ನವದೆಹಲಿ: ಸಂಸತ್ತಿನಲ್ಲಿ ನಡೆಯುತ್ತಿರುವ ಗದ್ದಲದ ನಡುವೆ ಕಾಂಗ್ರೆಸ್ ಸಂಸದರ ಗುಂಪೊಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಗೆ ನುಗ್ಗಿ ಅವರನ್ನು ನಿಂದಿಸಿ ಪ್ರಧಾನಿಗೆ ಬೆದರಿಕೆ ಹಾಕಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು(Kiren Rijiju) ಆರೋಪಿಸಿದ್ದಾರೆ.

ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಿರಣ್ ರಿಜಿಜು, 20–25 ಕಾಂಗ್ರೆಸ್ ಸಂಸದರು ಸ್ಪೀಕರ್ ಅವರ ಕೊಠಡಿಗೆ ಪ್ರವೇಶಿಸಿದ ವೇಳೆ ಅಕ್ರಮವಾಗಿ ಚಿತ್ರೀಕರಿಸಲಾದ ದೃಶ್ಯ ಇದಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ನಮ್ಮ ಪಕ್ಷ ಚರ್ಚೆಯಲ್ಲಿ ನಂಬಿಕೆ ಇಡುತ್ತದೆ. ದೈಹಿಕ ಬೆದರಿಕೆಗೆ ಪ್ರೋತ್ಸಾಹಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಏನಿದು ಘಟನೆ?
2020ರ ಭಾರತ–ಚೀನಾ ಗಡಿ ಬಿಕ್ಕಟ್ಟಿನ ಕುರಿತು ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯನ್ನು ಉಲ್ಲೇಖಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಲೋಕಸಭೆಯಲ್ಲಿ ಗದ್ದಲ ಉಂಟಾಯಿತು. ಇದಕ್ಕೆ ವಿರುದ್ಧವಾಗಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರಿಗೆ ಐತಿಹಾಸಿಕ ವಿಷಯಗಳನ್ನು ಉಲ್ಲೇಖಿಸಲು ಅವಕಾಶ ನೀಡಲಾಗಿದ್ದರಿಂದ ವಿರೋಧ ಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಕಲಾಪ ಮುಂದೂಡಿಕೆಯಾದ ಬಳಿಕ ಕಾಂಗ್ರೆಸ್ ಸಂಸದರು ಸ್ಪೀಕರ್ ಅವರ ಕೊಠಡಿಗೆ ತೆರಳಿ ಪಕ್ಷಪಾತದ ನಡವಳಿಕೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ. ಆದರೆ ಈ ಆರೋಪಗಳನ್ನು ಕಾಂಗ್ರೆಸ್ ತಳ್ಳಿ ಹಾಕಿದೆ. ಪ್ರಿಯಾಂಕಾ ಗಾಂಧಿ ಈ ಬಗ್ಗೆ ಮಾತನಾಡಿ, ಯಾರೂ ಸ್ಪೀಕರ್ ಅವರನ್ನು ನಿಂದಿಸಿಲ್ಲ. ಸಂಸದರು ತಮ್ಮ ಕುಂದುಕೊರತೆಗಳನ್ನು ಶಾಂತಿಯುತವಾಗಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.






