ನಗರ ನಕ್ಸಲರು (urban Naxals) ಎಂಬ ಮಾತು ಮತ್ತೆ ಚರ್ಚೆಗೆ ಬಂದಿದೆ. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ರಾಜ್ಯಸಭೆಯಲ್ಲಿ (Lok Sabha) ಕಳೆದ ವಾರ ನಗರ ನಕ್ಸಲರು ಎಂಬ ಪದವನ್ನು ಸರ್ಕಾರ ಬಳಸುವುದಿಲ್ಲ ಎಂದು ಹೇಳಿದ ಮಾರನೇ ದಿನವೇ ಸರ್ಕಾರದ ಚುಕ್ಕಾಣಿ ಹಿಡಿದರುವ ಸ್ವತಃ ಪ್ರಧಾನಿಯೇ, ಅದೇ ರಾಜ್ಯಸಭೆಯಲ್ಲಿ ಪ್ರತಿ ಪಕ್ಷ ಕಾಂಗ್ರೆಸ್ಸನ್ನು ನಗರ ನಕ್ಸಲರ ಪಕ್ಷ ಎಂದು ಹೇಳಿದ್ದರು!
‘ಕಾಂಗ್ರೆಸ್ ಪಕ್ಷ ಇಂದು ಅರ್ಬನ್ ನಕ್ಸಲೀಯರ ಕಪಿಮಷ್ಟಿಯಲ್ಲಿದೆ. ಹೀಗಾಗಿಯೇ ಅದರ ಮನಸಿನಲ್ಲಿ ನಕಾರಾತ್ಮಕ ಭಾವನೆಗಳು ತುಂಬಿಕೊಂಡಿವೆ. ಆ ಪಕ್ಷ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (INC) ಎಂಬ ಹೆಸರಿನ ಬದಲು ಫೆಡರೇಷನ್ ಆಫ್ ಕಾಂಗ್ರೆಸ್ (federation of Congress) ಎಂದು ಹೆಸರು ಬದಲಿಸಿಕೊಳ್ಳಬೇಕು. ರಾಜಕೀಯದಲ್ಲಿ ಸೋಲು-ಗೆಲುವು ಇದ್ದದ್ದೇ. ಆದರೆ ಸೋಲಿನ ಹತಾಶೆಯನ್ನು ಜನರ ಮೇಲೆ ಪ್ರದರ್ಶಿಸಬಾರದು’ ಎಂದು ಪ್ರಧಾನಿ ಮೋದಿ (PM Modi) ಹೇಳಿದ್ದರು.
ಆ ಮೂಲಕ ನಗರ ನಕ್ಸಲರ ಪಟ್ಟಿಗೆ ಇಡೀ ಕಾಂಗ್ರೆಸ್ (Congress) ಪಕ್ಷವನ್ನೇ ಸೇರಿಸಿದ್ದರು ಮತ್ತು ನಗರ ನಕ್ಸಲರು ಎಂಬ ಸ್ವತಃ ತಮ್ಮದೇ ಪರಿಕಲ್ಪನೆಯನ್ನು ರಾಜ್ಯಸಭೆಯಲ್ಲಿ ಅಧಿಕೃತವಾಗಿ ಬಳಸುವ ಮೂಲಕ ಹಿಂದಿನ ದಿನವಷ್ಟೇ ತಮ್ಮದೇ ಸಚಿವರು ನೀಡಿದ್ದ ಹೇಳಿಕೆಯನ್ನು ತಿರುವುಮುರುವು ಮಾಡಿದ್ದರು. ಆ ಹಿನ್ನೆಲೆಯಲ್ಲಿ ನಗರನಕ್ಸಲರು ಎಂಬ ಪದದ ಕುರಿತ ಚರ್ಚೆ ಮತ್ತೆ ಆರಂಭವಾಗಿದೆ. ನಗರ ನಕ್ಸಲರು ಎಂದರೆ ಏನು? ಯಾರನ್ನು ಮತ್ತು ಯಾಕಾಗಿ ಹಾಗೆ ಕರೆಯಾಗುತ್ತಿದೆ? ಬಿಜೆಪಿ (BJP) ಮತ್ತು ಅದರ ಸಂಘಪರಿವಾರದ ವಿರುದ್ಧ ಟೀಕಿಸುವವರು, ಬಿಜೆಪಿ ಆಡಳಿತ ಲೋಪಗಳನ್ನು ಎತ್ತಿ ತೋರಿಸುವವರು, ಜನವಿರೋಧಿ ಮತ್ತು ಕಾರ್ಪೊರೇಟ್ (Corporate) ಪರ ಆಡಳಿತದಿಂದಾಗಿ ನೊಂದಿರುವ ಮತ್ತು ಸಂಕಷ್ಟಕ್ಕೆ ಸಿಲುಕಿರುವ ದೇಶದ ಬಡವರು, ದಲಿತರು (Dalits), ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಇದೀಗ ಹಿಜಾಬ್ (Hijab) ಸಂಘರ್ಷದಿಂದಾಗಿ ಮಕ್ಕಳ ಪರ ದನಿ ಎತ್ತುವವರನ್ನು ಬಿಜೆಪಿ ಮತ್ತು ಅದರ ಪರಿವಾರ ನಗರ ನಕ್ಸಲರು ಎಂದು ಏಕೆ ಕರೆಯುತ್ತಿದೆ? ಎಂಬ ಪ್ರಶ್ನೆಗಳು ಚರ್ಚೆಗೆ ಬಂದಿವೆ.
ನಕ್ಸಲಿಸಂ ಎಂಬುದು ಶುರುವಾಗಿದ್ದೇ ಪಶ್ಚಿಮಬಂಗಾಳದ (West Bengal) ಡಾರ್ಜಲಿಂಗ್ ಜಿಲ್ಲೆಯ ನಕ್ಸಲಬಾರಿ ಎಂಬ ಹಳ್ಳಿಯ ಟೀ ಪ್ಲಾಂಟರುಗಳ ದಬ್ಬಾಳಿಕೆ ಮತ್ತು ಅಟ್ಟಹಾಸದ ವಿರುದ್ಧದ ಕೂಲಿಕಾರ್ಮಿಕರ ಹೋರಾಟವಾಗಿ. ಕ್ರಮೇಣ ಮಾರ್ಕ್ಸ್ ವಾದಿ (marxism) ಕ್ರಾಂತಿಕಾರಿ ಆಂದೋಲನವಾಗಿ ಬದಲಾಯಿತು. ಭೂ ಮಾಲೀಕರು ಮತ್ತು ಅವರ ಪರವಾಗಿದ್ದ ಪೊಲೀಸ್ (Police) ಮತ್ತು ಆಡಳಿತ ವ್ಯವಸ್ಥೆಯ ವಿರುದ್ಧ ರೈತ, ಕೂಲಿ ಕಾರ್ಮಿಕ ಹಳ್ಳಿಗಾಡಿನ ಜನರು ರಕ್ತಕ್ರಾಂತಿ ನಡೆಸಿದರು. ದಶಕಗಳ ಹೋರಾಟದ ಹಾದಿಯಲ್ಲಿ ಬಡ ರೈತರು ಮತ್ತು ಕೂಲಿ ಕಾರ್ಮಿಕರ ಮೇಲಿನ ಭೂಮಾಲೀಕರ ದಬ್ಬಾಳಿಕೆಯ ವಿರುದ್ಧದ ಪ್ರತಿರೋಧದ ಸ್ವರೂಪದಿಂದ ಇಡೀ ವ್ಯವಸ್ಥೆಯ ದಮನನೀತಿಯ ವಿರುದ್ಧದ ಭೂಗತ ಹೋರಾಟವಾಗಿ ಬದಲಾಯಿತು.
ಕಳೆದ ಐದಾರು ದಶಕಗಳಲ್ಲಿ ಮುಖ್ಯವಾಗಿ ದೇಶದ ಆಡಳಿತ ಮತ್ತು ಪೊಲೀಸ್ ವ್ಯವಸ್ಥೆಯ ವಿರುದ್ಧದ ಬಂಡಾಯವಾಗಿ ಬದಲಾದ ನಕ್ಸಲಿಸಂ, ದೇಶದ್ರೋಹಿ (Anti National) ಹಣೆಪಟ್ಟಿ ಕಟ್ಟಿಕೊಂಡಿತು. ದೇಶದ ಆಡಳಿತ ವ್ಯವಸ್ಥೆ, ಕಾನೂನು, ಪೊಲೀಸ್, ನ್ಯಾಯಾಂಗದ ವಿರುದ್ಧದ ಬಂಡಾಯದ ಮೂಲಕ ದೇಶದ ಸಮಗ್ರತೆ ಮತ್ತು ಐಕ್ಯತೆಗೇ ಧಕ್ಕೆ ತರುವ ಮಟ್ಟಿಗೆ ನಕ್ಸಲ್ ವಾದ ಬೆಳೆಯಿತು. ಆ ಕಾರಣಕ್ಕಾಗಿಯೇ ನಕ್ಸಲ್ ಚಟುವಟಿಕೆಯನ್ನು ದೇಶ ವಿರೋಧಿ ಕೃತ್ಯ ಎಂದು ಘೋಷಿಸಿ, ಅಂತಹ ಚಟುವಟಿಕೆಗಳನ್ನು ಮಟ್ಟಹಾಕಲು ದೇಶದ ಸೇನೆ ಮತ್ತು ಪೊಲೀಸರನ್ನು ಬಳಸಲಾಗುತ್ತಿದೆ.

ನಕ್ಸಲೀಯರು ಬಡವರು, ಕೂಲಿಕಾರ್ಮಿಕರು, ಗುಡ್ಡಗಾಡು ಜನ, ಆದಿವಾಸಿ, ಬುಡಕಟ್ಟು ಜನಗಳ ಬಗ್ಗೆ ತಮಗಿರುವ ಕಾಳಜಿಯ ಬಗ್ಗೆ ಏನೇ ಹೇಳಿದರೂ, ಅವರ ಚಟುವಟಿಕೆಗಳು ದೇಶದ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಅಪಾಯಕಾರಿ ದುಃಸ್ಸಾಹಸವಾಗಿದ್ದವು ಮತ್ತು ಆ ಕಾರಣಕ್ಕೆ ಅದು ದೇಶವಿರೋಧಿ ಸಂಘಟನೆಯಾಗಿತ್ತು ಎಂಬುದನ್ನು ನಕ್ಸಲೀಯರ ಪರ ಸಹಾನುಭೂತಿ ಹೊಂದಿದವರೂ ಒಪ್ಪಿಕೊಳ್ಳುವ ಮಾತು. ಅಂದರೆ, ಯಾವ ಜನಗಳ ಒಳತಿಗಾಗಿ ತಾನು ಹೋರಾಡುತ್ತಿದ್ದೇನೆ ಎಂದು ನಕ್ಸಲಿಸಂ ಹೇಳುತ್ತಿತ್ತೋ ಆ ಜನಗಳಿಗೇ ಅದರ ಹಿಂಸಾ ಚಳವಳಿ ಘಾಸಿಗೊಳಿಸಲಾರಂಭಿಸಿತ್ತು. ಮಲೆನಾಡಿನಲ್ಲಿ ಕಳೆದ ಎರಡು ದಶಕದಲ್ಲಿ ಮಲೆಕುಡಿಯ ಮುಂತಾದ ಆದಿವಾಸಿ ಸಮುದಾಯಗಳ ಮೇಲೆ ನಕ್ಸಲಿಸಂ ಪ್ರಭಾವ ಮತ್ತು ಆ ಜನಗಳು ಅನುಭವಿಸಿದ ಸಾವುನೋವುಗಳು ಬಹುಶಃ ಈ ಸಂಗತಿಗೆ ಒಳ್ಳೆಯ ಉದಾಹರಣೆ.
ಹೀಗೆ ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ವಿರುದ್ಧ ಬಂಡೆದ್ದು, ರಕ್ತಕ್ರಾಂತಿಯ ಮೂಲಕ ಬದಲಾಯಿಸಿಬಿಡುತ್ತೇವೆ ಎಂದು ಬಂದೂಕು ಕೈಗೆತ್ತಿಕೊಂಡವರು ಕೊನೆಗೇ ಗುರಿ ಇಟ್ಟದ್ದು ತಾವು ಹೊಸ ಬದುಕು ಕೊಡುತ್ತೇವೆ ಎಂದು ಹೇಳುತ್ತಿದ್ದ ಅದೇ ಶೋಷಿತ ಸಮುದಾಯಗಳಿಂದಲೇ ಬಂದ ಪೊಲೀಸರ ಎದೆಗೇ ಎಂಬುದು ವಿಪರ್ಯಾಸ. ನಕ್ಸಲಿಸಂ ನ ಹಿನ್ನೆಡೆಯ ಕಾರಣಗಳಲ್ಲಿ ಈ ವೈರುಧ್ಯವೂ ಒಂದು ಎಂಬುದನ್ನು ಅಲ್ಲಗಳೆಯಲಾಗದು.
ಇದೀಗ ಪ್ರಧಾನಿ ಮೋದಿಯವರು ನಗರ ನಕ್ಸಲರು ಎಂಬ ಪರಿಭಾಷೆಯನ್ನು ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ಬಳಸುತ್ತಿದ್ದಾರೆ. ಮುಖ್ಯವಾಗಿ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮೊಟ್ಟಮೊದಲ ಬಾರಿಗೆ ಈ ಪದ ಬಳಕೆಯಾಗಿತ್ತು. ದಲಿತರ ಮೇಲಿನ ದೌರ್ಜನ್ಯದ ವಾರ್ಷಿಕೋತ್ಸವ ಸಮಾವೇಶದ ವೇಳೆ ನಡೆದ ಹಿಂಸಾಚಾರದ ಹಿಂದೆ ನಕ್ಸಲೀಯ ಹಿನ್ನೆಲೆಯ ಬುದ್ಧಿಜೀವಿಗಳು, ಲೇಖಕರು, ವಿವಿ ಪ್ರೊಫೆಸರುಗಳ ಕುಮ್ಕಕ್ಕು ಇತ್ತು ಎಂಬುದರಿಂದ ಹಿಡಿದು ಪ್ರಧಾನಿ ಮೋದಿಯವರ ಹತ್ಯೆಯ ಸಂಚಿನ ವರೆಗೂ ಆ ಪ್ರಕರಣ ಸದ್ದು ಮಾಡಿತ್ತು ಮತ್ತು ಪ್ರಕರಣದ ಹಿಂದೆ ನಗರನಕ್ಸಲರ ಕೈವಾಡವಿತ್ತು ಎಂದೂ ಬಿಜೆಪಿ ಮತ್ತು ಅದರ ಪರಿವಾರ ಆರೋಪ ಮಾಡಿದ್ದವು.
ನಗರ ನಕ್ಸಲರು ಎಂಬುದು ನಕ್ಸಲ್ ಚಟುವಟಿಕೆಯ ನಗರ ಆವೃತ್ತಿ ಎಂಬುದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ವ್ಯಾಖ್ಯಾನ. ಆದರೆ, ಅದೇ ಮೋದಿಯವರ ಸಚಿವ ಸಂಪುಟದ ಸದಸ್ಯರಾದ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ನಗರ ನಕ್ಸಲರು ಎಂಬ ಪದವನ್ನು ಸರ್ಕಾರ ಬಳಸುವುದೇ ಇಲ್ಲ ಎಂದು ಹೇಳಿದ್ದು ಯಾಕೆ? ಹಾಗಾದರೆ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಾಗಿ ಈಗಲೂ ಜೈಲಿನಲ್ಲಿರುವ ಡಾ ಆನಂದ್ ತೇಲ್ತುಂಬೆ, ಪತ್ರಕರ್ತ ಗೌತಮ್ ನವಲೇಖಾ ಸೇರಿದಂತೆ ಹಲವರನ್ನು ನಗರ ನಕ್ಸಲರು ಎಂದು ಬಿಜೆಪಿ ನಾಯಕರು ಕರೆಯುತ್ತಿರುವುದು ಯಾವ ಹಿನ್ನೆಲೆಯಲ್ಲಿ? ಎಂಬ ಪ್ರಶ್ನೆಗಳು ಏಳುತ್ತವೆ.
ಅದೆಲ್ಲಕ್ಕಿಂತ ಮುಖ್ಯವಾಗಿ ದೇಶದ ಕಾನೂನು, ಸುವ್ಯವಸ್ಥೆ, ಪೊಲೀಸ್, ನ್ಯಾಯಾಂಗ, ಸಂವಿಧಾನದ ವಿರುದ್ಧ ಇದ್ದರು ಎಂಬ ಕಾರಣಕ್ಕೆ ನಕ್ಸಲರನ್ನು ದೇಶದ್ರೋಹಿಗಳೆಂದೂ, ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಅಪಾಯ ಒಡ್ಡಿರುವ ದೇಶ ವಿರೋಧಿ ಶಕ್ತಿಗಳು ಎಂದು ಘೋಷಿಸಲಾಗಿತ್ತು. ಈಗ ಕಳೆದ ಏಳೆಂಟು ವರ್ಷಗಳಲ್ಲಿ ದೇಶದ ಸಂವಿಧಾನ, ನ್ಯಾಯಾಂಗ, ಕಾನೂನು ಮತ್ತು ಸುವ್ಯವಸ್ಥೆಯ ವಿರುದ್ಧ ನಿಜವಾಗಿಯೂ ಇರುವವರು ಯಾರು? ದೇಶದ ಬಹುಸಂಖ್ಯಾತ ಬಡವರು, ದಲಿತರು, ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರ ಪಾಲಿಗೆ ಅಪಾಯಕಾರಿಯಾಗಿರುವ ಮತ್ತು ಆ ಕಾರಣಕ್ಕೆ ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಧಕ್ಕೆ ತರುತ್ತಿರುವವರು ಯಾರು? ಯಾವ ಪಕ್ಷದ ಬೆಂಬಲಿಗರು? ಯಾವ ಸಿದ್ಧಾಂತದ ಅನುಯಾಯಿಗಳು? ಎಂಬುದನ್ನು ಪರಾಮರ್ಶಿಸಬೇಕಾದ ಹೊತ್ತು ಇದು.
ದೇಶದ ಸಾಮಾನ್ಯ ಜನರ ಬಟ್ಟೆ, ಆಹಾರ, ಪ್ರೀತಿ ಮತ್ತು ವೈಯಕ್ತಿಕ ಆಯ್ಕೆಗಳ ವಿಷಯದಿಂದ ಹಿಡಿದು ಸಾಕು ಪ್ರಾಣಿಗಳ ವಿಷಯದವರೆಗೆ ದೇಶದ ಸಂವಿಧಾನ ಮತ್ತು ಕಾನೂನುಗಳನ್ನು ಗಾಳಿಗೆ ತೂರಿ ಕಾನೂನು ಕೈಗೆತ್ತಿಕೊಂಡು ಸ್ವಯಂ ಶಿಕ್ಷೆ ನಿರ್ಧಿಸುವ ಮತ್ತು ಗುಂಪು ಹಲ್ಲೆಯಂತಹ ಕೃತ್ಯಗಳ ಮೂಲಕ ನ್ಯಾಯ ಜಾರಿ ಮಾಡುವ ಗುಂಪುಗಳ ಯಾರ ಬೆಂಬಲಿಗರು ಮತ್ತು ಯಾವ ಪಕ್ಷದ ಕಾಲಾಳುಗಳು? ಅದು ಪ್ರಸ್ತುತ ಹಿಜಾಬ್ ಘಟನೆ ಇರಬಹುದು, ಗೋ ರಕ್ಷಣೆಯ ಹಿಂಸಾಚಾರಗಳಿರಬಹುದು, ಲವ್ ಜಿಹಾದ್ ಅಥವಾ ದಲಿತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಿರಬಹುದು, ನ್ಯಾಯಪರ ಮತ್ತು ಶಾಂತಿಯುತ ಹೋರಾಟ ನಿರತ ರೈತರು ಮತ್ತು ಎನ್ ಆರ್ ಸಿ-ಸಿಎಎ ಹೋರಾಟಗಾರರ ಮೇಲಿನ ದಾಳಿಗಳಿರಬಹುದು,.. ದೇಶದ ಸಂವಿಧಾನ, ಕಾನೂನುಗಳನ್ನು ಗಾಳಿಗೆ ತೂರಿ ನಡೆಸಿದ ಭಯೋತ್ಪಾದಕ ಕೃತ್ಯಗಳು ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಧಕ್ಕೆ ತರುತ್ತಿಲ್ಲವೆ?
ಹಿಂದುತ್ವದ ಹೆಸರಿನಲ್ಲಿ ನಡೆಸುತ್ತಿರುವ ಅಟ್ಟಹಾಸಗಳು, ಹಿಂಸಾಕೃತ್ಯಗಳು ಅಲ್ಪಸಂಖ್ಯಾತರು ಮಾತ್ರವಲ್ಲದೆ ಸ್ವತಃ ಹಿಂದೂ ಸಮುದಾಯದ ಭಾಗ ಎನ್ನುವ ದಲಿತರು ಮತ್ತು ಶೂಧ್ರರಲ್ಲೂ ಭೀತಿ ಮತ್ತು ಅಭದ್ರತೆ ಸೃಷ್ಟಿಸಿಲ್ಲವೆ? ಹಾಗಾದರೆ, ದೇಶದ ನಾಗರಿಕರನ್ನೇ ಒಡೆದು, ಕೋಮು ಕೋಮುಗಳ ನಡುವೆ ದ್ವೇಷ ಬಿತ್ತಿ, ಸಮಾಜದ ಸಾಮರಸ್ಯ ಕೆಡಿಸುವ ಮತ್ತು ಆ ಮೂಲಕ ದೇಶದ ಒಳಿತಿಗೆ ಅಪಾಯ ತರುವ ಕೃತ್ಯಗಳು ನಕ್ಸಲ್ ಚಟುವಟಿಕೆಗಳಿಗಿಂತ ಹೇಗೆ ಭಿನ್ನ? ಎಂಬುದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿ. ಆ ದೃಷ್ಟಿಯಿಂದ ನೋಡಿದರೆ ನಿಜವಾಗಿಯೂ ದೇಶಕ್ಕೆ ಅಪಾಯಕಾರಿಯಾಗಿ ಪರಿಣಮಿಸಿರುವ ನಗರ ನಕ್ಸಲರು ಯಾರು? ಸಮಾಜದ ನೆಮ್ಮದಿಯಷ್ಟೇ ಅಲ್ಲದೆ ದೇಶ ಪ್ರಗತಿಗೂ ಆತಂಕ ತಂದಿರುವವರು ಯಾರು? ಮತ್ತು ಅವರ ಬೆಂಬಲಕ್ಕೆ ನಿಂತಿರುವ ಶಕ್ತಿಗಳು ಯಾವುವು? ಎಂಬುದು ಅರಿವಾದರೆ, ನಿಜವಾಗಿಯೂ ನಗರ ನಕ್ಸಲರು ಯಾರು ಎಂಬುದು ಸ್ಪಷ್ಟವಾಗದೇ ಇರದು! ಅಲ್ಲವೆ?