ರಾಷ್ಟ್ರಧ್ವಜದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿಡುವ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಾವು ಈ ವಿಷಯದ ಕುರಿತು ಸದನದಲ್ಲಿ ಹಗಲು ರಾತ್ರಿ ಪ್ರತಿಭಟಿಸಲು ನಿರ್ಧರಿಸಿದ್ದೇವೆ ಈಶ್ವರಪ್ಪ ದೇಶದ್ರೋಹ ಮಾಡಿದ್ದಾರೆ. ರಾಷ್ಟ್ರದ ಸಂಕೇತವಾದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
2019ರಲ್ಲಿ ಬಿಜೆಪಿ ಶಾಸಕರು ಕಡೆಯ ಭಾರಿಗೆ ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರು. 2010ರಲ್ಲಿ ಬಿಜೆಪಿ ವಿರುದ್ದ ಕಾಂಗ್ರೆಸ್ ಪ್ರತಿಭಟಿಸಿತ್ತು. 1996ರಲ್ಲಿ ಜೆ.ಹೆಚ್.ಪಟೇಲ್ ಸರ್ಕಾರ ಜಾರಿಗೆ ತಂದಿದ್ದ ವಿದ್ಯುತ್ ದರ ಏರಿಕೆ ಕುರಿತು ಬಿಜೆಪಿ ಮೊದಲ ಭಾರಿಗೆ ಪ್ರತಿಭಟನೆ ನಡೆಸಿತ್ತು.

ಇಂದು ನಡೆದ ಅಧಿವೇಶನದಲ್ಲು ಸಹ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಗದ್ದಲ ಜೋರಾಗಿ ನಡೆಯಿತ್ತು. ಕಾಂಗ್ರೆಸ್ ನಾಯಕರು ಸದನದ ಬಾವಿಗಿಳಿದು ಬಿಜೆಪಿ , ಆರ್ಎಸ್ಎಸ್ ಹಾಗೂ ಈಶ್ವರಪ್ಪ ವಿರುದ್ದ ಸಂಪುಟದಿಂದ ಕೈ ಬಿಡುವಂತೆ ಘೋಷಣೆಗಳನ್ನು ಕೂಗಿದರು.
ರಾಷ್ಟ್ರಧ್ವಜ ನಮ್ಮ ದೇಶದ ಸ್ವಾತಂತ್ರ್ಯದ ಸಂಕೇತವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ತ್ರಿವರ್ಣ ಧ್ವಜದಿಂದ ಧೈರ್ಯ ಹಾಗೂ ಸ್ಪೂರ್ತಿ ಪಡೆದರು ತ್ರಿವರ್ಣ ಧ್ವಜಕ್ಕೆ ಯಾವುದೇ ರೀತಿಯ ಅವಮಾನವಾಗದಂತೆ ನಮ್ಮಲ್ಲಿ ಧ್ವಜ ಸಂಹಿತೆ ಇದೆ ಇದು ಆರ್ಎಸ್ಎಸ್ನ ಹಿಡನ್ ಅಜೆಂಡಾ ಇದು ಈಶ್ವರಪ್ಪನ ಮೂಲಕ ಹೊರಬಂದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸದ್ಯ ಸದನದಲ್ಲಿ ಕಾಂಗ್ರೆಸ್ ತೀವ್ರ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಲಾಪವನ್ನು ಮೊಟಕುಗೊಳಿಸಲು ಸರ್ಕಾರ ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಇಂದು ಮಧ್ಯಾಹ್ನ ಆರಂಭವಾದ ಕಲಾಪದಲ್ಲಿ ಕಾಂಗ್ರೆಸ್ ನಾಯಕರು ತೀವ್ರ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಸದನವನ್ನು ನಾಳೆ ಬೆಳ್ಳಗ್ಗೆ 11:30ಕ್ಕೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದೂಡಿದ್ದಾರೆ.