ಕೋಲಾರ : ಮಾಲೂರಿನಲ್ಲಿ ಎರಡನೆ ಬಾರಿಗೆ ಕಾಂಗ್ರೆಸ್ ಗೆದ್ದು ಇತಿಹಾಸ ನಿರ್ಮಿಸಲಿದೆ ಎಂದು ಮಾಲೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಕೆ.ವೈ ನಂಜೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರಿನ ರಾಜೇನಹಳ್ಳಿ ಗ್ರಾಮದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಈವರೆಗೂ ಮಾಲೂರಿನಲ್ಲಿ ಕಾಂಗ್ರೆಸ್ 2ಬಾರಿ ಗೆದ್ದ ಇತಿಹಾಸವಿಲ್ಲ. ಆದರೆ ಈ ಬಾರಿ ಹೊಸ ಇತಿಹಾಸ ನಿರ್ಮಾಣವಾಗುತ್ತೆ, ಕಳೆದ ಐದು ವರ್ಷಗಳಿಂದ ನನ್ನ ಕೆಲಸವನ್ನು ಮೆಚ್ಚಿ ಕಾಂಗ್ರೆಸ್ ಹೈಕಮಾಂಡ್ ತನ್ನ ಮೊದಲ ಪಟ್ಟಿಯಲ್ಲಿಯೇ ನನ್ನ ಹೆಸರನ್ನು ಘೋಷಣೆ ಮಾಡಿದೆ ಎಂದು ಹೇಳಿದರು.

ನಾನು ಕಳೆದ ಐದು ವರ್ಷಗಳಿಂದ ಕ್ಷೇತ್ರದ ಜನರ ನಂಬಿಕೆ ಉಳಿಸಿಕೊಂಡಿದ್ದೇನೆ. ಮುಂದೆಯೂ ಅದನ್ನು ಉಳಿಸಿಕೊಳ್ಳುವೆ. 2018ರಸ ಸಮ್ಮಿಶ್ರ ಸರ್ಕಾರದಲ್ಲಿ ಆಡಳಿತ ನಡೆಸಲು ನಮಗೆ ಕಡಿಮೆ ಅವಧಿ ಸಿಕ್ಕಿದೆ. ಐದು ವರ್ಷದಲ್ಲಿ ಯಾರೂ ಮಾಡದ ಕೆಲಸವನ್ನು ನಾನು ಕೇವಲ 1.2 ವರ್ಷಗಳ ಅವಧಿಯಲ್ಲಿ ಮಾಡಿದ್ದೇನೆ. ಈಗ ಅದೇ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಕ್ಷೇತ್ರದ ಜನರಲ್ಲಿ ಮತಯಾಚನೆ ಮಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ ಜೆಡಿಎಸ್ ವಿರುದ್ಧ ಆಕ್ರೋಶ ಹೊರ ಹಾಕಿದ ಅವರು, ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಕೇವಲ 25 ಸ್ಥಾನಗಳನ್ನು ಮಾತ್ರ ಗೆಲ್ಲುತ್ತದೆ. ಅಧಿಕಾರ ಬೇಕು ಅಂದರೆ ಜೆಡಿಎಸ್ ಸಮಯಕ್ಕೆ ತಕ್ಕಂತೆ ಬದಲಾಗುತ್ತೆ, ನಾನು ಕುಮಾರಸ್ವಾಮಿ ಅಭಿಮಾನಿ , ಆದರೆ ನಾನು ಕಾಂಗ್ರೆಸ್ , ಅವರು ಜೆಡಿಎಸ್. ಜೆಡಿಎಸ್ ಪಕ್ಷದ ಅಭ್ಯರ್ಥಿ ರಾಮೇಗೌಡರು ಲೆಕ್ಕಕ್ಕೇ ಇಲ್ಲ .ನನ್ನನ್ನು ಎಂಎಲ್ ಎ ಮಾಡಿದ್ದು ನಾನೇ ಅಂತ ಭಾಷಣ ಮಾಡ್ತಾರೆ.ನಾನಿಲ್ಲದಿದ್ರೆ ಜೈಲಿಗೆ ಹೋಗ್ತಾರೆ, ಆತ್ಮಹತ್ಯೆ ಮಾಡ್ಕೋಬೇಕಿತ್ತು ಅಂತ ಹೇಳ್ತಾರೆ .ನನ್ನನ್ನು ಎಂಎಲ್ ಎ ಮಾಡುವ ಶಕ್ತಿ ಅವರಿಗಿದೆಯಾ? ಎಂದು ಪ್ರಶ್ನಿಸಿದ್ರು.











