ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ್ದು ಕಾಂಗ್ರೆಸ್ ಪಕ್ಷ. ಈಗ ಪ್ರೀತಿಯ ಮಳೆ ಸುರಿಸುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಡಿಯೂರಪ್ಪ ವಿರುದ್ಧ ಕೇಸು ದಾಖಲಿಸಿತು. ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಮತ್ತು ಅಂದಿನ ರಾಜ್ಯಪಾಲರು ಮಸಲತ್ತು ನಡೆಸಿ ಜೈಲಿಗೆ ಹೋಗುವಂತೆ ಮಾಡಿದರು. ಇದರಲ್ಲಿ ಸೋನಿಯಗಾಂಧಿ ಪಾತ್ರವೂ ಇದೆ ಎಂದು ಆರೋಪಿಸಿದರು.
ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗಲಿದೆ. ‘ಕಾಂಗ್ರೆಸ್ ಮುಕ್ತ ಕರ್ನಾಟಕ’ ಮಾಡಲು ವಿಜಯ ಸಂಕಲ್ಪ ರಥ ಯಾತ್ರೆ ನಿರ್ಣಾಯಕ ಯಾತ್ರೆಯಾಗಲಿದೆ. ನಮ್ಮ ಅಶ್ವಮೇಧದ ಕುದುರೆಗಳನ್ನು ಬಿಟ್ಟಿದ್ದೇವೆ. ಕಟ್ಟಿ ಹಾಕುವ ಧೈರ್ಯ ಸಿದ್ದರಾಮಯ್ಯ ಸೇರಿದಂತೆ ಯಾರಿಗೂ ಇಲ್ಲ. ಅಂತಿಮವಾಗಿ ಜಯ ನಮ್ಮದೇ. ಈವರೆಗೆ ಮಾಡಿರುವ ಎಲ್ಲ ಸಮೀಕ್ಷೆಗಳಲ್ಲೂ ನಮ್ಮ ಪಕ್ಷವೇ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿವೆ. ಹೀಗಾಗಿ ಮತ್ತೆ ನಾವೇ ಅಧಿಕಾರದ ಗದ್ದುಗೆ ಏರಲಿದ್ದೇವೆ ಎಂದರು.

ಇಂದಿನಿಂದ ನಾಲ್ಕು ವಿಜಯ ಸಂಕಲ್ಪ ಯಾತ್ರೆಗಳು ಆರಂಭವಾಗಲಿವೆ. ನಾಲ್ಕನೇ ಯಾತ್ರೆ ಇದೇ 3 ರಂದು ಆವಟಿಯ ಚೆನ್ನಕೇಶವ ದೇವಾಲಯದ ಆವರಣದಿಂದ ಆರಂಭವಾಗಲಿದೆ. ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಾಲನೆ ನೀಡಲಿದ್ದಾರೆ. ಆ ಬಳಿಕ ದೇವನಹಳ್ಳಿ ಶಾಲಾ ಮೈದಾನದಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದ್ದು, 30 ರಿಂದ 40 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ಅಶೋಕ ತಿಳಿಸಿದರು.
ನನ್ನ ನೇತೃತ್ವದ ತಂಡದಲ್ಲಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೆ. ಗೋಪಾಲಯ್ಯ,ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್, ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಸೇರಿ ಹಲವು ಶಾಸಕರು, ವಿಧಾನಪರಿಷತ್ ಸದಸ್ಯರ ಇರಲಿದ್ದಾರೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಯಾತ್ರೆ ನಡೆಯಲಿದೆ. ಒಟ್ಟು 17 ಸಾರ್ವಜನಿಕ ಸಭೆಗಳು, 7 ಮೋರ್ಚಾಗಳ ಸಭೆಯೂ ನಡೆಯಲಿದೆ. ಎಲ್ಲ ಕಡೆ ರೋಡ್ ಷೋ, ಸಾರ್ವಜನಿಕ ಸಭೆ ಇರುತ್ತದೆ ಎಂದು ಮಾಹಿತಿ ನೀಡಿದರು.