ವಿಧಾನ ಪರಿಷತ್ತಿನ ವಿಪಕ್ಷ ನಾಯಕನ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಪ್ರತಿದಿನವೂ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುತ್ತಿರುವ, ಕಾಂಗ್ರೆಸ್ ಬಗ್ಗೆ ಅಸಮಾಧಾನಗೊಂಡಿರುವ ಎಸ್.ಆರ್. ಪಾಟೀಲ್ ಮತ್ತು ಕಾಂಗ್ರೆಸಿನಿಂದ ಉಚ್ಛಾಟಿತಗೊಂಡಿರುವ ರೋಷನ್ ಬೇಗ್ ಭೇಟಿ ಮಾಡಿ ‘ಮಹತ್ವದ ಚರ್ಚೆ’ ನಡೆಸಿರುವ, ಜೆಡಿಎಸ್ ನಾಯಕರ ಮನೆ ಬಾಗಿಲಲ್ಲೇ ಬಿಡಾರ ಹೂಡಿರುವ ಸಿ.ಎಂ. ಇಬ್ರಾಹಿಂ ನಡೆ ಬಗ್ಗೆ ಈಗ ಕಾಂಗ್ರೆಸ್ ಪಕ್ಷದಲ್ಲಿ ವ್ಯಾಪಕ ವಿರೋಧ ಆಗುತ್ತಿದೆ. ‘ಇಬ್ರಾಹಿಂ ಅವರದು ಅತಿಯಾಯಿತು’ ಎಂಬ ಭಾವನೆ ಬೆಳೆಯುತ್ತಿದೆ. ಮೊದಲಿಗೆ ಸಹಾನುಭೂತಿ ತೋರುತ್ತಿದ್ದವರೇ ಈಗ ಸಹನೆ ಕಳೆದುಕೊಳ್ಳುತ್ತಿದ್ದಾರೆ. ಅದಕ್ಕೆ ಬಹಳ ಒಳ್ಳೆಯ ಉದಾಹರಣೆ ಎಂದರೆ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಕೆ.ಎಸ್.ಟಿ.ಡಿ.ಸಿ ಮಾಜಿ ಅಧ್ಯಕ್ಷರಾದ ಸೈಯದ್ ಅಹಮದ್ ಹುಸೇನ್ ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆ.
ಕಳೆದ ವಾರ ವಿಧಾನ ಪರಿಷತ್ತಿನ ವಿಪಕ್ಷ ನಾಯಕನ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ಸಿ.ಎಂ. ಇಬ್ರಾಹಿಂ ತಾಳ್ಮೆ ಕಳೆದುಕೊಳ್ಳಬಾರದು, ಪಕ್ಷ ಬಿಡುವ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ‘ಆಪ್ತ ಮನವಿ’ ಮಾಡಿದ್ದ ಸೈಯದ್ ಅಹಮದ್ ಹುಸೇನ್ ಅವರು ಈಗ ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಅವರು ಸಿ.ಎಂ. ಇಬ್ರಾಹಿಂ ಅವರಿಗೆ ಏನೇನು ಕೊಡುಗೆ ಕೊಟ್ಟಿದೆ ಎಂದು ಉಲ್ಲೇಖಿಸಿ ಅಂಥದ್ದರಲ್ಲೂ ಇಬ್ರಾಹಿಂ ಹೀಗೆ ನಡೆದುಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಚಾಟಿ ಬೀಸಿದ್ದಾರೆ. ಅವರ ಪತ್ರಿಕಾ ಪ್ರಕಟಣೆಯ ಪೂರ್ಣ ಪಾಠವನ್ನು ‘ಪ್ರತಿಧ್ವನಿ’ ನಿಮ್ಮ ಮುಂದಿಡುತ್ತಿದೆ.
ಕ್ರೀಯಾಶೀಲ ಮತ್ತು ಸಜ್ಜನರೂ ಆದ ಶಾಸಕ ಯು.ಟಿ. ಖಾದರ್ ಅವರನ್ನು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕನನ್ನಾಗಿ ನೇಮಿಸಿರುವುದಕ್ಕೆ ಎಐಸಿಸಿಯ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ, ಹೈಕಮಾಂಡ್ ನಾಯಕರು, ರಾಜ್ಯ ವಿಧಾನಸಭೆಯ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳು. ಹಾಗೆಯೇ ಯು.ಟಿ. ಖಾದರ್ ಮತ್ತು ನಾನು 2010ರಲ್ಲಿ ಕೆಪಿಸಿಸಿ ಪದಾಧಿಕಾರಿಗಳಾಗಿ ಒಟ್ಟಿಗೆ ಕೆಲಸ ಮಾಡಿದ್ದೆವು. ಈಗ ಅವರ ಅರ್ಹತೆಯನ್ನು ಗುರುತಿಸಿ ಅವರನ್ನು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕನನ್ನಾಗಿ ನೇಮಿಸಲಾಗಿದೆ. ಯು.ಟಿ. ಖಾದರ್ ಅವರಿಗೆ ಮತ್ತು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೊಹಮ್ಮದ್ ನಲ್ಪಾಡ್ ಅವರಿಗೆ ಅಭಿನಂದನೆಗಳು.
ವಿಧಾನ ಪರಿಷತ್ತಿನ ವಿಪಕ್ಷ ನಾಯಕನ ಸ್ಥಾನ ಸಿಗದೇ ಇದ್ದ ಕಾರಣಕ್ಕೆ ಸಿ.ಎಂ. ಇಬ್ರಾಹಿಂ ಅಸಮಾಧಾನಗೊಂಡಿದ್ದಾರೆ. ಇದರಿಂದ ಅಲ್ಪಸಂಖ್ಯಾತರೂ ಅಸಮಾಧಾನಗೊಂಡಿದ್ದಾರೆ. ಆ ಕಾರಣಕ್ಕೆ ಯು.ಟಿ. ಖಾದರ್ ಅವರನ್ನು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕನನ್ನಾಗಿ ನೇಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಕೆಲವು ಪ್ರಮುಖ ವಿಷಯವನ್ನು ರಾಜ್ಯದ ಜನರ ಮುಂದೆ ಹೇಳಲೇಬೇಕಿದೆ.
ಮೊದಲನೆಯದಾಗಿ ಅಲ್ಪಸಂಖ್ಯಾತರು ವ್ಯಕ್ತಿ ಪೂಜೆ ಮಾಡುವವರಲ್ಲ. ಸಿಎಂ ಇಬ್ರಾಹಿಂ ಅಲ್ಪಸಂಖ್ಯಾತ ಸಮುದಾಯಕ್ಕೆ ಅನಿವಾರ್ಯವೂ ಅಲ್ಲ. ಅಲ್ಪಸಂಖ್ಯಾತರೂ ಎಂದೆಂದಿಗೂ ವಿಚಾರಧಾರೆ ಜೊತೆಗಿರುವವರು. ಹಾಗೆಯೇ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆಯುಳ್ಳವರು. 2013ರಲ್ಲಿ ಸಾಮೂಹಿಕ ನಾಯಕತ್ವದಡಿ ಚುನಾವಣೆ ಮಾಡಲಾಯಿತು. ಆಗ ನಸೀರ್ ಅಹಮದ್ ಕೆಪಿಸಿಸಿಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದರು. ಬೆಂಗಳೂರು ವಿಭಾಗದಲ್ಲಿ ಜಾಫರ್ ಷರೀಫ್, ಗುಲ್ಬರ್ಗ ವಿಭಾಗದಲ್ಲಿ ಖಮರುಲ್ ಇಸ್ಲಾಂ, ಮಂಗಳೂರು ವಿಭಾಗದಲ್ಲಿ ಯು.ಟಿ. ಖಾದರ್, ಮೈಸೂರು ವಿಭಾಗದಲ್ಲಿ ತನ್ವೀರ್ ಸೇಠ್ ಇದ್ದರು. ಅಲ್ಲದೆ ಆಗ ಕೇಂದ್ರ ಸಚಿವರಾದ ರೆಹಮಾನ್ ಖಾನ್ ಇದ್ದರು. ಇವರೆಲ್ಲಾ ಚುನಾವಣಾ ಕೆಲಸ ಮಾಡುತ್ತಿದ್ದಾಗ ಸಿ.ಎಂ. ಇಬ್ರಾಹಿಂ ತಮಗೆ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದರು. ಬಳಿಕ ಸ್ವಂತದ ಚುನಾವಣೆಯಲ್ಲಿ ಬ್ಯುಸಿಯಾಗಿದ್ದರು. ಆಗ ಅಲ್ಪಸಂಖ್ಯಾತರು ಬೆಂಬಲಿಸಿದ್ದು ಮೇಲೆ ಉಲ್ಲೇಖಿಸಿದ ಎಲ್ಲರನ್ನೂ. ಸಿ.ಎಂ. ಇಬ್ರಾಹಿಂ ಅವರೊಬ್ಬರನ್ನೇ ಅಲ್ಲ.
ನಿಜ, ಅಲ್ಪಸಂಖ್ಯಾತ ಸಮುದಾಯಕ್ಕೆ ಸ್ಥಾನಮಾನಗಳು ಸಿಗಬೇಕಿತ್ತು. ಸಿ.ಎಂ. ಇಬ್ರಾಹಿಂ ಕೂಡ ಕೇಳಬೇಕಿತ್ತು. ಆದರೆ ಆ ಸ್ಥಾನಮಾನಗಳು ಯಾವ ರೀತಿ ಇರಬೇಕಿತ್ತು ಎಂಬುದು ಬಹಳ ಮುಖ್ಯವಾದ ಸಂಗತಿ. ‘ಮೊದಲು ಕೆಲಸ ಮಾಡಿ ನಂತರ ಕೇಳುವುದು’ ಅಲ್ಪಸಂಖ್ಯಾತರ ‘ಕಾಯಕ ಸಂಸ್ಕೃತಿ’. ಹಾಗಾಗಿ ಸಿಎಂ ಇಬ್ರಾಹಿಂ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಕೇಳಬೇಕಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಪ್ರಚಾರ ಸಮಿತಿ ಎನ್ನುವುದು ಕೆಪಿಸಿಸಿ ಅಧ್ಯಕ್ಷಗಾದಿ ಪಡೆಯಲು ‘ಮೆಟ್ಟಿಲು’. ಎಸ್.ಎಂ. ಕೃಷ್ಣ, ಡಾ. ಜಿ. ಪರಮೇಶ್ವರ್, ಡಿ.ಕೆ. ಶಿವಕುಮಾರ್ ಈ ಮೆಟ್ಟಿಲ ಮುಖಾಂತರ ಹಾದುಹೋಗಿಯೇ ಕೆಪಿಸಿಸಿ ಅಧ್ಯಕ್ಷಗಾದಿ ಅಲಂಕರಿಸಿದ್ದು. ಈ ಹಿನ್ನೆಲೆಯಲ್ಲಿ ಸಿಎಂ ಇಬ್ರಾಹಿಂ ಅವರು ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಚಾರ ಸಮಿತಿ ಅಧ್ಯಕ್ಷ ಹುದ್ದೆ ಕೊಡಿ ಎಂದು ಕೇಳಬೇಕಿತ್ತು. ಮುಂದೊಂದು ದಿನ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಕೇಳಬಹುದಿತ್ತು. ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನವನ್ನೂ ನಿರೀಕ್ಷಿಸಬಹುದಿತ್ತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ದಿವಂಗತ ಎ.ಆರ್. ಅಂತುಲೆ ಅವರನ್ನು ಮುಖ್ಯಮಂತ್ರಿ ಮಾಡಿದ ನಿದರ್ಶನ ಇದೆ.
ಆದರೆ ಕೇವಲ ಒಂದು ವರ್ಷದ ಅವಧಿಯ ಬಳಿಕ ಮಾಯವಾಗುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಇಬ್ರಾಹಿಂ ರಚ್ಚೆ ಹಿಡಿದರು. ಅಷ್ಟೇಯಲ್ಲ ಈಗ ಆ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಪ್ರತಿದಿನವೂ ಕಾಂಗ್ರೆಸ್ ಪಕ್ಷವನ್ನು, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಬಯ್ದುಕೊಂಡು ಓಡಾಡುತ್ತಿದ್ದಾರೆ. ಹೀಗೆ ಬಯ್ಯುವ ಮೊದಲು ಸಿ.ಎಂ. ಇಬ್ರಾಹಿಂ ತಮಗೆ ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಕೊಟ್ಟಿರುವ ಕೊಡುಗೆಗಳನ್ನು ನೆನಪು ಮಾಡಿಕೊಳ್ಳಬೇಕು.
2013ರ ವಿಧಾನಸಭಾ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರದಿಂದ ಹಾಲಿ ಶಾಸಕ ಸಂಗಮೇಶ್ ಅವರಿಗೆ ಟಿಕೆಟ್ ತಪ್ಪಿಸಿ ಸಿ.ಎಂ. ಇಬ್ರಾಹಿಂ ಅವರಿಗೆ ಟಿಕೆಟ್ ಕೊಡಿಸಿದವರು ಸಿದ್ದರಾಮಯ್ಯ. ಇಬ್ರಾಹಿಂ ಅವರಿಗೆ ಟಿಕೆಟ್ ಕೊಡಲೇಬೇಕೆಂದು ಪಟ್ಟು ಹಿಡಿದು ತಮ್ಮ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಕಡೆಗೂ ‘ಹಾಲಿ ಶಾಸಕರಿಗೆಲ್ಲಾ ಟಿಕೆಟ್ ನೀಡಬೇಕೆಂಬ’ ಪಕ್ಷದ ನೀತಿಗೆ ವಿರುದ್ಧವಾಗಿ ಇಬ್ರಾಹಿಂಗೆ ಟಿಕೆಟ್ ಕೊಡಿಸಿದರು. ಇದಾದ ಮೇಲೆ ನಡೆದದ್ದಾದರೂ ಏನು? 43 ಸಾವಿರ ಮುಸ್ಲಿಂ ಮತದಾರರು ಇರುವ ಕ್ಷೇತ್ರದಲ್ಲಿ ಸಿ.ಎಂ. ಇಬ್ರಾಹಿಂ ಸೋತರು. ಸೋತರೂ ಅವರನ್ನು ಕಾಂಗ್ರೆಸ್ ಪಕ್ಷವಾಗಲಿ ಸಿದ್ದರಾಮಯ್ಯ ಅವರಾಗಲಿ ಸಿ.ಎಂ. ಇಬ್ರಾಹಿಂ ಅವರ ಕೈಬಿಡಲಿಲ್ಲ. ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಲಾಯಿತು. ನಂತರ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಮಾಡಲಾಯಿತು. ಮತ್ತೆ ವಿಧಾನ ಪರಿಷತ್ ಸ್ಥಾನ ನೀಡಲಾಯಿತು. ದೊಡ್ಡ ದೊಡ್ಡ ಮಾತನಾಡುವ ಸಿ.ಎಂ. ಇಬ್ರಾಹಿಂ ಉಪಕಾರ ಸ್ಮರಣೆ ಮಾಡಬೇಕು.
ಸಿ.ಎಂ. ಇಬ್ರಾಹಿಂ ವಿಧಾನ ಪರಿಷತ್ ವಿರೋದ ಪಕ್ಷದ ನಾಯಕರಾಗಿದ್ದರೆ 2023ರಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದ ಮೇಲೂ ಇದೇ ರೀತಿ ಮಂತ್ರಿ ಸ್ಥಾನಕ್ಕೆ ಹಠ ಹಿಡಿಯುತ್ತಿದ್ದರು. ಸಿದ್ದರಾಮಯ್ಯ ಅವರಿಗೂ ಸಿ.ಎಂ. ಇಬ್ರಾಹಿಂ ಅವರಂಥವರೇ ಕಾಣುತ್ತಿದ್ದರು. ಕಾಂಗ್ರೆಸ್ ಹೈಕಮಾಂಡ್ ಇವೆಲ್ಲವನ್ನೂ ತಪ್ಪಿಸಿದೆ. ಯಾರಿಗೆ, ಯಾವಾಗ, ಏನು ಕೊಡಬೇಕು ಎಂಬುದು ಹೈಕಮಾಂಡ್ ನಾಯಕರಿಗೆ ಚೆನ್ನಾಗಿ ಗೊತ್ತಿದೆ. ಇನ್ನಾದರೂ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಪಕ್ಷವನ್ನು ವಿಶೇಷವಾಗಿ ಎಲ್ಲವನ್ನೂ ಕೊಟ್ಟ ಸಿದ್ದರಾಮಯ್ಯ ಅವರನ್ನು ಬಯ್ಯುವುದನ್ನು ಬಿಡಲಿ ಎಂದು ಆಶಿಸುತ್ತೇನೆ ಎಂದು ಸೈಯದ್ ಅಹಮದ್ ಹುಸೇನ್ ಅವರು ಹೇಳಿದ್ದಾರೆ.