ಮಂಡ್ಯ: ಮಾ.16: ‘ಉರಿಗೌಡ, ನಂಜೇಗೌಡ ನಮ್ಮ ಹೆಮ್ಮೆ, ನಮ್ಮ ಅಭಿಮಾನ’ ಎಂದು ಮಂಡ್ಯದ ಕೆ.ಆರ್.ಪೇಟೆಯಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ಪತ್ರಕರ್ತರ ಜೊತೆ ಮಾತನಾಡಿದ ಅವರು, ಇತಿಹಾಸದಲ್ಲಿ ಉರಿಗೌಡ, ನಂಜೇಗೌಡ ಇದ್ದರು ಎಂಬ ಸಂಪೂರ್ಣ ನಂಬಿಕೆ ನಮ್ಮದು. ಹೀಗಾಗಿ ನಮಗೆ ಉರಿಗೌಡ, ನಂಜೇಗೌಡರ ಮೇಲೆ ಅಭಿಮಾನವಿದೆ ಎಂದು ಹೇಳಿದರು.
ನರಹಂತಕ, ಮತಾಂಧನಿಂದ ಮೈಸೂರು ಪ್ರಾಂತ್ಯದ ಜನರನ್ನು ರಕ್ಷಣೆ ಮಾಡಿರುವುದು ನಮಗೆ ಹೆಮ್ಮೆ. ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಅವರ ರಕ್ಷಣೆಯಲ್ಲಿ ಇವರು ಇದ್ದರು. ಹೀಗಾಗಿ ನಾವು ಇವರ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ.
ಇದರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಅಭ್ಯಂತರವಿದ್ದರೆ ನನಗೆ ಗೊತ್ತಿಲ್ಲ. ಕೇವಲ ಚುನಾವಣೆ ಇಟ್ಟುಕೊಂಡು ಕಾಂಗ್ರೆಸ್ ನವರು ಮತಕ್ಕಾಗಿ ಕೀಳು ಮಟ್ಟಕ್ಕೆ ಇಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ ಎಂದರು.. ನಾವು ರಾಜಕೀಯಕ್ಕಾಗಿ ಏನು ಮಾಡಲ್ಲ. ಜನರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬೇಕಾ? ಟಿಪ್ಪು ಬೇಕಾ? ಎಂಬುದು ತೀರ್ಮಾನ ಮಾಡಲಿ, ಕಾಂಗ್ರೆಸ್‌ನವರು ವಿಶ್ವಕಂಡ ನಾಲ್ವಡಿ ಅವರನ್ನು ನೆನಪು ಮಾಡಿಕೊಳ್ಳಬೇಕು. ಯಾಕೋ ಗೊತ್ತಿಲ್ಲ ಕಾಂಗ್ರೆಸ್‌ನವರಿಗೆ ಟಿಪ್ಪು ಸುಲ್ತಾನ್ ನೆನಪು ಆಗುತ್ತಾನೆ. ಮತದಾರ ಪ್ರಭುಗಳು ಜಾಗೃತಿಯಿಂದ ಇದ್ದಾರೆ, ಉತ್ತರ ಕೊಡ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಮುಂದುವರೆದು ಮಾತನಾಡಿದ ಸಚಿವ ಅಶ್ವತ್ಥ್ ನಾರಾಯಣ್, ಸಾವರ್ಕರ್ ನಮ್ಮ ಹೆಮ್ಮೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಅಂತಹ ಪರಿಸ್ಥಿತಿಯಲ್ಲಿ ಈಗಿನ ಒಬ್ಬ ರಾಜಕಾರಣಿ ಒಂದು ದಿನ ಅಂಡಮಾನ್ ಜೈಲಿನಲ್ಲಿ ಇರಲಿ. ಆಗ ಮಾತಾಡೋಣಾ, ಇವರ ತ್ಯಾಗ, ಬಲಿದಾನ, ಶೌರ್ಯ ಮತ್ತು ಪರಾಕ್ರಮ, ಸಾಮಾಜಿಕ ಕಾಳಜಿ ಎಲ್ಲಾ ವ್ಯಕ್ತಿತ್ವ ಗೊತ್ತಾಗುತ್ತದೆ ಎಂದ ಅವರು, ಇವೆಲ್ಲಾ ದೊಡ್ಡ ಮಾತು ಯಾಕೆ. ಮಹಾನ್ ಪುರುಷರ ಬಗ್ಗೆ ಹೇಳುವಂತವನು ತಮ್ಮ ಕಾರ್ಯಗಳ ಬಗ್ಗೆ ನೋಡಬೇಕು. ಸಿದ್ದರಾಮಯ್ಯ ಯಾವತ್ತು ತಮ್ಮ ಆಡಳಿತದ ಬಗ್ಗೆ ಮಾತಾಡಲ್ಲ. ತಮ್ಮ ಅಭಿವೃದ್ಧಿಯ ಬಗ್ಗೆ ಎಲ್ಲೂ ಮಾತಡಲ್ಲ. ಕೇವಲ ಆ ಭಾಗ್ಯ ಕೊಟ್ಟೆ, ಈ ಭಾಗ್ಯ ಕೊಟ್ಟೆ ಅಂತಾರೆ. ಇವರಿಗಿಂತ ಚೆನ್ನಾಗಿ ನಮ್ಮ ಸರ್ಕಾರದಲ್ಲಿ ಎಲ್ಲ ಭಾಗ್ಯಗಳನ್ನ ಕೊಟ್ಟಿದ್ದೇವೆ. ನಾವು ಎಷ್ಟು ಅಕ್ಕಿ ಕೊಟ್ಟಿದ್ದೇವೆ, ಅವರು ಎಷ್ಟು ಅಕ್ಕಿ ಕೊಟ್ಟಿದ್ದಾರೆ.
ಭ್ರಷ್ಟಾಚಾರದಲ್ಲಿ ಇದ್ದವರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಇನ್ನಿತರರು. ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ. ಕಾಂಗ್ರೆಸ್ ಪಕ್ಷವನ್ನು ಸಿಡಿ ಪಾರ್ಟಿ ಅಂತಾನೇ ಕರೆಯೋದು. ಇವರ ಬ್ಲಾಕ್ ಮೇಲ್ ಎಲ್ಲಾ ವರ್ಕೌಟ್ ಆಗಲ್ಲ, ಜನ ಐದು ರೂಪಾಯಿ ಕಿಮ್ಮತ್ತು ಕೊಡಲ್ಲ ಇವರಿಗೆ. ಅವರು ಏನಾದ್ರು ಇಟ್ಟುಕೊಂಡಿದ್ರೆ ಬಿಟ್ಟು ಬಿಡಲಿ. ಪಾಪ ಯಾಕ್ ಸ್ಟಾಕ್ ಇಟ್ಟುಕೊಂಡಿದ್ದಾರೆ. ಇಟ್ಟುಕೊಂಡಿದ್ರೆ ವೇಸ್ಟ್ ಆಗುತ್ತೆ, ಬಿಟ್ಟು ಬಿಡಲಿ ಈ ‘ಸಿಡಿ ಪಾರ್ಟಿಯ’ (ಕಾಂಗ್ರೆಸ್) ಬ್ಲಾಕ್ ಮೇಲ್ ಏನು ಎಫೆಕ್ಟ್ ಇಲ್ಲ. ಇದೆಲ್ಲ ಔಟ್‌ಲೇಟ್ ಎಂದು ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದ್ದಾರೆ..
			
                                
                                
                                
