ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಟ್ವಿಟರ್ ಅಕೌಂಟ್ ಲಾಕ್ ಮಾಡಿದ ಬೆನ್ನಲ್ಲೇ, ಈಗ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯೂ ಲಾಕ್ ಆಗಿದೆ. ಟ್ವಿಟರ್ ನಿಯಮಗಳನ್ನು ಪಾಲಿಸದ ಕಾರಣಕ್ಕಾಗಿ ಅಕೌಂಟ್ ಲಾಕ್ ಮಾಡಲಾಗಿದೆ.
ಈ ಕುರಿತಾಗಿ ಫೇಸ್ಬುಕ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್, ನಮ್ಮ ನಾಯಕರನ್ನು ಜೈಲಿನಲ್ಲಿ ಬಂಧಿಸಿದಾಗಲೂ ನಾವು ಭಯಪಟ್ಟಿರಲಿಲ್ಲ. ಈಗ ಟ್ವಿಟರ್ ಖಾತೆ ಬಂದ್ ಮಾಡಿದಾಗ ಏನು ಹೆದರುತ್ತೇವೆ ಅಂದುಕೊಂಡಿದ್ದೀರಾ? ನಾವು ಕಾಂಗ್ರೆಸ್, ಜನತೆಯ ಸಂದೇಶ. ನಾವು ಹೊರಾಡುತ್ತಿದ್ದೆವು, ಹೋರಾಡುತ್ತಾ ಇರುತ್ತೇವೆ, ಎಂದು ಹೇಳಿಕೊಂಡಿದೆ.
“ಒಂದು ವೇಳೆ ಅತ್ಯಾಚಾರಕ್ಕೊಳಗಾದ ಬಾಲಕಿಗೆ ನ್ಯಾಯ ಕೊಡಿಸುವುದು ಅಪರಾಧವಾದರೆ, ಆ ಅಪರಾಧವನ್ನು ನಾವು ನೂರು ಬಾರಿ ಮಾಡುತ್ತೇವೆ,” ಎಂದು ಕಾಂಗ್ರೆಸ್ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಬರೆಯಲಾಗಿದೆ.
https://www.facebook.com/IndianNationalCongress/posts/4287466701365969
ಪಕ್ಷದ ಕುರಿತು ಪ್ರಧಾನಿ ಮೋದಿಗೆ ಇಷ್ಟೊಂದು ಭಯವೇ? ಎಂದು ಕೂಡಾ ಕಾಂಗ್ರೆಸ್ ಟೀಕಿಸಿದೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ರೋಹನ್ ಗುಪ್ತಾ ಅವರು, ಜನರಿಗಾಗಿ ಕಾಂಗ್ರೆಸ್ ಧ್ವನಿ ಎತ್ತುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಟ್ವಿಟರ್ ಸರ್ಕಾರದ ಒತ್ತಡಕ್ಕೆ ಒಳಗಾಗಿ ಕಾಂಗ್ರೆಸ್’ನ 5000ಕ್ಕೂ ಹೆಚ್ಚು ನಾಯಕರು ಹಾಗೂ ಕಾರ್ಯಕರ್ತರ ಖಾತೆಯನ್ನು ಲಾಕ್ ಮಾಡಿದೆ, ಎಂದು ಆರೋಪಿಸಿದ್ದಾರೆ.
ಬುಧವಾರದಂದು ಹಲವು ಕಾಂಗ್ರೆಸ್ ನಾಯಕರ ಟ್ವಿಟರ್ ಖಾತೆಯನ್ನು ಅಮಾನತುಗಳಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಎಐಸಿಸಿ ರಾಜಸ್ಥಾನ ಉಸ್ತುವಾರಿ ಅಜಯ್ ಮಾಕೆನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್, ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾ, ಸಂಸದ ಮಾಣಿಕಮ್ ಟ್ಯಾಗೊರ್, ಮಾಜಿ ಕೇಂದ್ರ ಸಚಿವ ಜೀತೆಂದ್ರ ಸಿಂಗ್ ಸೇರಿದಂತೆ ಹಲವು ಪ್ರಮುಖ ನಾಯಕರ ಟ್ವಿಟರ್ ಖಾತೆಯನ್ನು ಸಮಾನತು ಮಾಡಲಾಗಿದೆ.
ರಾಹುಲ್ ಗಾಂಧಿ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಿದ ಸಂದರ್ಭಧಲ್ಲಿ ‘ಮೇಂ ಭಿ ರಾಹುಲ್’ ಎಂಬ ಅಭಿಯಾನವನ್ನು ಕಾಂಗ್ರೆಸ್ ಹಮ್ಮಿಕೊಂಡಿತ್ತು. ಬುಧವಾರ ಲಾಕ್ ಆಗಿರುವ ಟ್ವಿಟರ್ ಖಾತೆಗಳು ಈ ಅಭಿಯಾನದಲ್ಲಿ ಭಾಗವಹಿಸಿದ್ದವು.
ಕಾಂಗ್ರೆಸ್ ರಾಷ್ಟ್ರೀಯ ಸಂವಹನ ವಿಭಾಗದ ಮುಖ್ಯಸ್ಥರಾಗಿರುವ ಪ್ರಣವ್ ಝಾ ಅವರು, ಕಾಂಗ್ರೆಸ್ ನಾಯಕರ ಟ್ವಿಟಲ್ ಖಾತೆ ಲಾಕ್ ಮಾಡಲಾಗಿದೆ. ತಪ್ಪು ನಡೆಯುತ್ತಿರುವ ಪ್ರತಿಯೊಂದು ಕಡೆಗಳಲ್ಲಿ ಕಾಂಗ್ರೆಸ್ ತನ್ನ ಪ್ರತಿಭಟನೆಯನ್ನು ದಾಖಲಿಸುತ್ತದೆ, ಎಂದು ಹೇಳಿದ್ದಾರೆ.
“ಕಾಲಾ ಪಾನಿಯ ಬೀಗ ಜಡಿದ ಬಾಗಿಲುಗಳ ಹಿಂದಿನಿಂದಲೂ ಹೋರಾಟ ನಡೆಸಿದ ಇತಿಹಾಸ ಕಾಂಗ್ರೆಸ್’ಗೆ ಇದೆ ಎಂಬುದು ಪ್ರಧಾನಿಗೆ ಅರ್ಥವಾಗಿಲ್ಲವೇ? ಟ್ವಿಟರ್’ನ ವರ್ಚುವಲ್ ಬೀಗಕ್ಕೆ ಭಯಪಟ್ಟು ಕಾಂಗ್ರೆಸ್ ಹಿಂದೆ ಸರಿಯುವುದು ಎಂದು ಅವರು ಅಂದುಕೊಂಡಿದ್ದಾರೆಯೇ,” ಎಂದು ಪ್ರಣವ್ ಪ್ರಶ್ನಿಸಿದ್ದಾರೆ.