರಸಿಂಹಮೂರ್ತಿ ಬಂದರೆ ರಾಜಾಜಿ ನಗರದ ಟಿಕೆಟ್ ನೀಡುವುದಾಗಿ ಹೇಳಿದೆ. ಆದ್ರೆ ಈ ಬಗ್ಗೆ ಭವ್ಯಾ ನರಸಿಂಹಮೂರ್ತಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗುತ್ತಿದೆ. ಮುಂದೆ ಭವ್ಯಾ ನರಸಿಂಹ ಮೂರ್ತಿ ಅವರು ಬೇರೆ ಪಕ್ಷಕ್ಕೆ ಹೋಗಿ ಸ್ಪರ್ಧೆ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.