ಬಿಜೆಪಿ ನಾಯಕರು ಹಾಗೂ ಹಿಂದುಳಿದ ವರ್ಗಗಳ ಘಟಕ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಬಗ್ಗೆ ವಿನಾಕಾರಣ ಟೀಕೆ, ಅಪಪ್ರಚಾರ ಮಾಡುತ್ತಿದ್ದಾರೆ. ಅಧಿಕಾರಕ್ಕೋಸ್ಕರ ಕೆಲವರು ಬಿಜೆಪಿಗೆ ಹೋಗಿದ್ದಾರೆ ಎಂದರೇ ಹೊರತು ಹೊಟ್ಟೆಪಾಡಿಗೆ ಹೋಗಿದ್ದಾರೆ ಎಂದು ಹೇಳಿಲ್ಲ. ಬಿಜೆಪಿಯವರು ವಿಚಾರಗಳನ್ನು ತಿರುಚುವುದರಲ್ಲಿ ನಿಪುಣರು. ಸುಳ್ಳು, ವಿಷಯಾಂತರ ಮಾಡುವುದು ಬಿಜೆಪಿ ಹುಟ್ಟುಗುಣ. ರಾಜ್ಯ ಹಾಗೂ ದೇಶದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ವಿಷಯಾಂತರ ಮಾಡಿಕೊಂಡು ಬರುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಶನಿವಾರ ಹೇಳಿದ್ದಾರೆ.
2008ರಿಂದ 2013ರವರೆಗೂ ಬಿಜೆಪಿಯ 5 ವರ್ಷ ಸರ್ಕಾರ, 2013ರಿಂದ 2018ರವರೆಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹರಿಜನರ ಕಲ್ಯಾಣಕ್ಕೆ ಯಾರು ಏನು ಸಾಧನೆ ಮಾಡಿದ್ದಾರೆ ಎಂದು ನೋಡಿದರೆ ಯಾರಿಗೆ ದಲಿತರು, ತುಳಿತಕ್ಕೆ ಒಳ್ಗಾದವರ ಮೇಲೆ ಕಾಳಜಿ ಇದೆ ಎಂದು ಗೊತ್ತಾಗುತ್ತದೆ.
ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಪಾಲಿಗೆ ಐತಿಹಾಸಿಕ ಕಾನೂನು ತಂದು ಜನಸಂಖ್ಯೆ ಅನುಗುಣವಾಗಿ ಬಜೆಟ್ ನಲ್ಲಿ ಅನುದಾನ ನೀಡಲು ಮುಂದಾಗಿದ್ದು ಎಂದು ತಿಳಿಸಿದ್ದಾರೆ.
ದಲಿತರ ಕಲ್ಯಾಣಕ್ಕೆ ಬಿಜೆಪಿ ಸರ್ಕಾರ 5 ವರ್ಷದಲ್ಲಿ 22,261 ಕೋಟಿ ರೂ. ಕೊಟ್ಟರೆ, ಕಾಂಗ್ರೆಸ್ ಸರ್ಕಾರ ಅವರಿಗಿಂತ ನಾಲ್ಕು ಪಟ್ಟು ಅಂದರೆ 88,395 ಕೋಟಿ ರೂ. ನೀಡಿದೆ.
ಸಮಾಜ ಕಲ್ಯಾಣ ಇಲಾಖೆಗೆ ಬಿಜೆಪಿ 9542 ಕೋಟಿ ರೂ. ಕೊಟ್ಟರೆ, ಕಾಂಗ್ರೆಸ್ ಸರ್ಕಾರ 23,798 ಕೋಟಿ ನೀಡಿದೆ. ಬಿಜೆಪಿ ಕೇವಲ 196 ವಸತಿ ಶಾಲೆಗಳನ್ನು ನಿರ್ಮಾಣ ಮಾಡಿದರೆ ಕಾಂಗ್ರೆಸ್ ಸರ್ಕಾರ ಪ್ರತಿ ಹೊಬಳಿಗೆ ಒಂದು ವಸತಿ ಶಾಲೆಯಂತೆ 270 ವಸತಿಶಾಲೆಗಳು, ಮೆಟ್ರಿಕ್ ನಂತರದ 200 ವಿದ್ಯಾರ್ಥಿ ನಿಲಯಗಳು ಪ್ರಾರಂಭಿಸಿ 24,300 ವಿದ್ಯಾರ್ಥಿಗಳಿಗೆ ನೆರವಾಗಿದೆ ಎಂದು ಹೇಳಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಬಿಜೆಪಿ ಸರ್ಕಾರ 873 ಹುದ್ದೆಗಳ ನೋಮಕಾತಿ ಮಾಡಿದರೆ, ಕಾಂಗ್ರೆಸ್ ಸರ್ಕಾರ 3561 ಹುದ್ದೆಗಳ ನೇಮಕ ಮಾಡಿತ್ತು. ವಿದ್ಯಾರ್ಥಿನಿಲಯಗಳ ಉನ್ನತೀಕರಣಕ್ಕೆ ಬಿಜೆಪಿ 560 ಕೋಟಿ ಕೊಟ್ಟರೆ ಕಾಂಗ್ರೆಸ್ ಸರ್ಕಾರ 1494 ಕೋಟಿ ಕೊಟ್ಟಿತ್ತು. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಲ್ಲಿ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಅತಿಸೂಕ್ಷ್ಮ ಸಮುದಾಯಗಳನ್ನು ಗುರುತಿಸಿ ಅವರ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿ ಗಾಗಿ 222 ಕೋಟಿ ಮೀಸಲಿಟ್ಟಿತ್ತು ಎಂದು ಹೇಳಿದ್ದಾರೆ.
ಪ್ರಥಮ ದರ್ಜೆಯಲ್ಲಿ ಪ್ರಥಮ ಬಾರಿ ಉತ್ತೀರ್ಣರಾದ ಪ.ಜಾ/ಪ.ಪಂ.ಗಳ ವಿದ್ಯಾರ್ಥಿಗಳಿಗೆ ಹಿಂದಿನ ಸರ್ಕಾರ 750 ರೂ. ರಿಂದ 10,000 ರೂ. ರವರೆಗೆ ಪ್ರೋತ್ಸಾಹ ಧನ ನೀಡುತ್ತಿದ್ದು, ನಮ್ಮ ಸರ್ಕಾರ, 7000 ರೂ. ರಿಂದ 25,000 ರೂ. ರವರೆಗೆ ನೀಡುತ್ತಿತ್ತು.
55.77 ಲಕ್ಷ ಮೆಟ್ರಿಕ್ ಪೂರ್ವ ಮತ್ತು 18.22 ಲಕ್ಷ ಮೆಟ್ರಿಕ್ ನಂತರದ ಪ.ಜಾ/ಪ.ಪಂ.ಗಳ ವಿದ್ಯಾರ್ಥಿಗಳಿಗೆ ಅನುಕ್ರಮವಾಗಿ 577 ಕೋಟಿ ರೂ. ಹಾಗೂ 1843 ಕೋಟಿ ರೂ.ಗಳ ಡೇ-ಸ್ಕಾಲರ್ ವಿದ್ಯಾರ್ಥಿ ವೇತನ ಮಂಜೂರು ಮಾಡಿದ್ದು, ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿ ಶಿಕ್ಷಣಕ್ಕೆ ಸಹಾಯ ಮಾಡಲಾಗಿದೆ.
ವಿದೇಶಗಳಲ್ಲಿ ಉನ್ನತ ವ್ಯಾಸಂಗಕ್ಕೆ ಹಿಂದಿನ ಸರ್ಕಾರವು 15 ವಿದ್ಯಾರ್ಥಿಗಳನ್ನು ನಿಯೋಜಿಸಿದ್ದು, ನಮ್ಮ ಸರ್ಕಾರವು 197 ಪ.ಜಾ/ಪ.ಪಂ.ಗಳ ವಿದ್ಯಾರ್ಥಿಗಳನ್ನು ನಿಯೋಜಿಸಿರುತ್ತದೆ.
ಪ.ಜಾ/ಪ.ಪಂ.ಗಳ ಜನಾಂಗದವರಿಗೆ ಸ್ಮಶಾನ ಭೂಮಿ ಒದಗಿಸಲು/ ಅಭಿವೃದ್ಧಿಗಾಗಿ ವಿಶೇಷ ಆದ್ಯತೆ ನೀಡಿ, 53.65 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು ಕಾಂಗ್ರೆಸ್ ಸರ್ಕಾರ.
ಡಾ|| ಬಿ.ಆರ್. ಅಂಬೇಡ್ಕರ್ / ಡಾ|| ಬಾಬು ಜಗಜೀವನರಾಂ ಮತ್ತು ಮಹರ್ಷಿ ವಾಲ್ಮೀಕಿ ಭವನಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ 233 ಕೋಟಿ ರೂ. ವೆಚ್ಚದಲ್ಲಿ 1708 ಭವನಗಳನ್ನು ನಿರ್ಮಿಸಿದ್ದು, ನಮ್ಮ ಸರ್ಕಾರವು 840 ಕೋಟಿ ರೂ. ಗಳನ್ನು 8199 ಭವನಗಳ ನಿರ್ಮಾಣಕ್ಕಾಗಿ ಬಿಡುಗಡೆ ಮಾಡಿತ್ತು ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ವಿವಿಧ ಅಭಿವೃದ್ಧಿ ನಿಗಮದಿಂದ ಪ.ಜಾ/ಪ.ಪಂ.ದ ಫಲಾನುಭವಿಗಳು ಪಡೆದ 581 ಕೋಟಿ ರೂ. ಸಾಲವನ್ನು ಮನ್ನಾ ಮಾಡಿ, 2.23 ಲಕ್ಷ ಫಲಾನುಭವಿಗಳನ್ನು ಋಣಮುಕ್ತರನ್ನಾಗಿ ಮಾಡಿದೆ.
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಬಿಜೆಪಿ ಸರ್ಕಾರ ಅವಧಿಯಲ್ಲಿ 864 ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟು 49,040 ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 67,600 ಕೊಳವೆ ಬಾವಿಗಳನ್ನು ಕೊರೆದಿದ್ದು, ಇದಕ್ಕಾಗಿ ಒಟ್ಟು 1109 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.
ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ 1,70,837 ಫಲಾನುಭವಿಗಳು ಸಾಲ ಸೌಲಭ್ಯವನ್ನು ಪಡೆದಿದ್ದು, ನಮ್ಮ ಸರ್ಕಾರವು 3,04,727 ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸಿರುತ್ತದೆ ಎಂದು ಹೇಳಿದ್ದಾರೆ.
ಪ.ಜಾ/ಪ.ಪಂ.ಗಳ ಉದ್ದಿಮೆದಾರರಿಗೆ ಶೇ.4 ರಷ್ಟು ಬಡ್ಡಿದರಲ್ಲಿ ಹಿಂದಿನ ಸರ್ಕಾರ 998 ಫಲಾನುಭವಿಗಳಿಗೆ 286.49 ಕೋಟಿ ರೂ. ಸಾಲ ಹಾಗೂ 30.67 ಕೋಟಿ ರೂ. ಬಡ್ಡಿ ಸಹಾಯಧನ ನೀಡಿರುತ್ತದೆ.
ನಮ್ಮ ಸರ್ಕಾರವು ಈ ಕಾರ್ಯಕ್ರಮದಡಿ ಸಾಲದ ಗರಿಷ್ಠ ಮಿತಿಯನ್ನು 10 ಕೋಟಿ ರೂ. ವರೆಗೆ ಹೆಚ್ಚಿಸಿ, ರಾಷ್ಟ್ರೀಕೃತ ಬ್ಯಾಂಕುಗಳಿಗೂ ವಿಸ್ತರಿಸಿ, 1597 ಉದ್ದಿಮೆದಾರರಿಗೆ 908 ಕೋಟಿ ರೂ. ಸಾಲ ಮತ್ತು 121 ಕೋಟಿ ರೂ. ಬಡ್ಡಿ ಸಹಾಯಧನ ನೀಡಿದೆ.
ಡಾ|| ಬಾಬು ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಅಡಿಯಲ್ಲಿ 26,163 ಚರ್ಮ ಕುಶಲ ಕರ್ಮಿಗಳಿಗೆ 210 ಕೋಟಿ ರೂ. ವೆಚ್ಚದಲ್ಲಿ ಆರ್ಥಿಕ ನೆರವು ನೀಡಲಾಗಿದೆ.
ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದಿಂದ 1,114 ತಾಂಡಗಳಲ್ಲಿ 376 ಕೋಟಿ ರೂ.ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಭೋವಿ ಜನಾಂಗ ಮತ್ತು ಸಫಾಯಿ ಕರ್ಮಚಾರಿ ಅಭಿವೃದ್ಧಿಗಾಗಿ ಪ್ರತ್ಯೇಕ ಎರಡು ನಿಗಮಗಳನ್ನು ಪ್ರಾರಂಭಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ.ಜಾ/ಪ.ಪಂ.ಗಳ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಿಂದಿನ ಸರ್ಕಾರ 865 ಕೋಟಿ ರೂ. ಬಿಡುಗಡೆ ಮಾಡಿದ್ದು, ನಮ್ಮ ಸರ್ಕಾರ 1,360 ಕೋಟಿ ರೂ.ಗಳನ್ನು ಕಾಲೋನಿಗಳ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದೆ.
ಹೀಗೆ ಪ್ರತಿ ವಿಚಾರದಲ್ಲೂ ಕಾಂಗ್ರೆಸ್ ಸರ್ಕಾರ ದಲಿತರ ಕಲ್ಯಾಣಕ್ಕಾಗಿ ಬಿಜೆಪಿಗಿಂತ ನಾಲ್ಕು ಪಟ್ಟು ಹೆಚ್ಚಿನ ಕೊಡುಗೆ ನೀಡಿದೆ. ಬಿಜೆಪಿ ರಾಜಕೀಯ ಕಾರಣಗಳಿಂದಾಗಿ ಸಿದ್ದರಾಮಯ್ಯನವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.
100 ಬಾರಿ ಸುಳ್ಳು ಹೇಳಿ ಅದನ್ನೇ ನಿಜ ಮಾಡುವುದು ಬಿಜೆಪಿ ಕೆಲಸ. ಬಿಜೆಪಿ ಅವರಿಗೆ ದಲಿತರ ಮೇಲೆ ನಿಜಕ್ಕೂ ಕಾಳಜಿ ಇರುವುದಾದರೆ ಮೋದಿ ಅವರಿಗೆ ಹೇಳಿ ಜನಸಂಖ್ಯೆ ಆಧಾರದ ಮೇಲೆ ಬಜೆಟ್ ನಲ್ಲಿ ಹಣ ಮೀಸಲಿಡುವ ಕಾನೂನನ್ನು ದೇಶದಾದ್ಯಂತ ಮಾಡಲಿ ನೋಡೋಣ. ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು ರಾಜ್ಯಕ್ಕೆ ಅನ್ಯಾಯ ಆಗುತ್ತಿದ್ದರೂ ಮೋದಿ ಎದುರು ನಿಂತು ಮಾತನಾಡುತ್ತಿಲ್ಲ. ನೆರೆ ಪರಿಹಾರದಿಂದ, ಜಿಎಸ್ಟಿ ಬಾಕಿ, ಆರ್ಥಿಕ ಅನುದಾನ ಸೇರಿದಂತೆ ಪ್ರತಿ ಹಂತದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಅದನ್ನು ಪ್ರಶ್ನಿಸುವ ಧೈರ್ಯ ಯಾರೂ ಮಾಡುತ್ತಿಲ್ಲ.
ಬಿಜೆಪಿ ನಾಯಕ ನಾರಾಯಣ ಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಉತ್ತರಿಸಿದ ಅವರು, ‘ನಮ್ಮಲ್ಲಿ ದಲಿತ ಸಮುದಾಯಕ್ಕೆ ಸೇರಿದ ರಂಗನಾಥ್, ರಾಥೋಡ್, ಖರ್ಗೆ, ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಬಿಜೆಪಿ ಅವರು ಎಷ್ಟು ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ?’ ಎಂದರು.
ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಹಾಗೂ ಪರಮೇಶ್ವರ್ ಅವರನ್ನು ರಾಜಕೀಯವಾಗಿ ಮುಗಿಸಿದ್ದೇ ಸಿದ್ದರಾಮಯ್ಯ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಉತ್ತರಿಸದ ಅವರು, ‘2008ರಲ್ಲಿ ಖರ್ಗೆ ಅವರು ಅಧ್ಯಕ್ಷರಾಗಿದ್ದಾಗ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 80 ಸೀಟುಗಳನ್ನು ಮಾತ್ರ ಗೆದ್ದಿತ್ತು. ಆಗ ನಮ್ಮ ಸರ್ಕಾರ ಬಂದಿದ್ದರೆ ಅವರೇ ಸಿಎಂ ಆಗುತ್ತಿದ್ದರು. ಹೀಗಾಗಿ ಅವರಿಗೆ ಅವಕಾಶ ತಪ್ಪಿತ್ತು’ ಎಂದರು.
ಜನ್ಮಕೊಟ್ಟವರನ್ನೇ ಸಾಯಿಸುವ ಸಂಸ್ಕೃತಿ ಸಿದ್ದರಾಮಯ್ಯ ಅವರದು ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಅವರು, ‘ಬಿಜೆಪಿ ಸರ್ಕಾರದಲ್ಲಿ 35 ಮಂತ್ರಿಗಳಿದ್ದಾರೆ. ಅದರಲ್ಲಿ ಮೂಲ ಬಿಜೆಪಿಗರು ಕೇವಲ 7 ಜನ ಮಾತ್ರ. ಉಳಿದ 28 ಜನ ಕಾಂಗ್ರೆಸ್, ಜೆಡಿಎಸ್ ನಿಂದ ವಲಸೆ ಹೋದವರೇ ಆಗಿದ್ದಾರೆ. ಮೂಲ ಬಿಜೆಪಿಯವರ ಕಥೆ ಏನಾಯ್ತು. ನಮ್ಮಲ್ಲಿ ಶೇ.80ರಷ್ಟು ಜನ ಮೂಲ ಕಾಂಗ್ರೆಸಿಗರಾದರೆ, ಶೇ.20ರಷ್ಟು ಜನ ನಮ್ಮ ಪಕ್ಷಕ್ಕೆ ಸೇರಿಕೊಂಡವರಿದ್ದಾರೆ.
ಅವರ ಸರ್ಕಾರದಲ್ಲಿ ಇರೋದು ಕೇವಲ 7 ಮೂಲ ಬಿಜೆಪಿಗರು ಮಾತ್ರ. ನಾರಾಯಣ ಸ್ವಾಮಿ ನಮ್ಮ ಪಕ್ಷದಲ್ಲೇ ಇದ್ದರು. ಆರಂಭದಿಂದಲೂ ತುಳಿತಕ್ಕೆ ಒಳಗಾದ ಸಮಾಜದವರಿಗೆ ನಮ್ಮ ಪಕ್ಷ ಆದ್ಯತೆ ನೀಡುತ್ತಾ ಬಂದಿದೆ. ಅಂಬೇಡ್ಕರ್ ಅವರು ದಲಿತರಿಗೆ ಮೀಸಲಾತಿ ತಂದರೆ ಅದನ್ನು ಕಾಂಗ್ರೆಸ್ ಪಾಲಿಸಿಕೊಂಡು ಬಂದಿದೆ’ ಎಂದು ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಹೇಳಿದ್ದಾರೆ.