ಬೆಂಗಳೂರು : ಕೇಂದ್ರ ಸರ್ಕಾರದ ಕರಾಳ ಕಾರ್ಮಿಕ ಮಸೂದೆಗಳು ಹಾಗೂ ಮನ್ರೇಗಾ ರದ್ಧತಿಯನ್ನು ಖಂಡಿಸಿ ಉತ್ತರ ಪ್ರದೇಶದಲ್ಲಿ ಯೂಥ್ ಕಾಂಗ್ರೆಸ್ ವಿಧಾನಸೌಧ ಮುತ್ತಿಗೆಗೆ ಯತ್ನಿಸಿದೆ. ಪ್ರತಿಭಟನೆಯಲ್ಲಿ ಕಾರ್ಯಕರ್ತರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಪ್ರತಿಭಟನೆಗೂ ಮುನ್ನವೇ ಕಾಂಗ್ರೆಸ್‌ನ ಹಲವು ನಾಯಕರನ್ನು ಯೋಗಿ ಸರ್ಕಾರ ಗೃಹಬಂಧನದಲ್ಲಿರಿಸಿದ್ದು, ಬಳಿಕ ಇದರಿಂದ ಕೆರಳಿದ ಯೂಥ್ ಕಾಂಗ್ರೆಸ್ ಸಾವಿರಾರು ಕಾರ್ಯಕರ್ತರು ವಿಧಾನಸೌಧದ ಮುತ್ತಿಗೆ ಹಾಕಲು ಮುಂದಾದರು. ಆದರೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಅವರನ್ನು ತಡೆದರು. ಇದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಕೋಲಾಹಲಕ್ಕೆ ಕಾರಣವಾಯಿತು. ಈ ವೇಳೆ ಕಾಂಗ್ರೆಸ್ ನಾಯಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅಲ್ಲದೆ ಯೋಗಿ ಸರ್ಕಾರದ ನೀತಿಯನ್ನು ಖಂಡಿಸಿ ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಘಟನೆಯೂ ನಡೆದಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆಗೆ ಕಾಂಗ್ರೆಸ್ ಮುಂದಾಗಿತ್ತು.
ಇನ್ನೂ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರವು ವಿಧಾನಸೌಧದ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿತ್ತು. ಆದರೆ ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ, ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಿದರು.
ಇದನ್ನೂ ಓದಿ : BREAKING: SSLC, PUC ಪರೀಕ್ಷಾ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ
ಈ ವೇಳೆ ಮಾತನಾಡಿದ ಅಜಯ್ ರೈ, ಇಂದು ಹಾಕಲಾಗಿರುವ ಬ್ಯಾರಿಕೇಡ್‌ಗಳು ಮತ್ತು ಪೊಲೀಸ್ ಬಂದೂಕುಗಳು ನಮ್ಮ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಿವೆ. ಪ್ರಜಾಪ್ರಭುತ್ವದಲ್ಲಿ, ಬೆದರಿಕೆ ಮತ್ತು ಬಲ ಪ್ರಯೋಗಿಸಿ ಆಡಳಿತ ನಡೆಸುವುದನ್ನು ಆಡಳಿತ ಅಂತ ಕರೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಸರ್ಕಾರಗಳು ಬುಲ್ಡೋಜರ್‌ಗಳಂತೆ ಮತ್ತು ಭಯ ಸೃಷ್ಟಿಸುವಂತೆ ವರ್ತನೆ ಮಾಡಬಾರದು. ಬದಲಿಗೆ ಪ್ರೀತಿ ಮತ್ತು ವಿಶ್ವಾಸದಿಂದ ನಡೆಯಬೇಕು. ದೇಶದಲ್ಲಿ ಯುವಕರಿಗೆ ಉದ್ಯೋಗಗಳು ಸಿಗುತ್ತಿಲ್ಲ. ಎಲ್ಲೆಡೆ ಭಯದ ವಾತಾವರಣವಿದೆ. ಆದರೆ ನೆನಪಿಡಿ, ನಮಗೆ ಗಾಂಧೀಜಿಯವರ ಆಶೀರ್ವಾದ ಮತ್ತು ಜನರ ಬೆಂಬಲ ಇರುವವರೆಗೆ, ನಮ್ಮ ಹೋರಾಟ ಎಂದಿಗೂ ನಿಲ್ಲುವುದಿಲ್ಲ. ಅಲ್ಲದೆ ನಿಮ್ಮ ಕುತಂತ್ರ ರಾಜಕೀಯಕ್ಕೆ ತಲೆಬಾಗುವುದಿಲ್ಲ. ಇದು ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟ, ಮತ್ತು ನಾವು ಕೊನೆಯ ಉಸಿರಿನವರೆಗೆ ಹೋರಾಡುತ್ತೇವೆ ಎಂದು ಅಜಯ್ ರೈ ಕೇಂದ್ರ ಹಾಗೂ ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಳೆದ 11-12 ತಿಂಗಳುಗಳಿಂದ ಸರ್ಕಾರ ತಡೆಹಿಡಿದಿರುವ ಕಾರ್ಮಿಕರ ವೇತನ, ಮನ್ರೇಗಾ ರದ್ದುಗೊಳಿಸುವ ಸರ್ಕಾರದ ನಿರ್ಧಾರವು, ಮಹಿಳೆಯರು, ಕಾರ್ಮಿಕರು, ಶಂಕರಾಚಾರ್ಯ ಮತ್ತು ಮಾತಾ ಅಹಲ್ಯಾಬಾಯಿ ಹೋಳ್ಕರ್ ಅವರಿಗೆ ಮಾಡಿದ ಅವಮಾನ ಎಂದು ಟೀಕಿಸಿದ್ದಾರೆ.
ದೇಶದಲ್ಲಿನ ಮಾರುಕಟ್ಟೆಗಳನ್ನು ಕೆಡವುವುದು, ಬೇಳೆ ಕಾಳುಗಳಂತಹ ಮಾರುಕಟ್ಟೆಗಳನ್ನು ಹಾಳುಮಾಡುವುದು, ಅಲ್ಲದೆ ಗುಜರಾತ್‌ನ ಜನರಿಗೆ ಎಲ್ಲಾ ಭೂಮಿಯನ್ನು ಧಾರೆ ಎರಯುವುದನ್ನು ನಾವು ವಿರೋಧಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಗುಡುಗಿದ್ದಾರೆ.






