ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲುವು ದಾಖಲಿಸಿ ಸರ್ಕಾರ ರಚನೆ ಮಾಡಬೇಕು ಎನ್ನುವುದು ಕಾಂಗ್ರೆಸ್ನ ಕನಸು. ಇದೇ ಕಾರಣಕ್ಕೆ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ಮುಂದಿನ 75 ದಿನಗಳ ಕಾಲ ರಾಜ್ಯ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲು ನಿರ್ಧಾರ ಮಾಡಲಾಯ್ತು. ಮುಖ್ಯಮಂತ್ರಿ ಆಯ್ಕೆ ಮಾಡುವುದು ಚುನಾವಣೆ ಗೆದ್ದ ಬಳಿಕ, ಇದೀಗ ಬಣ ರಾಜಕೀಯ ಬಿಟ್ಟು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸುವ ಕಡೆಗೆ ಗಮನ ಕೊಡಿ, ಇಬ್ಬರು ಒಟ್ಟಿಗೆ ಹೋಗುವ ಪ್ರಯತ್ನ ಮಾಡಿ ಎಂದು ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ಗೆ ಹಿತವಚನ ಹೇಳಿದ್ದರು. ಇದರ ನಡುವೆ ಈಗಾಗಲೇ ಪ್ರತ್ಯೇಕತೆ ಆರಂಭವಾಗಿದೆ.
ಜನವರಿಯಿಂದ ಕಾಂಗ್ರೆಸ್ ಬಸ್ ಯಾತ್ರೆ, ಜೋಡಿ ಸಂಚಾರ..!
ಜನವರಿಯಿಂದ ರಾಜ್ಯಾದ್ಯಂತ 20 ಜಿಲ್ಲೆಗಳಲ್ಲಿ ಬಸ್ನಲ್ಲಿ ಸಂಚಾರ ಮಾಡಲು ಸಿದ್ದರಾಮಯ್ಯ ನಿರ್ಧಾರ ಮಾಡಿದ್ದರು. ಆದರೆ ಇದೀಗ ಸಿದ್ದರಾಮಯ್ಯ ತಂತ್ರಗಾರಿಕೆಗೆ ಮಲ್ಲಿಕಾರ್ಜುನ ಖರ್ಗೆ ಬ್ರೇಕ್ ಹಾಕಿದ್ದು, ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಒಟ್ಟಿಗೆ ಯಾತ್ರೆ ಮಾಡುವಂತೆ ಸೂಚನೆ ನೀಡಿದ್ದಾರೆ. ಆದರೆ ದೆಹಲಿಯಿಂದ ವಾಪಸ್ ಆದ ಸಿದ್ದರಾಮಯ್ಯ, ಮಹತ್ವದ ಸಭೆ ನಡೆಸಿದ್ದಾರೆ. ಕಳೆದ ಆಗಸ್ಟ್ನಲ್ಲಿ ಸಿದ್ದರಾಮಯ್ಯ ಹುಟ್ಟುಹಬ್ಬವನ್ನು ಸಿದ್ದರಾಮೋತ್ಸವ ಹೆಸರಿಯನ್ನು ಅದ್ಧೂರಿಯಾಗಿ ಯಶಸ್ವಿಯಾಗಿ ಮಾಡಿದ್ದ, ಬಿ.ಎಲ್ ಶಂಕರ್, ಬೈರತಿ ಸುರೇಶ್, ಬಸವರಾಜ ರಾಯರೆಡ್ಡಿ ಜೊತೆಗೆ ಸಭೆ ನಡೆಸಿ, ದೆಹಲಿಯಲ್ಲಿ ಚರ್ಚೆಯಾದ ವಿಚಾರಗಳ ಬಗ್ಗೆ ಆಪ್ತರ ಜೊತೆಗೆ ಸಿದ್ದರಾಮಯ್ಯ ಸುಧೀರ್ಘ ಸಭೆ ನಡೆಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಸಿದ್ದರಾಮಯ್ಯಗೆ ಬೇಸರ..!
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ರಾಜ್ಯದಲ್ಲಿ ಪ್ರಮುಖ ನಿರ್ಧಾರಗಳನ್ನು ಮಲ್ಲಿಕಾರ್ಜುನ ಖರ್ಗೆ ತೆಗೆದುಕೊಳ್ಳುವುದು ಸಿದ್ದರಾಮಯ್ಯ ಅಂಡ್ ಟೀಂಗೆ ಬೇಸರ ಉಂಟು ಮಾಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕಲಬುರಗಿಯಲ್ಲಿ ಮೊನ್ನೆ ಮೊನ್ನೆಯಷ್ಟೇ ನಡೆದ ಸಮಾವೇಶದಲ್ಲಿ ಇಡೀ ರಾಜ್ಯದ ಪ್ರಮುಖ ನಾಯಕರು ಮಲ್ಲಿಕಾರ್ಜುನ ಖರ್ಗೆ ಆಗಮಿಸಿದಾಗ ಎದ್ದು ನಿಂತು ಗೌರವ ನೀಡಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ಮಲ್ಲಿಕಾರ್ಜುನ ಖರ್ಗೆ ಕೈ ಮುಗಿಯುತ್ತ ವೇದಿಕೆಗೆ ಆಗಮಿಸಿದಾಗ ತಿರುಗಿ ನೋಡುವ ಪ್ರಯತ್ನವನ್ನೂ ಮಾಡಲಿಲ್ಲ. ಈ ವೀಡಿಯೋ ಇದೀಗ ಸಾಕಷ್ಟು ವೈರಲ್ ಆಗುತ್ತಿದ್ದು, ದಲಿತ ನಾಯಕನ ಬಗ್ಗೆ ಅಹಿಂದ ನಾಯಕನ ಅಸಡ್ಡೆ ಎನ್ನುವ ಟೀಕೆಗಳು ಕೇಳಿ ಬರುತ್ತಿವೆ.

ಮುಖ್ಯಮಂತ್ರಿ ರೇಸ್ನಲ್ಲಿ ಮಲ್ಲಿಕಾರ್ಜುನ ಖರ್ಗೆಯೂ ಇದ್ದಾರಾ..?
ಈ ರೀತಿಯ ಮಾತುಗಳು ನಿಧಾನವಾಗಿ ಶಕ್ತಿ ಪಡೆದುಕೊಳ್ತಿವೆ. ರಾಜ್ಯ ಕಾಂಗ್ರೆಸ್ನಲ್ಲಿ ಈಗಾಗಲೇ ಎರಡು ಪ್ರಮುಖ ಭನಗಳು ಇದ್ದು, ಡಿ.ಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ ನೇತೃತ್ವ ವಹಿಸಿಕೊಂಡಿದ್ದಾರೆ. ಇದೀಗ ಮಲ್ಲಿಕಾರ್ಜುನ ಖರ್ಗೆಗೂ ಒಂದು ಬಣ ಸಪೋರ್ಟ್ ಮಾಡಲು ಮುಂದಾಗಿದ್ದು, ಒಂದು ವೇಳೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ ಆದರೆ, ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಅವಕಾಶ ಬಾಗಿಲು ಮುಚ್ಚಿದರೆ ಮಲ್ಲಿಕಾರ್ಜುನ ಖರ್ಗೆಯೇ ಮುಖ್ಯಮಂತ್ರಿ ಆಗುವ ಸಾಧ್ಯತೆಗಳೂ ಇವೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಜೆಡಿಎಸ್ ವಿರುದ್ಧ ಮುಗಿ ಬೀಳುವ ಸಿದ್ದರಾಮಯ್ಯರಿಂದ ಮಲ್ಲಿಕಾರ್ಜುನ ಖರ್ಗೆ ಕೂಡ ಅಂತರ ಕಾಯ್ದುಕೊಂಡಿದ್ದಾರೆ ಎನ್ನುವ ಮಾತುಗಳಿವೆ.
ಚುನಾವಣೆ ಮುನ್ನವೇ ಭಿನ್ನಮತ ಸ್ಫೋಟ ಸಾಧ್ಯತೆ..!
ಇದೀಗ ರಾಜ್ಯಾದ್ಯಂತ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಒಟ್ಟಿಗೆ ಪ್ರವಾಸ ಮಾಡುವ ನಿರ್ಧಾರ ಹೊರಬಿದ್ದಿದೆ. ಸಮಾವೇಶ ಅಥವಾ ಪ್ರವಾಸದಲ್ಲಿ ಡಿ.ಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ ಅವರಿಗೆ ಪ್ರತ್ಯೇಕವಾಗಿ ಜೈಕಾರ ಹಾಕುವುದು, ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗುವ ಪ್ರಸಂಗಗಳು ನಡೆದರೆ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಇರುಸು ಮುರುಸು ಎದುರಿಸಬೇಕಾಗಬಹುದು. ಕಾಂಗ್ರೆಸ್ ಅಧಿಕಾರ ಹಿಡಿಯಲೇ ಬೇಕು ಅನ್ನೋ ಹಂಬಲದಲ್ಲಿ ಜಾಣ್ಮೆಯ ಹೆಜ್ಜೆ ಹಿಡುತ್ತಿರುವ ಹೊತ್ತಿನಲ್ಲಿ ಸಂಕಷ್ಟಗಳು ಎದುರಾಗದಂತೆ ಎಚ್ಚರ ವಹಿಸುವ ಅಗತ್ಯವಿದೆ. ಇಲ್ಲದಿದ್ದರೆ ಕಾಂಗ್ರೆಸ್ ಕನಸು ಕನಸಾಗಿಯೇ ಉಳಿದುಬಿಡುವ ಸಾಧ್ಯತೆಯಿದೆ.