ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ತಿದೆ. ಈ ವರ್ಷಾಂತ್ಯದ ಒಳಗೆ ಎಲ್ಲಾ ಕ್ಷೇತ್ರಗಳಿಂದ ಟಿಕೆಟ್ ಆಕಾಂಕ್ಷಿತರ ಪಟ್ಟಿಯನ್ನು ರವಾನೆ ಮಾಡಬೇಕು ಎಂದು ಈ ಹಿಂದೆ ಕೆಪಿಸಿಸಿ ಅಧ್ಯಕ್ಷರು ತಿಳಿಸಿದ್ದರು. ಜನವರಿ ಎರಡನೇ ವಾರದಲ್ಲಿ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎನ್ನುವ ಸುಳಿವನ್ನೂ ಡಿ.ಕೆ ಶಿವಕುಮಾರ್ ನೀಡಿದ್ದರು. ಇದೀಗ ದೆಹಲಿಯಲ್ಲಿ ನಡೆದ ಲೋಕಸಭಾ ಚುನಾವಣಾ ತಯಾರಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ಗೆ ಹೈಕಮಾಂಡ್ ನೇರ ಸಂದೇಶ ಕಳುಹಿಸಿದ್ದು, ಹಾಲಿ ಸಚಿವರುಗಳು ಸ್ಪರ್ಧೆ ಮಾಡುವಂತೆ ಸೂಚನೆ ಕೊಟ್ಟಿದೆ ಎನ್ನುವುದು ನಿನ್ನೆಯ ಸಚಿವ ಸಂಪುಟ ಸಭೆ ಬಳಿಕ ಬಯಲಾಗಿದೆ.
ಕಾಂಗ್ರೆಸ್ಗೆ ಗೆಲ್ಲುವ ಕುದುರೆಗಳ ಅಲಭ್ಯತೆ ಕಾರಣ..
ಕಾಂಗ್ರೆಸ್ನಲ್ಲಿ ವಿಧಾನಸಭಾ ಚುನಾವಣೆ ಎದುರಿಸಲು ಸಮರ್ಥ ಅಭ್ಯರ್ಥಿಗಳು ಹೆಚ್ಚಾಗಿಯೇ ಇದ್ದಾರೆ. ಒಂದು ಕ್ಷೇತ್ರದಲ್ಲಿ ಒಬ್ಬರು ಇಲ್ಲದಿದ್ದರೂ ಮತ್ತೊಬ್ಬರು ಸ್ಪರ್ಧೆ ಮಾಡಲಿದ್ದಾರೆ ಅನ್ನೋ ನಂಬಿಕೆ ಇದೆ. ಆದರೆ ಲೋಕಸಭಾ ಚುನಾವಣೆ ವಿಚಾರ ಬಂದಾಗ ಸ್ಪರ್ಧೆ ಮಾಡುವುದಕ್ಕೆ ಸಮರ್ಥ ಅಭ್ಯರ್ಥಿಗಳು ಇಲ್ಲ ಎನ್ನುವುದು ಮುಚ್ಚಿಟ್ಟಿರುವ ಸತ್ಯ. ಅದೇ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಜೆಡಿಎಸ್ ಹಾಗು ಬಿಜೆಪಿ ಪಕ್ಷದ ನಾಯಕರನ್ನು ಸೆಳೆಯುವ ಕಸರತ್ತು ಮುಂದುವರಿಸಿದ್ದಾರೆ. ಅದೇ ಕಾರಣದಿಂದ ಕಾಂಗ್ರೆಸ್ ಹೈಕಮಾಂಡ್ ಕೂಡ ಯಾವೆಲ್ಲಾ ಕ್ಷೇತ್ರದಲ್ಲಿ ಕಠಿಣ ಸವಾಲು ಎದುರಾಗಲಿದೆ. ಆ ಕ್ಷೇತ್ರಗಳನ್ನು ಗೆಲ್ಲುವುದಕ್ಕಾಗಿ ಸಚಿವರೇ ಸ್ಪರ್ಧೆ ಮಾಡುವುದು ಸೂಕ್ತ ಅನ್ನೋ ನಿರ್ಧಾರಕ್ಕೆ ಬಂದಿದೆ ಎನ್ನಲಾಗ್ತಿದೆ. ಇಂದಿನ ಸಚಿವ ಸಂಪುಟದಲ್ಲೂ ಸಿಎಂ ಸಿದ್ದರಾಮಯ್ಯ ಅದೇ ವಿಚಾರವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಅಧಿಕಾರಿಗಳನ್ನು ಹೊರಕ್ಕೆ ಕಳುಹಿಸಿ ಗುಪ್ತ್ ಗುಪ್ತ್ ಚರ್ಚೆ
ಗುರುವಾರ ಸಂಜೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಚಿವ ಸಂಪುಟ ಸಭೆ ಮುಕ್ತಾಯವಾದ ಬಳಿಕ ಎಲ್ಲಾ ಅಧಿಕಾರಿಗಳನ್ನು ಹೊರಗೆ ಕಳುಹಿಸಿದ ಸಿಎಂ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹೈಕಮಾಂಡ್ ಕಳುಹಿಸಿರುವ ಖಡಕ್ ನಿರ್ಧಾರವನ್ನು ಸಚಿವರಿಗೆ ತಿಳಿಸಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಸಚಿವರುಗಳು ಸ್ಪರ್ಧೆ ಮಾಡಬೇಕಾಗಿ ಬರಬಹುದು. ಕರ್ನಾಟಕದ ಪ್ರಮುಖ ಸಚಿವರು ಸಿದ್ಧವಾಗಿ ಇರಬೇಕು ಎಂದು ಎಐಸಿಸಿ ಕಳುಹಿಸಿರುವ ಸಂದೇಶವನ್ನು ತಿಳಿಸಿ, ಲೋಕಸಭೆ ಚುನಾವಣಾ ಸ್ಪರ್ಧೆಗೆ ರೆಡಿಯಾಗಲು ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಆದರೆ ಸಚಿವರುಗಳು ಮಾತ್ರ ಸ್ಪರ್ಧೆಗೆ ಒಲವು ತೋರಿಸಿಲ್ಲ, ಕುಟುಂಬಸ್ಥರಿಗೆ ಟಿಕೆಟ್ ಕೊಡಿ ಎಂದಿದ್ದಾರೆ ಎನ್ನಲಾಗ್ತಿದೆ.
ಯಾವ ಸಚಿವರಿಗೆ ಸಂಸತ್ ಚುನಾವಣೆ ಅನಿವಾರ್ಯ..?
ಲೋಕಸಭೆಗೆ ಸಚಿವರ ಸ್ಪರ್ಧೆ ಅನಿವಾರ್ಯ ಆಗಬಹುದು ಎಂದು ಕಾಂಗ್ರೆಸ್ ಹೈಕಮಾಂಡ್ ಸಂದೇಶ ರವಾನೆ ಮಾಡಿದೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಮಾನಸಿಕವಾಗಿ ಸಿದ್ದರಾಗಿರಿ ಎಂದು ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ ಅನ್ನೋದು ಗೊತ್ತಾಗಿದೆ. ಆದರೆ ಯಾವೆಲ್ಲಾ ಸಚಿವರಿಗೆ ಸಂದೇಶ ಸಿಕ್ಕಿದೆ ಅನ್ನೋದನ್ನು ನೋಡೋದಾದರೆ. ಚಾಮರಾಜನಗರ ಕ್ಷೇತ್ರದಿಂದ ಹೆಚ್.ಸಿ.ಮಹದೇವಪ್ಪ, ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ, ಮಂಡ್ಯದಿಂದ ಎನ್ ಚೆಲುವರಾಯಸ್ವಾಮಿ, ತುಮಕೂರು ಕೆ.ಎನ್ ರಾಜಣ್ಣ, ಕೋಲಾರ ಕೆ.ಹೆಚ್.ಮುನಿಯಪ್ಪ ಅಖಾಡಟಕ್ಕೆ ಇಳಿಯಬೇಕಾಗಬಹುದು ಅನ್ನೋ ಚರ್ಚೆ ಹೈಕಮಾಂಡ್ ಮಟ್ಟದಲ್ಲಿ ನಡೆದಿದೆ. ಆದರೆ ಇನ್ನೂ ಟಿಕೆಟ್ ನೀಡುವುದು ಅಂತಿಮವಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಗೆಲ್ಲಬಹುದಾದ ಸೂಕ್ತ ಅಭ್ಯರ್ಥಿ ಕಾಂಗ್ರೆಸ್ಗೆ ಬೇರೆ ಕಡೆಯಿಂದ ಸಿಕ್ಕರೆ ಈ ನಿರ್ಧಾರ ಬದಲಾಗುವ ಸಾಧ್ಯತೆಯಿದೆ. ಯಾರೂ ಸಿಗದೆ ಅನಿವಾರ್ಯ ಸ್ಥಿತಿ ಎದುರಾದರೆ ಸಚಿವರೇ ಸ್ಪರ್ಧೆ ಮಾಡಬೇಕಾಗುತ್ತದೆ ಎನ್ನುವ ಮಾಹಿತಿ ಕೆಪಿಸಿಸಿ ಕಡೆಯಿಂದ ಸಚಿವರಿಗೆ ಸಿಕ್ಕಿದೆ ಎನ್ನುವುದು ಪ್ರತಿಧ್ವನಿಗೆ ಸಿಕ್ಕಿರುವ ಮಾಹಿತಿ.
ಕೃಷ್ಣಮಣಿ