ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಕುರಿತಂತೆ ಕಾಂಗ್ರೆಸ್ ನಾಯಕರಲ್ಲಿ ಉಂಟಾದ ವಾಗ್ವಾದ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಪಂಚಾಯಿತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನು ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿಗೆ ಬೆಂಬಲ ನೀಡುವ ವಿಚಾರದಲ್ಲಿ ಗೊಂದಲ ಶುರುವಾಗಿದೆ. ಈ ವೇಳೆ ಎಮ್ಎಲ್ಸಿ ನಾರಾಯಣ ಸ್ವಾಮಿ ಮತ್ತು ಮನೋಹರ್ ನಡುವೆ ಜಗಳ ತಾರಕಕ್ಕೇರಿದ್ದು, ಕೈ ಕೈ ಮಿಲಾಯಿಸಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೆಪಿಸಿಸಿ ಮುಖಂಡರು ತಕ್ಷಣವೇ ಕಛೇರಿಯ ಬಾಗಿಲನ್ನು ಮುಚ್ಚಿದ್ದು, ಮಾಧ್ಯಮದವರು ಒಳಹೋಗದಂತೆ ನೋಡಿಕೊಂಡಿದ್ದಾರೆ. ಕೆಲ ಸಮಯದ ಬಳಿಕ ವಿಧಾನ ಪರಿಷತ್ ನಾರಾಯಣಸ್ವಾಮಿ ಅವರು ಬಿರುಸಿನಿಂದ ಕಛೇರಿಯಿಂದ ಹೊರ ನಡೆದಿದ್ದಾರೆ.
ಈ ಎಲ್ಲಾ ಘಟನೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ಹಾಗೂ ರಾಮಲಿಂಗಾರೆಡ್ಡಿ ಅವರ ಸಮ್ಮುಖದಲ್ಲೇ ನಡೆದಿದೆ. ಅದಾಗ್ಯೂ, ಯಾವುದೇ ಗಲಾಟೆಗಳು ನಡೆದಿಲ್ಲ ಎಂದು ಸಲೀಂ ಅಹಮದ್ ಸ್ಪಷ್ಟಪಡಿಸಿದ್ದಾರೆ.
ʼಬೆಳಿಗ್ಗೆ ಪಂಚಾಯಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಜೆಪಿ ನಮ್ಮ ಸದಸ್ಯರನ್ನು ಸೆಳೆಯುವ ಯತ್ನ ಮಾಡುತ್ತಿರುವ ಹಿನ್ನೆಲೆಯಲ್ಲಿ ಒಂದಿಷ್ಟು ಚರ್ಚೆಯಾಗಿದ್ದು ನಿಜ, ಆದರೆ ಯಾವುದೇ ಜಗಳಗಳು, ಹಲ್ಲೆಗಳು ನಡೆದಿಲ್ಲʼ ಎಂದು ಹೇಳಿದ್ದಾರೆ.