ಉತ್ತರಪ್ರದೇಶ ರಾಜಕಾರಣದಲ್ಲಿ ಗಮನಾರ್ಹ ಬೆಳವಣಿಗೆಯೊಂದು ನಡೆದಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ಅವರ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ವಿರುದ್ಧ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸದಿರಲು ನಿರ್ಧರಿಸಿದೆ.
ಅಖಿಲೇಶ್ ಯಾದವ್ ಅವರು ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾಗಿದ್ದರು. ಕಾಂಗ್ರೆಸ್ ಇಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಹಾಗೆಯೇ ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಅವರು ಜಸ್ವಂತ್‌ನಗರದಲ್ಲಿ (ಇಟಾವಾ ಜಿಲ್ಲೆ) ಸ್ಪರ್ಧಿಸಿದ್ದಾರೆ. ಇಲ್ಲೂ ಕೂಡ ತನ್ನ ಅಭ್ಯರ್ಥಿಯನ್ನು ಹಾಕುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಫೆಬ್ರವರಿ 20 ರಂದು ಉತ್ತರ ಪ್ರದೇಶದಲ್ಲಿ ನಡೆಯುವ ಮೂರನೇ ಹಂತದ ಮತದಾನದಲ್ಲಿ ಎರಡೂ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಮತ್ತು ರಾಯ್‌ಬರೇಲಿಯಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಎಸ್‌ಪಿ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದು.
ಉತ್ತರಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪ್ರಧಾನ್ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, “ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಅವರು (ಎಸ್‌ಪಿ) ಯಾರನ್ನೂ ಕಣಕ್ಕಿಳಿಸಿರಲಿಲ್ಲ. ಈ ಕಾರಣ ನಾವು ಅವರ ವಿರುದ್ಧ ಅಭ್ಯರ್ಥಿಗಳನ್ನು ಹಾಕುತ್ತಿಲ್ಲ ಎಂದಿದ್ದಾರೆ,”.
ಕಾಂಗ್ರೆಸ್‌ನ ಇಟಾವಾ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಖಾನ್ ಸಿಂಗ್ ಮಾತನಾಡಿದ್ದು, ಸ್ಥಳೀಯ ಘಟಕವು ಜಸ್ವಂತ್ ನಗರ ಸ್ಥಾನಕ್ಕೆ ಆರು ಹೆಸರುಗಳ ಪಟ್ಟಿಯನ್ನು ಕಳುಹಿಸಿದೆ. ಆದರೆ ಪಕ್ಷದ ಹೈಕಮಾಂಡ್ ಕ್ಷೇತ್ರಕ್ಕೆ ಯಾವುದೇ ಹೆಸರನ್ನು ಅನುಮೋದಿಸಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷವು ಕರ್ಹಾಲ್ ವಿಧಾನಸಭಾ ಕ್ಷೇತ್ರಕ್ಕೆ ಜ್ಞಾನವತಿ ಯಾದವ್ ಅವರನ್ನು ತನ್ನ ಅಭ್ಯರ್ಥಿ ಎಂದು ಈ ಹಿಂದೆ ಘೋಷಿಸಿತ್ತು. ಯಾದವ್ ಅವರು ಪಕ್ಷದ ಮಹಿಳಾ ಮೋರ್ಚಾದ ಮಾಜಿ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಹಾಗೆಯೇ ಮೊದಲ ಬಾರಿಗೆ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರು. ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರನ್ನು ಘೋಷಿಸಲಾಗಿದ್ದರೂ, ಕಾಂಗ್ರೆಸ್ ಹೈಕಮಾಂಡ್ ಮಂಗಳವಾರ ಜಿಲ್ಲಾಧ್ಯಕ್ಷರಿಗೆ ಜ್ಞಾನವತಿ ಅವರನ್ನು ಕಣಕ್ಕಿಳಿಸದಂತೆ ನಿರ್ದೇಶನ ನೀಡಿದೆ.
ಬಿಜೆಪಿ ಅಭ್ಯರ್ಥಿ ಮತ್ತು ಕೇಂದ್ರ ಸಚಿವ ಎಸ್.ಪಿ.ಸಿಂಗ್ ಬಘೇಲ್ ಈ ಬೆಳವಣಿಗೆ ಪ್ರತಿಕ್ರಿಯಿಸಿದ್ದು, “ಕಾಂಗ್ರೆಸ್ ನ ಈ ನಿರ್ಧಾರ ಆಶ್ಚರ್ಯವೇನಲ್ಲ. ಎಸ್‌ಪಿ ಮತ್ತು ಕಾಂಗ್ರೆಸ್ ಎರಡೂ ಕೈಜೋಡಿಸಿವೆ. ನಾವು ಈ ಕ್ಷೇತ್ರಗಳಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದಿದ್ದಾರೆ.
ಏತನ್ಮಧ್ಯೆ ವರದಿಗಳ ಪ್ರಕಾರ, ಫೆಬ್ರವರಿ 27 ರಂದು ನಾಲ್ಕನೇ ಹಂತದಲ್ಲಿ ಚುನಾವಣೆ ನಡೆಯಲಿರುವ ರಾಯ್ ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲು ನಿರ್ಧರಿಸಿದರೆ, ಎಸ್‌ಪಿ ತನ್ನ ಅಭ್ಯರ್ಥಿಯನ್ನು ಅವರ ವಿರುದ್ಧ ನಿಲ್ಲಿಸದಿರಲು ತೀರ್ಮಾನಿಸಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ತಮಗೆ ಬೇಕಾದ ಸನ್ನಿವೇಶದಲ್ಲಿ ಒಳಒಪ್ಪಂದ ರಾಜಕಾರಣಕ್ಕೆ ಮುಂದಾಗಿರುವುದಂತೂ ಸತ್ಯ.