ಬೆಂಗಳೂರು:“ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ.ಕಾರ್ಯಕರ್ತರು ಬೆಟ್ಟಿಂಗ್ ಜಾಲಕ್ಕೆ ಸಿಲುಕಿ ತೊಂದರೆ ಅನುಭವಿಸದಿರಲಿ ಎಂಬ ಉದ್ದೇಶದಿಂದ ಯೋಗೇಶ್ವರ್ ಹೇಳಿಕೆ ನೀಡಿರಬಹುದು” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ಚನ್ನಪಟ್ಟಣ ಉಪಚುನಾವಣೆ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರು ಫಲಿತಾಂಶಕ್ಕೂ ಮುನ್ನವೇ ಸೋಲುವ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಕೇಳಿದಾಗ, “ಒಬ್ಬೊಬ್ಬರ ಭಾವನೆ ಒಂದೊಂದು ರೀತಿ ಇದೆ. ಅವರು ಹಾಗೂ ನಮಗೆ ಗೆಲ್ಲುವ ವಿಶ್ವಾಸವಿದೆ. ನಮ್ಮ ಕಾರ್ಯಕರ್ತರು ಅನಗತ್ಯವಾಗಿ ಬೆಟ್ಟಿಂಗ್ ಕಟ್ಟಿಕೊಂಡು ತೊಂದರೆ ಮಾಡಿಕೊಳ್ಳುತ್ತಾರೋ, ತಮ್ಮಿಂದ ಅವರ ಮನೆಗಳಲ್ಲಿ ಆರ್ಥಿಕ ಸಂಕಷ್ಟವಾಗುತ್ತದೆಯೋ ಎಂದು ಆ ರೀತಿ ಹೇಳಿರಬಹುದು” ಎಂದರು.
ಫಲಿತಾಂಶ ಏನಾಗಬಹುದು, ಯೋಗೇಶ್ವರ್ ಅವರು ಯಾಕೆ ಇಷ್ಟು ನಿರಾಸೆಯಾಗಿದ್ದಾರೆ ಎಂದು ಕೇಳಿದಾಗ, “ಫಲಿತಾಂಶ ನಾವು ಗೆಲ್ಲುತ್ತೇವೆ. ಅವರಿಗೆ ನಿಮ್ಮ (ಮಾಧ್ಯಮದವರ) ಮೇಲೆ ಹೇಳಲು ಆಗಿಲ್ಲ. ಹೀಗಾಗಿ ಆ ರೀತಿ ಹೇಳಿದ್ದಾರೆ” ಎಂದರು.
ದೇವೇಗೌಡರ ಬಗ್ಗೆ ವೈಯಕ್ತಿಕ ಗೌರವವಿದೆ, ರಾಜಕೀಯ ಹೋರಾಟವೂ ಇದೆ:
ಒಕ್ಕಲಿಗ ಸಮುದಾಯ ದೇವೇಗೌಡರ ಕುಟುಂಬದ ಮೇಲೆ ಹೆಚ್ಚಿನ ಒಲವು ಇಟ್ಟಿದ್ದಾರೆ ಎಂಬ ಯೋಗೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ದೇವೇಗೌಡರು ದೇಶದ ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಸಮಾಜದಲ್ಲಿ ಹಾಗೂ ದಕ್ಷಿಣ ಭಾರತದಿಂದ ಅತ್ಯುನ್ನತ ಸ್ಥಾನಕ್ಕೆ ಏರಿದ ನಾಯಕ. ಹೀಗಾಗಿ ಸಮಾಜದವರು ಅವರ ಮೇಲೆ ಗೌರವ ಇಟ್ಟುಕೊಂಡಿದ್ದಾರೆ. ನನಗೂ ಅವರ ಮೇಲೆ ಗೌರವವಿದೆ. ರಾಜಕಾರಣ ವಿಚಾರ ಬಂದಾಗ ನಾನು ಹೋರಾಟ ಮಾಡುತ್ತೇನೆ. ಅದರ ಹೊರತಾಗಿ ವೈಯಕ್ತಿಕವಾಗಿ ನನಗೆ ಅವರ ಮೇಲೆ ಗೌರವವಿದೆ” ಎಂದು ತಿಳಿಸಿದರು.
ಮಾಧ್ಯಮಗಳಿಗೆ ನಮ್ಮ ಮೇಲೆ ಇಷ್ಟೊಂದು ಕೋಪವೇಕೆ?
ಅವರ ಹೇಳಿಕೆ ಹೊಸತೇನಲ್ಲ. ಆದರೆ ಅವರ ಹೇಳಿಕೆ ಮಾಧ್ಯಮಗಳ ಮೂಲಕ ಹೆಚ್ಚು ಪ್ರಚಾರ ಪಡೆಯಲಾಗಿದೆ. ಜನರ ಮೇಲೆ ಪರಿಣಾಮ ಬೀರಬೇಕು ಎಂಬ ಉದ್ದೇಶದಿಂದ ಮಾಧ್ಯಮಗಳು ಹೆಚ್ಚು ಪ್ರಚಾರ ಮಾಡಿದ್ದು ಸರಿಯೇ? ಜಮೀರ್ ಅಹ್ಮದ್ ತಮ್ಮ ಸ್ನೇಹಿತರ ಬಗ್ಗೆ ಹೊಸದಾಗಿ ಹೇಳಿದ್ದರೆ ಇಷ್ಟು ಪ್ರಚಾರ ಮಾಡಬಹುದಾಗಿತ್ತು. ಆದರೆ ಈ ಹಿಂದೆಯೂ ಇಂತಹ ಹೇಳಿಕೆ ನೀಡಿದ್ದರೂ ಆಗ ಹೆಚ್ಚು ಪ್ರಚಾರ ಪಡೆಯದೇ ಚುನಾವಣೆ ಸಮಯದಲ್ಲಿ ಮಾಧ್ಯಮಗಳು ಇಷ್ಟು ದೊಟ್ಟ ಮಟ್ಟದಲ್ಲಿ ಯಾಕೆ ತೋರಿಸಿದವು? ನಮ್ಮ ಪಕ್ಷದ ಮೇಲೆ ಅವರಿಗೆ ಅಷ್ಟೊಂದು ಕೋಪ ಏಕೆ ಎಂಬುದು ಅರ್ಥವಾಗುತ್ತಿಲ್ಲ.
ನಿಮ್ಮ ಸಚಿವರು ಮಾತು ಆಡುವಾಗ ಏನು ಮಾತನಾಡುತ್ತಿದ್ದೇನೆ ಎಂದು ಅರಿಯಬೇಕಲ್ಲವೇ ಎಂದು ಕೇಳಿದಾಗ, “ಅವರು ಇಂದು ಮಾತನಾಡಿರುವುದಲ್ಲ. ಈ ಹಿಂದೆ ಮಾತನಾಡಿದಾಗಲೇ ಇಷ್ಟು ದೊಡ್ಡ ಪ್ರಚಾರ ಮಾಡಿದ್ದರೆ ಅದನ್ನು ಮೊಟಕುಗೊಳಿಸುವಂತೆ ಮಾಡಬಹುದಿತ್ತು. ನಿಷ್ಪಕ್ಷಪಾತ ಪಾತ್ರ ವಹಿಸುವ ಮಾಧ್ಯಮದವರು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಪ್ರಚಾರ ಮಾಡಿದ್ದು, ನಮ್ಮ ಮೇಲಿನ ಕೋಪವೇ ಇದು” ಎಂಬುದು ನನ್ನ ಅಭಿಪ್ರಾಯ.
ಅವರ ಮಾತಿಗೆ ಹೈಕಮಾಂಡ್ ಕಡಿವಾಣ ಹಾಕಬಹುದಲ್ಲವೇ ಎಂದು ಕೇಳಿದಾಗ, “ಇಬ್ಬರು ವ್ಯಕ್ತಿಗಳ ನಡುವೆ ವೈಯಕ್ತಿಕವಾದ ಹೇಳಿಕೆಗಳು ಪಕ್ಷಕ್ಕೆ ಸಂಬಂಧಿಸುವುದಿಲ್ಲ. ಕೇವಲ ಚುನಾವಣಾ ದೃಷ್ಟಿ ಇಟ್ಟುಕೊಂಡು ಚರ್ಚೆ ಮಾಡಲಾಗಿದೆ ಎಂಬುದು ನಮ್ಮ ಅಭಿಪ್ರಾಯ. ಚುನಾವಣೆ ಮುಗಿದ ಮೇಲೂ ಅದನ್ನು ಚರ್ಚೆ ಮಾಡಿ.” ಎಂದರು.
ಈ ಹೇಳಿಕೆಯಿಂದ ಪಕ್ಷಕ್ಕೆ ಪೆಟ್ಟು ಬಿದ್ದಿದೆಯೇ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಅದರ ಬಗ್ಗೆ ನನಗೆ ಗೊತ್ತಿಲ್ಲ” ಎಂದರು.
ಪ್ರತಿಪಕ್ಷಗಳಿಗೆ ಇದು ಅಸ್ತ್ರವಾಯಿತೇ ಎಂದು ಕೇಳಿದಾಗ, “ಇದು ಮಾಧ್ಯಮಗಳ ಸೃಷ್ಟಿ. ಪ್ರತಿಪಕ್ಷಗಳು ಅನೇಕ ಸಂದರ್ಭದಲ್ಲಿ ಅನೇಕ ಹೇಳಿಕೆ ನೀಡುತ್ತವೆ. ಡಿ.ಕೆ. ಶಿವಕುಮಾರ್ ಅವರನ್ನು ಕಳ್ಳ, ಲೂಟಿಕೋರ, 100 ರೂಪಾಯಿಗೆ ಕೂಲಿಗೆ ಇದ್ದ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದಾಗ, ಅವರು ಎಲ್ಲಿ ಕದ್ದಿದ್ದಾರೆ ಎಂದು ಮಾಧ್ಯಮಗಳು ಏಕೆ ಪ್ರಶ್ನೆ ಮಾಡಲಿಲ್ಲ. ನಿಮ್ಮ ಮೌಲ್ಯಗಳು ಕೂಡ ಈ ಸಂದರ್ಭದಲ್ಲಿ ಪ್ರಶ್ನೆಗೆ ಒಳಪಟ್ಟಿವೆ” ಎಂದು ತಿಳಿಸಿದರು.
ವಿರೋಧ ಪಕ್ಷಗಳು ಇದನ್ನು ಬಳಸಿಕೊಳ್ಳಲಿಲ್ಲವೇ ಎಂದು ಕೇಳಿದಾಗ, “ರಾಜಕೀಯದಲ್ಲಿ ನಮ್ಮನ್ನು ಅವರು ಟೀಕಿಸುವುದು, ಅವರನ್ನು ನಾವು ಟೀಕಿಸುವುದು ಸರ್ವೇ ಸಾಮಾನ್ಯ. ಈ ಚುನಾವಣೆ ವೈಯಕ್ತಿಕ ಹೇಳಿಕೆ ಹೊರತಾಗಿ ಅಭಿವೃದ್ಧಿ ವಿಚಾರ, ರಾಜಕೀಯ ದೃಷ್ಟಿಕೋನ, ಜನರ ಕಷ್ಟ ಸುಖದ ಬಗ್ಗೆ ಚರ್ಚೆ ಮಾಡಲಿಲ್ಲ. ಕೇವಲ ವೈಯಕ್ತಿಕ ಟೀಕೆಗಳ ಮೇಲೆ ರಾಜಕೀಯ ಮಾಡಿದರು. ಮೋದಿ, ಕುಮಾರಸ್ವಾಮಿ, ದೇವೇಗೌಡರ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡಲಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಬಾಯಿಗೆ ಬಂದಂತೆ ಬೈದಿದ್ದು ಬಿಟ್ಟರೆ ಬೇರೆ ಏನೂ ಅವರು ಚರ್ಚೆ ಮಾಡಲಿಲ್ಲ” ಎಂದು ತಿಳಿಸಿದರು.
ಚುನಾವಣೆ ಬಂದಾಗಲೇ ವಕ್ಫ್ ವಿಚಾರ ಬರಬೇಕಿತ್ತಾ:
ವಕ್ಫ್ ವಿಚಾರದಲ್ಲೂ ಜಮೀರ್ ಹೇಳಿಕೆ ಬಗ್ಗೆ ಪ್ರಚಾರ ಮಾಡಲಾಗಿದೆ ಎಂದು ಕೇಳಿದಾಗ, “ವಕ್ಫ್ ವಿಚಾರದಲ್ಲಿ ರೈತರ ಜಮೀನಿನ ಖಾತೆ ಬದಲಾವಣೆ ಮಾಡಿರುವುದು 2019ರಿಂದ 2022ರವರೆಗೆ. ಆಗ ಅಧಿಕಾರದಲ್ಲಿದ್ದಿದ್ದು ಬಿಜೆಪಿ ಸರ್ಕಾರ. ಚುನಾವಣೆ ಬಂದಾಗ ಮಾಧ್ಯಮಗಳು ಧರ್ಮದ ವಿಚಾರ ತರುತ್ತೀರಿ. ಚನ್ನಪಟ್ಟಣದಲ್ಲೂ 2019ರಲ್ಲಿ ಖಾತೆ ಬದಲಾವಣೆಯ ಆರ್ ಟಿಸಿ ನೀಡಿದ್ದಾರೆ.
ಅವತ್ತಿನಿಂದ ಇಲ್ಲದಿರುವ ಜಾತಿ, ಧರ್ಮಗಳ ವಿಚಾರ, ಚುನಾವಣೆ ಸಮಯದಲ್ಲಿ ಮಾತ್ರ ಬಂದಿತಾ? ವಿರೋಧ ಪಕ್ಷಗಳ ರಾಜಕೀಯಕ್ಕೆ ಮಾಧ್ಯಮಗಳು ಅಸ್ತ್ರವಾಗುತ್ತಿಲ್ಲವೇ? ದೇಶದ ಒಗ್ಗಟ್ಟಿಗಾಗಿ, ಸಮಾಜದ ಒಳಿತಿಗಾಗಿ ನೀವು ನಮ್ಮನ್ನು ತಿದ್ದುವ ಪ್ರಯತ್ನ ಮಾಡುತ್ತಿದ್ದೀರಾ? ನಾವು ನಿಮ್ಮನ್ನು ಬಹಳ ಗೌರವಿಸುತ್ತೇವೆ. ಈ ಹಿಂದೆ ಮಾಧ್ಯಮಗಳು ತಮ್ಮದೇ ಆದ ಪಾತ್ರ ವಹಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಚುನಾವಣೆ ಬಂದಾಗ ಮಾತ್ರ ಮಾಧ್ಯಮಗಳು ಬೇರೆ ರೀತಿ ವರ್ತಿಸುತ್ತಿವೆ. ಒಬ್ಬರ ಪರವಾಗಿ ಚುನಾವಣೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದೀರಿ. ಮಾಧ್ಯಮಗಳ ನೈತಿಕತೆಯನ್ನು ತಕ್ಕಡಿಯಲ್ಲಿ ತೂಗಬೇಕಾಗಿದೆ.
ಮಾಧ್ಯಮಗಳ ನೈತಿಕತೆಯನ್ನು ತಕ್ಕಡಿಯಲ್ಲಿ ತೂಗಬೇಕಾಗಿದೆ. ಮತದಾನದ ದಿನ ಮಧ್ಯಾಹ್ನ 3 ಗಂಟೆವರೆಗೂ ನೀವು ಆ ವಿಚಾರ ಚರ್ಚೆ ಮಾಡುತ್ತೀರಿ. ನಂತರ ಆ ಚರ್ಚೆ ನಿಲ್ಲಿಸುತ್ತೀರಿ. ನಮಗೆ ನೋವಾಗುವುದಿಲ್ಲವೇ? ಜಮೀರ ಅವರ ಹೇಳಿಕೆ ಆಕ್ಷೇಪಣಾರ್ಹವಾಗಿದ್ದರೆ, ಅವರೂ ಆಕ್ಷೇಪಣೆ ಮಾಡಬೇಕಿತ್ತು. ನಾನು ನಿಮ್ಮ ದೃಷ್ಟಿಕೋನ ಹೇಗಿತ್ತು ಎಂದು ತಿಳಿಸುತ್ತಿದ್ದೇನೆ. ಆವೇಶದಲ್ಲಿ ನಾನು ಏನಾದರೂ ಮಾತನಾಡಿದ್ದರೆ ದಯಮಾಡಿ ಕ್ಷಮಿಸಿ” ಎಂದರು.
ಈ ಹಿಂದೆ ಕುಮಾರಸ್ವಾಮಿ ಪ್ರಶ್ನಿಸಲಿಲ್ಲ ಯಾಕೆ?ಜಮೀರ್ ಹೇಳಿಕೆಯನ್ನು ಸಿಎಂ, ಡಿಸಿಎಂ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ನಾಗರೀಕ ಸರ್ಕಾರವೇ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಇದು ಮೊದಲ ಬಾರಿಯ ಹೇಳಿಕೆಯಲ್ಲ. ಈ ಹಿಂದೆ ಕೂಡ ಎರಡು ಮೂರು ಬಾರಿ ಹೇಳಿಕೆ ಬಂದಿತ್ತು. ಆಗಲೇ ಕುಮಾರಸ್ವಾಮಿ ಅವರು ಈ ಬಗ್ಗೆ ಪ್ರಶ್ನೆ ಮಾಡಬೇಕಿತ್ತು” ಎಂದರು.
ಕೊನೆ ಹಂತದಲ್ಲಿ ಇಂತಹ ಹೇಳಿಕೆ ಬರಬಾರದಿತ್ತು ಎಂದು ಕೇಳಿದಾಗ, “ಮಾತನಾಡುವಾಗ ಕೆಲವೊಮ್ಮೆ ತಪ್ಪುಗಳು ಆಗುತ್ತವೆ. ಅವರು ಕ್ಷಮೆ ಕೇಳಿದ್ದಾರೆ. ಮಾಧ್ಯಮಗಳು ಯಾಕೆ ಈ ಹಿಂದೆಯೇ ಇಷ್ಟೊಂದು ವೈಭವೀಕರಣ ಮಾಡಲಿಲ್ಲ. ಮಾಡಿದ್ದರೆ ಈ ರೀತಿ ಹೇಳಿಕೆ ಮತ್ತೆ ಬರುತ್ತಿರಲಿಲ್ಲ. ಆಗ ಆ ಹೇಳಿಕೆಯ ಬಗ್ಗೆ ಪ್ರಶ್ನೆ ಮಾಡಬೇಕಾದವರೇ ಮಾಡಲಿಲ್ಲ. ನಾನು ಕಪ್ಪಗೆ ಇದ್ದೇನೆ. ನನ್ನನ್ನು ಕರಿಯ ಎಂದರೆ ಏನು ಮಾಡಲು ಸಾಧ್ಯ? ವಿಶ್ವಾಸದಲ್ಲಿದ್ದಾಗ ಅಂತಹ ಮಾತು ಬರುತ್ತದೆ. ನನ್ನನ್ನು ನಮ್ಮ ಸ್ನೇಹಿತರು ಅಡ್ಡಹೆಸರಿನಲ್ಲಿ ಕರೆಯುತ್ತಾರೆ. ನಿಮ್ಮ ಸ್ನೇಹಿತರೂ ನಿಮ್ಮನ್ನು ಬೇರೆ ಬೇರೆ ಅಡ್ಡಹೆಸರಲ್ಲಿ ಕರೆಯುತ್ತಾರೆ” ಎಂದು ತಿಳಿಸಿದರು.
ಜಮೀರ್ ಹೇಳಿಕೆ ತಿರುಚಲಾಗಿದೆ:
ಕುಟುಂಬವನ್ನೇ ಖರೀದಿ ಮಾಡುತ್ತೇನೆ ಎಂದು ಹೇಳಿರುವ ಬಗ್ಗೆ ಕೇಳಿದಾಗ, “ಈ ವಿಚಾರದಲ್ಲಿ ಮಾಧ್ಯಮಗಳು ಅವರ ಹೇಳಿಕೆ ತಿರುಚಿದ್ದಾರೆ. ಚುನಾವಣೆ ಸಮಯದಲ್ಲಿ ಜೆಡಿಎಸ್ ನವರು ಮತದಾರರಿಗೆ ಹಣ ಹಂಚಿ ಮತ ಖರೀದಿ ಮಾಡುತ್ತಿದ್ದಾರೆ. ನೀವು ಅದನ್ನು ಪಡೆಯಬೇಡಿ. ಕುಮಾರಸ್ವಾಮಿ ಹಣದ ಹೊಳೆ ಹರಿಸುತ್ತಿದ್ದು, ನೀವು ಅದಕ್ಕೆ ಬಲಿಯಾಗಬೇಡಿ. ನಾವೇ ನಿಮಗೆ ಏನು ಬೇಕೋ ಕೊಡುತ್ತೇವೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ಜಮೀರ್ ಅವರು ಕೂಡಲೇ ಸ್ಪಷ್ಟನೆ ನೀಡಿದ್ದಾರೆ” ಎಂದರು.
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಹಣದ ಹೊಳೆ ಹರಿಸಿದ್ದಾರಾ ಎಂದು ಕೇಳಿದಾಗ, “ಚನ್ನಪಟ್ಟಣದವರನ್ನು ಹೋಗಿ ಕೇಳಿ. ಇಲ್ಲಿ ಕೆಲಸಕ್ಕೆ, ಸಮಾಜ ಸೇವೆಗೆ ಬೆಲೆ ಇಲ್ಲ. ಇಲ್ಲಿ ಹಣ, ಜಾತಿ, ಧರ್ಮ ಮಾತ್ರ ಜನರಿಗೆ ಬೇಕಾಗಿದೆ ಎಂಬುದು ಸತ್ಯ ಎಂಬ ವಿಚಾರ ಜನರ ಮುಂದಿದೆ. ಕೆಲಸ ಮಾಡಿದ್ದೀನಿ ಮತ ಹಾಕಿ ಎಂದುಕೊಳ್ಳುವ ಪರಿಸ್ಥಿತಿಯಲ್ಲಿ ಯಾವುದಾದರೂ ರಾಜಕಾರಣಿ ಇದ್ದರೆ ಅವರ ರಾಜಕಾರಣ ಕಷ್ಟವಾಗುತ್ತದೆ. ಸುಳ್ಳು ಹೇಳುವುದನ್ನು ಕಲಿಯಬೇಕು. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಬೇರೆ ಬೇರೆ ಸುಳ್ಳು ಹೇಳಬೇಕು” ಎಂದರು.
ಮತದಾನದ ಬೂತ್ ಗಳ ಬಳಿ ಬಿರಿಯಾನಿ ಹಂಚಿಕೆ ವಿಡಿಯೋ ಹರಿದಾಡಿದ್ದು, ಚುನಾವಣಾ ಆಯೋಗ ಸರಿಯಾಗಿ ಕೆಲಸ ಮಾಡಿದೆಯೇ ಎಂದು ಕೇಳಿದಾಗ, “ಈ ವಿಚಾರ ನನಗೆ ಗೊತ್ತಿಲ್ಲ. ಮತ ಪ್ರಚಾರ ಮುಗಿದ ನಂತರ ನಾವು ಕ್ಷೇತ್ರದಿಂದ ಹೊರಗೆ ಹೊರಟು ಹೋದೆವು. ನಂತರ ಮತದಾನ ಮುಗಿದ ಬಳಿಕ ಕ್ಷೇತ್ರಕ್ಕೆ ಹೋಗಿ, ಕಾರ್ಯಕರ್ತರನ್ನು ಭೇಟಿ ಮಾಡಿ ಚರ್ಚೆ ಮಾಡಿದೆವು” ಎಂದರು.
ದೇವೇಗೌಡರ ಬಗ್ಗೆ ನೀಡಿದ ಹೇಳಿಕೆಗಳು ಪರಿಣಾಮ ಬೀರಿವೆಯೇ ಎಂದು ಕೇಳಿದಾಗ, “ವಿಶ್ಲೇಷಣೆ ಮಾಡುವವರು ಒಬ್ಬೊಬ್ಬರೂ ಒಂದೊಂದು ವಿಶ್ಲೇಷಣೆ ಮಾಡುತ್ತಾರೆ. ನಿಮ್ಮ ಬಗ್ಗೆ ನನ್ನ ವಿಶ್ಲೇಷಣೆ ನಾನು ಹೇಳಿದ್ದೇನೆ. ನೀವು ನನ್ನ ಬಗ್ಗೆ ಯಾವ ರೀತಿ ವಿಶ್ಲೇಷಣೆ ಮಾಡುತ್ತೀರಿ ಎಂದು ಸಂಜೆ ಕಾದು ನೋಡುತ್ತೇನೆ” ಎಂದು ತಿಳಿಸಿದರು.
ಡಿ.ಕೆ ಸಹೋದರರು ಹಣ ಹಂಚಿಕೆ ಮಾಡಿದ್ದಾರೆ ಎಂಬ ಎನ್ ಡಿಎ ಮೈತ್ರಿಕೂಟಗಳ ಆರೋಪದ ಬಗ್ಗೆ ಕೇಳಿದಾಗ, “ಜೆಡಿಎಸ್ ಹಾಗೂ ಬಿಜೆಪಿಯವರು ಸತ್ಯಹರಿಶ್ಚಂದ್ರ ವಂಶದ ಒಂದು ಭಾಗ” ಎಂದು ತಿಳಿಸಿದರು.ಚನ್ನಪಟ್ಟಣ ಕ್ಷೇತ್ರದಲ್ಲಿ ಮತದಾರರಿಗೆ ಅಭಿನಂದನೆ ಹೇಳುತ್ತೀರಾ ಎಂದು ಕೇಳಿದಾಗ, “ಅದಕ್ಕೆ ಇನ್ನು ಸಮಯವಿದೆ. ನಾನು ಎಂದಿಗೂ ಕಾರ್ಯಕರ್ತರು, ಮತದಾರರನ್ನು ಬಿಟ್ಟುಕೊಟ್ಟಿಲ್ಲ, ಮುಂದಿಯೂ ಬಿಟ್ಟುಕೊಡುವುದಿಲ್ಲ” ಎಂದು ತಿಳಿಸಿದರು.
ನಿಮಗಿರುವ ಆತ್ಮವಿಶ್ವಾಸ ಯೋಗೇಶ್ವರ್ ಅವರಿಗಿಲ್ಲ ಎಂದು ಕೇಳಿದಾಗ, “ಅವರು ಅವರ ಅಭಿಪ್ರಾಯ ತಿಳಿಸಿದ್ದಾರೆ. ಅವರ ಕಾರ್ಯಕರ್ತರು ಏನು ಸಂದೇಶ ನೀಡಿದ್ದಾರೋ ಅದನ್ನು ಹೇಳಿದ್ದಾರೆ” ಎಂದು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಮಾಧ್ಯಮಗಳ ಹೃದಯ ಹೆಚ್ಚಾಗಿ ಮಿಡಿದಿತ್ತು:ಲೋಕಸಭೆ ಚುನಾವಣೆಯಲ್ಲೂ ನೀವು ಆತ್ಮವಿಶ್ವಾಸದಲ್ಲಿದ್ದಿರಿ, ಆದರೆ ಫಲಿತಾಂಶ ವ್ಯತಿರಿಕ್ತವಾಗಿ ಬಂತು ಎಂದು ಕೇಳಿದಾಗ, “ಮತದಾನದ ಡಬ್ಬ ಯಾರು ಹಾಕಿದ್ದಾರೆ? ನನಗೆ ಒಂದು ಮತವಿತ್ತು. ನಾನು ಆ ಮತ ಹಾಕಿದ್ದೇನೆ. ಅದರ ಮೇಲೆ ಅವಲಂಬಿತವಾಗಿದ್ದೇನೆ. ಬೇರೆಯವರ ಮೇಲೆ ಅವಲಂಬಿತವಾಗಲು ಸಾಧ್ಯವೇ? ನನ್ನ ಚುನಾವಣೆ ಸಮಯದಲ್ಲಿ ನೀವು ಪ್ರತಿಸ್ಪರ್ಧಿಯಿಂದ 8 ಲಕ್ಷ ಆಪರೇಷನ್ ಮಾಡಿಸಿದ್ದೀರಿ.ಹೃದಯ ಇಲ್ಲದವರಿಗೂ ಹೃದಯ ಕಸಿ ಮಾಡಿಸಿದ್ದೀರಿ. ಈಗ ನಾನು ಅದನ್ನು ಹೇಳಲು ಸಾಧ್ಯವೇ? ಅವರ ಹೃದಯ ಮಿಡಿಯುವುದಕ್ಕಿಂತ ನಿಮ್ಮ ಹೃದಯ ಹೆಚ್ಚಾಗಿ ಮಿಡಿಯಿತು” ಎಂದರು.
ಕೋವಿಡ್ ವಿಚಾರವಾಗಿ ಹೆಚ್ಚಿನ ಮಾಹಿತಿ ಇಲ್ಲ:
ಕೋವಿಡ್ ಹಗರಣ ತನಿಖೆಯಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿದ್ದ ಸಂಸದ ಮಂಜುನಾಥ್ ಅವರ ವಿಚಾರಣೆ ಬಗ್ಗೆ ಕೇಳಿದಾಗ, “ನನಗೆ ಕೋವಿಡ್ ವಿಚಾರ ಗೊತ್ತಿಲ್ಲ. ಇದು ಸರ್ಕಾರದ ತೀರ್ಮಾನವಾಗಿದೆ. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಕೋವಿಡ್ ಹಗರಣಗಳ ಬಗ್ಗೆ ಸಾಕಷ್ಟು ವಿಚಾರ ಪ್ರಸ್ತಾಪ ಮಾಡಿದ್ದೆವು. ನಮ್ಮ ಸರ್ಕಾರ ಬಂದ ನಂತರ ನಿವೃತ್ತ ನ್ಯಾ. ಕುನ್ಹಾ ಅವರ ಸಮಿತಿ ನೇಮಿಸಿದ್ದೆವು. ಆ ಸಮಿತಿ ಈಗ ವರದಿ ನೀಡಿದ್ದು, ಅದರಲ್ಲಿ ಏನಿದೆ ಏನಿಲ್ಲ ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಉಪ ಸಮಿತಿಗೆ ಗೊತ್ತಿದೆ. ಅದು ಈಗ ವಿಚಾರಣೆ ಮಾಡುತ್ತಿದ್ದು, ಈಗ ಎಸ್ಐಟಿ ತನಿಖೆ ರಚನೆಯಾಗಿದ್ದು, ತನಿಖೆ ಮಾಡಿ ರಾಜ್ಯದ ಜನತೆಗೆ ವಾಸ್ತವಾಂಶ ತಿಳಿಸಲಾಗುವುದು. ನೀವು ಬಹಳ ವೇಗವಾಗಿದ್ದು, ಎಲ್ಲರಿಗಿಂತ ಹೆಚ್ಚಿನ ಮಾಹಿತಿ ಇದೆ. ನಾನು ನಿಮ್ಮಿಂದ ವಿಚಾರ ತಿಳಿಯಬಹುದು” ಎಂದು ತಿಳಿಸಿದರು.