ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಬಹಿರಂಗವಾಗೆಯೇ ಗುಡುಗಿದ್ದ ಸಚಿವ ಕೆ.ಎನ್ ರಾಜಣ್ಣಗೆ ಕಾಂಗ್ರೆಸ್ ಹೈಕಮಾಂಡ್ ಇದೀಗ ತಾಕೀತು ಮಾಡಿದೆ.ಯಾವುದೇ ಕಾರಣಕ್ಕೂ ಬಹಿರಂಗ ಹೇಳಿಕೆ ನೀಡದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಿತ್ತಾಟಗಳ ಬಗ್ಗೆ ಪದೇ ಪದೇ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನ ನೀಡುತ್ತಿದ್ದ ರಾಜಣ್ಣ ಸಂಚಲ ಸೃಷ್ಟಿಮಾಡಿದ್ದರು. ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸುತ್ತಿದ್ದ ರಾಜಣ್ಣ ಇತ್ತೀಚೆಗೆ ಅದನ್ನು ಇನ್ನಷ್ಟು ತೀವ್ರಗೊಳಿಸಿದ್ದರು.
ಈ ಹಿಂದೆಯೇ ಪಕ್ಷದ ಎಲ್ಲಾ ನಾಯಕರುಗಳಿಗೆ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ AICC ತಾಕೀತು ಮಾಡಿದ್ದರೂ ಸಹ ಮತ್ತೆ ಮಾತು ಮುಂದುವರೆಸಿದ್ದ ರಾಜಣ್ಣಗೆ ಈಗ ಹೈಕಮ್ಯಾಂಡ್ ಮತ್ತೊಮ್ಮೆ ಬಿಸಿ ಮುಟ್ಟಿಸಿದೆ.

ಕೆಲ ದಿನಗಳ ಹಿಂದೆ ರಾಜಣ್ಣ ನಡೆಯಿಂದ ತೀವ್ರ ಆಕ್ರೋಶ ಹೊರ ಹಾಕಿದ್ದ ಡಿಸಿಎಂ ಆಪ್ತ ಬಳಗ, ಖುದ್ದು ಖರ್ಗೆಯನ್ನ ಭೇಟಿಯಾಗಿ ಮಾಜಿ ಸಂಸದ ಡಿ.ಕೆ ಸುರೇಶ್ ದೂರು ನೀಡಿದ್ದರು. ಇದೀಗ ಬಹಿರಂಗ ಹೇಳಿಕೆ ನೀಡದಂತೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಗಿದ್ದು ಮುಂದಿನ ಬೆಳವಣಿಗೆ ಕಾದುನೋಡಬೇಕಿದೆ.