ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ದಶಕಗಳಿಂದ ವಿವಾದದ ಹೊಗೆಯಾಡುತ್ತಲೇ ಇದೆ. ನೀ ಕೊಡೆ ನಾ ಬಿಡೆ ಅಂತಾ ರಗಳೆಗಳು ಮುಂದುವರಿದಿವೆ. ಇದೀಗ ಇದೇ ಮೇಕೆದಾಟು ವಿಚಾರ ರಾಜ್ಯ ರಾಜಕೀಯದ ದಾಳವಾಗಿ ಮಾರ್ಪಟ್ಟಿದೆ. ಅಲ್ಲದೇ ಕಾಂಗ್ರೆಸ್-ಜೆಡಿಎಸ್ ನಾಯಕರ ಮಧ್ಯೆ ಮಾತಿನ ಸಮರಕ್ಕೂ ಕಾರಣವಾಗಿದೆ.
ಮಿನಿ ಸಮರದಲ್ಲಿ ಹಾನಗಲ್ ಕ್ಷೇತ್ರವನ್ನ ಜಯಿಸಿರೋ ಕಾಂಗ್ರೆಸ್ ಸದ್ಯ ಭಾರೀ ಹುಮ್ಮಸ್ಸಿನಲ್ಲಿದೆ. ಈ ಗೆಲುವಿನ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೆ ಪುಟಿದೇಳಲು ನಾನಾ ತಂತ್ರಗಳನ್ನ ಹೆಣೆಯುತ್ತಿದೆ. ಇದರ ಭಾಗವಾಗಿ ರಾಜ್ಯದಲ್ಲಿ ಮೇಕೆದಾಟು ಯೋಜನೆಯನ್ನ ಜಾರಿಗೆ ತರುವಂತೆ ಕೈ ಕಲಿಗಳು ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ.
ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ಸುಮಾರು 100 ಕಿಲೋ ಮೀಟರ್ ಪಾದಯಾತ್ರೆ ಮಾಡಲು ಕಾಂಗ್ರೆಸ್ ಸಿದ್ಧವಾಗಿದೆ. ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ ನಡೆಸುತ್ತಿರುವುದಾಗಿ ನಿನ್ನೆಯಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಇನ್ನು ಡಿಸೆಂಬರ್ ಮೊದಲ ವಾರದಲ್ಲಿ ಪಾದಯಾತ್ರೆ ನಡೆಸಲು ಹಸ್ತ ನಾಯಕರು ಚಿತ್ತಹರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಲಿದೆ. ಈ ಮೂಲಕ ಕಾಂಗ್ರೆಸ್ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಯನ್ನ ಹೊಡೆಯಲು ಮುಂದಾಗಿದೆ.
ಒಂದೇ ಕಲ್ಲಿಗೆ ಮೂರು ಹಕ್ಕಿ
- ರಾಜ್ಯ ಸರ್ಕಾರದ ವಿಳಂಬ ಧೋರಣೆಯನ್ನ ಪ್ರಶ್ನಿಸುವುದು
- ಕೇಂದ್ರ ಸರ್ಕಾರದ ಅನುಮತಿ ನಿರಾಕರಣೆ ಪ್ರಶ್ನಿಸುವುದು
- ತಮಿಳುನಾಡು ವಿರುದ್ಧ ಕಿಡಿಕಾರಿ ಕನ್ನಡಿಗರ ಮನಗೆಲ್ಲುವುದು
ಮೇಕೆದಾಟು ಯೋಜನೆಯನ್ನ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರದ ವಿಳಂಬ ಧೋರಣೆಯನ್ನ ಕಾಂಗ್ರೆಸ್ ಪ್ರಶ್ನಿಸಲಿದೆ. ಜೊತೆಗೆ ಈ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿಯನ್ನ ನಿರಾಕರಿಸುವುದನ್ನೂ ಕಾಂಗ್ರೆಸ್ ಎತ್ತಿತೋರಿಸಲಿದೆ. ಅಲ್ಲದೇ ತಮಿಳುನಾಡಿನ ವಿರುದ್ಧ ಕಿಡಿಕಾರುವ ಮೂಲಕ ಕನ್ನಡಿಗರ ಮನಗೆಲ್ಲುವುದು ಹೀಗೆ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳನ್ನ ಹೊಡೆಯುವುದು ಕೈ ನಾಯಕರ ಮಾಸ್ಟರ್ ಪ್ಲಾನ್ ಆಗಿದೆ.
ಇದಷ್ಟೇ ಅಲ್ಲ ಮೈಸೂರು ಮತ್ತು ಬೆಂಗಳೂರು ಜನರ ಮನಗೆಲ್ಲಲು ಕಾಂಗ್ರೆಸ್ ಇಷ್ಟೆಲ್ಲಾ ತಂತ್ರ ರೂಪಿಸುತ್ತಿದೆ ಎನ್ನಲಾಗಿದೆ. ಈ ಮೂಲಕ 2023ರ ಚುನಾವಣೆಯನ್ನ ಗೆಲ್ಲಲು ಈಗಿನಿಂದಲೇ ಶಸ್ತ್ರಾಭ್ಯಾಸದಲ್ಲಿ ತೊಡಗಿದೆ.
ಪಾದಯಾತ್ರೆ ಪಾಲಿಟಿಕ್ಸ್?
ತಂತ್ರ 1: ಹಳೇ ಮೈಸೂರು ಭಾಗದಲ್ಲಿ ನೆಲೆಯೂರಲು ಯತ್ನಿಸ್ತ್ತಿರುವ ಬಿಜೆಪಿಗೆ ರಾಜಕೀಯ ಪೆಟ್ಟು
ತಂತ್ರ 2: ಡಬ್ಬಲ್ ಇಂಜಿನ್ ಸರ್ಕಾರ ಎಂಬುದು ಕೇವಲ ಘೋಷಣೆಗೆ ಸೀಮಿತವೆಂಬ ಸಂದೇಶ
ತಂತ್ರ 3: ತಮಿಳುನಾಡು ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡ್ತಿದೆ ಎಂದು ಕಿಡಿ
ತಂತ್ರ 5: ಕನ್ನಡಿಗರು ಅದರಲ್ಲೂ ಬೆಂಗಳೂರಿಗರ ಮನ ಗೆಲ್ಲೋದಕ್ಕೆ ರಾಜಕೀಯ ತಂತ್ರಗಾರಿಕೆ
ಪಾದಯಾತ್ರೆ ಮೂಲಕ ಹಳೇ ಮೈಸೂರು ಭಾಗದಲ್ಲಿ ನೆಲೆಯೂರಲು ಯತ್ನಿಸ್ತ್ತಿರುವ ಬಿಜೆಪಿಗೆ ರಾಜಕೀಯವಾಗಿ ಪೆಟ್ಟು ಕೊಡೋದು ಕಾಂಗ್ರೆಸ್ನ ಮೊದಲ ತಂತ್ರವಾಗಿದೆ. ಅಲ್ಲದೇ ಡಬ್ಬಲ್ ಇಂಜಿನ್ ಸರ್ಕಾರ ಎಂಬುದು ಕೇವಲ ಘೋಷಣೆಗೆ ಮಾತ್ರ ಸೀಮಿತವೆಂಬ ಸಂದೇಶವನ್ನ ರವಾನಿಸಲು ಕೈ ನಾಯಕರು ಪ್ಲಾನ್ ಆಗಿದೆ. ಮತ್ತೊಂದೆಡೆ ತಮಿಳುನಾಡು ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡ್ತಿದೆ ಎಂದು ಕಿಡಿ ಹಾರಿಸುವ ಮೂಲಕ ಕನ್ನಡಿಗರು ಅದರಲ್ಲೂ ಬೆಂಗಳೂರಿಗರ ಮನ ಗೆಲ್ಲೋದಕ್ಕೆ ಹಸ್ತನಾಯಕರ ರಾಜಕೀಯ ತಂತ್ರಗಾರಿಕೆಯಾಗಿದೆ ಎನ್ನಲಾಗಿದೆ.
ಇನ್ನು ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ ಮಾಡಲು ಈ ಮೊದಲೇ ಜೆಡಿಎಸ್ ಪ್ರಸ್ತಾಪ ಮಾಡಿತ್ತಂತೆ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆ ವಿಚಾರ ತಿಳೀತಿದ್ದಂತೆ ದಳಪತಿಗಳು ನಿಗಿನಿಗಿ ಕೆಂಡವಾಗಿದ್ದಾರೆ. ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಒಟ್ಟಾರೆ, ಮೇಕೆದಾಟು ಯೋಜನೆ ಶೀಘ್ರವೇ ಜಾರಿಯಾಗ್ಲಿ, ಬೆಂಗಳೂರಿನ ಜನರ ಕುಡಿಯುವ ನೀರಿನ ಬವಣೆ ನೀಗಲಿ ಅನ್ನೋದು ಒಳ್ಳೆಯ ಉದ್ದೇಶ. ಆದ್ರೆ, ಇದೇ ವಿಚಾರವನ್ನ ಇಟ್ಕೊಂಡು ರಾಜಕೀಯ ಮಾಡೋದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಜನರ ಪ್ರಶ್ನೆ.