ಮಂಡ್ಯ : ಆಪರೇಶನ್ ಕಮಲದ ಮೂಲಕ ಬಿಜೆಪಿ ಪಕ್ಷವನ್ನು ಸೇರಿದ್ದ ಸಚಿವ ನಾರಾಯಣ ಗೌಡ ಮಂಡ್ಯದ ಜೆಡಿಎಸ್ ಭದ್ರಕೋಟೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲ ಅರಳಿಸಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಸಚಿವ ನಾರಾಯಣ ಗೌಡ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಮಾತು ಎಲ್ಲೆಡೆ ಕೇಳಿ ಬರ್ತಿದೆ. ಇದು ಮಂಡ್ಯದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ದಾರಿ ಮಾಡಿದ್ದು ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ನಾರಾಯಣಗೌಡ ಬೇಡ ಎಂದು ಆಗ್ರಹಿಸಿ ಮಂಡ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಕಾರಿಗೆ ಮೊಟ್ಟೆ ಎಸೆದಿದ್ದಾರೆ.
ಮಾರ್ಚ್ 13ರಂದು ಕೆ.ಆರ್ ಪೇಟೆಯಲ್ಲಿ ನಡೆಯಲಿರುವ ಪ್ರಜಾಧ್ವನಿ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಆಗಮಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್ ಕಾರಿಗೆ ಕಾಂಗ್ರೆಸ್ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ ಮಾತ್ರವಲ್ಲದೇ ಕೆ.ಆರ್ ಪೇಟೆ ಕಾಂಗ್ರೆಸ್ ಟಿಕೆಟ್ಗೆ ಆರು ಮಂದಿ ಆಕಾಂಕ್ಷಿಗಳು ಇದ್ದೇವೆ. ಇದೀಗ ನಾರಾಯಣ ಗೌಡರಿಗೆ ಟಿಕೆಟ್ ನೀಡಿದರೆ ನಾವೆಲ್ಲಿ ಹೋಗಬೇಕೆಂದು ಪ್ರಶ್ನೆ ಮಾಡಿ ಅವರ ಕೈಗೆ ಬಳೆಗಳನ್ನು ನೀಡಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ವದಂತಿ ವಿಚಾರವಾಗಿ ಮಾತನಾಡಿದ್ದ ಸಚಿವ ನಾರಾಯಣ ಗೌಡ, ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ನನಗೆ ಆಹ್ವಾನ ನೀಡಲಾಗಿದೆ. ಕಾಂಗ್ರೆಸ್ನಲ್ಲಿಯೂ ನಾಯಕತ್ವದ ಕೊರತೆಯಿದೆ. ಹೀಗಾಗಿ ನನ್ನ ಹಿತೈಷಿಗಳ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದರು. ಇದಾದ ಬಳಿಕ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಹೆಚ್ಚಾಗಿತ್ತು.