ಇಡಿ ನಾಲ್ಕು ದಿನಗಳಲ್ಲಿ ಸುಮಾರು 40 ಗಂಟೆಗಳ ಕಾಲ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಪ್ರಶ್ನಿಸಿದೆ. ಆದರೆ ಇದು ಸಾಕಾಗುವುದಿಲ್ಲ ಎಂದು ತೋರುತ್ತದೆ. ಇದೀಗ ಇಡಿ ಅವರಿಗೆ ಸತತ ಐದನೇ ದಿನ ಅಂದರೆ ಮಂಗಳವಾರವೂ ಸಮನ್ಸ್ ನೀಡಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅವರನ್ನು ಮತ್ತೊಮ್ಮೆ ವಿಚಾರಣೆ ನಡೆಸಲಾಗುವುದು ಎಂದು ವರದಿಯಾಗಿದೆ.
ಮತ್ತೊಂದೆಡೆ ಈ ಸಮನ್ಸ್‌ನಿಂದ ಕಾಂಗ್ರೆಸ್ ಆಕ್ರೋಶಗೊಂಡಿದ್ದು, ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ನಾಯಕರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ, ಕಾಂಗ್ರೆಸ್ ಸಂಸದರೊಂದಿಗೆ ದಿಲ್ಲಿ ಪೊಲೀಸರು ತೋರಿದ ಅನುಚಿತ ವರ್ತನೆ ಮತ್ತು ರಾಹುಲ್ ಗಾಂಧಿ ಅವರ ಇಡಿ ವಿಚಾರಣೆ, ಹಾಗೂ ಅಗ್ನಿಪಥ ಯೋಜನೆ ಕುರಿತು ಪ್ರಸ್ತಾಪಿಸಲಾಯಿತು ಎಂದು ವರದಿಯಾಗಿದೆ.

7 ನಾಯಕರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ 2 ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಇಡಿ ಮತ್ತು ದೆಹಲಿ ಪೊಲೀಸರ ವರ್ತನೆಯ ಜೊತೆಗೆ, ಅಗ್ನಿಪಥ್ ಯೋಜನೆಗೆ ಸಂಬಂಧಿಸಿದಂತೆ ರಾಷ್ಟ್ರಪತಿಗೆ ಜ್ಞಾಪಕ ಪತ್ರವನ್ನೂ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಗ್ನಿಪಥ ಯೋಜನೆ ಮೂಲಕ ಸಾವಿರಾರು ಯುವಕರನ್ನು ತಯಾರು ಮಾಡಿ ಆರ್‌ಎಸ್‌ಎಸ್‌ಗೆ ಕರೆತರಲು ಬಿಜೆಪಿ ಮುಂದಾಗಿದೆ ಎಂದು ಖರ್ಗೆ ಹೇಳಿದ್ದಾರೆ. ನಾಲ್ಕು ವರ್ಷಗಳ ಕಾಲ ತರಬೇತಿ ನೀಡಿ ಬಿಡುಗಡೆಗೊಳಿಸುವುದು ಯಾವ ದೇಶದಲ್ಲಾದರೂ ನಡೆದಿದೆಯೇ ಎಂದು ಅವರ ಪ್ರಶ್ನಿಸಿದ್ದಾರೆ. ಹಣದುಬ್ಬರ ಮತ್ತು ನಿರುದ್ಯೋಗದ ವಿರುದ್ಧ ಯುವಕರು ಪ್ರತಿಭಟಿಸದಂತೆ ಇದನ್ನು ಮಾಡಲಾಗುತ್ತಿದೆ. ಪ್ರತಿಪಕ್ಷಗಳು ಪ್ರತಿಭಟನೆ ಮಾಡಬಾರದೆಂದೇ ರಾಹುಲ್ ಗಾಂಧಿಯವರಿಗೂ ಇಡಿ ಮೂಲಕ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಗಂಭೀರ ಆರೋಪ ಹೊರಿಸಿದ್ದಾರೆ.