ಬೆಂಗಳೂರು: ಕಾಂಗ್ರೆಸ್ ಪಕ್ಷವು ಸರ್ವ ಧರ್ಮ, ಸರ್ವ ಪಕ್ಷಗಳ ನಾಯಕರನ್ನು ಒಳಗೊಂಡಿದೆ. ಇಲ್ಲಿ ಬಿಜೆಪಿ, ಜನತಾ ದಳ, ಬಿಎಸ್‌ಪಿ ಸೇರಿದಂತೆ ಎಲ್ಲರೂ ಇದ್ದಾರೆ. ನಮ್ಮಲ್ಲಿ ಮೊದಲ ಆದ್ಯತೆ ಅವರಿಗೆ. ಹೊರಗಿನಿಂದ ಬಂದವರಿಗೆ ಮೊದಲ ಆದ್ಯತೆ, ಆಮೇಲೆ ಕಾಂಗ್ರಸಿಗರಿಗೆ ಆದ್ಯತೆ. ಅತಿಥಿಗಳನ್ನು ಗೌರವಿಸುವುದೇ ಕಾಂಗ್ರೆಸ್ ಪಕ್ಷದ ಗುರಿ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್( DK Suresh) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡ ಬಿ.ಡಿ.ಭೂಕಾಂತ್‌ಗೆ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಹಾಮಂಡಳಿ ಅಧ್ಯಕ್ಷ ಸ್ಥಾನ ನೀಡಿರುವ ಮುಖ್ಯಮಂತ್ರಿಗಳ ನಿರ್ಧಾರದಲ್ಲಿ ತಪ್ಪೇನಿಲ್ಲ ಎಂದರು. ಕಾಂಗ್ರೆಸ್ ಎಲ್ಲರನ್ನು ಗೌರವಿಸುತ್ತದೆ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ಭಾವನೆ ಮುಖ್ಯಮಂತ್ರಿಗಳಿಗೆ ಇರುವುದರಿಂದ ಮಾಡಿರಬಹುದು ಎಂದು ಹೇಳಿದರು.

ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಆದಾಗ ಮಾತ್ರ ದೆಹಲಿಗೆ ಹೋಗುತ್ತಿಲ್ಲ. ಕಳೆದ 40 ವರ್ಷಗಳಿಂದ ನಿರಂತರವಾಗಿ ದೆಹಲಿಗೆ ಹೋಗುತ್ತಿದ್ದಾರೆ. ತಿಂಗಳಿಗೆ ಒಂದು ಅಥವಾ ಎರಡು ಬಾರಿ ಹೋಗುತ್ತಾರೆ. ಈಗ ಅವರು ಪಕ್ಷದ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳು ಸರ್ಕಾರದ ಕೆಲಸಗಳು ಇರುತ್ತವೆ. ಇನ್ನು ದೆಹಲಿಗೆ ಹೋದಾಗ, ರಾಜಕೀಯವಾಗಿ ಅಲ್ಲದಿದ್ದರೂ ಕುಶಲೋಪರಿ ಚರ್ಚೆಗೆ ಭೇಟಿ ಮಾಡುತ್ತಾರೆ. ಸಂಸತ್ ಅಧಿವೇಶನ ನಡೆಯುತ್ತಿರುವಾಗ ಇಲಾಖೆಗಳಿಗೆ ಸಂಬಂಧಿಸಿದ ಚರ್ಚೆ ಮಾಡಲು ಮಂತ್ರಿಗಳನ್ನು ಭೇಟಿ ಮಾಡಲಾಗುವುದು. ಭದ್ರಾ ಮೇಲ್ದಂಡೆ ಯೋಜನೆ, ಬೆಂಗಳೂರಿನ ವಿಚಾರವಾಗಿ ಚರ್ಚೆ ಮಾಡುತ್ತಾರೆ. ಹೀಗಾಗಿ ದೆಹಲಿ ಪ್ರವಾಸ ಶಿವಕುಮಾರ್ ಅವರಿಗೆ ಹೊಸತಲ್ಲ ಎಂದರು.

ಇನ್ನು ನಾಯಕತ್ವ ಬದಲಾವಣೆ ಚರ್ಚೆ ವೇಳೆ ಬಜೆಟ್‌ಗೂ ಮುನ್ನ ಕೆಲವು ಶಾಸಕರು ವಿದೇಶ ಪ್ರವಾಸಕ್ಕೆ ಮುಂದಾಗಿರುವ ಸುದ್ದಿಯ ಬಗ್ಗೆ ಮಾತನಾಡಿದ ಅವರು, ವಿದೇಶ ಪ್ರವಾಸಕ್ಕೆ ಹೋಗುತ್ತಿರುವವರು ಯಾರು? ಕರೆದುಕೊಂಡು ಹೋಗುವವರು ಯಾರು? ಯಾರೋ ಹೇಳಿದ್ದನ್ನು ಶಿವಕುಮಾರ್ ಅವರ ಮೇಲೆ ಯಾಕೆ ಹೇಳುತ್ತೀರಿ. ಡಿ.ಕೆ. ಶಿವಕುಮಾರ್ ಅವರಿಗೂ ಶಾಸಕರ ಪ್ರವಾಸಕ್ಕೆ ಯಾವುದೇ ಸಂಬಂಧವಿಲ್ಲ. ಈ ವಿಚಾರವಾಗಿ ಬಹಳ ಸ್ಪಷ್ಟವಾಗಿ ಹೇಳುತ್ತೇನೆ.

ಶಾಸಕರ ಪ್ರವಾಸ ವೈಯಕ್ತಿಕವಾಗಿಯೂ ಇರಬಹುದು, ಬೇರೆಯವರ ಪ್ರಯೋಜಕತ್ವವೂ ಇರಬಹುದು. ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂಗೂ ಈ ಪ್ರವಾಸಕ್ಕೂ ಸಂಬಂಧವಿಲ್ಲ. ಈ ರೀತಿ ಏನಾದರೂ ಹುಟ್ಟಾಕುತ್ತಿದ್ದರೆ, ಅದು ರಾಜಕೀಯ ದುರುದ್ದೇಶದಿಂದ ಮಾತ್ರ. ಶಿವಕುಮಾರ್ ಅವರಿಗೆ ಕೆಟ್ಟ ಹೆಸರು ತರಲು ನಮ್ಮ ಪಕ್ಷದ ಕೆಲವರು ಮಾಡುತ್ತಿರಬಹುದು. ನಮ್ಮ ಪಕ್ಷದವರು ಮಾಡುತ್ತಿದ್ದಾರೋ, ವಿರೋಧ ಪಕ್ಷದವರು ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ ಇದರಲ್ಲಿ ಶಿವಕುಮಾರ್ ಅವರು ಪಾಲುದಾರರಲ್ಲ ಎಂದು ಸ್ಪಷ್ಟಪಡಿಸಿದರು.







